ಮೈಸೂರು ಪತ್ರಿಕೆ ಅಧ್ಯಾತ್ಮಿಕ ಅಂಗಳ ಗುರು ಗೀತ ಭಾಗ 26

ಶ್ರೀ ಗುರು ಗೀತ – ಭಾಗ 26
ಇಲ್ಲಿಯವರೆಗೂ ಗುರು ಗೀತೆಯ ತತ್ವಾರ್ಥವನ್ನು ತಿಳಿದುಕೊಂಡೆವು. ಇಂದು ಶಂಕರಾಚಾರ್ಯರು ರಚಿಸಿರುವ ಗುರು ಅಷ್ಟಕ ವಿವರಣೆ ತಿಳಿದುಕೊಳ್ಳೋಣ.
ಗುರುವಿನ ಬಗೆಗಿನ ವ್ಯಾಖ್ಯಾನಗಳು ಬೇರೆ ಬೇರೆ ಆದರೆ ತತ್ವಸಾರಗಳು ಮಾತ್ರ ಒಂದೇ.
ಸುಂದರವಾದ ಶರೀರ, ಪತ್ನಿ, ಹೇರಳವಾದ ಕೀರ್ತಿ, ಐಶ್ವರ್ಯಗಳು ಇದ್ದು ಸದ್ಗುರು ಪಾದಪದ್ಮದಲ್ಲಿ ಮನಸ್ಸು ಲೀನವಾಗದಿದ್ದರೆ ಪ್ರಯೋಜನವೇನು?
ಸಕಲ ಶಾಸ್ತ್ರ, ವೇದಗಳನ್ನು ವ್ಯಾಸಂಗ ಮಾಡಿದ್ದರೂ, ಗದ್ಯ , ಪದ್ಯಗಳನ್ನು ರಚಿಸುವ ಶಕ್ತಿ ಇದ್ದರೂ ಸದ್ಗುರು ಪಾದಾರವಿಂದದಲ್ಲಿ ಮನಸ್ಸು ಲೀನವಾಗದಿದ್ದರೆ ಪ್ರಯೋಜನವೇನು?
ದೇಶ ವಿದೇಶಗಳಲ್ಲಿ ಕೀರ್ತಿ ಮಾನ್ಯತೆ ಗಳಿಸಿದ್ದರೂ, ಸತ್ಕರ್ಮಾಚರಣೆಯಲ್ಲಿ ಉನ್ನತವಾಗಿದ್ದರೂ ಸದ್ಗುರು ಪಾದ ಕಮಲದಲ್ಲಿ ಮನಸ್ಸು ಲೀನವಾಗದಿದ್ದರೆ ಪ್ರಯೋಜನವೇನು?
ಇಡೀ ಭೂಮಂಡಲದ ರಾಜಾನುರಾಜರ ಕೈಯಲ್ಲಿ ಸೇವೆ ಮಾಡಿಸಿ ಕೊಳ್ಳುತ್ತಿದ್ದರು ಸದ್ಗುರು ಪಾದ ಪದ್ಮದಲ್ಲಿ ಮನಸ್ಸು ಲೀನವಾಗದಿದ್ದರೆ ಪ್ರಯೋಜನವೇನು?
ದಾನ ಮಾಡುತ್ತಿರುವ ಕೀರ್ತಿ ಪ್ರತಾಪಗಳು ಸಕಲ ದಿಕ್ಕುಗಳಲ್ಲಿ ಹರಡಿದ್ದರೂ ಸದ್ಗುರು ಪಾದ ಕಮಲದಲ್ಲಿ ಮನಸ್ಸು ಲೀನವಾಗದಿದ್ದರೆ ಪ್ರಯೋಜನವೇನು?
ಭೋಗದಲ್ಲಾಗಲಿ, ಲೌಕಿಕ ಯೋಗದಲ್ಲಾಗಲಿ ಆಸಕ್ತಿ ಇರದಿದ್ದರೂ ಸದ್ಗುರು ಪಾದ ಕಮಲದಲ್ಲಿ ಮನಸ್ಸು ನೆಲೆಸದಿದ್ದಲ್ಲಿ ಪ್ರಯೋಜನವೇನು?
ಮನಸ್ಸು ವೈರಾಗ್ಯ ಭಾವದಿಂದ ಕೂಡಿದ್ದರೂ ಗುರು ತತ್ವದ ಮೇಲೆ ಮನಸ್ಸು ನಿಲ್ಲದಿದ್ದರೆ ಪ್ರಯೋಜನವೇನು?
ಯತಿಯಾಗಲೀ, ರಾಜನಾಗಲೀ, ಗೃಹಸ್ತನಾಗಲೇ, ಬ್ರಹ್ಮಚಾರಿಯಾಗಲೀ ಈ ಗುರು ಅಷ್ಟಕವನ್ನು ಪಠಿಸುವುದರಿಂದ ಪುಣ್ಯಗಳಿಸುತ್ತಾನೆ ಮತ್ತು ಬ್ರಹ್ಮ ಎಂಬ ಪದವಿಯನ್ನು ಪಡೆಯುತ್ತಾನೆ.
ಶ್ರೀ ಗುರು ಗೀತ ಪ್ರವಚನವನ್ನುನಶ್ರೀ ಸ್ವಾಮೀಜಿಯವರ ಹುಟ್ಟು ಹಬ್ಬದಂತಹ ಪರ್ವ ದಿನದಿಂದ ಆರಂಭಿಸಿ ಗುರುಪೋರ್ಣಮಿಯ ಹತ್ತಿರದಲ್ಲಿ ಕೊನೆಗೊಳ್ಳುತ್ತಿರುವುದು ಒಂದು ವಿಶೇಷವೇ ಸರಿ.
ಇಲ್ಲಿಯವರೆಗೆ 26 ಕಂತುಗಳಲ್ಲಿ ಶ್ರೀ ಗುರುಗೀತೆಯಂತಹ ಕಬ್ಬಿಣದ ಕಡಲೆಯಂತಹ ಕಠಿಣ ವಿಷಯದ ಬಗ್ಗೆ ಅತಿ ಸರಳವಾಗಿ, ಸುಂದರವಾಗಿ, ಸುಮಧುರವಾಗಿ ಉಪಾದೇಶಾಮೄತ ನೀಡಿದ ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ ಪಾದಾರವಿಂದಕ್ಕೆ ಕೋಟಿ ನಮಸ್ಕಾರಗಳು.
ಎಲ್ಲಾ ಸಂಚಿಕೆಗಳನ್ನು ತಪ್ಪದೇ ವೀಕ್ಷಿಸಿದ ವೀಕ್ಷಕರಿಗೂ ಅಭಿನಂದನೆಗಳು.
ಈ ಒಂದು ಸೇವೆಯನ್ನು ಮಾಡಲು ಅವಕಾಶ ಮಾಡಿಕೊಟ್ಟ ಮೈಸೂರು ಪತ್ರಿಕೆಗೆ ನನ್ನ ವೈಯಕ್ತಿಕ ಧನ್ಯವಾದಗಳು.
ಜೈಗುರುದತ್ತ.
ಭಾಲರಾ,
ಬೆಂಗಳೂರು.
ಇನ್ನೇನು ಶ್ರಾವಣ ಮಾಸ ಹತ್ತಿರವಾಗುತ್ತಿದೆ. ಹಾಗಾಗಿ ನಮ್ಮೆಲ್ಲರ ನೆಚ್ಚಿನ ದೈವ ‘ವೆಂಕಟರಮಣ ಸಂಕಟ ಹರಣ’ನ ‘ಶ್ರೀ ವೆಂಕಟೇಶ್ವರ ಕಲ್ಯಾಣ’ ಮಾಲಿಕೆಯನ್ನು ನಾಳೆಯಿಂದ ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ ಅಮೃತ ವಾಣಿಯಲ್ಲಿ ತಪ್ಪದೇ ಕೇಳಿ ಪುನೀತರಾಗೋಣ.