ಮೈಸೂರು ನಗರ ಪ್ರಥಮ ಸ್ಥಾನಕ್ಕೆ ಬರಲಿ

ಮೈಸೂರಿಗೆ ಮತ್ತೊಂದು ಗರಿ – ಸಾಂಸ್ಕೃತಿಕ ನಗರಿ ಮೈಸೂರು ಸ್ವಚ್ಛ ನಗರವೆಂದು ಮತ್ತೊಮ್ಮೆ ಸಾದರಪಡಿಸಿದೆ.ಕೇಂದ್ರ ಸರ್ಕಾರವು ತ್ಯಾಜ್ಯಮುಕ್ತ ನಗರ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು ಅದರಲ್ಲಿ “ಮೈಸೂರು “ಮತ್ತೊಮ್ಮೆ ಅಗ್ರಸ್ಥಾನ ಪಡೆದಿದೆ .ಭಾರತದ ಪ್ರಮುಖ ನಗರಗಳಾದ ಅಂಬಿಕಾಪುರ ರಾಜಕೋಟ್ ಸೂರತ್ ಇಂದೋರ್ ಹಾಗೂ ನವಿ ಮುಂಬಯಿಗಳನ್ನು ಇತರೆ ತ್ಯಾಜ್ಯ ಮುಕ್ತ ನಗರಗಳೆಂದು ಘೋಷಿಸಿದೆ .ಇತ್ತೀಚೆಗಷ್ಟೇ ಕರೋನಾ ವಿರುದ್ಧ ಹೋರಾಡಿ ವಿಶ್ವಮಾನ್ಯ ಗಳಿಸಿದ ಮೈಸೂರು ನಗರವು ಈಗ ದೇಶದ ೬ ತ್ಯಾಜ್ಯ ಮುಕ್ತ ನಗರಗಳ ಪೈಕಿ ಈ ಸ್ಥಾನ ಪಡೆದಿರುವುದು ನಮ್ಮೆಲ್ಲರ ಹೆಮ್ಮೆಯ ವಿಷಯವಾಗಿದೆ. ಮೈಸೂರು ಮಹಾನಗರ ಪಾಲಿಕೆಯಆಡಳಿತ ವರ್ಗ , ಪುರಪಿತೃಗಳ, ಸಂಘ- ಸಂಸ್ಥೆಗಳ ನಗರದ ನಾಗರಿಕರ ಕೊಡುಗೆ ಅಪಾರ ಮತ್ತು ಅಭಿನಂದನೀಯ.ಮುಂಜಾನೆ ನಗರ ಪ್ರದಕ್ಷಿಣೆ ಹೊರಟಾಗ ಪ್ರತಿನಿತ್ಯವೂ ಪೌರ ಕಾರ್ಮಿಕರು ನಡೆಸುತ್ತಿರುವ ಸ್ವಚ್ಛತಾ ಕಾರ್ಯದಿಂದಲೇ ಇದು ಖಂಡಿತಾ ಸಾಧ್ಯ ಎಂದು ಕಂಡು ಬರುತ್ತಿದ್ದಿದ್ದು ಅತಿ ಶೊಕ್ತಿಯಲ್ಲ .ಬಹುತೇಕ ವಾರ್ಡುಗಳಲ್ಲಿ ನಗರ ಪಾಲಿಕೆ ಸದಸ್ಯರುಗಳು ಬಹಳ ಮುತುವರ್ಜಿ ವಹಿಸಿ ಮುಂಜಾನೆಯಿಂದಲೇ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ಕೊಡುವುದು ಎಲ್ಲೆಡೆ ಕಂಡು ಬರುತ್ತದೆ . ಸದಾಕಾಲವೂ ಇದು ಹೀಗೆ ಮುಂದುವರಿಯುತ್ತಿರಲೆಂದು ಸದಾ ಆಗ್ರ ಸ್ಥಾನದಲ್ಲೇ ಇರಲೆಂದು “ಮೈಸೂರು ಪತ್ರಿಕೆ”ಯ ಆಶಯ.