ತ್ಯಾಜ್ಯ ಮುಕ್ತ ನಗರ: ಮೈಸೂರಿಗೆ 5 ಸ್ಟಾರ್
ಮೈಸೂರು. ಮೇ.19.(ಕರ್ನಾಟಕ ವಾರ್ತೆ):- ಭಾರತ ಸರ್ಕಾರ ನಗರಾಭಿವೃದ್ಧಿ ಮಂತ್ರಾಲಯವು ನಡೆಸುವ ಸ್ವಚ್ಛ ಭಾರತ ಅಭಿಯಾನದ ಸಮೀಕ್ಷೆಯಲ್ಲಿ ದೇಶದ ತ್ಯಾಜ್ಯ ಮುಕ್ತ ನಗರಗಳ ಪೈಕಿ (Garbage free city) ಮೈಸೂರು ನಗರಕ್ಕೆ 5 ಸ್ಟಾರ್ ಗರಿಮೆ ನೀಡಲಾಗಿದೆ ಎಂದು ಮಹಾನಗರ ಪಾಲಿಕೆಯ ಮೇಯರ್ ತಸ್ನೀಂ ಅವರು ತಿಳಿಸಿದರು.
ಮಂಗಳವಾರ ಮಹಾನಗರ ಪಾಲಿಕೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಆಯೋಜಿಸುವ ತ್ಯಾಜ್ಯ ಮುಕ್ತ ನಗರಗಳ ಸಮೀಕ್ಷೆಯಲ್ಲಿ ದೇಶದ 1435 ನಗರಗಳು ಭಾಗವಹಿಸಿದ್ದು, ತ್ಯಾಜ್ಯ ಮುಕ್ತ ನಗರಕ್ಕೆ ನಿಗಧಿಪಡಿಸಿದ 1000 ಅಂಕಗಳಲ್ಲಿ ಮೈಸೂರು ನಗರವು 800 ಅಂಕಗಳನ್ನು ಪಡೆದು 5 ಸ್ಟಾರ್ ಗರಿಮೆಯನ್ನು ತನ್ನ ಮುಡಿಗೇರಿಸಿಕೊಂಡಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಇದರ ಸರ್ವೇ ಕಾರ್ಯವನ್ನು ಜನವರಿ ಮತ್ತು ಫೆಬ್ರವರಿ ಮಾಹೆಯಲ್ಲಿ ದೇಶಾದ್ಯಾಂತ ಹಮ್ಮಿಕೊಳ್ಳಲಾಗಿತ್ತು. ಸರ್ವೇ ಕಾರ್ಯದ ಫಲಿತಾಂಶವು ಮೇ 19 ಮಂಗಳವಾರ ಪ್ರಕಟವಾಗಿದ್ದು, ಅದರಲ್ಲಿ ಒಟ್ಟು 141 ನಗರಗಳು ತ್ಯಾಜ್ಯಮುಕ್ತ ನಗರಗಳಾಗಿವೆ. ಇದರಲ್ಲಿ ಮೈಸೂರು ನಗರ ಸೇರಿದಂತೆ ಆರು ನಗರಗಳು ಮಾತ್ರ 5 ಸ್ಟಾರ್ ಗರಿಮೆಯನ್ನು ಪಡೆದುಕೊಂಡಿವೆ ಎಂದು ಮಾಹಿತಿ ನೀಡಿದರು.
ಮೈಸೂರು ನಗರಕ್ಕೆ ತ್ಯಾಜ್ಯ ಮುಕ್ತ ನಗರದ ಗರಿಮೆ ಉಳಿದುಕೊಳ್ಳಲು ಹಗಲಿರುಳು ಶ್ರಮಿಸಿದ ಪೌರಕಾರ್ಮಿಕರು, ನಗರ ಪಾಲಿಕೆ ಸದಸ್ಯರು, ಅಧಿಕಾರಿಗಳು ಹಾಗೂ ಸಿಬ್ಬಂದಿಗಳು, ಸ್ವಚ್ಛತಾ ರಾಯಭಾರಿಗಳು, ಸಂಘ ಸಂಸ್ಥೆಗಳು, ಶೈಕ್ಷಣಿಕ ಸಂಸ್ಥೆಗಳು ಮತ್ತು ಸಾರ್ವಜನಿಕರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.
ಮಹಾನಗರ ಪಾಲಿಕೆಯ ಆಯುಕ್ತ ಗುರುದತ್ ಹೆಗೆಡೆ ಅವರು ಮಾತನಾಡಿ, ಮೈಸೂರು ನಗರವು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುವುದರಿಂದ ತ್ಯಾಜ್ಯ ಮುಕ್ತ ನಗರಗಳ ಪಟ್ಟಿಯಲ್ಲಿ 5 ಸ್ಟಾರ್ ಪಡೆದಿದ್ದು, ನಗರದ ಪ್ರವಾಸಿ ತಾಣಗಳಿಗೆ ಇನ್ನೂ ಹೆಚ್ಚಿನ ಪ್ರವಾಸಿಗರನ್ನು ಸೆಳೆಯುತ್ತಿದೆ ಎಂದು ಹೇಳಿದರು.
ದಕ್ಷಿಣ ಭಾರತದಲ್ಲೆ 5 ಸ್ಟಾರ್ ಪಡೆದಿರುವ ಏಕೈಕ ನಗರ ನಮ್ಮ ಮೈಸೂರಾಗಿದ್ದು, ಇದಲ್ಲದೆ 7 ಸ್ಟಾರ್ ಪಡೆಯುವ ಎಲ್ಲಾ ಅರ್ಹತೆಯನ್ನು ಹೊಂದಿದೆ. ಮುಂದಿನ ದಿನಗಳಲ್ಲಿ 7 ಸ್ಟಾರ್ ಪಡೆಯಲು ಹೆಚ್ಚಿನ ಶ್ರಮವಹಿಸಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಉಪಮೇಯರ್ ಸಿ.ಶ್ರೀಧರ್, ಸಾರ್ವಜನಿಕ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರಾದ ಜೆ.ಗೋಪಿ, ನಗರ ಪಾಲಿಕೆ ಸದಸ್ಯರಾದ ಪ್ರೇಮ, ಸುಬ್ಬಯ್ಯ, ಪಾಲಿಕೆ ಆರೋಗ್ಯಾಧಿಕಾರಿಗಳಾದ ಡಾ.ಜಯಂತ್, ಡಾ.ನಾಗರಾಜು ಇತರರು ಉಪಸ್ಥಿತರಿದ್ದರು