ಮೈಸೂರು ಪತ್ರಿಕೆ: ಎಂಪಿ ಫೋಕಸ್:ಕನ್ನಡ ನಾಡು ಕಂಡ ಅಮರ ನಟ ಹಾಸ್ಯರತ್ನಾಕರ

Share

ಕನ್ನಡ ನಾಡು ಕಂಡ ಅಮರ ಹಾಸ್ಯರತ್ನಾಕರ

 • ಬನ್ನೂರು ಕೆ. ರಾಜು
  ಸಾಹಿತಿ-ಪತ್ರಕರ್ತ
  ಹಾಸ್ಯನಟ ರತ್ನಾಕರ್ ಮಾತನಾಡಿದರೆ ಸಾಕು ಕೇಳಿದವರಿಗೆ ನಗು ತಡೆಯಲಾಗುತ್ತಿರಲಿಲ್ಲ. ಇನ್ನು ಅವರು ಹಾಡಿದರೆ? ಇಂತಹದ್ದೊಂದು ದೃಶ್ಯ ‘ಗುರುಶಿಷ್ಯರು’ ಚಿತ್ರದಲ್ಲಿ ಬರುತ್ತದೆ. ಅಲ್ಲಿ ಅವರದ್ದೊಂದು ವಿಶಿಷ್ಟವಾದ ಹಾಸ್ಯ ಪಾತ್ರ. ಆ ಪಾತ್ರದಲ್ಲಿ ರತ್ನಾಕರ್ “ನೀ ಸನಿ, ನಿಮಪ ಸನಿ…” ಎಂದು ಹಾಡತೊಡಗುತ್ತಾರೆ. ಆದರೆ ಅದು ಪ್ರೇಕ್ಷಕರಿಗೆ ಕೇಳುವುದು “ನೀ ಶನಿ, ನಿಮ್ಮಪ್ಪ ಶನಿ…” ಎಂದು. ಇಡೀ ಚಿತ್ರಮಂದಿರ ಬಿದ್ದು ಹೋಗುವಂತೆ ಪ್ರೇಕ್ಷಕರು ಗೊಳ್ಳೆಂದು ನಗುತ್ತಾರೆ. ನಗುವಿನ ಅಲೆ ನಿಲ್ಲುವುದೇ ಇಲ್ಲ. ಎಲ್ಲರೂ ಬಿದ್ದು ಬಿದ್ದು ನಗುತ್ತಲೇ ಇರುತ್ತಾರೆ. ಚಿತ್ರದ ಮುಂದಿನ ದೃಶ್ಯ ಏನೆಂಬುದು ಅರ್ಥವಾಗದಷ್ಟು ನಗು ನಗು ನಗು…! ಇದಿಷ್ಟೇ ಸಾಕು ರತ್ನಾಕರ್ ಎಂಥಾ ಅದ್ಭುತ ಹಾಸ್ಯ ನಟರೆಂಬುದಕ್ಕೆ.
  ಅದು ೧೯೬೦ರ ದಶಕದ ಕಾಲ. ಕನ್ನಡ ಚಿತ್ರರಂಗದಲ್ಲಿ ನರಸಿಂಹರಾಜು ಎಂಬ ಬಹುದೊಡ್ಡ ಹಾಸ್ಯ ನಟ ಚಿತ್ರರಸಿಕರೆಲ್ಲರನ್ನೂ ಮೋಡಿ ಮಾಡಿದ್ದರು. ಇನ್ನೊಂದು ಕಡೆ ನರಸಿಂಹರಾಜು ಅವರಷ್ಟೇ ಅದ್ಭುತ ಹಾಸ್ಯನಟರಾಗಿದ್ದ ಬಾಲಕೃಷ್ಣ ತಮ್ಮದೇ ಆದ ವಿಶಿಷ್ಟ ಶೈಲಿಯ ನಟನೆಯಿಂದ ಸೂಜಿಗಲ್ಲಿನಂತೆ ಎಲ್ಲರನ್ನೂ ಸೆಳೆದುಕೊಂಡಿದ್ದರು. ಮತ್ತೊಂದು ಕಡೆ ದ್ವಾರಕೀಶ್, ವಾದಿರಾಜ್‌ರಂಥ ಹಾಸ್ಯ ಕಲಾವಿದರು ಅದೇ ತಾನೆ ಬಂದು ತಮ್ಮ ಚಿತ್ರ ವಿಚಿತ್ರ ಮ್ಯಾನರಿಸಂ ಮೂಲಕ ಮಿಂಚುತ್ತಾ ತಮ್ಮದೇ ಆದ ಪ್ರೇಕ್ಷಕ ವರ್ಗವನ್ನು ಹಿಡಿದಿಟ್ಟುಕೊಂಡಿದ್ದರು. ಇಂಥಾ ಸಂದರ್ಭದಲ್ಲಿ ಇನ್ನೊಬ್ಬ ಹಾಸ್ಯ ನಟ ಇಲ್ಲಿಗೆ ಹೊಸದಾಗಿ ಬಂದು ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ಅವರ ಸಮಕ್ಕೆ ಬೆಳೆಯುವುದು ಅಷ್ಟು ಸುಲಭ ಸಾಧ್ಯವಾಗಿರಲಿಲ್ಲ. ಆದರೆ ಇದನ್ನು ಅಷ್ಟೇ ಸಲೀಸಾಗಿ ಸಾಧ್ಯಗೊಳಿಸಿದವರು ಹಾಸ್ಯನಟ ಕೆ.ಎಂ. ರತ್ನಾಕರ್. ಕೀರಲು ಧ್ವನಿಯಾದರು ಅದರಲ್ಲೂ ಒಂದು ವಿಶಿಷ್ಟ ಆಕರ್ಷಣೀಯ ಮಧುರತೆ ಹೊಂದಿದ್ದ ತಮ್ಮ ಕೀರಲು ಧ್ವನಿಯನ್ನೇ ಟ್ರಂಪ್‌ಕಾರ್ಡ್ ಮಾಡಿಕೊಂಡು ಎಲ್ಲರನ್ನೂ ನಗಿಸುತ್ತಾ ಬೆಳೆದ ರತ್ನಾಕರ್ ಅಕ್ಷರಶಃ ಹಾಸ್ಯರತ್ನಾಕರರೇ ಸರಿ! ಅವರ ಅಭಿನಯದ ಬತ್ತಳಿಕೆಯಲ್ಲಿ ಐನೂರಕ್ಕೂ ಹೆಚ್ಚು ಚಿತ್ರಗಳಿವೆ ಎಂದರೆ ಇದೇನು ಸಾಮಾನ್ಯ ಸಾಧನೆಯಲ್ಲ.
  ನಮ್ಮ ಕನ್ನಡ ಚಿತ್ರರಂಗ ಅನೇಕ ಮಂದಿ ಜನಪ್ರಿಯ ಹಾಸ್ಯ ನಟರನ್ನು ಕಂಡಿದ್ದರೂ ಅವರಲ್ಲೆಲ್ಲಾ ರತ್ನಾಕರ್ ವಿಭಿನ್ನವಾಗಿ ನಿಲ್ಲುತ್ತಾರೆ. ನಮ್ಮಲ್ಲಿನ ಬಹಳಷ್ಟು ಹಾಸ್ಯ ನಟರನ್ನು ಅನುಕರಣೆ ಮಾಡಿದವರುಂಟು. ಅವರಂತೆ ಮಾತನಾಡಿ ನಗಿಸುವುದಕ್ಕೆ ಪ್ರಯತ್ನಿಸಿ ಗೆದ್ದವರೂ ಇದ್ದಾರೆ. ಆದರೆ ಇವತ್ತಿನ ತನಕವೂ ರತ್ನಾಕರ್ ಒಬ್ಬರನ್ನು ಮಾತ್ರ ಅನುಕರಣೆ ಮಾಡಲು ಸಾಮಾನ್ಯ ಜನರಿರಲಿ ಯಾವ ಕಲಾವಿದರಿಂದಲೂ ಸಾಧ್ಯವಾಗಿಲ್ಲ. ಇದಕ್ಕೆ ಬಹುಮುಖ್ಯ ಕಾರಣ ರತ್ನಾಕರರ ವಿಶಿಷ್ಟ ಪ್ರತಿಭೆ ಮತ್ತು ವಿಚಿತ್ರ ಮ್ಯಾನರಿಸಂ ಹಾಗೂ ಎಲ್ಲಕ್ಕಿಂತ ಮಿಗಿಲಾಗಿ ಅವರ ವಿಭಿನ್ನ ಧ್ವನಿ. ಒಂದು ರೀತಿ ಅವರ ಧ್ವನಿಯೇ ಮುಗಿಲೆತ್ತರಕ್ಕೆ ಅವರನ್ನು ಬೆಳೆಸಿದ್ದು, ಹಾಗಾಗಿ ರತ್ನಾಕರ್ ಅವರಿಗೆ ತಮ್ಮ ಧ್ವನಿಯ ಬಗ್ಗೆ ಬಹಳ ಹೆಮ್ಮೆ ಇತ್ತು. ಅದೇ ಅವರ ಅಭಿನಯದ ತಾಕತ್ತೂ ಆಗಿತ್ತು. ಇತರೇ ಹಾಸ್ಯ ನಟರ ನಡುವೆ ಡಿಫೆರೆಂಟಾಗಿ ಗುರುತಿಸಿಕೊಳ್ಳಲು ಕಾರಣವೂ ಆಗಿತ್ತು. ಬಹು ಮುಖ್ಯವಾಗಿ ತಮ್ಮ ಧ್ವನಿಯನ್ನೇ ಪ್ಲಸ್ ಪಾಯಿಂಟ್ ಮಾಡಿಕೊಂಡು ಬಣ್ಣದ ಬದುಕನ್ನು ಕಟ್ಟಿಕೊಂಡ ಬಹು ಅಪರೂಪದ ಹಾಸ್ಯನಟರಿವರು. ಇವರಿಗೆ ಧ್ವನಿಯೇ ಟ್ರಂಪ್‌ಕಾರ್ಡ್, ಧ್ವನಿಯೇ ಟ್ರೇಡ್‌ಮಾರ್ಕ್.
  ರಂಗಭೂಮಿ ಮತ್ತು ಚಲನಚಿತ್ರ ಕ್ಷೇತ್ರಗಳೆರಡರಲ್ಲೂ ಹೆಸರಾಗಿದ್ದ ಇಂಥಾ ಅದ್ಭುತ ಹಾಸ್ಯ ಕಲಾವಿದ ಕೆ.ಎಂ. ರತ್ನಾಕರ್ ಅವರ ಹುಟ್ಟೂರು ದಕ್ಷಿಣದ ಸಿರಿನಾಡು ಕೊಲ್ಲೂರು ಮೂಕಾಂಬಿಕಾ ಕ್ಷೇತ್ರ. ೧೯೩೦ ಏಪ್ರಿಲ್ ೧೧ರಂದು ಜನನ. ತಂದೆ ಎಂ. ಮಂಜುನಾಥಭಟ್, ತಾಯಿ ನಾಗವೇಣಮ್ಮ, ಅಹಲ್ಯಾ ಹಾಗೂ ಮನೋರಮಾ ಎಂಬ ಇಬ್ಬರು ತಂಗಿಯರು. ಸುಸಂಸ್ಕೃತ ಹಿನ್ನೆಲೆಯ ಧಾರ್ಮಿಕ ಸೇವೆಯ ಅರ್ಚಕ ಕುಟುಂಬವಿದು. ತಂದೆ ದೇವಸ್ಥಾನದ ಅರ್ಚಕರಾಗಿದ್ದರಿಂದ ತಮ್ಮ ಏಕಮಾತ್ರ ಪುತ್ರ ಜೊತೆಗೆ ಮನೆಯ ಹಿರಿಯ ಮಗ ರತ್ನಾಕರ್ ಕೂಡ ಅರ್ಚಕನಾಗಬೇಕೆಂಬುದು ತಂದೆಯ ಆಸೆ. ಬಾಲಕ ರತ್ನಾಕರ್‌ಗೋ ಓದಬೇಕೆಂಬ ಆಸೆ. ಆದರೆ ಓದಲು ಸಾಧ್ಯವಾದದ್ದು ನಾಲ್ಕನೇ ತರಗತಿಯವರೆಗೆ ಮಾತ್ರ. ತಾಯಿ ಹಾಡುತ್ತಿದ್ದ ದೇವರನಾಮಗಳನ್ನು ಆಲಿಸುತ್ತಲೇ ಬೆಳೆದ ಬಾಲಕ ರತ್ನಾಕರ್ ಸಂಗೀತದಲ್ಲಿ ಆಸಕ್ತನಾದ. ಪ್ರತಿನಿತ್ಯ ಮೂಕಾಂಬಿಕಾ ಕ್ಷೇತ್ರ ದೇವಾಲಯದಲ್ಲಿ ಹಾಡಲು ಆರಂಭಿಸಿದ. ಹಾಡು ಕೇಳಿ ಆಕರ್ಷಿತರಾದ ಕೇರಳದ ಸಂಗೀತ ವಿದ್ವಾಂಸರೊಬ್ಬರು “ಈ ಹುಡುಗ ಭವಿಷ್ಯದಲ್ಲಿ ಒಳ್ಳೆಯ ಸಂಗೀತಗಾರನಾಗುತ್ತಾನೆ. ನನ್ನೊಡನೆ ಕಳಿಸಿಕೊಡಿ” ಎಂದು ದುಂಬಾಲು ಬಿದ್ದರು. ತಂದೆ ಸುತಾರಾಂ ಇದಕ್ಕೆ ಒಪ್ಪಲಿಲ್ಲ. ಮಗ ದೇವಸ್ಥಾನಬಿಟ್ಟು ಹೋಗಲಾಗಲಿಲ್ಲ. ಅಲ್ಲೇ ಬಾಲಕ ರತ್ನಾಕರ್ ಹಾಡುಗಾರಿಕೆ ಹಾಗೆಯೇ ಮುಂದುವರಿಯಿತು. ಭಕ್ತಾದಿ ಕೇಳುಗರಿಂದ ಶಹಭಾಶ್‌ಗಿರಿ ಸಿಕ್ಕಾಗ ಖುಷಿಯೋ ಖುಷಿ. ಚಿಕ್ಕಮ್ಮ ಸುಲೋಚನ ತಮಗೆ ಮಕ್ಕಳಿಲ್ಲದ ಕಾರಣ ಬಾಲಕ ರತ್ನಾಕರನನ್ನೇ ತಮ್ಮ ಸ್ವಂತ ಮಗನಂತೆ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಬಹಳ ಅಕ್ಕರೆಯಿಂದ ‘ರತ್ನ’ ಎಂದು ಕರೆಯುತ್ತಿದ್ದರು. ರತ್ನಾಕರ್‌ಗೆ ತಬಲ ಮತ್ತು ಹಾರ್ಮೋನಿಯಂ ಕಲಿಸಿದ್ದು ಇವರೇ.
  ಒಮ್ಮೆ ಕೊಲ್ಲೂರು ಮೂಕಾಂಬಿಕೆಯ ದರ್ಶನಕ್ಕೆ ಬಂದಿದ್ದ ಭಕ್ತಾದಿ ಶಾಸ್ತ್ರಿ ಎಂಬ ಡಾಕ್ಟರ್, ಬಾಲಕ ರತ್ನಾಕರ್‌ನನ್ನು ನೋಡಿ “ಹುಡುಗ ತುಂಬಾ ಚೂಟಿಯಾಗಿದ್ದಾನೆ. ಇನ್ನು ಮುಂದೆ ಇವನ ಜವಾಬ್ದಾರಿ ನನ್ನದು. ಚೆನ್ನಾಗಿ ಓದಿಸಿ ವಿದ್ಯಾವಂತನನ್ನಾಗಿ ಮಾಡುತ್ತೇನೆ” ಎಂದು ರತ್ನಾಕರ್ ತಂದೆಗೆ ಪೂಸಿ ಹೊಡೆದು ಒಪ್ಪಿಸಿ ಬಾಲಕ ರತ್ನಾಕರ್‌ನನ್ನು ಮೈಸೂರಿಗೆ ಕರೆತರುತ್ತಾನೆ. ಇಲ್ಲಿ ಪಕ್ಕಾ ಮೈಸೂರಿಗರಾಗಿ ರತ್ನಾಕರ್‌ರ ನಿಜವಾದ ಬದುಕು ಪ್ರಾರಂಭವಾಗುತ್ತದೆ. ಓದಿಸುವುದಾಗಿ ಬಾಲಕ ರತ್ನಾಕರ್‌ನನ್ನು ಕರೆತಂದ ಡಾಕ್ಟರ್ ಶಾಸ್ತ್ರಿ ಎಂಬಾತ ಶಾಲೆಗೆ ಸೇರಿಸುವ ಬದಲು ತನ್ನ ಮನೆಯ ಕೆಲಸಕ್ಕೆ ಇಟ್ಟುಕೊಳ್ಳುತ್ತಾನೆ. ಆಗ ಬಾಲಕ ರತ್ನಾಕರ್‌ಗೆ ವಯಸ್ಸು ಕೇವಲ ಹತ್ತನ್ನೆರಡು ವರ್ಷ. ಮುಗ್ಧ ಹುಡುಗ ಮರು ಮಾತಾಡದೆ ಮನೆಗೆಲದವನಾಗಿ ಬಿಡುತ್ತಾನೆ. ಡಾಕ್ಟರ್ ಶಾಸ್ತ್ರಿಯ ಕ್ಲಿನಿಕ್ ಸೀತಾವಿಲಾಸ ಛತ್ರದ ಬಳಿ ಇತ್ತು. ಅದಾಗಲೇ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ಡಿಕ್ಕಿ ಮಾಧವರಾವ್, ಸೋರಟ್ ಅಶ್ವಥ್ ಬಿಡುವಿನ ವೇಳೆಯಲ್ಲಿ ಬಂದು ಕ್ಲಿನಿಕ್‌ನ ವರಾಂಡದಲ್ಲಿ ಕುಳಿತು ಲೋಕಾಭಿರಾಮವಾಗಿ ಹರಟುತ್ತಿದ್ದರು. ಆ ಒಂದು ಸಂದರ್ಭದಲ್ಲಿ ಕ್ಲಿನಿಕ್‌ಗೆ ಅಂಟಿಕೊಂಡಂತೆಯೇ ಇದ್ದ ಅಲ್ಲಿನ ಮನೆಯೊಳಗೆ ತನ್ನ ಪಾಡಿಗೆ ತಾನು ಹಾಡಿಕೊಳ್ಳುತ್ತಿದ್ದ ಬಾಲಕ ರತ್ನಾಕರ್ ತನ್ನ ಮಧುರ ಕಂಠದೊಡನೆ ಇವರ ಕಣ್ಣಿಗೆ ಬಿದ್ದ. ಒಂದು ಕ್ಷಣದಲ್ಲಿ ಹುಡುಗನ ಪ್ರತಿಭೆಯನ್ನು ಅವರು ಗುರುತಿಸಿದ್ದರು. ಕೂಡಲೇ ಅವನ ಪೂರ್ವಾಪರವನ್ನು ತಿಳಿದು ಕೊಂಡು ಅವರು ಬಾಲಕ ರತ್ನಾಕರ್‌ನನ್ನು ಡಾಕ್ಟರ್ ಶಾಸ್ತ್ರಿಯ ಮನೆಗೆಲಸದಿಂದ ಮುಕ್ತಗೊಳಿಸಿ ೧೯೪೪ರಲ್ಲಿ ಹೆಚ್.ಎಲ್.ಎನ್. ಸಿಂಹರ ‘ಸಿಂಹ ಸೆಲೆಕ್ಟ್ ಆರ್ಟಿಸ್ಟ್’ ನಾಟಕ ಕಂಪನಿ’ಗೆ ಸೇರಿಸಿದರು. ಅಲ್ಲಿ ಇವರು ಮೊಟ್ಟಮೊದಲಿಗೆ ಮುಖಕ್ಕೆ ಬಣ್ಣಹಚ್ಚಿ ‘ಪ್ರೇಮಲೀಲಾ’ ನಾಟಕದ ಮೂಲಕ ರಂಗಭೂಮಿಗೆ ಕಾಲಿಟ್ಟರು. ಅಲ್ಲಿಂದ ಇವರ ನಟನೆಯ ಬಣ್ಣದ ಬದುಕಿನ ಯಾತ್ರೆ ಶುರುವಾಯಿತು.
  ನಾಟಕಕ್ಕೆ ಹೇಳಿ ಮಾಡಿಸಿದಂತಿದ್ದ ಶರೀರ ಮತ್ತು ಶಾರೀರವಿದ್ದ ಬಾಲಕ ರತ್ನಾಕರ್ ಶರವೇಗದಲ್ಲಿ ರಂಗನಟರಾಗಿ ಬೆಳೆಯುತ್ತಾ ಹೋದರು. ತಾವೂ ದೊಡ್ಡವರಾದರು. ರಂಗಾಶಕ್ತರಿಗೆ ಬಹು ಬೇಗ ಹತ್ತಿರವಾದರು. ರತ್ನಾಕರ್ ಅವರಿಗಾಗಿಯೇ ನಾಟಕಗಳನ್ನು ನೋಡುವ ಪ್ರೇಕ್ಷಕರು ಹುಟ್ಟಿಕೊಂಡರು. ರಂಗಭೂಮಿಯ ದಿಗ್ಗಜರಾದ ನಟ ಭಯಂಕರ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ, ಅಭಿನಯ ಕಂಠೀರವ ಎಂ.ಎನ್. ಗಂಗಾಧರರಾವ್, ಜಿ. ನಾಗೇಶ್‌ರಾವ್, ಸಿಂಗಾನಲ್ಲೂರು ಮುತ್ತುರಾಜ್ (ಡಾ.ರಾಜ್‌ಕುಮಾರ್), ಪಂಡರೀಬಾಯಿ, ಜಯಮ್ಮ, ರಾಜಮ್ಮ, ಸಿ.ಬಿ. ಮಲ್ಲಪ್ಪ ಮುಂತಾದ ಘಟಾನುಘಟಿ ರಂಗ ಕಲಾವಿದರೊಡನೆ ನಟಿಸಿದರು. ಎಲ್ಲರೂ ಮೆಚ್ಚುವಂತೆ ರಂಗಗೀತೆಗಳನ್ನು ಹಾಡುತ್ತಿದ್ದರು. ಎಲ್ಲಾ ಪಾತ್ರಕ್ಕೂ ಸೈ ಎನ್ನುತ್ತಿದ್ದ ರತ್ನಾಕರ್ ಸ್ತ್ರೀ ಪಾತ್ರಗಳಲ್ಲೂ ಅಭಿನಯಿಸುತ್ತಿದ್ದರು. ಸಿಂಗಾನಲ್ಲೂರು ಮುತ್ತುರಾಜ್ ಜೊತೆ ‘ಸುಭದ್ರ’ ನಾಟಕದಲ್ಲಿ ಸತ್ಯಭಾಮ ಪಾತ್ರದಲ್ಲಿ ನಟಿಸಿ ರತ್ನಾಕರ್ ಪ್ರಸಿದ್ಧಿಗಳಿಸಿದ್ದರು. ಗುಬ್ಬಿವೀರಣ್ಣನವರ ಗುಬ್ಬಿ ಕಂಪನಿ, ಮೈಸೂರಿನ ಶೇಷಾಚಾರ್ ಅವರ ಶೇಷಕಲಾಮಂಡಲಿ, ಕೊಟ್ಟೂರಪ್ಪನವರ ಚಾಮುಂಡೇಶ್ವರಿ ಕಂಪನಿ, ಹೆಚ್.ಎಲ್.ಎನ್. ಸಿಂಹರ ಸೆಲೆಕ್ಟ್ ಆರ್ಟಿಸ್ಟ್ ಕಂಪನಿ, ಪಂಡರೀಬಾಯಿ ಅವರ ಕೃಷ್ಣಚೈತನ್ಯ ನಾಟಕ ಸಭಾ, ಭಾರತ ಲಲಿತಕಲಾ ಸಂಘ, ಪೀರ್ ಸಾಹೇಬರ ನಾಟಕ ಕಂಪನಿ ಮುಂತಾದ ಪ್ರತಿಷ್ಠಿತ ನಾಟಕ ಕಂಪನಿಗಳ ಖಾಯಂ ಕಲಾವಿದರಾಗಿದ್ದರು ರತ್ನಾಕರ್. ಹತ್ತಾರು ನಾಟಕಗಳು, ಹಲವಾರು ಪಾತ್ರಗಳು ನೂರಾರು ಡೈಲಾಗ್‌ಗಳು ಇವರ ತಲೆಯಲ್ಲಿ ಯಾವಗಳಿಗೆಯಲ್ಲಿ ಬೇಕಾದರೂ ಹೇಳುವಷ್ಟರ ಮಟ್ಟಿಗೆ ರೆಕಾರ್ಡ್ ಆಗಿದ್ದರಿಂದ ರತ್ನಾಕರರು ರಂಗಭೂಮಿಯ ಕಂಪ್ಯೂಟರ್ ಎಂದೇ ಹೆಸರಾಗಿದ್ದರು.
  ಕೃಷ್ಣಲೀಲಾ, ರಾಮಾಯಣ, ಸುಭದ್ರ, ಕಬೀರ್‌ದಾಸ್, ಗೋರಾಕುಂಬಾರ, ಶಾಂತಿನಿವಾಸ, ಬೇಡರಕಣ್ಣಪ್ಪ, ದಾನ ಶೂರಕರ್ಣ, ಅಬ್ಬಾಹುಡುಗಿ ಇವು ರತ್ನಾಕರ್ ಅಭಿನಯಿಸುತ್ತಿದ್ದ ಪ್ರಮುಖ ನಾಟಕಗಳು. ಮುಖ್ಯವಾಗಿ ಹಾಸ್ಯ ಪಾತ್ರಗಳನ್ನು ಮಾಡುತ್ತಿದ್ದ ಇವರು, ಸಮಯ ಸಂದರ್ಭ ಬಂದಾಗ ಯಾವ ಪಾತ್ರವಾದರೂ ಸರಿಯೇ ನಿಭಾಯಿಸುತ್ತಿದ್ದರು. ರತ್ನಾಕರ್ ಅವರು ರಾವಣನ ಪಾತ್ರವನ್ನೂ ಮಾಡುತ್ತಿದ್ದರೆಂದರೆ ಎಂಥವರಿಗೂ ಅಚ್ಚರಿಯಾಗುತ್ತದೆ. ಇದು ಅವರೊಳಗಿದ್ದ ಪ್ರಚಂಡ ಪ್ರತಿಭೆಗೆ ಸಾಕ್ಷಿ. ಅಷ್ಟೇ ಅಲ್ಲ ಇದು ರಂಗಭೂಮಿ ಮೇಲಿಟ್ಟಿದ್ದ ಅವರ ಅಪಾರ ಪ್ರೀತಿಯೂ ಹೌದು. ಅನನ್ಯ ಅಭಿಮಾನವೂ ನಿಜ. ಅಷ್ಟರಮಟ್ಟಿಗೆ ಅವರು ಕಲಾದೇವಿಗೆ ತಮ್ಮನ್ನು ಅರ್ಪಿಸಿಕೊಂಡು ಕಲೆಯನ್ನೇ ಜೀವ, ಜೀವನ ಮಾಡಿಕೊಂಡಿದ್ದರು. ಯಾವ ಪಾತ್ರವಾದರೂ ಸರಿಯೆ ಪರಕಾಯ ಪ್ರವೇಶ ಮಾಡಿ ನಟಿಸುವ ಕಲೆಯನ್ನು ರತ್ನಾಕರ್ ಕರಗತ ಮಾಡಿಕೊಂಡಿದ್ದರು. ಇವರ ನಟನೆಯ ಕಾರಣಕ್ಕೆ ನೂರಾರು, ಸಾವಿರಾರು ಪ್ರದರ್ಶನಗಳನ್ನು ಕಂಡ ಹಲವು ನಾಟಕಗಳೂ ಉಂಟು. ಪಂಡರಿಬಾಯಿ ಅವರ ಕೃಷ್ಣ ಚೈತನ್ಯ ನಾಟಕ ಸಭಾ ಕಂಪನಿಯಲ್ಲಿ ಇವರು ‘ತಿರುಪತಿ’ ಎಂಬ ಕಾಮಿಡಿ ಪಾತ್ರ ಮಾಡುತ್ತಿದ್ದ ‘ಶಾಂತಿನಿವಾಸ’ ಆ ಕಾಲಕ್ಕೇ ಸಾವಿರ ಪ್ರದರ್ಶನ ಕಂಡಿತ್ತು. ಆ ಸಂದರ್ಭದಲ್ಲಿ ಗುಬ್ಬಿ ವೀರಣ್ಣರು ಮತ್ತು ಮೈಸೂರು ಮಹಾರಾಜರಾದ ಜಯಚಾಮರಾಜ ಒಡೆಯರು ರತ್ನಾಕರ್ ಅವರ ‘ತಿರುಪತಿ’ ಪಾತ್ರದ ಹಾಸ್ಯವನ್ನು ಮೆಚ್ಚಿಕೊಂಡು ಬೆಳ್ಳಿ ತಟ್ಟೆ ನೀಡಿ ಇವರನ್ನು ಸನ್ಮಾನಿಸಿದ್ದರು.
  ರತ್ನಾಕರರು ರಂಗಭೂಮಿಯಲ್ಲಿ ಪ್ರಸಿದ್ಧಿಯ ತುತ್ತತುದಿಯಲ್ಲಿದ್ದಾಗಲೇ ಚಿತ್ರರಂಗ ಇವರನ್ನು ಕೈಬೀಸಿ ಕರೆದಿತ್ತು. ಇವರನ್ನು ಮಗನಿಗಿಂತಲೂ ಹೆಚ್ಚಾಗಿ ನೋಡಿಕೊಳ್ಳುತ್ತಿದ್ದ ಸೋರಟ್ ಅಶ್ವಥ್‌ರಿಂದಲೇ ಒಂದು ಪುಟ್ಟ ಪಾತ್ರದ ಮೂಲಕ ಹುಣಸೂರು ಕೃಷ್ಣಮೂರ್ತಿಯವರ ‘ವಿಚಿತ್ರ ಪ್ರಪಂಚ’ ಚಿತ್ರದಿಂದ ೧೯೫೫ರಲ್ಲಿ ಚಲನಚಿತ್ರ ಪ್ರಪಂಚಕ್ಕೆ ರತ್ನಾಕರ್ ಪಾದಾರ್ಪಣೆ ಮಾಡಿದ್ದರು. ನಂತರ ಸೋರಟ್ ಅಶ್ವಥ್ ಜೊತೆ ಮದ್ರಾಸ್‌ಗೆ ಹೋದ ಇವರು ನಟಸಾರ್ವಭೌಮ ರಾಜ್‌ಕುಮಾರ್ ಅಭಿನಯದ ‘ದಶವತಾರ’ ಚಿತ್ರದಲ್ಲಿ ನಟಿಸಿದರು. ಬಳಿಕ ‘ಓಹಿಲೇಶ್ವರ’ ದಲ್ಲಿ ಅವಕಾಶ ಸಿಕ್ಕಿತು. ಆ ನಂತರ ಹುಣಸೂರು ಕೃಷ್ಣಮೂರ್ತಿಯವರು ನಿರ್ದೇಶಕ ವೈ.ಆರ್. ಸ್ವಾಮಿ ಬಳಿ ಸಹಾಯಕ ನಿರ್ದೇಶಕರಾಗಿ ರತ್ನಾಕರ್‌ರನ್ನು ಸೇರಿಸಿದರು. ‘ಭಕ್ತ ಕನಕದಾಸ’ ಚಿತ್ರಕ್ಕೆ ಮೊದಲಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದಲ್ಲದೆ ಪಾತ್ರವನ್ನೂ ಮಾಡಿದರು. ಸಂಗೀತಾಭಿರುಚಿ ಮತ್ತು ಹಾಡುಗಾರಿಕೆ ಇವರಿಗಿದ್ದುದರಿಂದ ಮತ್ತೆ ಸೋರಟ್ ಅಶ್ವಥ್ ಅವರೇ ರತ್ನಾಕರ್‌ರನ್ನು ಸಂಗೀತ ನಿರ್ದೇಶಕ ವೆಂಕಟರಾಜು ಜೊತೆ ಸೇರಿಸಿದರು. ಅಲ್ಲಿ ಸಂಗೀತ ಸಂಯೋಜನೆಯ ಕೈಂಕರ್ಯ ನಡೆಯುತ್ತಲೇ ಮುಂದೆ ಅದೇ ದಾರಿಯಲ್ಲಿ ರಾಜನ್-ನಾಗೇಂದ್ರರ ಸಂಗೀತ ನಿರ್ದೇಶನದಲ್ಲಿ ಆಗಿನ ಪ್ರಖ್ಯಾತ ಗಾಯಕಿ ಎಲ್.ಆರ್. ಈಶ್ವರಿ ಜೊತೆ “ಯಾರನ್ನು ಮೆಚ್ಚಲಿ, ಏನನ್ನು ಮೆಚ್ಚಲಿ ನಾನು…” ಎಂಬ ಹಾಡನ್ನು ಹಾಡಿ ಸೈ ಎನಿಸಿಕೊಂಡರು. ‘ಕನ್ಯಾರತ್ನ’ ಚಿತ್ರದಲ್ಲಿ ರತ್ನಾಕರ್, ಡಿಕ್ಕಿ ಮಾಧವರಾವ್, ಕುಳ್ಳಿ ಜಯ ಅಭಿನಯಿಸಿದ್ದು “ಮೈಸೂರು ದಸರಾ ಬೊಂಬೆ, ನೀನೆ ನನ್ನ ರಂಬೆ…” ಎಂಬ ಹಾಡು ಅವತ್ತಿಗೆ ಬಹು ಜನಪ್ರಿಯವಾಗಿತ್ತು.
  ನಟನೆಗೂ ಸೈ, ನಿರ್ದೇಶನಕ್ಕೂ ಸೈ, ನಿರ್ಮಾಣಕ್ಕೂ ಸೈ, ನಿರ್ವಹಣೆಗೂ ಸೈ, ಸಂಗೀತ ಸಂಯೋಜನೆಗೂ ಸೈ, ಸಾಹಿತ್ಯಕ್ಕೂ ಸೈ, ಸಂಕಲನಕ್ಕೂ ಸೈ, ಗಾಯನಕ್ಕೂ ಸೈ ಎಂಬಂತಿದ್ದ ಬಹುಮುಖ ಪ್ರತಿಭೆ ರತ್ನಾಕರ್ ತನ್ನ ಪ್ರತಿಭಾ ಸಾಮರ್ಥ್ಯದಿಂದಲೇ ಚಿತ್ರರಂಗದಲ್ಲಿ ಹಂತ ಹಂತವಾಗಿ ಬೆಳೆಯುತ್ತಾ ಹೋದರು. ಪಾತ್ರ ಸಣ್ಣದಿರಲಿ ದೊಡ್ಡದಿರಲಿ ಅದಕ್ಕೆ ಜೀವ ತುಂಬುವುದನ್ನು ನಿರ್ವಂಚನೆಯಿಂದ ಮಾಡುತ್ತಿದ್ದ ಇವರ ಅಭಿನಯದ ಚಿತ್ರಗಳ ಸಂಖ್ಯೆ ಕೂಡ ಹೆಚ್ಚುತ್ತಾ ಹೋಯಿತು. ಆರ್. ನಾಗೇಂದ್ರರಾವ್, ಬಿ.ಆರ್. ಪಂತುಲು, ರಾಜ್‌ಕುಮಾರ್, ಎಂ.ವಿ. ರಾಜಮ್ಮ, ಪಂಡರೀಬಾಯಿ, ಉದಯಕುಮಾರ್, ಕಲ್ಯಾಣ್‌ಕುಮಾರ್, ರಾಜೇಶ್, ವಿಷ್ಣುವರ್ಧನ್, ಅಂಬರೀಶ್, ಶ್ರೀನಾಥ್, ಅಶೋಕ್, ನರಸಿಂಹರಾಜು, ಬಾಲಕೃಷ್ಣ, ದ್ವಾರಕೀಶ್, ಎಂ.ಪಿ. ಶಂಕರ್, ಆರತಿ, ಭಾರತಿ, ಮಂಜುಳ, ಕಲ್ಪನ, ಜಯಂತಿ, ಗಿರೀಶ್ ಕಾರ್ನಾಡ್, ವಜ್ರಮುನಿ, ಶಶಿಕುಮಾರ್, ಶಿವರಾಜ್‌ಕುಮಾರ್, ಶಂಕರ್‌ನಾಗ್, ಅನಂತನಾಗ್, ರಜನೀಕಾಂತ್, ವಿನೋದ್‌ರಾಜ್, ಜಗ್ಗೇಶ್, ದರ್ಶನ್, ಕೋಮಲ್, ರವಿಚಂದ್ರನ್, ಗಂಗಾಧರ್, ಲೀಲಾವತಿ, ಬಿ. ಜಯಮ್ಮ, ಶಿವರಾಮು, ವಾದಿರಾಜ್, ರಾಜಾನಂದ್, ತೂಗುದೀಪ ಶ್ರೀನಿವಾಸ್, ಪದ್ಮಪ್ರಿಯ, ಗೀತಾ, ಜಯಮಾಲಿನಿ, ಜಯಮಾಲಾ, ಪ್ರಭಾಕರ್, ಸಿಲ್ಕ್ ಸ್ಮಿತ ಒಳಗೊಂಡಂತೆ ಬಹುತೇಕ ಎಲ್ಲ ಕಲಾವಿದರ ಜೊತೆ ತಂತ್ರಜ್ಞರ ಜೊತೆ ರತ್ನಾಕರ್ ನಟಿಸಿ ಕೆಲಸ ಮಾಡಿದ್ದರು. ಹಾಗೆಯೇ ಬಹುತೇಕ ಎಲ್ಲಾ ನಿರ್ದೇಶಕರ ಸಿನಿಮಾಗಳಲ್ಲೂ ಇವರು ನಟಿಸಿದ್ದಾರೆ. ಇವರು ನಟಿಸಿದ್ದ ಬಹಳಷ್ಟು ಚಿತ್ರಗಳಿಗೆ ಇವರೇ ಸಹಾಯಕ ನಿರ್ದೇಶಕರಾಗಿರುತ್ತಿದ್ದರು. ಅನೇಕ ಚಿತ್ರಗಳಲ್ಲಿ ಹಾಡಿರುವುದೂ ಉಂಟು.
  ೧೯೬೮ರಲ್ಲಿ ಮೂಕಾಂಬಿಕಾ ಅವರೊಡನೆ ವೈವಾಹಿಕ ಜೀವನಕ್ಕೆ ರತ್ನಾಕರ್ ಹೆಜ್ಜೆಯಿರಿಸಿದ್ದರು. ವಿಶೇಷವೆಂದರೆ ಇವರ ವಿವಾಹ ಜರುಗಿದ್ದು ಅವರಿಗೆ ಅತ್ಯಂತ ಪ್ರಿಯವಾದ ಕೊಲ್ಲೂರು ಮೂಕಾಂಬಿಕಾ ಕ್ಷೇತ್ರದಲ್ಲೇ. ಇದು ರತ್ನಾಕರ್‌ರ ಹುಟ್ಟೂರು ಕೂಡ. ಕೂಡಿ ಬಾಳಿದರೆ ಸ್ವರ್ಗ ಸುಖ ಎಂಬಂತೆ ಇವರ ಅನ್ಯೋನ್ಯ ದಾಂಪತ್ಯ ಜೀವನವಿತ್ತು. ರಾಘವೆಂದ್ರ ರತ್ನಾಕರ್, ರಾಜೇಶ್ ರತ್ನಾಕರ್, ವಿಜಯ್ ರತ್ನಾಕರ್ ಎಂಬ ಮೂವರು ಗಂಡು ಮಕ್ಕಳ ತಂದೆಯಾದ ಇವರು ೨೫ ವರ್ಷಗಳ ಸಾಂಸಾರಿಕ ಸುಖೀ ಜೀವನ ಅನುಭವಿಸುತ್ತಿದ್ದಾಗಲೇ ೧೯೯೩ರಲ್ಲಿ ಪ್ರೀತಿಯ ಮಡದಿ ಮೂಕಾಂಬಿಕಾ ಕ್ಯಾನ್ಸರ್ ಕಾಯಿಲೆಗೆ ತುತ್ತಾಗಿ ನಿಧನರಾದರು. ಅರ್ಧಾಂಗಿ ಹೋದಮೇಲೆ ರತ್ನಾಕರ್ ಅರ್ಧ ಕುಸಿದು ಹೋದರು. ಆದರೆ ಬಣ್ಣದ ಬದುಕನ್ನು ಅವರು ಬಿಡಲಿಲ್ಲ. ಜೀವನ ಸಾಗಬೇಕಲ್ಲವೆ?. ತಂದೆಯಿಂದ ಗಾಯನವನ್ನು ಬಳುವಳಿಯಾಗಿ ಪಡೆದಿರುವ ಹಿರಿಯ ಮಗ ರಾಘವೇಂದ್ರ ರತ್ನಾಕರ್ ಆರ್ಕೇಷ್ಟ್ರ ಗಾಯಕರಾಗಿ ಮೈಸೂರು ಭಾಗದಲ್ಲಿ ಬಹಳ ಪ್ರಸಿದ್ಧರು. ಇವರು ತಂದೆಯ ನಟನಾ ವೃತ್ತಿಗೆ ನೈತಿಕ ಬೆಂಬಲವಾಗಿ ನಿಂತವರು. ಹಾಗೆಯೇ ಇನ್ನಿಬ್ಬರು ಮಕ್ಕಳಾದ ರಾಜೇಶ್ ರತ್ನಾಕರ್, ವಿಜಯ್‌ರತ್ನಾಕರ್ ಕೂಡ.
  ‘ವಿಚಿತ್ರ ಪ್ರಪಂಚ’ದಿಂದ ಆರಂಭಿಸಿ ‘ಆಪ್ತ ರಕ್ಷಕ’ ಚಿತ್ರದವರೆಗೆ ೪೦೦ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ರತ್ನಾಕರ್ ಕನ್ನಡ ಮಾತ್ರವಲ್ಲದೆ ಇಂಗ್ಲೀಷ್, ಹಿಂದಿ, ತಮಿಳು, ತೆಲಗು, ಮಲೆಯಾಳಂ ಸೇರಿದಂತೆ ಬಹುಭಾಷಾ ನಟರಾಗಿದ್ದರು. ಈ ಎಲ್ಲಾ ಭಾಷಾ ಚಿತ್ರಗಳಲ್ಲೂ ಕೆಲಸ ಮಾಡಿ ಗುರುತಿಸಿಕೊಂಡಿದ್ದರು. ಕುಂಕುಮ ಭಾಗ್ಯ, ಪಾಪ ಪಾಂಡು ಮುಂತಾದ ಟಿ.ವಿ. ಧಾರಾವಾಹಿಗಳಲ್ಲೂ ಅಭಿನಯಿಸಿದ್ದರು. ಕನ್ಯಾರತ್ನ, ಸ್ವರ್ಣಗೌರಿ, ನಂದಾದೀಪ, ಗುರುಶಿಷ್ಯರು, ನವಜೀವನ, ಆನಂದ ಭೈರವಿ, ಕಠಾರಿವೀರ, ವೀರಕೇಸರಿ, ಹಳ್ಳಿಮೇಷ್ಟ್ರು, ಸತಿ ಸುಕನ್ಯಾ, ಗೌರಿಗಣೇಶ, ಯಜಮಾನ, ಭಕ್ತ ಕನಕದಾಸ, ಸತ್ಯಹರಿಶ್ಚಂದ್ರ, ಕರುಳಿನಕರೆ, ಮನಸ್ಸಿದ್ದರೆ ಮಾರ್ಗ, ಜೈ ಕರ್ನಾಟಕ, ಶಿವಗಂಗೆ ಮಹಾತ್ಮೆ, ಪ್ರಚಂಡಕುಳ್ಳ ಇವು ರತ್ನಾಕರ್ ಅವರಿಗೆ ಹೆಸರು ತಂದು ಕೊಟ್ಟ ಪ್ರಮುಖ ಚಿತ್ರಗಳು. ಮುತ್ತಿನೋಪಾದಿಯ ಮೂರು ಅಮೂಲ್ಯ ಚಿತ್ರಗಳನ್ನು ನಿರ್ದೇಶಿಸಿ ಕನ್ನಡ ಚಿತ್ರರಂಗಕ್ಕೆ ಕೊಟ್ಟ ಹಿರಿಮೆ ಇವರದು. ಅವುಗಳೆದರೆ ಡಾ. ರಾಜ್‌ಕುಮಾರ್ ನಟನೆಯ ಭಾಗ್ಯ ದೇವತೆ, ವಿಷ್ಣುವರ್ಧನ್ ನಟನೆಯ ಶನಿಪ್ರಭಾವ, ಕೆ.ಎಸ್. ಅಶ್ವಥ್-ಪಂಡರೀಬಾಯಿ ಜೋಡಿಯ ಬಾಂಧವ್ಯ ಈ ಮೂರೂ ಒಂದಕ್ಕಿಂತ ಒಂದು ವಿಭಿನ್ನವಾದ ಚಿತ್ರಗಳು.
  ಪ್ರಶಸ್ತಿ-ಪುರಸ್ಕಾರಗಳ ಬೆನ್ನು ಹತ್ತದ ನಿರ್ಲಿಪ್ತ ಸ್ವಭಾವದ ಕಲಾವಿದ ರತ್ನಾಕರ್ ಅವರನ್ನೇ ಹುಡುಕಿಕೊಂಡು ೨೦೦೦ ಇಸವಿಯಲ್ಲಿ ಆರ್ಯಭಟ ಪ್ರಶಸ್ತಿ, ೨೦೦೫ರಲ್ಲಿ ಕರ್ನಾಟಕ ಸರ್ಕಾರದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಇವರ ಕೊರಳನ್ನು ಅಲಂಕರಿಸಿವೆ. ತಮ್ಮದೇ ಆದ ಸ್ವಪ್ರಭೆಯಿಂದ ಕನ್ನಡವನ್ನು ಬೆಳಗಿದ ಬೆಳೆಸಿದ ರಂಗಭೂಮಿ ಮತ್ತು ಚಿತ್ರರಂಗದ ಇಂಥಾ ಘನ ಪ್ರತಿಭೆ ರತ್ನಾಕರ್ ೨೦೧೦ ಸೆಪ್ಟೆಂಬರ್ ೨೧ರಂದು ಅನಂತಪದ್ಮನಾಭ ವ್ರತದ ದಿವಸ ರಂಗೈಕ್ಯರಾದರು. ಭೌತಿಕವಾಗಿ ಅವರು ಕಣ್ಮೆರೆಯಾಗಿರಬಹುದು. ಆದರೆ ಕಲಾ ಸಾಧನೆಯ ಮೂಲಕ ಅವರು ಯಾವತ್ತೂ ಜೀವಂತವಾಗಿರುತ್ತಾರೆ.

Share