ಮೈಸೂರು ಪತ್ರಿಕೆ : ಆಧ್ಯಾತ್ಮಿಕ ಅ0ಗಳ ಶ್ರೀ ಪಾದ ಶ್ರೀ ವಲ್ಲಭರ ಚರಿತ್ರೆ – 30

Share

ಶ್ರೀ ಪಾದ ಶ್ರೀ ವಲ್ಲಭರ ದಿವ್ಯ ಚರಿತಾಮೃತ
ಅಧ್ಯಾಯ – 4

ವಿ.ಸೂ. – ಭಜನೆ ಆಲಿಸಿ, ಚರಿತ್ರೆ ಪಠನೆಮಾಡಿ.

ದಯವಿಟ್ಟು ಗಮನಿಸಿ – 18/9/2020 ರಿಂದ ಆಶ್ವಯುಜ ಅಧಿಕ ಮಾಸ ಆರಂಭವಾಗಿದೆ. ಅಧಿಕ ಮಾಸದಲ್ಲಿ ಮಾಡುವ ಎಲ್ಲಾ ಸತ್ಕಾರ್ಯಗಳಿಗೂ ಅಧಿಕ ಫಲವಿರುತ್ತದೆ. ನಮ್ಮ ವೀಕ್ಷಕ ವಾಚಕರು ಭಜನೆ ಆಲಿಸಿ ಚರಿತ್ರೆ ಪಠಿಸಿ ಅಧಿಕ ನೆಮ್ಮದಿಯನ್ನು ಅಧಿಕ ಜ್ಞಾನಾರ್ಜನೆ ಪಡೆಯಬೇಕೆಂದು ಆಶಿಸುತ್ತೇವೆ.

II ಶ್ರೀಪಾದರಾಜಂ ಶರಣಂ ಪ್ರಪಧ್ಯೆ II
II ಜಯವಾಗಲಿ ಜಯವಾಗಲಿ ಶ್ರೀಪಾದ ಶ್ರೀವಲ್ಲಭರಿಗೆ ಜಯವಾಗಲಿ II

ಪುಟ – 30

ಶಂಕರಭಟ್ಟನಿಗೆ ಕುರುವಪುರದಲ್ಲಿ ವಾಸವಾಂಬಿಕ ದರ್ಶನ

ಪಳನಿ ಸ್ವಾಮಿಯವರ ಆಜ್ಞಾನುಸಾರವಾಗಿ ನಾವು ಮೂರೂ ಜನರೂ ಧ್ಯಾನ ಮಾಡಲು ಸಂಕಲ್ಪಿಸಿದೆವು. ಸ್ವಾಮಿಯವರು ಹೀಗೆ ಹೇಳಿದರು. ” ಮಗೂ ! ಮಾಧವಾ ! ವತ್ಸಾ ! ಶಂಕರಾ ! ನಾವು ಮೂವರೂ ಧ್ಯಾನಸ್ಥರಾಗೋಣ, ನಮಗೆ ಧ್ಯಾನದಲ್ಲಿ ಆದ ಅನುಭವಗಳನ್ನು ಕುರಿತು ಚರ್ಚೆ ಮಾಡಿಕೊಳ್ಳೋಣ. ಇದು ಶ್ರೀಪಾದವಲ್ಲಭರ ಆಜ್ಞೆಯಾಗಿರುವುದರಿಂದ ತಪ್ಪದೆ ಏನೋ ದೊಡ್ಡ ಆಧ್ಯಾತ್ಮಿಕ ಪರಿಣಾಮವು ನಮಗೆ ಭವಿಷ್ಯತ್ತಿನಲ್ಲಿ ಅನುಭವಕ್ಕೆ ಬರುವುದು. ಭವಿಷ್ಯತ್ತಿನಲ್ಲಿ ಹೂಣಶಕವು ವ್ಯವಹಾರದಲ್ಲಿರುತ್ತದೆ. ಈ ದಿನ ಹೂಣಶಕದ ಪ್ರಕಾರ 25-5-1336. ಈ ದಿನ ಶುಕ್ರವಾರ. ಸಕಲ ಶುಭ ಯೋಗಗಳು ಒಟ್ಟುಗೂಡಿದ ಯೋಗ ಪೂರ್ಣವಾದ ಮಹತ್ತರ ದಿನವು. ಈ ದಿನ ನಮ್ಮ ಜೀವಿತದಲ್ಲಿ ಅತಿಶಯ ಪ್ರಾಮುಖ್ಯತೆಯನ್ನು ಹೊಂದಿದ ದಿನವಾಗಿದೆ. ನಾನು ನನ್ನ ಸ್ಥೂಲ ಶರೀರವನ್ನು ಇಲ್ಲಿಯೇ ಬಿಟ್ಟು ಸೂಕ್ಷ್ಮ ಶರೀರದಲ್ಲಿ ಕುರುವಪುರಕ್ಕೆ ಹೋಗುವೆನು. ಏಕಕಾಲದಲ್ಲಿ ಸೂಕ್ಷ್ಮರೂಪದಲ್ಲಿ ನಾಲ್ಕು ಕಡೆ ವಿಹರಿಸುವುದೆಂದರೆ ನನಗೆ ಬಾಲ್ಯಕ್ರೀಡೆ, ಶ್ರೀಪಾದ ಶ್ರೀವಲ್ಲಭರ ಧ್ಯಾನದಲ್ಲಿರೋಣ, ಅವರ ಆಜ್ಞೆಯಾದ ಬಳಿಕ ನಾನು ಸೂಕ್ಷ್ಮ ಶರೀರದಲ್ಲಿ ಕುರುವಪುರದಲ್ಲಿ ಅವರ ಸನ್ನಿಧಾನಕ್ಕೆ ಹೋಗುವೆನು.

ಶ್ರೀಪಾದ ಶ್ರೀವಲ್ಲಭರ ಅನುಗ್ರಹವು ಸುಲಭವಾಗಿ ಲಭಿಸುವ ವಿಧಾನ

ಸ್ವಾಮಿಯವರ ಮಾತುಗಳನ್ನು ಕೇಳಿ ನನಗೆ ಆಶ್ಚರ್ಯವಾಯಿತು. ” ಸ್ವಾಮಿ ! ಮಾಧವನು ಶ್ರೀಪಾದವಲ್ಲಭರ ದಿವ್ಯಮಂಗಳ ರೂಪವನ್ನು ದರ್ಶನ ಮಾಡಿರುವನು. ನಿಮಗೆ ಸದಾ ಸೂಕ್ಷ್ಮ ಘಟ್ಟದಲ್ಲಿ ಶ್ರೀಪಾದವಲ್ಲಭರ ಸಂಬಂಧವು ಇದ್ದೇ ಇದೆ. ಆದರೆ ನನಗೆ ಅವರ ನಾಮವಲ್ಲದೆ ರೂಪವು ಗೊತ್ತಿಲ್ಲವಲ್ಲ ! ನಾನು ಅವರನ್ನು ಹೇಗೆ ಧ್ಯಾನಿಸಲಿ ? ” ಎಂದು ಕೇಳಿದನು. ಅದಕ್ಕೆ ಸ್ವಾಮಿಗಳು ಮಂದಹಾಸವನ್ನು ಸೂಸುತ್ತಾ , ” ಮಗೂ ! ಶ್ರೀಪಾದರಲ್ಲಿ ಭಕ್ತಿ ಒಂದಿದ್ದರೆ ಎಲ್ಲವೂ ಸಿದ್ಧಿಸುವುದು. ಆಮೆಯು ತನ್ನ ಮಗುವನ್ನು ಬಿಟ್ಟು ಎಷ್ಟೋ ದೂರದಲ್ಲಿದ್ದರೂ ತನ್ನ ಆಲೋಚನಾ ತರಂಗಗಳಿಂದಲೇ ಅದನ್ನು ಕಾಪಾಡುವುದು. ಬೆಕ್ಕು ತನ್ನ ಮರಿಯನ್ನು ಬಾಯಲ್ಲಿ ಕಚ್ಚಿಕೊಂಡು ಒಂದು ಮನೆಯಿಂದ ಇನ್ನೊಂದು ಮನೆಗೆ ಕೊಂಡೊಯ್ಯುವುದು. ಮಂಗಗಳಿಗೆ ಯಾವ ಸ್ಥಳವು ಸುರಕ್ಷಿತವೆನಿಸುವುದೋ ಅಲ್ಲಿ ಅವನ್ನು ಬಿಡುತ್ತವೆ. ಅದರಂತೆ ಮೊದಲಿಗೆ ಶ್ರೀಪಾದವಲ್ಲಭರು ತಮ್ಮ ಭಕ್ತರನ್ನು ಕೂರ್ಮ ಕಿಶೋರ ನ್ಯಾಯದಿಂದ ಸಂರಕ್ಷಿಸುತ್ತಾರೆ. ಸ್ವಲ್ಪ ಮುಂದುವರಿದ ಮೇಲೆ ಮಾರ್ಜಾಲ ಕಿಶೋರ ನ್ಯಾಯದಿಂದ ಭಕ್ತರನ್ನು ಪಾಲಿಸುತ್ತಾರೆ. ಅನಂತರ ಮರ್ಕಟ ಕಿಶೋರ ನ್ಯಾಯದಿಂದ ಭಕ್ತ ಸಂರಕ್ಷಣೆಯನ್ನು ಮುಂದುವರೆಸುತ್ತಾರೆ. ಈ ಸ್ಥಿತಿಯಲ್ಲಿ ಮರಿಗೆ ತನ್ನ ತಾಯಿಯನ್ನು ತಾನೇ ಪ್ರಯತ್ನ ಪೂರ್ವಕವಾಗಿ ಕಚ್ಚಿಕೊಂಡಿರಬೇಕಾದ ಅವಶ್ಯಕತೆ ಇದೆ. ಇನ್ನೂ ಮುಂದುವರೆದ ನಂತರ ತಾಯಿಯೊಡನೆ ಸ್ವೇಚ್ಛೆಯಾಗಿ ವಿಹರಿಸುವ ಮೀನಿನ ಈ ಮರಿಗಳಂತೆ ಭಕ್ತರು ಇರುತ್ತಾರೆ. ನೀನು ಧ್ಯಾನದಲ್ಲಿ ಕೂತಿರುವಾಗ ಅವರೇ ನಿನಗೆ ದರ್ಶನ ಭಾಗ್ಯವನ್ನು ಕೊಡುವರು. ಶ್ರೀಪಾದವಲ್ಲಭರು ಯಾವುದೋ ಬಹಳ ಮುಖ್ಯವಾದ ಭವಿಷ್ಯ ನಿರ್ಣಯವನ್ನು ಮಾಡಬಯಸಿ ನನ್ನನ್ನು ಈ ಮಹಾಪವಿತ್ರ ದಿನದಂದು ಸೂಕ್ಷ್ಮರೂಪದಲ್ಲಿ ಕುರುವಪುರಕ್ಕೆ ಬರಲು ಹೇಳಿದ್ದಾರೆ. ಧ್ಯಾನದಲ್ಲಿರುವಾಗ ಯಾವ ಕ್ಷಣದಲ್ಲಿ ಅವರ ಆಜ್ಞೆಯಾಗುವುದೋ ಆ ಕ್ಷಣವೇ ನಾನು ಕುರುವಪುರಕ್ಕೆ ಹೋಗುವೆನು. ಅಲ್ಲಿ ಏನೋ ಮಹತ್ತರವಾದ ಘಟನೆ ಸಂಭವಿಸಲಿದೆ. ಅದನ್ನು ಕಣ್ಣಾರೆ ನೋಡುವ ಮಹತ್ತರವಾದ ಸದವಕಾಶವನ್ನು ದತ್ತಪ್ರಭುಗಳು ದಯಪಾಲಿಸಿದ್ದಾರೆ ” ಎಂದು ಹೇಳಿ ಅವರು ಧ್ಯಾನಸ್ಥರಾದರು. ನಂತರ ನಾನು ಮಾಧವನೂ ಕೂಡ ಧ್ಯಾನಸ್ಥರಾದೆವು. ಧ್ಯಾನವು ಹತ್ತು ಘಳಿಗೆಗಳ ಕಾಲ ನಡೆಯಿತು. ಆಶ್ಚರ್ಯವೆಂದರೆ ಎಲ್ಲರೂ ಒಂದೇ ಕಾಲಕ್ಕೆ ಬಹಿರ್ಮುಖರಾದೆವು. ಧ್ಯಾನದ ನಂತರ ಶ್ರೀ ಪಳನಿ ಸ್ವಾಮಿಗಳು ಬಹಳ ತೇಜೋಲ್ಲಾಸಗಳಿಂದ ಕಂಗೊಳಿಸಿದರು. ನಾನೂ ಮಾಧವನೂ ಅವರನ್ನು ಧ್ಯಾನದಲ್ಲಿ ತಮಗಾದ ಅನುಭವವನ್ನು ನಮಗೆ ಹೇಳಬೇಕೆಂದು ಬೇಡಿಕೊಂಡೆವು. ಅವರು ಮಂದಹಾಸವನ್ನು ಬೀರುತ್ತಾ , ಈ ರೀತಿಯಾಗಿ ಹೇಳಿದರು.
( ಮುಂದುವರೆಯುವುದು )

ಕೃಪೆ – ಶ್ರೀ ಕನ್ನೇಶ್ವರ ಪ್ರಕಾಶನ
——————–
ಚುಟುಕು ಸಪ್ತಶತಿ – 31

ಶಾಂತಿ ಶಾಂತಿ ಎಂದು ಅರಚುವರು ಅಬ್ಬರದಿ ;
ಕ್ರಾಂತಿಕಾರಕ ಶಾಂತಿ ಎನ್ನುತ್ತ ಕೆಲರು ;
ಶಾಂತಿಯಿಲ್ಲದೆಮನದಿ ನರಳುವರು ಹುಲು ಜನರು.
ಎಂಥ ಕೇಡಿದು ದೇವ – ಸಚ್ಚಿದಾನಂದ.

  • ಸ್ವಾಮೀಜಿ.

( ಸಂಗ್ರಹ )

  • ಭಾಲರಾ
    ಬೆಂಗಳೂರು

ಜೈಗುರುದತ್ತ.


Share