ಮೈಸೂರು ಪತ್ರಿಕೆ ಆಧ್ಯಾತ್ಮಿಕ ಅಂಗಳಶ್ರೀ ಪಾದ ಶ್ರೀ ವಲ್ಲಭರ ಚರಿತ್ರೆ ಪುಟ -32

Share

ಶ್ರೀ ಪಾದ ಶ್ರೀ ವಲ್ಲಭರ ದಿವ್ಯ ಚರಿತಾಮೃತ
ಅಧ್ಯಾಯ – 4

ವಿ.ಸೂ. – ಭಜನೆ ಆಲಿಸಿ, ಚರಿತ್ರೆ ಪಠನೆಮಾಡಿ.

ದಯವಿಟ್ಟು ಗಮನಿಸಿ – 18/9/2020 ರಿಂದ ಆಶ್ವಯುಜ ಅಧಿಕ ಮಾಸ ಆರಂಭವಾಗಿದೆ. ಅಧಿಕ ಮಾಸದಲ್ಲಿ ಮಾಡುವ ಎಲ್ಲಾ ಸತ್ಕಾರ್ಯಗಳಿಗೂ ಅಧಿಕ ಫಲವಿರುತ್ತದೆ. ನಮ್ಮ ವೀಕ್ಷಕ ವಾಚಕರು ಭಜನೆ ಆಲಿಸಿ ಚರಿತ್ರೆ ಪಠಿಸಿ ಅಧಿಕ ನೆಮ್ಮದಿಯನ್ನು ಅಧಿಕ ಜ್ಞಾನಾರ್ಜನೆ ಪಡೆಯಬೇಕೆಂದು ಆಶಿಸುತ್ತೇವೆ.

ಪುಟ – 32

ಶ್ರೀಪಾದ ಶ್ರೀವಲ್ಲಭರ ಭಾವಿ ಜನ್ಮಾವಿಷ್ಕರಣ

ಶ್ರೀಘ್ರದಲ್ಲಿಯೇ ಶಿವಶರ್ಮರು ಮರಣ ಹೊಂದಿದರು. ಅಂಬಿಕೆಯು ಭಿಕ್ಷಾಟನೆಯಿಂದ ಜೀವಿಸಲು ತೊಡಗಿದಳು. ಅಕ್ಕ ಪಕ್ಕದವರ ಪರಿಹಾಸಗಳು ಎಲ್ಲೆ ಮೀರಿದವು. ಅದರಿಂದ ತೀರ ಜಿಗುಪ್ಸೆಗೊಂಡ ಮಗನು ಒಂದು ದಿನ ಆತ್ಮಹತ್ಯೆ ಮಾಡಿಕೊಳ್ಳಲು ನಿಶ್ಚಯಿಸಿ ನದಿಯ ಕಡೆಗೆ ಓಡಲು ಪ್ರಾರಂಭಿಸಿದನು. ಇದನ್ನು ನೋಡಿದ ತಾಯಿಯು ಸಹ ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ನಿಶ್ಚಯಿಸಿ ಅವನ ಹಿಂದೆ ಓಡಿದಳು. ಪೂರ್ವಪುಣ್ಯವಶದಿಂದ ದಾರಿಯಲ್ಲಿ ಶ್ರೀಪಾದ ಶ್ರೀ ವಲ್ಲಭರು ಎದುರಾದರು. ಅವರಿಬ್ಬರ ಆತ್ಮಹತ್ಯೆಯ ಪ್ರಯತ್ನವನ್ನು ನಿಲ್ಲಿಸಿದರು. ಕರುಣಾಮೂರ್ತಿಗಳಾದ ಅವರು ಆ ಮೂರ್ಖಬಾಲಕನನ್ನು ಕ್ಷಣಮಾತ್ರದಲ್ಲಿ ಮಹಾ ಪಂಡಿತನನ್ನಾಗಿ ಮಾರ್ಪಡಿಸಿದರು. ಅಂಬಿಕೆಯನ್ನು ತನ್ನ ಶೇಷ ಜೀವಿತವನ್ನು – ಶಿವಪೂಜೆಯಲ್ಲಿ ಕಳೆಯುವಂತೆ ಆದೇಶಿಸಿದರು. ಶನಿವಾರ ಪ್ರದೋಷ ಸಮಯದಲ್ಲಿ ಮಾಡುವ ಶಿವಪೂಜಾ ಫಲವನ್ನು ಕುರಿತು ವಿಸ್ತಾರವಾಗಿ ವಿವರಿಸಿದರು. ಮುಂದಿನ ಜನ್ಮದಲ್ಲಿ ಅಂಬಿಕೆಯು ತಮಗೆ ಸರಿಸಮಾನನಾದ ಮಗನನ್ನು ಪಡೆಯುವಳೆಂದು ವರದಾನ ಮಾಡಿದರು. ತನಗೆ ಸರಿಸಮಾನರು ಮೂರು ಲೋಕಗಳಲ್ಲಿ ಯಾರೂ ಇಲ್ಲದಿರುವುದರಿಂದ ತಾವೇ ಆಕೆಯ ಮಗನಾಗಿ ಹುಟ್ಟಲು ನಿಶ್ಚಯಿಸಿದರು.

ನರಸಿಂಹಸರಸ್ವತಿ ಜನ್ಮ ಸಂಕಲ್ಪ

” ವತ್ಸೆ ! ಸಮಸ್ತ ಕಲ್ಯಾಣಗುಣಗಳಿಗೆ ನಿಲಯಳಾಗಿರುವ ಅಂಬೆಯೇ ! ನಿನ್ನ ಸಂಕಲ್ಪವು ನೆರವೇರಲಿ. ನಾನು ಇನ್ನು 14 ವರ್ಷಗಳಲ್ಲಿ ಅಂದರೆ ನನ್ನ ಮೂವತ್ತನೇ ವಯಸ್ಸಿನಲ್ಲಿ ಗುಪ್ತನಾಗುತ್ತೇನೆ. ಮತ್ತೆ ಸನ್ಯಾಸ ಧರ್ಮವನ್ನು ಉದ್ಧರಿಸುವುದಕ್ಕಾಗಿ ನರಸಿಂಹ ಸರಸ್ವತಿ ಎಂಬ ಹೆಸರಿನಿಂದ ಅವತರಿಸಿ 80 ಪರ್ವಗಳವರೆಗೆ ಇರುತ್ತೇನೆ. ಆಮೇಲೆ ಕದಳೀವನದಲ್ಲಿ 300 ವರ್ಷಗಳು ತಪೋನಿಷ್ಠನಾಗಿದ್ದು ನಂತರ ಪ್ರಜ್ಞಾಪುರದಲ್ಲಿ ಸ್ವಾಮಿಸಮರ್ಥ ಎಂಬ ಹೆಸರಿನಿಂದ ಹುಟ್ಟಿ ನನ್ನ ಅವತಾರವನ್ನು ಮುಗಿಸುತ್ತೇನೆ. ಅವಧೂತ ರೂಪದಿಂದಲೂ, ಸಿದ್ಧ ಪುರುಷರೂಪದಿಂದಲೂ ಅಪರಿಮಿತವಾದ ನನ್ನ ದಿವ್ಯಶಕ್ತಿಯಿಂದ ಲೀಲೆಗಳನ್ನು ಮಹಿಮೆಗಳನ್ನು ಮಾಡಿ ಜನರನ್ನು ಧರ್ಮಕರ್ಮಾನುಸಕ್ತರನ್ನಾಗಿ ಮಾಡುತ್ತೇನೆ ” ಎಂದರು.
ಯುಗಗಳು ಕಳೆಯುತ್ತಾ ಹೋದಂತೆ ಮಾನವನು ಅಲ್ಪ ಶಕ್ತಿವಂತನಾಗುತ್ತಿರುತ್ತಾನೆ. ಆದ್ದರಿಂದ ಋಷಿ ಮುನಿಗಳ ಕೋರಿಕೆಯ ಮೇರೆಗೆ ಪರತತ್ತ್ವವು ಕೆಳಗಿನ ಸ್ಥಾಯಿಗೆ ಇಳಿದು ಬರುತ್ತದೆ. ಪ್ರಭುವು ಶರೀರಧಾರಿಯಾಗಿ ಅವತರಿಸಿರುವುದು ಅವನ ಸಂಪೂರ್ಣ ಅನುಗ್ರಹ ಸೂಚಕ. ಪರಾತ್ಪರ ತತ್ವವು ಹೀಗೆ ಕೆಳಘಟ್ಟಗಳಿಗೆ ಇಳಿದು ಬರುವುದರಿಂದ ಅಲ್ಪಶ್ರಮದಿಂದಲೇ ಮಾನವನು ಉತ್ತಮ ಫಲವನ್ನು ಹೊಂದಲು ಅವಕಾಶವಾಗುತ್ತದೆ . ಆದ್ದರಿಂದಲೇ ಕಲಿಯುಗದ ಮಾನವರು ಧನ್ಯರು. ಕೇವಲ ಸ್ಮರಣೆ ಮಾತ್ರದಿಂದ ದತ್ತ ಪ್ರಭುಗಳ ಅನುಗ್ರಹವು ದೊರಕುವುದು. ಮಾನವನು ಹಾಳಾಗಲು ಎಷ್ಟು ಅವಕಾಶಗಳಿವೆಯೋ ಅದಕ್ಕಿಂತ ಎರಡರಷ್ಟು ಅವಕಾಶಗಳು ದತ್ತ ಪ್ರಭುಗಳ ಅನುಗ್ರಹವನ್ನು ಹೊಂದಲು ಇವೆ. ಇದು ಪರಮ ಸತ್ಯ. ಸ್ಮರಣೆ, ಅರ್ಚನೆ ಮೊದಲಾದ ಕ್ರಿಯಾಕಲಾಪಗಳ ಮೂಲಕ ಶ್ರೀಪಾದವಲ್ಲಭರೊಡನೆ ಸಾಂಗತ್ಯವೇರ್ಪಡುತ್ತದೆ. ಇದರ ಮೂಲಕ ಭಕ್ತರ ಪಾಪಕರ್ಮಗಳೂ, ದೋಷಪೂರಿತ ವಿಷಯ ವಾಸನೆಗಳೂ ಹಾಗೂ ಸಂಸ್ಕಾರಗಳೂ ಎಲ್ಲವೂ ಶ್ರೀ ಪಾದವಲ್ಲಭರ ಚೈತನ್ಯದೊಳಕ್ಕೆ ಪ್ರವೇಶಿಸಿ ಅವರಿಂದ ಶ್ರೇಯಸ್ಕರ ಶುಭಸ್ಪಂದನಗಳು ಅವರ ಭಕ್ತರೊಳಗೆ ಪ್ರವೇಶಿಸುತ್ತದೆ.
( ಮುಂದುವರೆಯುವುದು )

ಕೃಪೆ – ಶ್ರೀ ಕನ್ನೇಶ್ವರ ಪ್ರಕಾಶನ

ಚುಟುಕು ಸಪ್ತಶತಿ – 33

ವೇಷ ಭೂಷಣ ಭಾಷೆ ಭೇಷಾಗಿ ತಿಳಿದಿರುವೆ.
ದೇಶ ದೇಶವ ಸುತ್ತಿ ಅನುಭವವ ಪಡೆದಿರುವೆ.
ನಿನ್ನ ಒಳಗೆಯೆ ನೀನು ಸುತ್ತಿ ಬರಲಿಲ್ಲ.
ಹೊರಬುರುಗು ಮೋಹಕ್ಕೆ ಒಳತಿರುಳೆ ನಷ್ಟವೆ ?
ಎಲ್ಲ ಬಲ್ಲವ ದೇವ – ಸಚ್ಚಿದಾನಂದ

  • ಶ್ರೀ ಸ್ವಾಮೀಜಿ.

( ಸಂಗ್ರಹ )

  • ಭಾಲರಾ
    ಬೆಂಗಳೂರು

ಜೈಗುರುದತ್ತ.


Share