ಮೈಸೂರು ನಾಲ್ಕೂ ಕ್ಷೇತ್ರಕ್ಕೆ ಪ್ರತ್ಯೇಕ ಕಾರ್ಯಪಡೆ; ಸಚಿವ ಎಸ್ ಟಿ ಎಸ್
- ಮೈಸೂರಲ್ಲಿ ಕೋವಿಡ್ 19 ನಿಯಂತ್ರಣ ಸಂಬಂಧ ತೆಗೆದುಕೊಂಡ ಕ್ರಮಗಳ ಪರಿಶೀಲನೆ ಸಭೆ
- ಸೋಂಕಿನ ಲಕ್ಷಣಗಳು ಕಂಡಾಗ ಯಾರನ್ನು ಸಂಪರ್ಕ ಮಾಡಬೇಕೆಂಬ ಮಾಹಿತಿಯುಳ್ಳ ಪಾಂಪ್ಲೆಟ್ ಮನೆ ಮನೆಗೆ ಹಂಚಲು ಸೂಚನೆ
- ರಾಜ್ಯದಲ್ಲಿ ಎಲ್ಲೂ ಇನ್ನು ಮುಂದೆ ಲಾಕ್ ಡೌನ್ ಇಲ್ಲ
ಮೈಸೂರು: ಎಲ್ಲ ನಾಲ್ಕು ಕ್ಷೇತ್ರಗಳಾದ ಕೃಷ್ಣರಾಜ, ಚಾಮರಾಜ, ನರಸಿಂಹರಾಜ ಹಾಗೂ ಚಾಮುಂಡೇಶ್ವರಿ ಆಯಾ ಶಾಸಕರ ನೇತೃತ್ವದಲ್ಲಿ ಪ್ರತ್ಯೇಕ ಕಾರ್ಯಪಡೆ ರಚನೆ ಮಾಡಬೇಕು. ಇನ್ನು ಎನ್ ಆರ್ ಕ್ಷೇತ್ರದ ಶಾಸಕರ ಅನಾರೋಗ್ಯ ಹಿನ್ನೆಲೆಯಲ್ಲಿ ಸಂಸದರಾದ ಪ್ರತಾಪ್ ಸಿಂಹ ನೇತೃತ್ವದಲ್ಲಿ ಕಾರ್ಯಪಡೆ ರಚಿಸಬೇಕು. ಜೊತೆಗೆ ಮನೆ ಮನೆಗೆ ಸಂಪರ್ಕ ಮಾಹಿತಿಯ ಕರಪತ್ರಗಳನ್ನು ತಲುಪಿಸಿ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಸೂಚನೆ ನೀಡಿದರು.
ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಮೈಸೂರು ಜಿಲ್ಲೆಯಲ್ಲಿ ಕೋವಿಡ್-19 ಸಂಬಂಧ ಕೈಗೊಂಡ ಕ್ರಮಗಳ ಕುರಿತು ಪರಿಶೀಲನೆ ಸಭೆಯಲ್ಲಿ ಮಾತನಾಡಿ, ಯಾವುದೇ ನಾಗರಿಕರಿಗೆ ನೆಗಡಿ, ಕೆಮ್ಮಿನಂತಹ ಖಾಯಿಲೆಗಳು ಬಂದಾಗ ಯಾರನ್ನು ಸಂಪರ್ಕಿಸಬೇಕು? ಯಾವ ಆಸ್ಪತ್ರೆಗಳಿಗೆ ಭೇಟಿ ನೀಡಬಹುದು? ಯಾವ ಅಧಿಕಾರಿಯನ್ನು ಸಂಪರ್ಕ ಮಾಡಬೇಕು, ನೋಡಲ್ ಅಧಿಕಾರಿ ಯಾರು? ಆರೋಗ್ಯಾಧಿಕಾರಿ ಯಾರು ಎಂಬ ಬಗ್ಗೆ ಕಿರು ಮಾಹಿತಿಯುಳ್ಳ, ಮೊಬೈಲ್ ಸಂಖ್ಯೆಗಳನ್ನು ನಮೂದಿಸಿ ಪಾಂಪ್ಲೆಟ್ ಮಾಡಿ ವಿತರಣೆ ಮಾಡಬೇಕು ಎಂದು ಸೂಚಿಸಿದ ಸಚಿವರು, ಈ ಕೆಲಸ ಎಲ್ಲ ಕ್ಷೇತ್ರಗಳಲ್ಲೂ ಆಗಬೇಕು ಎಂದು ಸಚಿವರು ಸೂಚಿಸಿದರು.
ಎಲ್ಲ ಕ್ಷೇತ್ರಗಳಿಗೆ ಪ್ರತ್ಯೇಕ ಉಸ್ತುವಾರಿ ವೈದ್ಯಾಧಿಕಾರಿಯೊಬ್ಬರನ್ನು ನೇಮಿಸಬೇಕು. ಇನ್ನು ಹೆಚ್ಚು ಸೋಂಕಿತರು ಇರುವ ಎನ್ ಆರ್ ಕ್ಷೇತ್ರದಲ್ಲಿ ಸಂಸದರ ನೇತೃತ್ವದಲ್ಲಿ ಒಂದು ಪ್ರತ್ಯೇಕ ತಂಡ ರಚಿಸಿ, ಅಧಿಕಾರಿಗಳನ್ನು ನಿಯೋಜಿಸಬೇಕು. ಪಾಸಿಟಿವ್ ಪ್ರಕರಣಗಳು ಕಂಡು ಬಂದ ಕೂಡಲೇ ಆಸ್ಪತ್ರೆಗಳಿಗೆ ಸ್ಥಳಾಂತರ ಮಾಡಲಿ, ಎಲ್ಲದಕ್ಕಿಂತ ಮುಖ್ಯವಾಗಿ ಕರಪತ್ರ ಮಾಡಿ ಮನೆ ಮನೆಗೆ ತಲುಪಿಸಬೇಕು. ಅದಕ್ಕೆ ನಾಗರಿಕರು ಕರೆ ಮಾಡಿದ ಕೂಡಲೇ ಸ್ಪಂದಿಸಬೇಕು. ಎಲ್ಲಿಯೂ ಲೋಪ ಆಗಬಾರದು. ಇದಕ್ಕಾಗಿ ಅಸಿಸ್ಟೆಂಟ್ ಕಮೀಷನರ್ ಅನ್ನು ಉಸ್ತುವಾರಿಗಳನ್ನಾಗಿ ನಿಸಲು ಮುಂದಾಗಲಾಗುವುದು. ಇವರೆಲ್ಲರಿಗೂ ಜಿಲ್ಲಾಧಿಕಾರಿಗಳು ಮೇಲುಸ್ತುವಾರಿಯಾಗಿರುತ್ತಾರೆ ಎಂದು ಸಚಿವರು ಎಚ್ಚರಿಕೆ ನೀಡಿದರು.
ಖುದ್ದು ಅಧಿಕಾರಿಯೇ ಹೇಳಿ
ಜಿಲ್ಲಾಧಿಕಾರಿಗಳು ಮಾತ್ರ ಸಂಪೂರ್ಣ ಮಾಹಿತಿ ಹೊಂದಿ ಕೆಲಸ ಮಾಡುತ್ತಿದ್ದಾರೆ. ಅದನ್ನು ಅನುಷ್ಠಾನಗೊಳಿಸುವ ಅಧಿಕಾರಿಗಳಿ ತಾವೇನು ಮಾಡುತ್ತಿದ್ದೀರಿ ಎಂಬ ಬಗ್ಗೆ ಮಾಹಿತಿ ನೀಡಬೇಕು. ಜೊತೆಗೆ ಸಮಸ್ಯೆಗಳಿದ್ದರೆ ನಮ್ಮ ಗಮನಕ್ಕೆ ತರಬೇಕು.
ಬರುವ 4 ಕ್ಷೇತ್ರದಲ್ಲಿ ಯಾವುದರಲ್ಲಿ ಹೆಚ್ಚು ಕೋವಿಡ್ ಪ್ರಕರಣಗಳು ಹೆಚ್ಚು ಬರುತ್ತವೆ ಎಂದು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಆರೋಗ್ಯಾಧಿಕಾರಿಗೆ ಪ್ರಶ್ನಿಸಿದಾಗ, ನರಸಿಂಹರಾಜ ಕ್ಷೇತ್ರ ಎಂದು ಅಧಿಕಾರಿಗಳು ಉತ್ತರಿಸಿದರು.
ಹಾಗಾದರೆ ಅಲ್ಲಿ ಆ್ಯಂಬುಲೆನ್ಸ್ ವ್ಯವಸ್ಥೆ ಇದೆಯೇ? ಕೋವಿಡ್ ಟೆಸ್ಟ್ ಮಾಡಿಸಿದಾಗ ಎಷ್ಟು ಸಮಯಕ್ಕೆ ಸೋಂಕಿತರನ್ನು ಆಸ್ಪತ್ರೆಗೆ ಸ್ಥಳಾಂತರಿಸುತ್ತೀರಿ ಎಂದು ಅಲ್ಲಿನ ಆರೋಗ್ಯ ಅಧಿಕಾರಿಗೆ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ವೈದ್ಯಾಧಿಕಾರಿ, ಪಾಸಿಟಿವ್ ಪ್ರಕರಣಗಳಿದ್ದರೆ ಪರೀಕ್ಷೆ ಮಾಡಿಸಿದ 10 ಗಂಟೆಯೊಳಗೆ ವರದಿ ಬರಲಿದ್ದು, ತಕ್ಷಣ ಅವರನ್ನು ಆಸ್ಪತ್ರೆಗಳಿಗೆ ದಾಖಲಿಸುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಮೃತದೇಹ ಹಸ್ತಾಂತರ ವಿಳಂಬ ಮಾಡಬೇಡಿ
ಕಳೆದ ಬಾರಿ ಡಿ ಗ್ರೂಪ್ ನೌಕರರು ಇಲ್ಲ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ಕೊಟ್ಟಿದ್ದಾರೆ. ಅದನ್ನು ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಬಗೆಹರಿಸಲಾಗಿದೆ. ಸಾವಿನ ಪ್ರಕರಣಗಳು ಬಂದ ತಕ್ಷಣ ಕುಟುಂಬಕ್ಕೆ ತಕ್ಷಣದಿಂದಲೇ ಹಸ್ತಾಂತರ ಮಾಡಲು ಕ್ರಮ ಕೈಗೊಳ್ಳಿ, ವರದಿ ಬರುವವರೆಗೆ ಕಾಯಬೇಡಿ. ಇನ್ನು ಮೃತಪಟ್ಟ ಪ್ರಕರಣಗಳು ಕಂಡುಬಂದ ಕೂಡಲೇ ಮರಣ ಪ್ರಮಾಣ ಪತ್ರವನ್ನು ಕೊಡುವ ಕೆಲಸ ಆಗಲಿ ಎಂದು ಸಚಿವರು ತಿಳಿಸಿದರು.
ಕೆ ಆರ್ ಆಸ್ಪತ್ರೆ ಬಗ್ಗೆ ಇನ್ನು ದೂರು ಬರಕೂಡದು
ಕೆಆರ್ ಆಸ್ಪತ್ರೆ ಬಗ್ಗೆ ಮುಖ್ಯಮಂತ್ರಿಗಳಿಗೆ ದೂರು ಬಂದಿದೆ. ನಿರ್ಲಕ್ಷ್ಯ ಮಾಡುತ್ತಿರುವ ಬಗ್ಗೆ ದೂರುಗಳು ಬಂದಿವೆ. ಇನ್ನು ಮುಂದೆ ಹೀಗಾಗಬಾರದು, ತಕ್ಷಣ ಅಗತ್ಯ ಕ್ರಮ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು. ಇನ್ನು ಮುಖ್ಯಮಂತ್ರಿಗಳಿಗಾಗಲೀ, ಮುಖ್ಯ ಕಾರ್ಯದರ್ಶಿಯವರಿಗಾಗಲೀ ದೂರುಗಳು ಹೋಗದಂತೆ ಕೆಲಸ ಮಾಡಿ ಎಂದು ಸಚಿವರು ತರಾಟೆಗೆ ತೆಗೆದುಕೊಂಡರು.
ಇದಕ್ಕೆ ಪ್ರತಿಕ್ರಿಯಿಸಿದ ವೈದ್ಯಾಧಿಕಾರಿ, ವೆಂಟಿಲೇಶನ್ ಕೊರತೆ ಇದೆ, ಮೊದಲು 300 ನರ್ಸ್ ಗಳಿದ್ದರು. ಅವರಲ್ಲಿ 100 ನರ್ಸ್ ಗಳು ಬಿಟ್ಟುಹೋಗಿದ್ದಾರೆ. ಇವರು 300 ರೋಗಿಗಳನ್ನು ನೋಡಿಕೊಳ್ಳಬೇಕು. ಇದೇ ರೀತಿ ಅನೇಕ ಸಮಸ್ಯೆಗಳು ಇವೆ ಎಂದು ಮಾಹಿತಿ ನೀಡಿದಾಗ, ಮೊದಲು ನರ್ಸ್ ಗಳ ಮನವೊಲಿಸಿ, ಇಲ್ಲದಿದ್ದರೆ ಹೆಚ್ಚಿನ ವೇತನ ನಿಗದಿ ಮಾಡಿಯಾದರೂ ನೇಮಿಸಿಕೊಳ್ಳಿ ಎಂದು ಸಚಿವರು ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಮಾತನಾಡಿ, ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿ ಹಲವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಎಲ್ಲ ಕ್ಷೇತ್ರಗಳಲ್ಲಿ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಲಾಗುತ್ತಿದ್ದು, ಆಯಾ ಕ್ಷೇತ್ರಕ್ಕೆ ಪ್ರತ್ಯೇಕವಾಗಿ ವಾಹನಗಳನ್ನು ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ಆಗ ಮಧ್ಯಪ್ರವೇಶಿಸಿದ ಸಚಿವರು, ಆ್ಯಂಬುಲೆನ್ಸ್ ವ್ಯವಸ್ಥೆ ಮಾಡುವುದರ ಜೊತೆಗೆ ಅದರಲ್ಲಿ ಕೆಲಸ ಮಾಡುವ ಚಾಲಕ ಸಹಿತ ಸಿಬ್ಬಂದಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಿ ಪ್ರತಿ ಪ್ರಕರಣದ ಸ್ಥಳಾಂತರ ನಂತರ ಸ್ನಾನ ಮಾಡಿ ಬಟ್ಟೆ ಹಾಗೂ ಕಿಟ್ ಗಳನ್ನು ಬದಲಾಯಿಸಲು ಅನುಕೂಲವಾಗುವಂತೆ ಕ್ರಮ ಕೈಗೊಳ್ಳಿ ಎಂದು ಸೂಚನೆ ನೀಡಿದರು.
ಶಂಕಿತರ ಪತ್ತೆ ಹಚ್ಚಿ ಚಿಕಿತ್ಸೆ
ಎನ್ ಆರ್ ಮೊಹಲ್ಲಾದಲ್ಲಿ 32 ಜನ ಶಂಕಿತರನ್ನು ಜಿಲ್ಲಾಡಳಿತದಿಂದ ಗುರುತಿಸಿಕೊಂಡು ಕರೆತಂದು ಪರೀಕ್ಷೆ ಮಾಡಿಸಿದಾಗ 18 ಜನರಿಗೆ ಪಾಸಿಟಿವ್ ಬಂದಿದೆ. ಈ ಹಿನ್ನೆಲೆಯಲ್ಲಿ ಇದೇ ರೀತಿಯಲ್ಲಿ ಕೆಲವು ಕಡೆ ಪರೀಕ್ಷೆ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಅಭಿರಾಂ ಜಿ. ಶಂಕರ್ ಮಾಹಿತಿ ನೀಡಿದರು.
ಆ್ಯಂಟಿಜನ್ ಟೆಸ್ಟ್ ಕೇವಲ ತುರ್ತು ಪರಿಸ್ಥಿತಿಯಲ್ಲಿ ಮಾತ್ರ ಬಳಸಲಾಗುವುದು. ಕೆಲವೊಮ್ಮೆ ಇದರಲ್ಲಿ ನಿಖರತೆ ಕಡಿಮೆ ಇರುತ್ತದೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಕ್ರಮ ತೆಗೆದುಕೊಂಡು ಅಧಿಕಾರಿಗಳನ್ನು ನಿಯೋಜಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಖಾಸಗಿ ಆಸ್ಪತ್ರೆಗಳು ಐಸಿಯುಗಳನ್ನು ಕೊಡಲು ನಿರಾಕರಿಸುತ್ತಿರುವ ಪ್ರಕರಣಗಳು ಕಂಡು ಬರುತ್ತಿದೆ. ಇಂಥವನ್ನು ಸಹಿಸಲು ಆಗದು. ಮುಂದಿನ ದಿನಗಳಲ್ಲಿ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಸಂಸದರಾದ ಪ್ರತಾಪ್ ಸಿಂಹ ಮಾತನಾಡಿ, ಜನ ಮೃತಪಟ್ಟಾಗ ಕೋವಿಡ್ ಮಾತ್ರ ಕಾರಣವಾಗುವುದಿಲ್ಲ. ಪ್ರತಿ ವರ್ಷದಂತೆ ಅನೇಕ ಕಾರಣಗಳಿಂದ ಮೃತಪಡುವ ಸಂಗತಿಗಳಿದ್ದು, ಈ ಬಗ್ಗೆ ಮಾಧ್ಯಮದವರು ಸಹಿತ ಎಲ್ಲರೂ ಗಮನ ಹರಿಸಬೇಕು ಎಂದು ತಿಳಿಸಿದರು.
ಕರಪತ್ರಗಳ ಜೊತೆಗೆ ಆಟೋಗಳ ಮೂಲಕವೂ ಜಾಗೃತಿ ಮೂಡಿಸುವ ಕೆಲಸವಾಗಲಿ ಎಂದು ಜಿಲ್ಲಾಧಿಕಾರಿಗಳ ಬಳಿ ಕೋರಿದರು.
ಬಾಕ್ಸ್())))
ರಾಜ್ಯದ ಎಲ್ಲೂ ಲಾಕ್ ಡೌನ್ ಇಲ್ಲ
ಮೈಸೂರು ಸೇರಿದಂತೆ ರಾಜ್ಯದ ಯಾವ ಭಾಗದಲ್ಲೂ ಲಾಕ್ ಡೌನ್ ಇಲ್ಲ. ಇದನ್ನು ಮುಖ್ಯಮಂತ್ರಿಗಳು ಸ್ಪಷ್ಟವಾಗಿ ಹೇಳಿದ್ದಾರೆ. ಇನ್ನು ಮುಂದೆ ಪಾಸಿಟಿವ್ ಪ್ರಕರಣಗಳು ಕಂಡು ಬಂದರೆ ಆ ಮನೆಗಳನ್ನು ಮಾತ್ರ ಸೀಲ್ ಡೌನ್ ಮಾಡಲಾಗುವುದು ಇಲ್ಲವೇ ಬೀದಿಗಳನ್ನು ಸೀಲ್ ಡೌನ್ ಮಾಡಲಾಗುವುದು ಎಂದು ಸಚಿವರಾದ ಸೋಮಶೇಖರ್ ತಿಳಿಸಿದರು.
ಶಾಸಕರಾದ ನಾಗೇಂದ್ರ, ಡಿಸಿಪಿ ಪ್ರಕಾಶ್ ಗೌಡ, ಮೇಯರ್ ತಸ್ನೀಂ, ಸಿಇಒ ಮಿಶ್ರಾ, ಮುಡಾ ಮತ್ತು ಎಂಸಿಸಿ ಝೋನಲ್ ಅಧಿಕಾರಿಗಳು, ಪೊಲಿಸ್ ಇಲಾಖೆಯ ಉನ್ನತ ಅಧಿಕಾರಿಗಳು, ಆರೋಗ್ಯ ಇಲಾಖೆ, ಕಾರ್ಪೊರೇಷನ್ ಸಿಬ್ಬಂದಿ ಸೇರಿದಂತೆ ಅನೇಕ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಾಜರಿದ್ದರು.
+++++