ಮೈಸೂರು ಪತ್ರಿಕೆ ಆಧ್ಯಾತ್ಮಿಕ ಅಂಗಳ ಶ್ರೀ ಪಾದ ಶ್ರೀ ವಲ್ಲಭರ ದಿವ್ಯ ಚರಿತಾಮೃತ ಪುಟ 5

Share

ಶ್ರೀ ಪಾದ ಶ್ರೀ ವಲ್ಲಭರ ದಿವ್ಯ ಚರಿತಾಮೃತ ಅಧ್ಯಾಯ – 1

ಪುಟ -5

ವ್ಯಾಘ್ರೇಶ್ವರಶರ್ಮನೂ ಸಹ ತನಗಾಗಿ ನಿಶ್ಚಯಿಸಲಟ್ಟಿದ್ದ ಗುಹೆಯನ್ನು ಸೇರಿದನು. ಗುರುದೇವರು ಬೋಧಿಸಿದ್ದ ಕ್ರಿಯಾಯೋಗ ಪದ್ದತಿಗಳಾಗಲಿ ಆತ್ಮಜ್ಞಾನವನೀಯುವ ಅವರ ಉಪದೇಶಗಳಾಗಲೀ ಅವನಿಗೆ ಅವಗತವಾಗಲಿಲ್ಲ. ಆತನು ಹೀಗೆ ಆಲೋಚಿಸಿದನು . “ ಗುರುದೇವರು ನನ್ನನ್ನು ಪ್ರೇಮದಿಂದ ಎಲವೋ ವ್ಯಾಘ್ರ ಎಂದು ಕರೆಯುತ್ತಿದ್ದರು. ನನ್ನ ಗುರುಬಂಧುಗಳೆಲ್ಲರೂ ವ್ಯಾಘ್ರಾಜಿನದ ಮೇಲೆ ಕುಳಿತು ಧ್ಯಾನ ಮಾಡುತ್ತಿದ್ದಾರೆ. ವ್ಯಾಪಚರ್ಮವೇ ಇಷ್ಟೊಂದು ಪವಿತ್ರವಾಗಿರುವಾಗ, ಅದು ಯೋಗಿಗಳಿಗೆ ಎಷ್ಟೋ ಲಾಭವನ್ನುಂಟು ಮಾಡುತ್ತಿರುವಾಗ ವ್ಯಾಘ್ರದ ಮಹಿಮೆ ಇನ್ನೆಷ್ಟಿರಬಹುದು ? ಅದೂ ಅಲ್ಲದೆ ಆತ್ಮಜ್ಞಾನಕ್ಕಾಗಿ ಧ್ಯಾನ ಮಾಡಿರೆಂದು ನಮಗೆಲ್ಲರಿಗೂ ಹೇಳಿ ಹೋಗಿದ್ದಾರೆ. ಆತ್ಮವೆಂದರೆ ‘ ನನ್ನ ಸ್ವಂತದ್ದು’ ಎಂದಲ್ಲವ ಅರ್ಥ ? ಉಳಿದವರ ಗೊಡವೆ ನನಗೇಕೆ ? ‘ ನನ್ನ ಹೆಸರೇ ವ್ಯಾಘ್ರೇಶ್ವರ, ಅಂದರೆ ನನ್ನ ಆತ್ಮವು ವ್ಯಾಘ್ರವೇ ಆಗಿರಬೇಕು, ನಾನು ಧ್ಯಾನಿಸಬೇಕಾಗಿರುವುದು ವ್ಯಾಘ್ರವನ್ನೇ , ಅದೇ ನನ್ನ ಆತ್ಮ. ನಾನು ವ್ಯಾಘ್ರರೂಪವನ್ನು ಹೊಂದಿದರೆ ಆತ್ಮಜ್ಞಾನಿಯಾದ ಹಾಗೆಯ ” .
ಒಂದು ವರ್ಷ ಹೀಗೆ ಕಳೆಯಿತು. ಗುರುದೇವರು ಪ್ರತಿಗುಹೆಗೂ ಬಂದು, ಶಿಷ್ಟರುಗಳು ತಮ್ಮ ತಮ್ಮ ಸಾಧನೆಯಲ್ಲಿ ಎಷ್ಟು ಮುಂದುವರೆದಿರುವರೆಂಬುದನ್ನು ಪರಿಶೀಲಿಸಿದರು. ವ್ಯಾಘ್ರೇಶ್ವರನ ಗುಹೆಯಲ್ಲಿ ನೋಡಿದರೆ ಅವನು ಅಲ್ಲಿರಲಿಲ್ಲ. ಅಲ್ಲಿ ಒಂದು ವ್ಯಾಘ್ರವು ಕುಳಿತಿದೆ . ಶ್ರೀಗುರುದೇವರು ಯೋಗದೃಷ್ಟಿಯಿಂದ ಪರಿಶೀಲಿಸಿದರು. ವ್ಯಾಘ್ರೇಶ್ವರನು ಅತಿ ತೀವ್ರತೆಯಿಂದ ವ್ಯಾಘ್ರರೂಪವನ್ನೇ ಧ್ಯಾನ ಮಾಡಿದುದರಿಂದ ಈ ರೂಪವನ್ನು ಹೊಂದಿದ್ದಾನೆಂದು ಗ್ರಹಿಸಿದರು. ಅವನ ಪರಿಶುದ್ದ ಹೃದಯಕ್ಕೆ ಹಾಗೂ ಆತ್ಮಶುದ್ಧಿಗೆ ಸಂತೋಷ ಪಟ್ಟರು. ಅವನನ್ನು ಆಶೀರ್ವದಿಸಿ ‘ ಓಂ ‘ ಕಾರವನ್ನು ಹೇಳಿಕೊಟ್ಟರು . ” ಶ್ರೀಪಾದರಾಜಂ ಶರಣಂ ಪ್ರಪದ್ಧೇ ” ಎನ್ನುವ ಮಂತ್ರವನ್ನು ಜಪ ಮಾಡುವಂತೆ ಹೇಳಿದರು . ವ್ಯಾಘ್ರೇಶ್ವರನು ತನ್ನ ವ್ಯಾಘ್ರರೂಪದಲ್ಲಿಯೇ ಕುರುವಪುರದ ಸಮೀಪವನ್ನು ಸೇರಿದನು. ಕುರುವಪುರವನ್ನು ಸೇರಲು ಜಲಮಾರ್ಗದಲ್ಲಿ ಹೋಗಬೇಕು. ಆಗ ಕುರುವಪುರದಲ್ಲಿ ತಮ್ಮ ಭಕ್ತರ ಸಮೂಹದಲ್ಲಿ ಕುಳಿತಿದ್ದ ಶ್ರೀಪಾದವಲ್ಲಭರು ಅವರಿಗೆ, ‘ ನನ್ನ ಪರಮಭಕ್ತನು ನನ್ನನ್ನು ಕರೆಯುತ್ತಿದ್ದಾನೆ ‘ ಎಂದು ಹೇಳಿ ತಮ್ಮ ಕಾಂತಿಮಯ ಶರೀರದೊಂದಿಗೆ ನೀರಿನ ಮೇಲೆ ನಡೆದುಹೋದರು. ಶ್ರೀಪಾದವಲ್ಲಭರು ನೀರಿನ ಮೇಲೆ ನಡೆಯುತ್ತಿರುವಾಗ ಅವರು ಹೆಜ್ಜೆ ಇಟ್ಟಲ್ಲೆಲ್ಲ ಒಂದು ತಾವರೆಯ ಪುಷ್ಪವು ಉದ್ಭವಿಸುತ್ತಿತ್ತು. ಹೀಗೆ ಅವರು ದಡವನ್ನು ಸೇರಿ ‘ ಶ್ರೀಪಾದರಾಜ , ಶರಣಂ ಪ್ರಪದ್ಯೆ ‘ ಎಂದು ಅವಿರತವಾಗಿ ಜಪಮಾಡುತ್ತಿದ್ದ ವ್ಯಾಘ್ರೇಶ್ವರನನ್ನು ನೋಡಿದರು. ವ್ಯಾಘ್ರೇಶ್ವರನು ಶ್ರೀಪಾದ ಶ್ರೀವಲ್ಲಭರ ಚರಣಾರವಿಂದಗಳಿಗೆ ನಮಸ್ಕರಿಸಿದನು. ಅವರು ಆ ವ್ಯಾಘ್ರದ ಮೇಲೆ ಕುಳಿತು ನೀರಿನ ಮೇಲೆ ತೇಲಿಕೊಂಡು ಕುರುವಪುರವನ್ನು ಸೇರಿದರು. ಎಲ್ಲರೂ ಆಶ್ಚರ್ಯಚಕಿತರಾಗಿ ನೋಡುತ್ತಿದ್ದರು .
( ಮುಂದುವರೆಯುವುದು )

ಕೃಪೆ – ಶ್ರೀ ಕನ್ನೇಶ್ವರ ಪ್ರಕಾಶನ

ಚುಟುಕು ಸಪ್ತಶತಿ – 6
ದೊಡ್ಡ ಓದು ಓದಿದೆ, ದೊಡ್ಡವರಲಿ ಬೆರೆತೆ,
ದೊಡ್ಡ ದುಡ್ಡು ಮಾಡಿದೆ, ದೊಡ್ಡ ಹೆಸರೂ ಮಾಡಿದೆ.
ಈಶ ನಿನ್ನನು ಮರೆತು ದಡ್ಡನಾದೆ.
ಏನು ಗತಿ ಓ ಪ್ರಭುವೆ – ಸಚ್ಚಿದಾನಂದ

  • ಶ್ರೀ ಸ್ವಾಮೀಜಿ

( ಸಂಗ್ರಹ )

  • ಭಾಲರಾ
    ಬೆಂಗಳೂರು

ಜೈಗುರುದತ್ತ.


Share