ಮೈಸೂರು ಪತ್ರಿಕೆ ಆಧ್ಯಾತ್ಮಿಕ ಅಂಗಳ ಶ್ರೀ ಶ್ರೀಪಾದವಲ್ಲಭರ ಚರಿತ್ರೆ ಪುಟ -38

Share

ಶ್ರೀ ಪಾದ ಶ್ರೀ ವಲ್ಲಭರ ದಿವ್ಯ ಚರಿತಾಮೃತ

ಅಧ್ಯಾಯ – 5

ವಿ.ಸೂ. – ಭಜನೆ ಆಲಿಸಿ, ಚರಿತ್ರೆ ಪಠನೆಮಾಡಿ.

ದಯವಿಟ್ಟು ಗಮನಿಸಿ – 18/9/2020 ರಿಂದ ಆಶ್ವಯುಜ ಅಧಿಕ ಮಾಸ ಆರಂಭವಾಗಿದೆ. ಅಧಿಕ ಮಾಸದಲ್ಲಿ ಮಾಡುವ ಎಲ್ಲಾ ಸತ್ಕಾರ್ಯಗಳಿಗೂ ಅಧಿಕ ಫಲವಿರುತ್ತದೆ. ನಮ್ಮ ವೀಕ್ಷಕ ವಾಚಕರು ಭಜನೆ ಆಲಿಸಿ ಚರಿತ್ರೆ ಪಠಿಸಿ ಅಧಿಕ ನೆಮ್ಮದಿಯನ್ನು ಅಧಿಕ ಜ್ಞಾನಾರ್ಜನೆ ಪಡೆಯಬೇಕೆಂದು ಆಶಿಸುತ್ತೇವೆ.

ಪುಟ – 38

ಅವರ ಮಾತುಗಳು ನನಗೆ ಬಹಳ ಧರ್ಮಯುಕ್ತವಾಗಿರುವಂತೆ ಅನ್ನಿಸಿತು. ನಾನು, “ ಶ್ರೀಪಾದವಲ್ಲಭರು ಸಾಕ್ಷಾತ್ ದತ್ತಾತ್ರೇಯರು. ಅವರು ಈ ಕಲಿಯುಗದಲ್ಲಿ ಅವತರಿಸಿದ್ದಾರೆ. ಪ್ರಸ್ತುತ ಕುರುವಪುರದಲ್ಲಿದ್ದಾರೆ. ನಮ್ಮ ಭಾವನೆಗಳಿಗನುಗುಣವಾಗಿ ಅವರು ಪ್ರವರ್ತಿಸುವರು. ಅವರನ್ನು ಸದ್ಗುರುವೆಂದು ಭಾವಿಸಿದರೆ ಅವರು ನಮಗೆ ಸದ್ಗುರುವಿನ ಅನುಭವವನ್ನು ಕೊಡುವರು. ಅವರು ಪರಮಾತ್ಮನೆಂದು ಭಾವಿಸಿದರೆ, ತಾವು ಪರಮಾತ್ಮನೆಂದು ನಮಗೆ ಖಚಿತಪಡಿಸಿಕೊಡುವರು. ಒಳ್ಳೆಯದು, ನೀನು ಕೂಡ ಶ್ರೀಪಾದವಲ್ಲಭರ ಸ್ಮರಣೆಯನ್ನು ಮಾಡು. ತಪ್ಪದೆ ನಿನ್ನ ಕರ್ತವ್ಯವನ್ನು ಅವರು ತಿಳಿಸಿಕೊಡುತ್ತಾರೆ. ಎಲ್ಲರಿಗೂ ಸುಖ ಕೊಡುವಂತಹ ಪರಿಹಾರವು ಲಭಿಸುತ್ತದೆ ” ಎಂದು ಹೇಳಿದನು.
ಆ ದಿನವೇ ಮಾದಿಗ ಜಂಗಮನೊಬ್ಬನು ಅಲ್ಲಿಗೆ ಬಂದನು. ಜಂಗಮ ದೇವರ ವೇಷದಲ್ಲಿದ್ದ ಆತನ ಹತ್ತಿರ ತಾಳಪತ್ರ ಗ್ರಂಥಗಳಿದ್ದವು. ಸುತ್ತಮುತ್ತಲ ಜನರೆಲ್ಲರೂ ಆತನನ್ನು ಗೌರವಾದರಗಳಿಂದ ನೋಡಲು ಪ್ರಾರಂಭಿಸಿದರು. ತನ್ನನ್ನು ಭೇಟಿ ಮಾಡಿದವರೆಲ್ಲರಿಗೂ ಆತನು ಭೂತ ಭವಿಷ್ಯತ್ ವರ್ತಮಾನಗಳನ್ನು ಅದ್ಭುತವಾಗಿ ಹೇಳುತ್ತಿದ್ದನು. ತನ್ನ ಹತ್ತಿರವಿದ್ದ ತಾಳಪತ್ರ ಗ್ರಂಥಗಳನ್ನು, ನಾಡಿ ಗ್ರಂಥಗಳೆಂದೂ, ಅದನ್ನು ರಮಲಶಾಸ್ತ್ರವೆಂದು ಕರೆಯುತ್ತಾರೆಂದೂ, ಅದರಲ್ಲಿನ ವಿಷಯಗಳು ಚಾಚೂ ತಪ್ಪದಂತೆ ಜರುಗುವುದೆಂದೂ ಹೇಳುತ್ತಿದ್ದನು. ಸುಬ್ಬಯ್ಯನ ತಂದೆ ತಾಯಿಗಳ ಆಹ್ವಾನದ ಮೇರೆಗೆ ಆತನು ಅವರ ಮನೆಗೆ ಕೂಡ ಬಂದನು, ಆತನು ನನ್ನ ಕೈಗೆ ಕೆಲವು ಕವಡೆಗಳನ್ನು ಕೊಟ್ಟು ಅವುಗಳನ್ನು ಹಾಕಲು ತಿಳಿಸಿದನು. ಏನೇನೋ ಲೆಕ್ಕಾಚಾರ ಮಾಡಿ ತಾಳೆಯ ಪತ್ರಗ್ರಂಥಗಳಿಂದ ಒಂದು ಹಾಳೆಯನ್ನು ತೆಗೆದು ಓದತೊಡಗಿದನು, “ ಪ್ರಶ್ನೆ ಹಾಕಿರುವವನು ಶಂಕರಭಟ್ಟ ಎಂಬುವ ಕನ್ನಡ ಬ್ರಾಹ್ಮಣನು. ದತ್ತಾವತಾರಿಗಳಾದ ಶ್ರೀ ಪಾದವಲ್ಲಭರ ಚರಿತ್ರೆಯನ್ನು ಈತನು
ಬರೆಯುವನು. ಪೂರ್ವಜನ್ಮದಲ್ಲಿ ಈತನೂ, ಇನ್ನೊಬ್ಬನೂ ಕಂದಕೂರು ಅನ್ನುವ ಪಟ್ಟಣಕ್ಕೆ ಹತ್ತಿರದಲ್ಲಿದ್ದ ಮೊಗಲೀಚರ್ಲ ಎನ್ನುವ ಗ್ರಾಮದಲ್ಲಿ ಜನಿಸಿದರು. ಇವರು ದ್ಯೋತಕ್ರೀಡೆಯಲ್ಲಿ ವಿಶೇಷ ಅನುರಕ್ತರಾದರು. ಆ ಗ್ರಾಮದಲ್ಲಿ ಪ್ರಸಿದ್ದವಾದ ಸ್ವಯಂಭೂದತ್ತ ದೇವಾಲಯವಿದ್ದಿತು. ಈತನು ದತ್ತ ದೇವಾಲಯದ ಪೂಚಾರಿಗೆ ಸಹೋದರನಾಗಿ ಹುಟ್ಟಿದನು. ಅಣ್ಣನು ಇಲ್ಲದ ಸಮಯದಲ್ಲಿ ಈತನೇ ಪೂಜಾದಿಗಳನ್ನು ನಿರ್ವಹಿಸುತ್ತಿದ್ದನು. ದತ್ತ ದೇವಾಲಯದ ಪ್ರಾಂಗಣದಲ್ಲಿ ತನ್ನ ಮಿತ್ರನೊಂದಿಗೆ ಇವನು ದ್ಯೋತಕ್ರೀಡೆಯನಲ್ಲಿ ನಿಮಗ್ನನಾಗಿರುತ್ತಿದ್ದನು. ಇದು ತುಂಬಾ ದೊಡ್ಡ ಅಪಚಾರದ ವಿಷಯ. ಒಂದು ದಿನ ತನ್ನ ಸ್ನೇಹಿತನೊಡನೆ ಜೂಜಾಡುತ್ತಿರುವಾಗ ವಿಚಿತ್ರವಾದ ಷರತ್ತುಗಳನ್ನು ಹಾಕಿಕೊಂಡರು. ಈತನು ಸೋತರೆ ಮಿತ್ರನಿಗೆ ಪಂದ್ಯದ ದುಡ್ಡನ್ನು ಕೊಡಬೇಕು. ಮಿತ್ರನು ಸೋತರೆ ಅವನು ಈತನಿಗೆ ಅವನ ಹೆಂಡತಿಯನ್ನು ಒಪ್ಪಿಸಬೇಕು. ಇದಕ್ಕೆ ದತ್ತಾತ್ರೇಯನೇ ಸಾಕ್ಷಿ ! ಎಂದು ಪ್ರಮಾಣ ಮಾಡಿಕೊಂಡು ಜೂಜಾಡಿದರು. ತನ್ನ ಎದುರಿಗೇ ಅತ್ಯಂತ ಅಭ್ಯಂತರಕರವಾದ ವಿಷಯವು ಜರುಗುತ್ತಿರುವುದನ್ನು ದತ್ತಪ್ರಭುವು ಗಮನಿಸುತ್ತಿದ್ದನು. ಜೂಜಿನಲ್ಲಿ ಶಂಕರಭಟ್ಟನು ಗೆದ್ದನು. ಶಂಕರನ ಮಿತ್ರನು ತನ್ನ ಪತ್ನಿಯನ್ನು ಶಂಕರನಿಗೆ ಒಪ್ಪಿಸಲು ನಿರಾಕರಿಸಿದನು. ಇವರ ವ್ಯಾಜ್ಯವು ಊರಿನ ದೊಡ್ಡ ಮನುಷ್ಯನವರೆಗೂ ಹೋಯಿತು. ಅವರು ಸಮಾವೇಶಗೊಂಡು ಪವಿತ್ರವಾದ ದತ್ತಪ್ರಭುಗಳ ಸಮಕ್ಷಮದಲ್ಲಿ ಇಂತಹ ಅಕೃತ್ಯವು ನಡೆದಿರುವುದು ಸಹಿಸಲಾರದ ವಿಷಯವೆಂದೂ ಪರಸ್ತ್ರೀಯಲ್ಲಿ ಅನುರಕ್ತನಾಗಿ ಅವಳನ್ನು ವಕ್ರಮಾರ್ಗದಿಂದ ಹೊಂದಲು ಬಯಸಿದ್ದು ಶಂಕರನ ದೋಷವೆಂದೂ, ಜೂಜಿನಲ್ಲಿ ತನ್ನ ಹೆಂಡತಿಯನ್ನೇ ಪಣವನ್ನಾಗಿ ಒಡ್ಡಿದುದು ಮಿತ್ರನ ದೋಷವೆಂದೂ ತೀರ್ಮಾನಿಸಿದರು. ಶಂಕರನ ತಪ್ಪಿಗೆ ಅವನ ತಲೆಯ ಮೇಲೆ ಕುದಿಯುತ್ತಿರುವ ಎಣ್ಣೆಯನ್ನು ಸುರಿಯಬೇಕೆಂದು ಅವನ ಮಿತ್ರನ ತಪ್ಪಿಗೆ ಅವನಿಗೆ ನಪುಂಸಕತ್ವವು ಉಂಟಾಗುವಂತೆ ಅವನ ಅಂಗಚ್ಚೇದನ ಮಾಡಬೇಕೆಂದೂ ತೀರ್ಪನ್ನು ಕೊಟ್ಟು , ಇವನ್ನು ಜಾರಿಗೊಳಿಸಿದ ಮೇಲೆ ಅವರಿಬ್ಬರಿಗೂ ಗ್ರಾಮ ಬಹಿಷ್ಕಾರವನ್ನು ಮಾಡಿದರು. ಶಂಕರಭಟ್ಟನು ತನ್ನ ಪೂರ್ವಜನ್ಮದಲ್ಲಿ ಸ್ವಲ್ಪಕಾಲ ದತ್ತಪ್ರಭುವಿನ ಸೇವೆಯನ್ನು ಮಾಡಿದುದರಿಂದ ಈ ಜನ್ಮದಲ್ಲಿ ಸ್ವಲ್ಪ ದೈವಭಕ್ತಿ ಹೊಂದಿದವನಾಗಿ ಜನಿಸಿದನು. ಅವನ ಮಿತ್ರನು ಸುಬ್ಬಯ್ಯನಾಗಿ ತಿರುಪತಿಯಲ್ಲಿ ಕ್ಷೌರಿಕನ ಗೃಹದಲ್ಲಿ ಜನ್ಮವೆತ್ತಿ ಚಿತ್ತ ಚಾಂಚಲ್ಯದಿಂದ ಹುಚ್ಚನಾಗಿ ಮದುವೆಯ ತರುವಾಯ ಓಡಿಹೋದನು. ಮುಗ್ಧಳಾದ ಸುಬ್ಬಯ್ಯನ ಹೆಂಡತಿಯು ನಿರ್ದೋಷಿ. ಅವಳ ಪಾತಿವ್ರತ್ಯ ಪ್ರಭಾವದಿಂದ ಸುಬ್ಬಯ್ಯನ ಹುಚ್ಚು ಬಿಟ್ಟು ಹೋಗುತ್ತದೆ. ಈ ರಮಲ ಶಾಸ್ತ್ರ ಕೇಳಿದ ಮಾರನೆಯ ದಿನವೇ ಅವಳ ಗಂಡನು ಊರಿಗೆ ಬರುತ್ತಾನೆ. ಆ ದಿನವೇ ಶಂಕರಭಟ್ಟನಿಗೆ ಬಿಡುಗಡೆ ಪ್ರಾಪ್ತಿಯಾಗುತ್ತದೆ.

( ಮುಂದುವರೆಯುವುದು )

ಕೃಪೆ – ಶ್ರೀ ಕನ್ನೇಶ್ವರ ಪ್ರಕಾಶನ

ಚುಟುಕು ಸಪ್ತಶತಿ – 39

ದೇವರಿಲ್ಲದ ಗುಡಿ ಗುಡಿಯೆನ್ನಲಾಗುವುದೆ ?
ಮನದಿಂದ ಬರದ ನುಡಿ ನುಡಿಯೆನಿಸಬಲ್ಲುದೆ ?
ಉಪ್ಪಿಲ್ಲದಾ ಊಟ ಊಟವೆಂದೆನಿಸಬಲ್ಲುದೆ ?
ನಿನ್ನ ನೆನೆಯದ ಬಾಳು ವ್ಯರ್ಥವಲ್ಲವೆ
ದೊರೆಯೆ – ಸಚ್ಚಿದಾನಂದ

  • ಶ್ರೀ ಸ್ವಾಮೀಜಿ.

( ಸಂಗ್ರಹ )

  • ಭಾಲರಾ
    ಬೆಂಗಳೂರು

ಜೈಗುರುದತ್ತ.


Share