ಮೈಸೂರು ಪತ್ರಿಕೆ ಆಧ್ಯಾತ್ಮಿಕ ಅಂಗಳ ಶ್ರೀ ಪಾದ ಶ್ರೀ ವಲ್ಲಭರ ಚರಿತ್ರೆ – 33

Share

ಶ್ರೀ ಪಾದ ಶ್ರೀ ವಲ್ಲಭರ ದಿವ್ಯ ಚರಿತಾಮೃತ
ಅಧ್ಯಾಯ – 4

ವಿ.ಸೂ. – ಭಜನೆ ಆಲಿಸಿ, ಚರಿತ್ರೆ ಪಠನೆಮಾಡಿ.

ದಯವಿಟ್ಟು ಗಮನಿಸಿ – 18/9/2020 ರಿಂದ ಆಶ್ವಯುಜ ಅಧಿಕ ಮಾಸ ಆರಂಭವಾಗಿದೆ. ಅಧಿಕ ಮಾಸದಲ್ಲಿ ಮಾಡುವ ಎಲ್ಲಾ ಸತ್ಕಾರ್ಯಗಳಿಗೂ ಅಧಿಕ ಫಲವಿರುತ್ತದೆ. ನಮ್ಮ ವೀಕ್ಷಕ ವಾಚಕರು ಭಜನೆ ಆಲಿಸಿ ಚರಿತ್ರೆ ಪಠಿಸಿ ಅಧಿಕ ನೆಮ್ಮದಿಯನ್ನು ಅಧಿಕ ಜ್ಞಾನಾರ್ಜನೆ ಪಡೆಯಬೇಕೆಂದು ಆಶಿಸುತ್ತೇವೆ.

ಪುಟ – 33

ಶ್ರೀಪಾದರು ತಮ್ಮ ಚೈತನ್ಯಗಳನ್ನು ಸೇರಿದ ಪಾಪಸಮೂಹಗಳನ್ನು ಕೆಟ್ಟ ಸಂಸ್ಕಾರಗಳನ್ನು ಪವಿತ್ರ ನದಿಗಳಲ್ಲಿ ಸ್ನಾನ ಮಾಡಿಯೋ ಅಥವಾ ತಮ್ಮ ಯೋಗಾಗ್ನಿಯಲ್ಲಿ ಹುಟ್ಟುಹಾಕಿಯೋ ನಿರ್ಮೂಲ ಗೊಳಿಸುತ್ತಾರೆ. ಅವರು ತಾವೇ ತಪಸ್ಸನ್ನು ಆಚರಿಸಿ ಆ ತಪಸ್ಸಿನ ಫಲವನ್ನು ತಮ್ಮ ಭಕ್ತರ ಮೇಲೆ ಧಾರೆ ಎರೆಯುತ್ತಾರೆ. ಈ ವಿಧವಾಗಿ ಕರ್ದುಸೂತ್ರಗಳನ್ನು ಮೀರದೆ ಭಕ್ತರನ್ನು ರಕ್ಷಿಸುತ್ತಾರೆ. ಅವಶ್ಯವೆನಿಸಿದರೆ, ಜಡಸ್ವರೂಪ ಕರ್ಮತತ್ತ್ವಗಳನ್ನು ನಿಗ್ರಹಿಸಿ ಭಕ್ತರನ್ನು ವಿಮುಕ್ತಗೊಳಿಸುತ್ತಾರೆ. ಅವರು ಭಕ್ತರ ಕರ್ಮಧ್ವಂಸವಲ್ಲಿಯೇ ಮಹೋತ್ಸಾಹದಿಂದ ಸದಾ ನಿರತರಾಗಿರುತ್ತಾರೆ. ಆದ್ದರಿಂದ ಅವರ ಚರಣಾಶ್ರಿತರು ತಮಗೆ ಅರಿವಿಲ್ಲದೆಯೇ ತಮ್ಮೆಲ್ಲ ಕರ್ಮಬಂಧನಗಳಿಂದ ಮುಕ್ತರಾಗುತ್ತಾರೆ” .
ಸ್ವಾಮಿಗಳು ಹೇಳಿದ್ದನ್ನು ಕೇಳಿ ನನ್ನ ಮನಸ್ಸಿನಲ್ಲಿ ಒಂದು ಸಂಶಯ ಉಂಟಾಯಿತು. ನಾನು ಸ್ವಾಮಿಗಳನ್ನು ಕೇಳಿದೆನು. “ ಸ್ವಾಮಿ ! ಶನಿಕಾಟವನ್ನು ತಪ್ಪಿಸಿಕೊಳ್ಳಲು ಪರಶಿವನಿಗೂ ಸಾಧ್ಯವಿಲ್ಲವೆಂದು ಹೇಳುವುದನ್ನು ಕೇಳಿದ್ದೇನೆ. ಶ್ರೀವಾದವಲ್ಲಭರು ಭಕ್ತರ ಗ್ರಹಭಾದೆಗಳನ್ನು ಯಾವರೀತಿಯಲ್ಲಿ ತಪ್ಪಿಸುತ್ತಾರೆ ? “
ಮಗೂ ! ಶಂಕರಾ ! ಗ್ರಹಗಳಿಗೆ ಜೀವಿಗಳ ಮೇಲೆ ಮಿತ್ರತ್ವವಾಗಲಿ, ಶತ್ರುತ್ವವಾಗಲಿ ಇರುವುದಿಲ್ಲ. ಮಾನವನು ತನ್ನ ಪ್ರಾರಬ್ಧಕರ್ಮಕ್ಕನುಗುಣವಾಗಿ ಯಾವ ಯಾವ ಗ್ರಹಗಳು, ಯಾವ ಯಾವ ಮನೆಯಲ್ಲಿರಬೇಕೋ ಹಾಗಿದ್ದಾಗ ಜನಿಸುತ್ತಾನೆ. ಅದಕ್ಕನುಸಾರವಾಗಿ ಶುಭಾಶುಭ ಫಲಗಳನ್ನು ಅನುಭವಿಸುತ್ತಾನೆ. ಗ್ರಹಗಳಿಂದ ಹೊರಹೊಮ್ಮುವ ಸೂಕ್ಷ್ಮ ಕಿರಣಗಳು ಜೀವಿಗೆ ಅಶುಭಕಾರಕವಾಗಿದ್ದರೆ ಆ ದೋಷನಿವಾರಣೆಗೆ ಯಂತ್ರ, ತಂತ್ರ, ಮಂತ್ರಗಳು ಪ್ರಯೋಜನವಾಗದಿದ್ದಲ್ಲಿ ಜಪತಪ ಹೋಮಗಳನ್ನು ಆಶ್ರಯಿಸಬಹುದು. ಇವೂ ನಿಷ್ಪಲವಾದರೆ ಶ್ರೀಪಾದರ ಪಾದಗಳೇ ಗತಿ. ಅವರ ಚರಣಗಳಿಗೆ ಅಸಾಧ್ಯವಾದುದು ಯಾವುದೂ ಇಲ್ಲ. ಶಕ್ತಿಗಳಲ್ಲಿ ಒಳ್ಳೆಯದು, ಕೆಟ್ಟದ್ದು ಎರಡೂ ಇರುತ್ತದೆ. ಆಯಾ ಶಕ್ತಿಗಳು, ಹೊರ ಹೊಮ್ಮುವ ಸ್ಪಂದನಗಳು ಶುಭವನ್ನು ಅಶುಭವನ್ನೂ ಉಂಟು ಮಾಡುತ್ತವೆ. ಪ್ರತಿ ಗ್ರಹವೂ ಮಾನವ ಶರೀರದಲ್ಲಿ ತನ್ನದೇ ಆದ ಪ್ರತ್ಯೇಕ ಭಾಗದ ಮೇಲೆ ಅಧಿಪತ್ಯವನ್ನು ನಡೆಸುತ್ತದೆ. ಯಾವ ಗ್ರಹವು ಜೀವಿಗೆ ಬಾಧಕವಾಗಿದೆಯೋ ಆ ಗ್ರಹವು ತನ್ನ ಅಧಿಪತ್ಯಕ್ಕೊಳಪಟ್ಟ ಶರೀರದ ಅಂಗಗಳಲ್ಲಿ ರೋಗರುಜಿನಗಳನ್ನುಂಟು ಮಾಡುತ್ತದೆ. ವಿಶ್ವ ಚೈತನ್ಯದಿಂದ ಪ್ರವಹಿಸುವ ಸೂಕ್ಷ್ಮ ಸ್ಪಂದನಗಳನ್ನು ಗ್ರಹಿಸುವ ಶಕ್ತಿ ಇಲ್ಲದವನಿಗೆ ಮಾತ್ರ ಗ್ರಹಗಳು ಅನಿಷ್ಟಗಳನ್ನುಂಟು ಮಾಡಬಲ್ಲವು. ಸ್ಪಂದನಗಳಿಂದುಂಟಾಗುವ ಆಕರ್ಷಣ ವಿಕರ್ಷಣಗಳಲ್ಲಿ ವ್ಯತ್ಯಾಸಗಳಾಗುತ್ತವೆ. ಇದುವರೆಗೆ ಸತ್ಸಂಗದಲ್ಲಿದ್ದ ವ್ಯಕ್ತಿಗೆ ದುರ್ಜನ ಸಾಂಗತ್ಯ, ನೀಚಜನ ಸಹವಾಸ, ಅಕಾರಣ ಕಲಹ, ಬಂಧುವಿಯೋಗ, ಕುಟುಂಬದ ಜನರಲ್ಲಿ ವಿವಾದ ಮೊದಲಾದ ಅನಿಷ್ಟ ಫಲಗಳು ಉಂಟಾಗುವುವು. ವಿಶ್ವ ಶಕ್ತಿಗಳಿಂದ ಬರುವ ಸ್ಪಂದನಗಳು ನಿರಂತರವಾಗಿ ಸೃಷ್ಟಿಗೊಳ್ಳುತ್ತಿರುತ್ತವೆ. ಅವು ಸ್ವಲಕಾಲ ಆಯಾ ಮನುಷ್ಯನ ಮೇಲೆ ಪ್ರಭಾವ ಬೀರುತ್ತವೆ. ಕಾಲವು ಶಕ್ತಿ ಸ್ವರೂಪವು. ಸ್ವಲ್ಪಕಾಲ ಕಳೆದ ಮೇಲೆ ಆ ಸ್ಪಂದನಗಳು ಆ ಮನುಷ್ಯನನ್ನು ಬಿಟ್ಟು ವಿಧಿಗನುಸಾರವಾಗಿ ಪ್ರಭಾವಿತನಾಗಬೇಕಾಗಿರುವ ಬೇರೊಬ್ಬ ಜೀವಿಯ ಶರೀರವನ್ನು ಸೇರುತ್ತವೆ. ಪುನಃ ಕಾಲಚಕ್ರವನ್ನನುಸರಿಸಿ ಫಲಗಳನ್ನು ಕೊಡುತ್ತಿರುತ್ತದೆ. ಮಹರ್ಷಿಗಳು ವಿಶ್ವ ಕಲ್ಯಾಣಕ್ಕೋಸ್ಕರ ವಿಧವಿಧವಾದ ಯಜ್ಞಗಳನ್ನು ಮಾಡುತ್ತಾರೆ. ತಮ್ಮ ತಪಸ್ಸಿನ ಫಲವನ್ನು ಧಾರೆ ಎರೆಯುತ್ತಾರೆ. ಇದರ ಫಲವಾಗಿ ವಿಶ್ವ ಶಕ್ತಿಗಳಿಂದ ಬರುವ ಅಶುಭ ಸ್ಪಂದನಗಳು ಒಬ್ಬರಾದ ಮೇಲೆ ಒಬ್ಬರನ್ನು ಪೀಡಿಸುವುದರ ಬದಲು ಅವು ತಮ್ಮ ಮೂಲಸ್ಥಾನವನ್ನು ಸೇರುವವು, ಅಂತರ್ಧಾನ ಹೊಂದುವವು. ಇದನ್ನು ತಿರೋಧಾನವೆಂದು ಹೇಳಬಹುದು. ಅಲ್ಪ ಪುಣ್ಯಕಾರ್ಯಕ್ಕೆ ವಿಶೇಷ ಶುಭಫಲ ಲಭಿಸುವುದನ್ನು ಅನುಗ್ರಹವೆನ್ನುತ್ತಾರೆ. ಮಗೂ ! ಶಂಕರ ! ಇದುವರೆಗೆ ನಿನಗೆ ಕ್ರಿಯಾಯೋಗದ ಸಿದ್ಧಾಂತದ ಪ್ರಕಾರ ಸೃಷ್ಟಿ ಸ್ಥಿತಿ, ಲಯ, ತಿಲೋಧಾನ, ಅನುಗ್ರಹಗಳನ್ನು ವಿವರಿಸಿದನು ನೀನು ಧ್ಯಾನದಲ್ಲಿ ನೋಡಿದ ಮುಸ್ಲಿಂ ಸಾಧುವಿನಲ್ಲಿ ಮುಂದೆ ಶ್ರೀಪಾದವಲ್ಲಭರ ಶಕ್ತಿ ವಿಶೇಷವಾಗಿ ಪ್ರವಹಿಸುತ್ತದೆ. ನಿಂಬ ವೃಕ್ಷ ಬುಡದಲ್ಲಿದ್ದ ಭೂಗೃಹದಲ್ಲಿ
ನಾಲ್ಕು ನಂದಾದೀಪಗಳನ್ನು ನೀನು ನೋಡಿದೆ. ಇದು ಅಸಾಧಾರಣ ವಿಷಯ. ಶ್ರೀಪಾದ ಶ್ರೀವಲ್ಲಭರು ಏನೋ ಮಹೋದ್ದೇಶವನ್ನು ಇಟ್ಟುಕೊಂಡು ನಿನಗೆ ಈ ಅನುಭವವನ್ನು ಕೊಟ್ಟಿದ್ದಾರೆ. ಅದರ ಗುಟ್ಟು ಅವರಿಗೇ ಗೊತ್ತು. ಅವರ ಲೀಲೆಗಳು ಬಹಳ ಮಹತ್ತರ ವಾದವುಗಳು ನಿಗೂಢವಾದ ಫಲಗಳನ್ನು ಕೊಡತಕ್ಕವುಗಳು. ಇವು ಬೇರೆಯವರಿಗೆ ಹೇಳಕೂಡದಂತಹ ದೈವರಹಸ್ಯಗಳು ಆಗಿರಬಹುದು. ಅವರ ಅನುಮತಿಗನುಗುಣವಾಗಿಯೇ ನಾನು ನಿನಗೆ ವಿಷಯವನ್ನು ವಿವರಿಸಬಲ್ಲೆ. ಸಮಸ್ತ ಸೃಷ್ಟಿಯೂ ಶ್ರೀಪಾದ ಶ್ರೀವಲ್ಲಭರ ಕಣ್ಣು ಸನ್ನೆ ಮಾತ್ರದಿಂದಲೇ ನಡೆಯುತ್ತದೆ. ಅವರಿಗೆ ಅವರೇ ಪ್ರಮಾಣವು ಅವರಿಗೆ ಅವರೇ ಸಾಟಿ. ವಿಶ್ವ ನಿಯಂತ್ರಣ ವಿಭೂತಿಗಳು, ಯೋಗ ಸಿದ್ಧಿಗಳು, ಮನುಷ್ಯನ ಬುದ್ಧಿಶಕ್ತಿಗೆ ಮೀರಿದವುಗಳು. ಈ ವಿಭೂತಿಗಳು ಪರಿಮಾಣ, ಅಳತೆ, ಪರಿಮಿತಿಗಳನ್ನು ಮೀರಿದ ವಿಷಯ. ಸ್ವಾಮಿಗಳ ವಿವರಣೆಯಿಂದ ನನ್ನ ಮನಸ್ಸು ಆನಂದದಿಂದ ತುಂಬಿ ಹೋಯಿತು. ನಾನು ಉಡುಪಿ ಕ್ಷೇತ್ರದಿಂದ ಹೊರಟು ಕುರುವಪುರವನ್ನು ಸೇರುವ ಮಧ್ಯದಲ್ಲಿ ಎಷ್ಟೋ ಚಿತ್ರವಿಚಿತ್ರ ಸಂಘಟನೆಗಳು ಸಂಭವಿಸುತ್ತಿವೆ. ಇವುಗಳನ್ನೆಲ್ಲಾ ಸೇರಿಸಿ ಒಂದು ಗ್ರಂಥವನ್ನು ಬರೆಯಬೇಕು, ಗುರು ಸಾರ್ವಭೌಮರ ಅನುಮತಿಯನ್ನು ಹೊಂದಬೇಕು. ಶ್ರೀಪಾದವಲ್ಲಭರ ದರ್ಶನವಾದ ನಂತರ ಅವರಲ್ಲಿ ಈ ವಿಷಯವನ್ನು ಬಿನ್ನವಿಸಿಕೊಳ್ಳಬೇಕು.
ಸ್ವಾಮಿಗಳು ನನ್ನ ಮನಸ್ಸಿನಲ್ಲಿನ ಭಾವನೆಗಳನ್ನು ಲೀಲಾಜಾಲವಾಗಿ ಅರ್ಥಮಾಡಿಕೊಂಡು, “ ನಿನ್ನ ಮನಸ್ಸಿನಲ್ಲಿನ ಭಾವನೆಗಳು ನನಗೆ ಅವಗತವಾದವು. ಭವಿಷ್ಯತ್ತಿನಲ್ಲಿ ಭಕ್ತ ಜನೋದ್ಧಾರಕ್ಕಾಗಿ ಶ್ರೀಗುರುಗಳ ಚರಿತ್ರೆಯನ್ನು ಬರೆಯಬೇಕೆಂದಿದ್ದೀಯ, ಶ್ರೀಪಾದವಲ್ಲಭರು ತಪ್ಪದೆ ಇದಕ್ಕೆ ಒಪ್ಪಿ ನಿನ್ನನ್ನು ಆಶೀರ್ವದಿಸುತ್ತಾರೆ ” ಎಂದು ಹೇಳಿದರು. ಅಷ್ಟರಲ್ಲಿ ಸ್ವಾಮಿಯವರು ಮಾಧವನಿಗೆ ತನ್ನ ಧ್ಯಾನಾನುಭೂತಿಯನ್ನು ಹೇಳಬೇಕೆಂದು ತಿಳಿಸಿದರು. ಮಾಧವನು ಹೀಗೆ ಹೇಳ ಸಾಗಿದನು.
( ಮುಂದುವರೆಯುವುದು )

ಕೃಪೆ – ಶ್ರೀ ಕನ್ನೇಶ್ವರ ಪ್ರಕಾಶನ

ಚುಟುಕು ಸಪ್ತಶತಿ – 34

ಒಳ್ಳೆ ಅವಕಾಶ ಬಂದಾಗ
ಮತ್ತೆ ನೋಡೋಣ ಎಂದು ಬಿಟ್ಟವರು
ಮತ್ತೆ ಬರದಿದ್ದಾಗ ಬಿದ್ದು ಬಿದ್ದು ಅಳುವರು.
ಎಣ್ಣೆ ಬಂದ ಸಮಯದಲ್ಲಿ ಕಣ್ಣು ಮುಚ್ಚುವರಿವರು.
ಇದೆ ಭ್ರಮಾಲೋಕ – ಸಚ್ಚಿದಾನಂದ

  • ಶ್ರೀ ಸ್ವಾಮೀಜಿ.

( ಸಂಗ್ರಹ )

  • ಭಾಲರಾ
    ಬೆಂಗಳೂರು

ಜೈಗುರುದತ್ತ.


Share