ಮೈಸೂರು ಪತ್ರಿಕೆ, ಆಧ್ಯಾತ್ಮಿಕ ಅಂಗಳ : ಶ್ರೀ ಪಾದ ಶ್ರೀ ವಲ್ಲಭರ. ಚರಿತ್ರೆ ಪುಟ – 21

Share

ಶ್ರೀ ಪಾದ ಶ್ರೀ ವಲ್ಲಭರ ದಿವ್ಯ ಚರಿತಾಮೃತ
ಅಧ್ಯಾಯ – 3

ದಯವಿಟ್ಟು ಗಮನಿಸಿ – 18/9/2020 ರಿಂದ ಆಶ್ವಯುಜ ಅಧಿಕ ಮಾಸ ಆರಂಭವಾಗಿದೆ. ಅಧಿಕ ಮಾಸದಲ್ಲಿ ಮಾಡುವ ಎಲ್ಲಾ ಸತ್ಕಾರ್ಯಗಳಿಗೂ ಅಧಿಕ ಫಲವಿರುತ್ತದೆ. ನಮ್ಮ ವೀಕ್ಷಕ ವಾಚಕರು ಭಜನೆ ಆಲಿಸಿ ಚರಿತ್ರೆ ಪಠಿಸಿ ಅಧಿಕ ನೆಮ್ಮದಿಯನ್ನು ಅಧಿಕ ಜ್ಞಾನಾರ್ಜನೆ ಪಡೆಯಬೇಕೆಂದು ಆಶಿಸುತ್ತೇವೆ.

ಪುಟ – 21

ಅದಕ್ಕೆ ಆ ಬ್ರಾಹ್ಮಣನು ಒಪ್ಪಿಕೊಂಡನು. ಹೊಟ್ಟೆಯಲ್ಲಿ ತಾಳಲಾರದಂತಹ ಹಸಿವಾಗುತ್ತಿದೆ. ಆಯಾಸಗೊಂಡು ಕ್ಷೀಣಸ್ವರದಲ್ಲಿ ಶ್ರೀಪಾದವಲ್ಲಭರ ನಾಮಸ್ಮರಣೆಯನ್ನು ಮಾಡತೊಡಗಿದೆವು. ಸ್ವಲ್ಪ ಸಮಯದ ನಂತರ ವಿಚಿತ್ರಪುರದಿಂದ ರಾಜಭಟರು ಬಂದು, ” ಸ್ವಾಮಿ ! ಯುವರಾಜರು ಮಾತನಾಡಲು ಪ್ರಾರಂಭಿಸಿದ್ದಾರೆ. ಮೂಕತನವು ಹೋಗಿದೆ. ತಕ್ಷಣ ನಿಮ್ಮನ್ನು ಕರೆದುಕೊಂಡು ಬಾ ಎಂದು ರಾಜರ ಆಜ್ಞೆಯಾಗಿದೆ. ಆದ್ದರಿಂದ ನೀವು ಈಗಲೇ ನಮ್ಮೊಡನೆ ಹೊರಟು ಬನ್ನಿ” ಎಂದು ಹೇಳಿದರು. ನಮ್ಮ ಪರಿಸ್ಥಿತಿಯನ್ನು ಅವರಿಗೆ ಹೇಳಲಾಗದ ನಾನು ಹೀಗೆ ಹೇಳಿದೆನು. “ ನಾನು ಒಬ್ಬನೇ ಬರಲಾರೆ, ನನ್ನ ಜೊತೆ ಈ ಬ್ರಾಹ್ಮಣನು ಕೂಡ ಬರುತ್ತಾನೆ.” ಅದಕ್ಕೆ ರಾಜಭಟರು ಒಪ್ಪಿಕೊಂಡರು. ನಮ್ಮಿಬ್ಬರನ್ನೂ ಕುದುರೆಗಳ ಮೇಲೆ ಕೂಡಿಸಿಕೊಂಡು ಒಳ್ಳೆಯ ಗೌರವದಿಂದ ಕರೆದುಕೊಂಡು ಹೋಗುತ್ತಿರುವುದನ್ನು ಅಗ್ರಹಾರದವರೆಲ್ಲರೂ ನೋಡಿ ಮೂಗಿನ ಮೇಲೆ ಬೆರಳುಗಳನ್ನು ಇಟ್ಟುಕೊಂಡರು.
ರಾಜನು , ” ಸ್ವಾಮಿ ! ಮಹಾತ್ಮರೆ, ನೀವು ಮಹಾಪಂಡಿತರೆಂದು ಗೊತ್ತಾದ ಮೇಲೆಯೂ ನಿಮ್ಮನ್ನು ಗೌರವಿಸದೆ ಖಾಲಿ ಕೈಗಳಲ್ಲಿ ಕಳುಹಿಸಿಬಿಟ್ಟೆವು. ನೀವು ಹೋದ ನಂತರ ಯುವರಾಜನು ಸ್ಮೃತಿ ತಪ್ಪಿ ಬಿದ್ದು ಹೋದನು. ಬೇಕಾದಷ್ಟು ಉಪಚಾರಗಳನ್ನು ಮಾಡಿದೆವು. ಬಹಳ ಸಮಯದ ಮೇಲೆ ಅವನು ಕಣ್ಣುಗಳನ್ನು ಬಿಟ್ಟು ” ಶ್ರೀಪಾದ ಶ್ರೀವಲ್ಲಭ ದಿಗಂಬರಾ ! ಶ್ರೀ ದತ್ತ ದೇವಾ ದಿಗಂಬರಾ ! ” ಎಂದು ಮಾತನಾಡಲು ಪ್ರಾರಂಭಿಸಿದನು. ಯುವರಾಜನಿಗೆ ಆಜಾನುಬಾಹುವೂ, ಅತ್ಯಂತ ಸುಂದರಕಾಯನೂ ಆದ 16 ವರ್ಷಗಳ ಯತಿಯು ದರ್ಶನ ಕೊಟ್ಟು ಬಾಯೊಳಗೆ ವಿಭೂತಿಯನ್ನು ಹಾಕಿದನೆಂದು ಯುವರಾಜನು ಹೇಳಿದನು. ಆ ಯತಿಗಳು ಯಾರು ? ಅವರು ಎಲ್ಲಿದ್ದಾರೆ ? ದತ್ತ ಪ್ರಭುಗಳಿಗೂ ಆ ಯೋಗಿಗೂ ಏನು ಸಂಬಂಧ ? ದಯಮಾಡಿ ಹೇಳಬೇಕು” ಎಂದು ಕೇಳಿಕೊಂಡನು.
ನಾನು, ” ಶ್ರೀಪಾದವಲ್ಲಭರ ಮಹಿಮೆಯನ್ನು ನಾನು ಹೇಗೆ ತಾನೇ ವರ್ಣಿಸಬಲ್ಲೆ ? ಅವರು ಸಾಕ್ಷಾತ್ ದತ್ತ ಪ್ರಭುಗಳ ಅವತಾರ ಶ್ರೀಕೃಷ್ಣಾವತಾರದಂತೆ ನಮ್ಮ ಪ್ರಭುಗಳದ್ದೂ ಕೂಡ ಅತ್ಯಂತ ವಿಶಿಷ್ಟವಾದ ಅವತಾರ. ಅವರ ವಿಚಾರವಾಗಿ ನನಗೆ ಗೊತ್ತಿರುವುದೂ ಕೂಡ ಸ್ವಲ್ಪ ಮಾತ್ರವೇ ! ಅವರನ್ನು ದರ್ಶಿಸಬೇಕೆಂದುಕೊಂಡೇ ನಾನು ಕುರುವಪುರಕ್ಕೆ ಹೊರಟಿದ್ದೇನೆ. ದಾರಿಯಲ್ಲಿ ಸಿಕ್ಕಿದ ಪುಣ್ಯಕ್ಷೇತ್ರಗಳನ್ನೂ , ಪುಣ್ಯಪುರುಷರನ್ನೂ ದರ್ಶನ ಮಾಡುತ್ತಾ ಹೋಗುತ್ತಿದ್ದೇನೆ ” ಎಂದು ಅತಿ ವಿನಯವಾಗಿ ನುಡಿದನು.
( ಮುಂದುವರೆಯುವುದು )

ಕೃಪೆ – ಶ್ರೀ ಕನ್ನೇಶ್ವರ ಪ್ರಕಾಶನ

ಚುಟುಕು ಸಪ್ತಶತಿ – 22

ಕತ್ತಲಲ್ಲಿ ಹಚ್ಚುವರು ದೀಪ, ಅದು ರಾತ್ರಿಯೆಂದು.
ಹಗಲೆಲ್ಲ ಎಲ್ಲೆಲ್ಲೂ ದೃಷ್ಟಿ ಹರಿಸುವರು,
ಅದು ರಾತ್ರಿಯಲ್ಲೆಂದು.
ಹಗಲು – ರಾತ್ರಿ ಅರಿಯದಾ ಜಂಗುಳಿಗೆ
ಹಗಲೆಂಬುದೇ ರಾತ್ರಿ, ರಾತ್ರಿಯೇ ಹಗಲು.
ಸರ್ವಭೂತದ ಹಗಲು ಜ್ಞಾನಿಗದೆ ರಾತ್ರಿ,
ರಾತ್ರಿಯೆಂಬುದೆ ಅವಗೆ ಹಾಡುಹಗಲು.
ಕತ್ತಲ ವಿದ್ಯೆಯ ಅರಿವಿಲ್ಲದವಗೆ ಕತ್ತಲೇಕೆ ಹಗಲೇಕೆ?
ಪರಮಜ್ಞಾನಿ ಕೃಪಾಪೂರ್ಣ – ಸಚ್ಚಿದಾನಂದ

  • ಶ್ರೀ ಸ್ವಾಮೀಜಿ.

( ಸಂಗ್ರಹ )

  • ಭಾಲರಾ
    ಬೆಂಗಳೂರು

ಜೈಗುರುದತ್ತ.


Share