ಶ್ರೀ ಗುರು ಗೀತ – ಭಾಗ 22
ಎಲ್ಲೇ ಇದ್ದರೂ ಪರಂಬ್ರಹ್ಮನನ್ನು ಧ್ಯಾನಿಸುತ್ತಿದ್ದರೆ ಕೀಟವು ದುಂಬಿಯಾಗುವಂತೆ ಶಿಷ್ಯನು ಪರಂಬ್ರಹ್ಮನಾಗುತ್ತಾನೆ.
ದತ್ತಾತ್ರೇಯರಿಗೆ 64 ಗುರುಗಳಿರುವಂತೆ ಸಾಧಕನೂ ಪ್ರಕೃತಿ ಯಲ್ಲಿ ಕಾಣುವ ಎಲ್ಲಾ ವಸ್ತುಗಳಲ್ಲೂ ಇರುವ ನೀತಿಯನ್ನು ಅರಿಯಲು ಪ್ರಯತ್ನಿಸಬೇಕು ಮತ್ತು ಎಲ್ಲರನ್ನೂ ಗುರುವಾಗಿ ನೋಡಬೇಕು.
ಸಾಧನೆ ಮಾಡುವಾಗ ಆಹಾರಕ್ಕಾಗಿ ಹಾತೊರೆಯಬಾರದು. ಸಿಕ್ಕಿದ್ದು ಪ್ರಸಾದವೆಂದು ತೆಗೆದುಕೊಳ್ಳಬೇಕು. ಸಾಧನೆ ಮಾಡುವಾಗ ಕೆಲವೊಂದು ಬಾರಿ ಆಹಾರ, ನಿದ್ದೆ, ಶರೀರ, ವಸ್ತ್ರ ಹೀಗೆ ಎಲ್ಲ ಸೌಕರ್ಯಗಳಿಂದ ಕೆಡಕುಂಟಾಗಬಹುದು, ಅದನ್ನು ಪರಿಗಣಿಸಬಾರದು. ಮಾನಾಪಮಾನಗಳಿಗೆ ಓಗೊಡಬಾರದು. ಸಾಧನಾ ಮಾರ್ಗವನ್ನು ಬಹಿರಂಗಪಡಿಸಬಾರದು.
ನಾನು ಅದ್ವಿತೀಯ ಪರಂಬ್ರಹ್ಮ ಎಂಬುದು ನಿಶ್ಚಿತವಾಗಿದೆ. ತಪಸ್ಸಿಗಾಗಿ ಅರಣ್ಯಕ್ಕೆ ಹೋಗಬೇಕಿಲ್ಲ. ಇರುವ ಜಾಗದಿಂದಲೇ ಸಾಧನೆ ಮಾಡಬೇಕು.
ವೈರಾಗ್ಯದಿಂದ ಪಡೆವ ಸುಖ ಇಂದ್ರಾದಿ ಚಕ್ರವರ್ತಿ ಗೂ ಲಭಿಸುವುದಿಲ್ಲ. ಅಂತಹ ಸಾಧಕನಿರುವ ದೇಶವು ಪವಿತ್ರವಾಗುತ್ತದೆ.
ಇನ್ನು ಗುರುಗೀತೆಯ ಅಂತಿಮ ಘಟ್ಟ: ಗುರುಗೀತೆ ಮಹಿಮೆಯ ಬಗ್ಗೆ ತಿಳಿಯೋಣ.
ಗುರುಗೀತೆಯು ಮಹತ್ತರವಾದುದು. ಗುರುಗೀತೆಯು ಮಾತೆಯ ಸ್ವರೂಪ.
ಶಿಷ್ಯನು ಎಷ್ಟೇ ಬೆಳೆದರೂ ಸಹ ಅವನ ಗುರುಗಳು ಎಂದಿಗೂ ಅವನಿಗೆ ಗುರುಗಳೆ. ಆತ್ಮ ವಿದ್ಯೆಯನ್ನು ಮಾಮೂಲು ಪಾಠ ಕಲಿತಂತೆ ಕಲಿಯುವುದಲ್ಲ. ಆತ್ಮ ವಿದ್ಯೆ ಸಂಪೂರ್ಣವಾಗಿ ಕಲಿತಮೇಲೆ ಗುರು ಶಿಷ್ಯ ನಲ್ಲಿ ಭೇದವಿರುವುದಿಲ್ಲ. ಶಿವನನ್ನು ಸದಾ ಗುರು ಭಾವನೆಯಲ್ಲಿಯೇ ನೋಡಬೇಕು. ಗುರೂಪದೇಶ ಮಂತ್ರವನ್ನು ಸದಾ ಧ್ಯಾನಿಸುತ್ತಿರಬೇಕು. ಶಿಷ್ಯನಲ್ಲಿ ಪರಿಪಕ್ವತೆ ಇಲ್ಲದಿದ್ದರೆ ಗುರು ಭೋದನೆ ಮನಸ್ಸಿಗೆ ತಲುಪುವುದಿಲ್ಲ. ಗುರು ನುಡಿವ ಪ್ರತಿ ವಾಕ್ಯವನ್ನು ಅರ್ಥ ಮಾಡಿಕೊಂಡು ಸಾಧನಾ ಮಾರ್ಗದಲ್ಲಿ ಮುಂದುವರಿಯಬೇಕು. ಗುರುಗೀತೆಯನ್ನು ಭಕ್ತಿಯಿಂದ ಓದಿದರೂ, ಕೇಳಿದರೂ ಅಜ್ಞಾನ ನಾಶವಾಗುತ್ತದೆ, ಜ್ಞಾನವನ್ನು ಕೊಡುತ್ತದೆ. ಪುರಾಣ ಪುಣ್ಯ ಗಳಿಂದ ಇಂದ್ರಾದಿ ಪದವಿಗಳು ಲಭಿಸಬಹುದೇ ವಿನಹ ಅಜ್ಞಾನವನ್ನು ನಾಶ ಮಾಡುವುದಿಲ್ಲ. ಗುರುಗೀತೆಯೊಂದೇ ಅಜ್ಞಾನವನ್ನು ನಾಶಮಾಡುವುದು. ಗುರುಗೀತೆ ಧ್ಯಾನಿಸುದರಿಂದ ಅದರಲ್ಲಿರುವ ಒಂದೊದು ಪದಗಳು ಮಂತ್ರದ ಪಠನ ಫಲ ನೀಡುತ್ತದೆ.
ಇಷ್ಟನ್ನು ಇಂದಿನ ಸಂಚಿಕೆಯಲ್ಲಿ ನೋಡೋಣ. ಇನ್ನು ಉಳಿದದ್ದನ್ನು ಸ್ವಾಮೀಜಿಯವರು ಹೇಗೆ ಅನುಗ್ರಹಿಸಿದ್ದಾರೆ ಎಂಬುದನ್ನು ಮುಂದಿನ ಸಂಚಿಕೆಯಲ್ಲಿ ನೋಡೋಣ.
ಜೈಗುರುದತ್ತ