ಮೈಸೂರು ಪತ್ರಿಕೆ ಆಧ್ಯಾತ್ಮಿಕ ಅ0ಗ ಳ ಶ್ರೀ ಶ್ರೀಪಾದವಲ್ಲಭ ರ ಚರಿತ್ರೆ-37

Share

ಶ್ರೀ ಪಾದ ಶ್ರೀ ವಲ್ಲಭರ ದಿವ್ಯ ಚರಿತಾಮೃತ

ಅಧ್ಯಾಯ – 5

ವಿ.ಸೂ. – ಭಜನೆ ಆಲಿಸಿ, ಚರಿತ್ರೆ ಪಠನೆಮಾಡಿ.

ದಯವಿಟ್ಟು ಗಮನಿಸಿ – 18/9/2020 ರಿಂದ ಆಶ್ವಯುಜ ಅಧಿಕ ಮಾಸ ಆರಂಭವಾಗಿದೆ. ಅಧಿಕ ಮಾಸದಲ್ಲಿ ಮಾಡುವ ಎಲ್ಲಾ ಸತ್ಕಾರ್ಯಗಳಿಗೂ ಅಧಿಕ ಫಲವಿರುತ್ತದೆ. ನಮ್ಮ ವೀಕ್ಷಕ ವಾಚಕರು ಭಜನೆ ಆಲಿಸಿ ಚರಿತ್ರೆ ಪಠಿಸಿ ಅಧಿಕ ನೆಮ್ಮದಿಯನ್ನು ಅಧಿಕ ಜ್ಞಾನಾರ್ಜನೆ ಪಡೆಯಬೇಕೆಂದು ಆಶಿಸುತ್ತೇವೆ.

ಪುಟ – 37

ಅಂತಹ ಬಾಧೆ ಪಡುತ್ತಿದ್ದಾಗಲೂ ಕೂಡ ನಾನು ಶ್ರೀಪಾದವಲ್ಲಭರ ಸ್ಮರಣೆಯನ್ನು ಮಾಡುತ್ತಿದ್ದನು. ಸ್ಮರಣೆ ಮಾಡುತ್ತಾ ಮಾಡುತ್ತಾ ನೋವು ಕಡಿಮೆಯಾಗುತ್ತಾ ಬಂದಿತು. ಭೂತವೈದ್ಯನು ಮಾತ್ರ ಕೋಳಿ, ಮೇಕೆಗಳನ್ನು ಬಲಿಕೊಟ್ಟು ಚಿತ್ರವಿಚಿತ್ರವಾದ ಪೂಜೆಗಳನ್ನು ಮಾಡುತ್ತಿದ್ದನು. ನನಗೆ ಪಥ್ಯದ ಆಹಾರವನ್ನು ಕೊಡಬೇಕೆಂದು ಅವನು ಹೇಳಿದನು. ನನಗೆ ಬ್ರಾಹ್ಮಣ ದೆವ್ವವು ಹಿಡಿದಿರುವುದರಿಂದ ಶಾಖಾಹಾರವನ್ನು ಕೊಡಬೇಕೆಂದು ಮಾಂತ್ರಿಕನು ತೀರ್ಮಾನಿಸಿದನು. ನಾನು ಮಾಂಸವನ್ನು ಕೂಡ ನನಗೆ ತಿನ್ನಿಸಿ ಬಿಡುತ್ತಾರೆಂದು ತುಂಬಾ ಹೆದರಿದ್ದೆ ಆದರೆ ಶ್ರೀಪಾದವಲ್ಲಭರ ಅನುಗ್ರಹದಿಂದ ನಾನು ಈ ಕಷ್ಟದಿಂದ ಪಾರಾದೆನು. ಮೂರು ದಿನಗಳು ನಾನು ತೀವ್ರವಾದ ನರಕ ಬಾಧೆಯನ್ನು ಅನುಭವಿಸಿದೆನು. ಅಂತಹ ಬಾಧೆಯಲ್ಲಿಯೂ ನಾನು ಶ್ರೀಪಾದರ ನಾಮಸ್ಮರಣೆಯನ್ನು ನಿಲ್ಲಿಸಲಿಲ್ಲ. ಇದರಿಂದ ನಾಲ್ಕನೇ ದಿನದಿಂದ ನೋವು ನನ್ನ ಅನುಭವಕ್ಕೆ ಬರುತ್ತಿರಲಿಲ್ಲ. ಆಮೇಲೆ ನನ್ನ ಶರೀರದ ಮೇಲೆ ಚಿತ್ರ ವಿಚಿತ್ರವಾದ ಪ್ರಯೋಗಗಳನ್ನು ಮಾಡಲಾಗುತ್ತಿತ್ತು. ಮಾಂತ್ರಿಕನು ನನ್ನನ್ನು ಚಾವಟಿಯಿಂದ ಕೂಡ ಹೊಡೆಯುತ್ತಿದ್ದನು. ಈ ಬಾಧೆಯನ್ನು ತಾಳಲಾರದೆ ” ಶ್ರೀಪಾದವಲ್ಲಭ !
ಶರಣು ! ಶರಣು ! “ಎಂದು ಒದ್ದಾಡುತ್ತಿದ್ದೆನು. ಶ್ರೀದತ್ತ ಪ್ರಭುವನ್ನು ಅನನ್ಯ ಭಕ್ತಿಯಿಂದ ಸೇವಿಸುವವರಿಗೆ ನರಕಬಾಧೆ ಎಲ್ಲಿಯದು ? ಅಷ್ಟರಲ್ಲಿ ಒಂದು ವಿಚಿತ್ರವು ಜರುಗಿತು. ನನ್ನ ಶರೀರದ ಮೇಲೆ ಚಾವಟಿ ಏಟುಗಳು ಬೀಳುತ್ತಿದ್ದರೂ ನನಗೆ ಕಿಂಚಿತ್ತೂ ನೋವಾಗುತ್ತಿರಲಿಲ್ಲ. ಆದರೆ ಮಾಂತ್ರಿಕನೇ ವಿಲಿವಿಲಿ ಒದ್ದಾಡುತ್ತಿದ್ದನು. ಅವನೇ ನನ್ನನ್ನು ಹೊಡೆಯುತ್ತಿದ್ದಾಗ ಅವನಿಗೇಕೆ ಏಟುಗಳ ಬಾಧೆ ಅನುಭವವಾಗಬೇಕು ಎಂಬುದು ಅವನಿಗೆ ಗೊತ್ತಾಗದೆ ನನ್ನ ಕಡೆಗೇ ನಿಸ್ಸಹಾಯಕ ದೃಷ್ಟಿಯಿಂದ ನೋಡುತ್ತಿದ್ದನು. ಶ್ರೀಪಾದರ ಈ ದಿವ್ಯಲೀಲೆಗಳನ್ನು ನೋಡಿ ನಾನು ಒಳಗೊಳಗೇ ನಗುತ್ತಿದ್ದೆನು. ನಾನು ಪಥ್ಯಾಹಾರವನ್ನು ತಿನ್ನುತ್ತಿದ್ದರೂ ಅದು ನನಗೆ ತುಂಬಾ ರುಚಿಯಾಗಿರುತ್ತಿತ್ತು. ನಾನು ಹೊಟ್ಟೆ ತುಂಬಾ ಊಟ ಮಾಡುತ್ತಿದ್ದೆನು. ಅದು ಶ್ರೀಪಾದವಲ್ಲಭರ ಪ್ರಸಾದವೆಂದೇ ನನಗೆ ಅನಿಸುತ್ತಿತ್ತು. ಮಾಂತ್ರಿಕನು ಅವನಿಗಿಷ್ಟವಾದ ಕೋಳಿಗಳನ್ನು ಮೇಕೆಗಳನ್ನು ಕೊಯ್ದು ಪಕ್ವಾನ್ನ ಮಾಡಿಸಿ ಊಟ ಮಾಡುತ್ತಿದ್ದನು. ಅದು ಅವನಿಗೆ ವಿಷಾಹಾರವಾಗಿ ಪರಿಣಮಿಸುತ್ತಿತ್ತು. ಅವನ ಆರೋಗ್ಯವು ಕ್ಷೀಣಿಸಲು ಮೊದಲಾಯಿತು. ಅವನು ನನ್ನನ್ನು ಬಾಧಿಸುವುದನ್ನು ಬಿಟ್ಟುಬಿಟ್ಟನು. ವಿಚಿತ್ರ ಮಂತ್ರಗಳನ್ನು ಹೇಳಿಕೊಂಡು, ವಿಚಿತ್ರ ಪೂಜೆಗಳನ್ನು ಮಾಡಿಕೊಂಡು, ಕಾಲಕ್ಷೇಪವನ್ನು ಮಾಡುತ್ತಿದ್ದನು. ನನಗೆ ಚಿಕಿತ್ಸೆ ಪ್ರಾರಂಭಿಸಿದ 5 ನೇ ದಿನ ಅವನ ಮನೆ ಸುಟ್ಟು ಹೋಯಿತು. ಆಶ್ಚರ್ಯವೆಂದರೆ ಅಂದು ಅವನ ಮನೆಯಲ್ಲಿ ಬೆಂಕಿಯನ್ನು ಹತ್ತಿಸಿಯೇ ಇರಲಿಲ್ಲ , ಆರನೆಯ ದಿನ ಅವನು ಸಪ್ಪೆ ಮುಖ ಮಾಡಿಕೊಂಡು ಸುಬ್ಬಯ್ಯನ ಮನೆಗೆ ಬಂದು, ನನ್ನನ್ನು ಹಿಡಿದಿರುವ ಬ್ರಾಹ್ಮಣ ದೆವ್ವವು ಮಾಂತ್ರಿಕನೆಂದೂ, ನಾನು ಅವನನ್ನು ಓಡಿಸಲು ಪ್ರಯತ್ನ ಪಡುತ್ತಿರುವುದರಿಂದ ಅವನು ತನ್ನ ಮನೆಯನ್ನೇ ಸುಟ್ಟು ಹಾಕಿದನೆಂದೂ ಹೇಳಿದನು. ಬೇತಾಳವೇ ಮೊದಲಾದ ಅನೇಕ ಕ್ಷುದ್ರ ಶಕ್ತಿಗಳನ್ನು ಪ್ರಸನ್ನ ಮಾಡಿಕೊಳ್ಳಲು ವಿಶೇಷ ಪೂಜೆಗಳನ್ನು ಮಾಡಲು ತುಂಬಾ ಹಣ ಬೇಕಾಗಿದೆಯೆಂದು ಹೇಳಿದನು. ಆಗ ನಾನು ಸುಬ್ಬಯ್ಯನ ತಂದೆ ತಾಯಿಗಳಿಗೆ ಹೀಗೆ ಹೇಳಿದೆನು. ” ಮಾತಾಪಿತರೇ ! ನಿಮಗಿರುವ ಆಸ್ತಿ ಪಾಸ್ತಿಗಳೆಲ್ಲವನ್ನೂ ಮಾರಿ ಈ ಮಾಂತ್ರಿಕನಿಗೆ ಕೊಡಬೇಡಿ, ನಾನು ಆರೋಗ್ಯವಾಗಿಯೇ ಇದ್ದೀನಿ ನಾನು ನಿಮ್ಮನ್ನು ತಾಯಿ ತಂದೆಗಳೆಂದೇ ಭಾವಿಸುತ್ತಿದ್ದೇನೆ . ಅವರಿಗೆ ಇದನ್ನು ಕೇಳಿ ಆನಂದವಾಯಿತು. ಅವರ ಕಣ್ಣುಗಳಿಂದ ಆನಂದ ಬಾಷ್ಪಗಳು ಉದುರಿದವು. ಅದನ್ನು ನೋಡಿ ನನ್ನ ಕಣ್ಣುಗಳೂ ಕೂಡ ಒದ್ದೆಯಾದವು . ಈಗ ನಾನು ಸುಬ್ಬಯ್ಯನ ಹೆಂಡತಿಯನ್ನು ನನ್ನ ಹೆಂಡತಿಯನ್ನಾಗಿ ಸ್ವೀಕರಿಸಬೇಕಾದ ವಿಷಮ ಪರಿಸ್ಥಿತಿ ಬಂದೊದಗಿತು. ಇದು ನಡೆದಲ್ಲಿ ಇದಕ್ಕಿಂತ ದುರದೃಷ್ಟವಾಗಲಿ ನಂಬಿಕೆ ದ್ರೋಹವಾಗಲಿ ಇರಲಾರದು. ಆಹಾ ! ವಿಧಿಯು ನನ್ನ ಪಾಲಿಗೆ ಎಷ್ಟು ಕ್ರೂರವಾಗಿದೆ. ಈಗ ನಾನು ಈ ದುರಂತ ಪರಿಸ್ಥಿತಿಯಿಂದ ತಪ್ಪಿಸಿಕೊಳ್ಳುವ ಬಗೆ ಹೇಗೆ ? ಪರಸ್ತ್ರೀ ಮಾತೃ ಸಮಾನವಲ್ಲವೇ ? ಎಂದು ಬಹಳ ವ್ಯಥೆಪಟ್ಟು ಈ ಪ್ರಮಾದದಿಂದ ನನ್ನನ್ನು ರಕ್ಷಿಸಿ ನನ್ನಿಂದ ಧರ್ಮಚ್ಯುತಿ ಆಗದಂತೆ ಕಾಪಾಡಬೇಕೆಂದು ಮನಸ್ಸಿನಲ್ಲಿ ಶ್ರೀಪಾದ ವಲ್ಲಭರನ್ನು ಹೃತೂರ್ವಕವಾಗಿ ಬೇಡಿಕೊಂಡೆನು.
ನನ್ನ ಚಿಕಿತ್ಸೆಯ ಏಳನೆಯ ದಿನದಂದು ನನ್ನ ಸೇವೆಯನ್ನು ಮಾಡುತ್ತಿದ್ದ ಸುಬ್ಬಯ್ಯನ ಹೆಂಡತಿಯನ್ನು ನೋಡಿ ನಾನು ” ನನ್ನನ್ನು ನೋಡಿ ನಿನಗೆ ಏನನ್ನಿಸುತ್ತಿದೆ ? ನಾನು ನಿಜವಾಗಿಯೂ ಸುಬ್ಬಯ್ಯನೇ ಎಂದು ನಂಬುತ್ತಿದ್ದೀಯಾ ? ” ಎಂದು ಕೇಳಿದೆನು. ಅವಳು , “ ನಾನು ಎರಡು ವರ್ಷದ ಮಗುವಾಗಿದ್ದಾಗ ನನಗೆ ಮದುವೆ ಮಾಡಿದರು. ನನಗೀಗ ಇಪ್ಪತ್ತು ವರ್ಷ, ನೀವು ನನ್ನ ಯಜಮಾನರೋ ಅಲ್ಲವೋ ಎಂದು ಆ ಪರಮೇಶ್ವರನಿಗೆ ಮಾತ್ರ ಗೊತ್ತು. ಯೌವನದಲ್ಲಿರುವ ಹೆಂಡತಿಯು ಪಕ್ಕದಲ್ಲಿದ್ದಾಗ ಯಾವ ಗಂಡಸೂ ತನ್ನ ಮನಸ್ಸನ್ನು ಸ್ಥಿಮಿತದಲ್ಲಿ ಇಟ್ಟುಕೊಳ್ಳಲು ಸಾಧ್ಯವಿಲ್ಲ. ನೀವು ಇಷ್ಟು ಬಾಧೆ ಪಡುತ್ತಿದ್ದರೂ ನನ್ನನ್ನು ಹೆಂಡತಿಯೆಂದು ಭಾವಿಸಲಿಲ್ಲ, ನನ್ನನ್ನು ಮುಟ್ಟಲು ಕೂಡ ಪ್ರಯತ್ನಿಸಲಿಲ್ಲ. ಇದು ಮಹೋನ್ನತ ಸಂಸ್ಕಾರವುಳ್ಳವರಿಗೆ ಮಾತ್ರ ಸಾಧ್ಯ. ನಿಮ್ಮ ವಿಚಾರದಲ್ಲಿ ನನಗೆ ಯಾವ ವಿಧವಾದ ಅಭಿಪ್ರಾಯವೂ ಇಲ್ಲ ಕುಲಾಚಾರ ಈ ಪದ್ಧತಿಯಂತೆ ಧರ್ಮದಿಂದ ಬಾಳಬೇಕೆಂಬುದು ನನ್ನ ಇಷ್ಟ, ನೀವು ನನ್ನ ಯಜಮಾನರೇ ಆಗಿದ್ದರೆ ನಿಮ್ಮ ಈ ಚರಣಾದಾಸಿಯನ್ನು ಕೈ ಬಿಡಬೇಡಿ, ಆಗಿರದಿದ್ದರೆ ನಾನು ತೀರ ಸಣ್ಣ ಮಗುವಾಗಿದ್ದಾಗಲೇ ನನ್ನ ಗಂಡನು ಓಡಿಹೋಗಿರುವುದರಿಂದ ನೀವು ನನ್ನನ್ನು ಹೆಂಡತಿಯಾಗಿ ಸ್ವೀಕರಿಸಬಹುದು. ನಾನು ನೀವು ಒಪ್ಪುವಂತೆ ನಡೆದುಕೊಳ್ಳುತ್ತೇನೆ. ನೀವು ಸದಾಸ್ಮರಣೆ ಮಾಡುತ್ತಿರುವ ಈ ಶ್ರೀಪಾದವಲ್ಲಭರೆಂದರೆ ಯಾರು ? ಅವರು ಸದ್ಗುರುಗಳಾದರೆ ಈ ವಿಷಮ ಸಮಸ್ಯೆಗೆ ಧರ್ಮ ಸಮ್ಮತವಾದ ಪರಿಹಾರವನ್ನು ತೋರಿಸಬೇಕೆಂದು ನಾನು ಕೂಡ ಅವರನ್ನು ಬೇಡಿಕೊಳ್ಳುತ್ತೇನೆ ” ಅಂದಳು.
( ಮುಂದುವರೆಯುವುದು )

ಕೃಪೆ – ಶ್ರೀ ಕನ್ನೇಶ್ವರ ಪ್ರಕಾಶನ

ಚುಟುಕು ಸಪ್ತಶತಿ – 38

ಜನಜಾತ್ರೆ ದೇವಸನ್ನಿಧಿಯಲ್ಲಿ.
ದೇವರೆಲ್ಲಿ ? ಪರಾರಿ !
ದೇವರ ಹೆಸರಿಲ್ಲವಿಲ್ಲಿ !
ವ್ಯಾಪಾರವೇ ಇಲ್ಲಿ ! ಇದುವೆ ಸರಿಯಿಲ್ಲಿ.
ಓ ದಯಾಘನ ಕರುಣಾಸಿಂಧು
ದೇವರ ದೇವ – ಸಚ್ಚಿದಾನಂದ.

  • ಶ್ರೀ ಸ್ವಾಮೀಜಿ.

( ಸಂಗ್ರಹ )

  • ಭಾಲರಾ
    ಬೆಂಗಳೂರು

ಜೈಗುರುದತ್ತ.


Share