ಮೈಸೂರು ನ್ಯಾಯ ಬೆಲೆ ಅಂಗಡಿಗಳಲ್ಲಿ ಲೋಪದೋಷ ನ್ಯಾಯಬೆಲೆ ಅಂಗಡಿಗಳ ವಿರುದ್ಧ ನೋಟಿಸ್ ಜಾರಿ

409
Share


ನ್ಯಾಯಬೆಲೆ ಅಂಗಡಿಗಳಲ್ಲಿ ಲೋಪದೋಷ: 7 ನ್ಯಾಯಬೆಲೆ ಅಂಗಡಿಗೆ ನೋಟಿಸ್
ಮೈಸೂರು. ಮೇ.11.(ಕರ್ನಾಟಕ ವಾರ್ತೆ):- ಪಡಿತರ ವಿತರಣೆ ಸಂಬಂಧ ಲೋಪದೋಷ ಎಸಗಿರುವ ಸಗಟು ನಾಮಿನಿ ಮತ್ತು ನ್ಯಾಯಬೆಲೆ ಅಂಗಡಿ ಹಾಗೂ ಅಕ್ರಮ ದಾಸ್ತಾನು ಮಾಡುವವರ ವಿರುದ್ಧ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕರ ನೇತೃತ್ವದಲ್ಲಿ ಅನೌಪಚಾರಿಕ ಪಡಿತರ ಪ್ರದೇಶದ ಸಹಾಯಕ ನಿರ್ದೇಶಕರು ಮತ್ತು ಆಹಾರ ನಿರೀಕ್ಷಕರುಗಳು ದಾಳಿ ಮಾಡಿ ಪರಿಶೀಲನೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಂಡಿದ್ದಾರೆ.
ದಾಳಿ ಮಾಡಿದ ವೇಳೆ 697 ಕ್ವಿಂಟಾಲ್ ಅಕ್ಕಿ ಮತ್ತು 8.30 ಕ್ವಿಂಟಾಲ್ ತೊಗರಿಬೇಳೆಯು ಲೆಕ್ಕ ಪತ್ರ ದಾಸ್ತಾನಿಗೂ, ಭೌತಿಕ ದಾಸ್ತಾನಿಗೂ ವ್ಯತ್ಯಾಸ ಕಂಡುಬಂದಿರುತ್ತದೆ. ಆದ್ದರಿಂದ ಎಂಡಿಸಿಸಿಡಬ್ಲ್ಯೂ ಸ್ಟೋರ್ಸ್ ಸಗಟು ನಾಮಿನಿಯ ಪ್ರಾಧಿಕಾರವನ್ನು ಮೇ 8 ರಂದು ವಿಚಾರಣೆ ಕಾಯ್ದಿರಿಸಿ, ಅಮಾನತ್ತುಪಡಿಸಿ ಕೆಎಫ್‍ಸಿಎಸ್‍ಸಿ ಉತ್ತರ ನಗರದ ಸಗಟು ನಾಮಿನಿ ಇವರಿಗೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ.
ಎಂಡಿಸಿಸಿಡಬ್ಲ್ಯೂ ಸ್ಟೋರ್ಸ್‍ನ ಸಗಟು ನಾಮಿನಿಯ ಮಳಿಗೆ ವ್ಯವಸ್ಥಾಪಕರನ್ನು ಅಮಾನತ್ತಿನಲ್ಲಿರಿಸಿ ಮುಂದಿನ ಶಿಸ್ತು ಕ್ರಮ ಜರುಗಿಸಲಾಗುತ್ತಿದೆ. ಮತ್ತು ಸದರಿ ಸಗಟು ನಾಮಿನಿಯ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆ-1955 ರಡಿಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗುತ್ತಿದೆ.
      ಗೌಸಿಯಾನಗರ, ಕ್ಯಾತಮಾರನಹಳ್ಳಿ, ಜೆ.ಪಿ.ನಗರ, ಉದಯಗಿರಿ, ಹೂಟಗಳ್ಳಿ ಮುಂತಾದ ಪ್ರದೇಶಗಳಿಗೆ ಅನಿರೀಕ್ಷಿತ ದಾಳಿ ಮಾಡಿ ತನಿಖೆ ನಡೆಸಲಾಯಿತು. ಈ ಸಮಯದಲ್ಲಿ ಗೌಸಿಯಾನಗರ ವ್ಯಾಪ್ತಿಯ ಕಾರ್ಡುದಾರರಿಂದ ಅಕ್ಕಿಯನ್ನು ಖರೀದಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ದಾಸ್ತಾನಿರಿಸಿದ್ದ ಸುಮಾರು 3.80 ಕ್ವಿಂಟಾಲ್ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದೆ.
ಪರಿಶೀಲನಾ ಸಮಯದಲ್ಲಿ ತೂಕದಲ್ಲಿ ಕಡಿಮೆ ಆಹಾರಧಾನ್ಯ ವಿತರಣೆ ಮಾಡುತ್ತಿದ್ದ ಮೈಸೂರು ತಾಲ್ಲೂಕಿನ ಶ್ರೀಕಂಠ ನ್ಯಾಯಬೆಲೆ ಅಂಗಡಿಯನ್ನು ಅಮಾನತ್ತುಪಡಿಸಲಾಗಿದೆ. ಮೈಸೂರು ನಗರದ ಶಾರದಾ ನ್ಯಾಯಬೆಲೆ ಅಂಗಡಿಯನ್ನು ಪರ್ಯಾಯ ವ್ಯವಸ್ಥೆ ಮಾಡಲಾಗಿದೆ. ಮತ್ತು ಜಿಲ್ಲೆಯ ಒಟ್ಟು 7 ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಕಾರಣ ಕೇಳುವ ನೋಟೀಸ್ ನೀಡಲಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಜಂಟಿ ನಿರ್ದೆಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.


Share