ಮೈಸೂರು ಪತ್ರಿಕೆ: ಆಧ್ಯಾತ್ಮಿಕ ಅಂಗಳ ಶ್ರೀ ಪಾದ ಶ್ರೀ ವಲ್ಲಭರ ದಿವ್ಯ ಚರಿತಾಮೃತ ಪುಟ – 10

Share

ಶ್ರೀ ಪಾದ ಶ್ರೀ ವಲ್ಲಭರ ದಿವ್ಯ ಚರಿತಾಮೃತ ಅಧ್ಯಾಯ – 2

ಪುಟ – 10

ದೇವೇಂದ್ರ ಪ್ರತಿಷ್ಠಿತವಾದ ಆ ಶಿವಲಿಂಗವನ್ನು ಧನಂಜಯನೆಂಬ ಒಬ್ಬ ವ್ಯಾಪಾರಿಯು ಗಮನಿಸಿ ಆ ವಿಷಯವನ್ನು ಆಗ ಆ ರಾಜ್ಯವನ್ನಾಳುತ್ತಿದ್ದ ಕುಲಶೇಖರ ಪಾಂಡ್ಯ ರಾಜನಿಗೆ ಬಿನ್ನವಿಸಿದನು. ಶಿವನ ಆಜ್ಞೆಯಂತೆ ಕುಲಶೇಖರ ಪಾಂಡ್ಯರಾಜನು ಅದನ್ನು ಅಭಿವೃದ್ಧಿ ಪಡಿಸಿ ಅಲ್ಲಿ ಒಂದು ಪಟ್ಟಣವನ್ನು ನಿರ್ಮಿಸಿ ಅದಕ್ಕೆ ಮಧುರಾನಗರವೆಂದು ನಾಮಕರಣವನ್ನು ಮಾಡಿದನು. ಅವನ ಮಗನಾದ ಮಲಯಧ್ವಜ ಪಾಂಡ್ಯನು ಸಂತಾನಪ್ರಾಪ್ತಿಗಾಗಿ ಪುತ್ರಕಾಮೇಷ್ಠಿ ಯಾಗವನ್ನು ಮಾಡಿದನು. ಆ ಯಜ್ಞಕುಂಡದಿಂದ ಮೂರು ವರ್ಷದ ಒಂದು ಹೆಣ್ಣು ಮಗು ಆವಿರ್ಭವಿಸಿತು. ಆಕೆಯೇ ಮೀನಾಕ್ಷಿದೇವಿ. ಅವಳು ಸುಂದರೇಶ್ವರ ಸ್ವಾಮಿಯನ್ನು ಮದುವೆಯಾದಳು. ಶಿವನ ಜಟೆಯಿಂದ ಆವಿರ್ಭವಿಸಿದ ವೇಗವತಿ ನದಿ ಆ ಮಧುರಾ ಪಟ್ಟಣವನ್ನು ಮತ್ತಷ್ಟು ಪವಿತ್ರವನ್ನಾಗಿ ಮಾಡಿದೆ. ಮಹಾವಿಷ್ಣುವು ತಾನೇ ಮುಂದೆನಿಂತು ಕನ್ಯಾದಾನವನ್ನು ಮಾಡಿ ಮಹಾ ವೈಭವದಿಂದ ಮೀನಾಕ್ಷಿ ಸುಂದರೇಶ್ವರರ ಕಲ್ಯಾಣೋತ್ಸವವನ್ನು ನೆರವೇರಿಸಿದನು ” ಎಂದು ತಿಳಿಸಿದರು.
ಶ್ರೀಸಿದ್ದಯೋಗೀಂದ್ರರು ತಮ್ಮ ದಿವೋಪದೇಶವನ್ನು ಮುಂದುವರೆಸುತ್ತಾ , ” ಮಗೂ ! ಶಂಕರಭಟ್ಟ ! ಸೃಷ್ಟಿಯಲ್ಲಿನ ಪ್ರತಿಯೊಂದು ವಸ್ತುವಿನಿಂದಲೂ ಪ್ರಕಂಪನದಿಂದ ಉಂಟಾಗುವ ಅಲೆಗಳು ಪ್ರಸರಿಸುತ್ತಿರುತ್ತವೆ. ಎಷ್ಟೋ ವೈವಿಧ್ಯಮಯವಾದ ಈ ಪ್ರಕಂಪನಗಳಿಂದ ಬೇರೆ ಬೇರೆ ವಸ್ತುಗಳ ಮಧ್ಯೆ ಆಕರ್ಷಣೆ ವಿಕರ್ಷಣಗಳು ಉಂಟಾಗುತ್ತಿರುತ್ತವೆ . ಸ್ಕೂಲ, ಸೂಕ್ಷ್ಮ ಕಾರಣ ಶರೀರಗಳಲ್ಲಿ ಪುಣ್ಯಕರ್ಮಗಳಿಂದ ಪುಣ್ಯ ರೂಪವಾದ ಪ್ರಕಂಪನೆಗಳು, ಪಾಪಕರ್ಮಗಳಿಂದ ಪಾಪರೂಪವಾದ ಪ್ರಕಂಪನೆಗಳು ಉಂಟಾಗುತ್ತಿರುತ್ತವೆ. ಪುಣ್ಯ ಪ್ರಕಂಪನಗಳ ವಿಶೇಷತೆಯಿಂದಾಗಿ ಪುಣ್ಯಪುರುಷರೊಡನೆ ಸಮಾಗಮ, ಪುಣ್ಯಕ್ಷೇತ್ರಗಳ ದರ್ಶನ, ಪುಣ್ಯಕರ್ಮಗಳಲ್ಲಿ ಆಸಕ್ತಿ ಹುಟ್ಟಿ ಇವೆಲ್ಲವುಗಳ ಫಲವಾಗಿ ಪುಣ್ಯವು ವೃದ್ಧಿ ಹೊಂದುತ್ತದೆ. ಪುಣ್ಯವು ವೃದ್ಧಿಹೊಂದಿ ಪಾಪವು ಕ್ಷೀಣಿಸದ ಹೊರತು ದತ್ತ ಪ್ರಭುಗಳಲ್ಲಿ ನಮಗೆ ನಿಶ್ಚಲ ಭಕ್ತಿ ಕುದುರುವುದಿಲ್ಲ. ಕಾಲ, ಕರ್ಮ, ಕಾರಣವಶದಿಂದ ವಿಧವಿಧವಾದ ಸಂಘಟನೆಗಳು ಸಂಭವಿಸುತ್ತಿರುತ್ತವೆ. ಶ್ರೀಪಾದವಲ್ಲಭರಿಗೆ ನಿನ್ನ ಮೇಲೆ ಅಪಾರ ಕೃಪೆಯಿರುವುದರಿಂದಲೇ ನೀನು ಇಲ್ಲಿಗೆ ಬರಲು ಸಾಧ್ಯವಾಯಿತು” ಎಂದು ಹೇಳಿದರು.
( ಮುಂದುವರೆಯುವುದು )

ಕೃಪೆ – ಶ್ರೀ ಕನ್ನೇಶ್ವರ ಪ್ರಕಾಶನ

ಚುಟುಕು ಸಪ್ತಶತಿ – 11
ನನ್ನಲ್ಲಿಯೂ ಮಾಯೆ, ನಿನ್ನಲ್ಲಿಯೂ ಮಾಯೆ,
ಎಲ್ಲರಲ್ಲಿಯೂ ಮಾಯೆ, ಎಲ್ಲೆಲ್ಲೂ ಮಾಯೆ –
ಎನ್ನುವರು ತಿಳಿದವರು.
ಜಗವ ಸುತ್ತಿಹುದು ಮಾಯೆ ಎಂದು ಹೇಳುತ್ತಲೇ
ಮಾಯೆಯಲಿ ಬೀಳುವರು.
ರಾತ್ರಿ ಕಂಡ ಬಾವಿಯೊಳಗೆ ಹಗಲು ಬೀಳುವರು,
ಕಣ್ಣು ಕಾಣದ ಗಾವಿಲರು – ಸಚ್ಚಿದಾನಂದ

  • ಶ್ರೀ ಸ್ವಾಮೀಜಿ.

( ಸಂಗ್ರಹ )

  • ಭಾಲರಾ
    ಬೆಂಗಳೂರು

ಜೈಗುರುದತ್ತ.


Share