ಮೈಸೂರು ಪತ್ರಿಕೆ ಸುದ್ದಿ ಗವಾಕ್ಷಿ

521
Share

ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರ ಜಿಲ್ಲಾ ಪ್ರವಾಸ
ಮೈಸೂರು, :- ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಜುಲೈ 01 ರಂದು ಮೈಸೂರು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.
ಬೆಳಿಗ್ಗೆ 9 ಗಂಟೆಗೆ ಕೋವಿಡ್-19 ಸಾಂಕ್ರಾಮಿಕ ವೈರಸ್ ನಿಯಂತ್ರಣ ಕುರಿತು ಹೊಸ ಜಿಲ್ಲಾಧಿಕಾರಿಗಳ ಸಂಕೀರ್ಣದಲ್ಲಿರುವ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಯಲ್ಲಿ ಜಿಲ್ಲೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸುವರು.
ಬೆಳಿಗ್ಗೆ 9.30 ಗಂಟೆಗೆ ಪ್ರೆಸ್ ಕ್ಲಬ್‍ನಲ್ಲಿ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸುವರು.
ಬೆಳಿಗ್ಗೆ 11.30 ಗಂಟೆಗೆ ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧೀನಗರ ವಿಕಾಸ ಯೋಜನೆಯನ್ನು ಅನುಷ್ಠಾನಗೊಳಿಸುವ ಬಗ್ಗೆ ಹೊಸ ಜಿಲ್ಲಾಧಿಕಾರಿಗಳ ಸಂಕೀರ್ಣದಲ್ಲಿರುವ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಯಲ್ಲಿ ಅಧಿಕಾರಿಗಳಿಂದ ಮಾಹಿತಿ ಪಡೆಯುವರು.
ಮಧ್ಯಾಹ್ನ 12.30 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಯಲ್ಲಿ ಮಳೆಗಾಲ ಪ್ರಾರಂಭವಾಗಿರುವ ಹಿನ್ನೆಲೆ ಪಾಲಿಕೆ ಕೈಗೊಂಡಿರುವ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಅಧಿಕಾರಿಗಳ ಸಭೆ ನಡೆಸುವರು.
ಮಧ್ಯಾಹ್ನ 1.30 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಯಲ್ಲಿ ನಗರೋತ್ಥಾನ ಕಾಮಗಾರಿಗಳ ಕ್ರಿಯಾಯೋಜನೆಗೆ ಅನುಮೋದನೆ ನೀಡುವ ಬಗ್ಗೆ ಸಭೆ ನಡೆಸುವರು.
ಬಳಿಕ 3.30 ಗಂಟೆಗೆ ಚಾಮುಂಡೇಶ್ವರಿ ಬೆಟ್ಟದಲ್ಲಿ ನೂತನವಾಗಿ ನಿರ್ಮಿಸಲಾಗುತ್ತಿರುವ ಅಂಗಡಿ ಮಳಿಗೆಗಳ ಪರಿಶೀಲನೆ ನಡೆಸುವರು.

ಮೃಗಾಲಯಕ್ಕೆ ಮತ್ತಷ್ಟು ನೆರವು
ಮೈಸೂರು, ಕೋವಿಡ್-19 ಹಿನ್ನೆಲೆ ಲಾಕ್‍ಡೌನ್‍ನಿಂದಾಗಿ ಮೃಗಾಲಯ ಹಾಗೂ ಪ್ರಾಣಿಗಳ ಆಹಾರ ನಿರ್ವಹಣೆಗೆ ತೊಂದರೆಯುಂಟಾದ ಹಿನ್ನೆಲೆ ಹಲವಾರು ಗಣ್ಯರು, ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳು ಮೃಗಾಲಯದ ಪ್ರಾಣಿಗಳನ್ನು ದತ್ತು ಸ್ವೀಕರಿಸುವ ಮೂಲಕ ಮೃಗಾಲಯಕ್ಕೆ ಸಾಕಷ್ಟು ನೆರವು ಹರಿದುಬರುತ್ತಿದೆ ಎಂದು ಚಾಮರಾಜೇಂದ್ರ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರಾದ ಅಜಿತ್ ಕುಲಕರ್ಣಿ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
ಭಾರತೀಯ ರಿಸರ್ವ್ ಬ್ಯಾಂಕ್ ನೋಟು ಮುದ್ರಣ ಪ್ರೈ.ಲಿ. ನವರು 10 ಲಕ್ಷ ರೂ. ಪಾವತಿಸಿ ಮೃಗಾಲಯದ “ಎರಡು ಭಾರತೀಯ ಆನೆಗಳು, ಒಂದು ಭಾರತೀಯ ಸಿಂಹ, ಒಂದು ಹುಲಿ, ಎರಡು ಜಿರಾಫೆಗಳು, ಎರಡು ಝೀಬ್ರಾಗಳು, ಒಂದು ಚಿಂಪಾಂಜಿ ಮತ್ತು ಒಂದು ಬಿಳಿ ಘೇಂಡಾಮೃಗಗಳನ್ನು ಜುಲೈ 9, 2020 ರಿಂದ 2021ರ ಜುಲೈ 8 ರವರೆಗೆ ಒಂದು ವರ್ಷದ ಅವಧಿಗೆ ದತ್ತು ಸ್ವೀಕರಿಸಿರುತ್ತಾರೆ.
ಅಲ್ಲದೆ ಒಂದು ವರ್ಷದ ಅವಧಿಗೆ ಬೆಂಗಳೂರಿನ ಪೂರ್ಣಿಮಾ ವಿ. ಎಂಬುವರು 5 ಸಾವಿರ ರೂ. ಪಾವತಿಸಿ ಮ್ಯಾಂಡರಿನ್ ಡಕ್, ನಕ್ಷತ್ರ ಆಮೆ ಮತ್ತು ಸಾಮಾನ್ಯ ಹಾವು, ಸುಜಿತ್ ರಘು ರಾವ್ ಎಂಬುವರು 7,500 ರೂ. ಪಾವತಿಸಿ ಚುಕ್ಕೆ ಜಿಂಕೆ(ಹೆಣ್ಣು), ಬೋರೆಗೌಡ ಕೆ.ಬಿ. ಎಂಬುವರು 3,500 ರೂ. ಪಾವತಿಸಿ ಬಿಳಿ ನವಿಲನ್ನು ದತ್ತು ಪಡೆದಿರುತ್ತಾರೆಂದು ಚಾಮರಾಜೇಂದ್ರ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಜಿಯೋಇನ್ಫಾಮ್ರ್ಯಾಟಿಕ್ಸ್ ಅಪ್ಲಿಕೇಶನ್ ಕುರಿತು ತರಬೇತಿ ಕಾರ್ಯಾಗಾರ

ಮೈಸೂರು, ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಂಗಸಂಸ್ಥೆಯಾದ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು “Geoinformatics ಅಪ್ಲಿಕೇಶನ್” ಕುರಿತು ಜುಲೈ 14 ರಿಂದ 16 ವರೆಗೆ ವಿವಿಧ ವಿಶ್ವವಿದ್ಯಾಲಯಗಳು, ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಯುವ ಉಪನ್ಯಾಸಕರುಗಳಿಗೆ 3 ದಿನಗಳ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ.
ಕಾರ್ಯಾಗಾರದಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಅಂಗಸಂಸ್ಥೆಯಾದ ಬೆಂಗಳೂರು ದಕ್ಷಿಣ ಪ್ರಾದೇಶಿಕ ದೂರ ಸಂವೇದಿ ಕೇಂದ್ರ, ಅಂತಾರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ ಮತ್ತು ರಾಷ್ಟ್ರೀಯ ಉನ್ನತ ಅಧ್ಯಯನ ಸಂಸ್ಥೆಗಳ ಸಂಪನ್ಮೂಲ ತಜ್ಞರು ಉಪನ್ಯಾಸ ನೀಡಲಿದ್ದಾರೆ. ಕಾರ್ಯಾಗಾರದಲ್ಲಿ ಭಾಗವಹಿಸಲು ಆನ್‍ಲೈನ್ ಮೂಲಕ ನೋಂದಾಯಿಸಿಕೊಳ್ಳಲು ಜುಲೈ 13 ಕೊನೆಯ ದಿನಾಂಕವಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಅಕಾಡೆಮಿ ವೆಬ್‍ಸೈಟ್ https://kstacademy.in/en/programs-en/applications-of-geoinformatics-3-day-webinar-session/ ಅನ್ನು ಸಂಪರ್ಕಿಸುವಂತೆ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಎ. ಎಂ. ರಮೇಶ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಾರ್ವಜನಿಕ ಸ್ಥಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯ: ಜಿಲ್ಲಾಧಿಕಾರಿ
ಮೈಸೂರು, ಮೈಸೂರು ಜಿಲ್ಲೆಯಾದ್ಯಂತ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆ ಸಾರ್ವಜನಿಕ ಸ್ಥಗಳಲ್ಲಿ ಸಾರ್ವಜನಿಕರು ಮಾಸ್ಕ್ ಧರಿಸುವುದು ಹಾಗೂ ಇತರೆ ಮುಂಜಾಗ್ರತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರು ತಿಳಿಸಿರುತ್ತಾರೆ.
ಎಲ್ಲಾ ಸಾರ್ವಜನಿಕ ಮತ್ತು ಸರ್ಕಾರಿ ಕಚೇರಿಗಳಿಗೆ ಅತಿ ಅವಶ್ಯವಿರುವ ಹಾಗೂ ತುರ್ತು ಸಂದರ್ಭಗಳಲ್ಲಿ ಮಾತ್ರ ಭೇಟಿ ನೀಡುವುದು, ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಾರ್ವಜನಿಕರು ಕಡ್ಡಾಯವಾಗಿ ಮುಖಗವಸುಗಳನ್ನು ಧರಿಸುವುದು ಹಾಗೂ ಕಚೇರಿ ಪ್ರವೇಶಿಸುವ ಮೊದಲು ಸಾರ್ವಜನಿಕರು ಕಡ್ಡಾಯವಾಗಿ ಕೈಗಳನ್ನು ಸೋಪು ಅಥವಾ ಸ್ಯಾನಿಟೈಜರ್‍ನ್ನು ಬಳಸಿ ಶುಚಿಗೊಳಿಸುವುದು ಅವಶ್ಯಕವಾಗಿರುತ್ತದೆ.
ಕೊರೊನಾ ವೈರಾಣು ನಿಯಂತ್ರಣಕ್ಕಾಗಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಅಧಿಕಾರಿ/ನೌಕರರು ಹಾಗೂ ಅವರ ಕುಟುಂಬದವರ ಆರೋಗ್ಯದ ಸುರಕ್ಷತೆಯ ಹಿತದೃಷ್ಠಿಯಿಂದ ಸಾರ್ವಜನಿಕರು ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಪಾಲಿಸುವ ಮೂಲಕ ಸಹಕಾರ ನೀಡುವಂತೆ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಬೀದಿ ಬದಿ ವ್ಯಾಪಾರಸ್ಥರಿಗೆ ಕಿರುಸಾಲ ಸೌಲಭ್ಯ
ಮೈಸೂರು, ದೀನ್ ದಯಾಳ್ ಅಂತ್ಯೋದಯ (ಡೇ-ನಲ್ಮ್) ಯೋಜನೆಯಡಿ ಬನ್ನೂರು ಪುರಸಭಾ ವ್ಯಾಪ್ತಿಯಲ್ಲಿ ಗುರುತಿಸಿಕೊಂಡಿರುವ ಬೀದಿ ಬದಿ ವ್ಯಾಪಾರಸ್ಥರಿಗೆ “ಪ್ರಧಾನಮಂತ್ರಿ ಬೀದಿ ವ್ಯಾಪಾರಿಗಳ ಆತ್ಮ ನಿರ್ಭರ್ ನಿಧಿ”ಯ (P.M SVA Nidhi) ಯೋಜನೆಯಡಿ ವಿಶೇಷ ಕಿರುಸಾಲ ಸೌಲಭ್ಯ ನೀಡಲು ಅರ್ಜಿ ಆಹ್ವಾನಿಸಿದೆ.
ಬೀದಿ ಬದಿ ವ್ಯಾಪಾರಿಗಳಿಗೆ ಕೈಗೆಟುಕುವ ದರದಲ್ಲಿ ಕಿರು ಸಾಲ ಸೌಲಭ್ಯವನ್ನು 10.000 ರೂ ವರಗೆ ನೀಡುವುದು, ನಿಯಮಿತ ಸಾಲ ಮರು ಪಾವತಿಗೆ ಉತ್ತೇಜಿಸುವುದು, ಮತ್ತು ಡಿಜಿಟಲ್ ವಹಿವಾಟಿಗೆ ಉತ್ತೇಜನ, ಬಹುಮಾನ ನೀಡುವ ಉದ್ದೇಶವನ್ನು ಯೋಜನೆಯು ಹೊಂದಿದ್ದು, ಮಾರ್ಚ್-24 2020 ರೊಳಗಾಗಿ ನಗರ ಪ್ರದೇಶಗಳಲ್ಲಿ ಬೀದಿ ಬದಿ ವ್ಯಾಪಾರಿಗಳಾಗಿ ತೊಡಗಿಸಿಕೊಂಡು ಗುರುತಿಸಲ್ಪಟ್ಟ ಎಲ್ಲಾ ಅರ್ಹ ವ್ಯಾಪಾರಸ್ಥರು ಬನ್ನೂರು ಪುರಸಭಾ ವ್ಯಾಪ್ತಿಯಲ್ಲಿ ಅರೆನಗರ, ಗ್ರಾಮೀಣ ಪ್ರದೇಶದಿಂದ ಬಂದು ಬೀದಿ ಬದಿ ವ್ಯಾಪಾರವನ್ನು ಮಾಡುತ್ತಿರುವ ಬನ್ನೂರು ಪುರಸಭೆಯಿಂದ ಬೀದಿ ಬದಿ ವ್ಯಾಪಾರಸ್ಥರೆಂದು ಗುರುತಿನ ಚೀಟಿಯನ್ನು ಪಡೆದವರು ಸಹ ಈ ಯೋಜನೆಯ ಫಲಾನುಭವಿಗಳಾಗಲು ಅರ್ಹರಾಗಿರುತ್ತಾರೆ.
ಈ ಯೋಜನೆಯಲ್ಲಿ ಒಂದು ವರ್ಷದ ಅವಧಿಯವರಗೆ ಸಾಲದ ಕಂತನ್ನು ಪ್ರತಿ ಮಾಹೆಯಾನ ಮರು ಪಾವತಿಸಲು ಅವಕಾಶ ಕಲ್ಪಿಸಲಾಗಿರುತ್ತದೆ. ಸಾಲದ ಮೊತ್ತವನ್ನು ನಿಗಧಿತ ಅವಧಿಯಲ್ಲಿ ಮರುಪಾವತಿಸುವ ಫಲಾನುಭವಿಗಳ ಖಾತೆಗೆ ವಾರ್ಷಿಕ ಶೇ.7ರಷ್ಟು ಬಡ್ಡಿ ಸಹಾಯಧನವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ ಮೂಲಕ ತ್ರೈಮಾಸಿಕವಾಗಿ ಜಮೆ ಮಾಡಲಾಗುವುದು ಹಾಗೂ ನಿಗಧಿತ ಅವಧಿಗೆ ಮುಂಚಿನ ಮರು ಪಾವತಿಗೆ ಯಾವುದೇ ದಂಡ ಇರುವುದಿಲ್ಲ,
ಬೀದಿಬದಿ ವ್ಯಾಪಾರಿಗಳಿಗೆ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಈ ವಿಶೇಷ ಕಿರುಸಾಲ ಸೌಲಭ್ಯ ಯೋಜನೆಯು ಬನ್ನೂರು ಪುರಸಭಾ ವ್ಯಾಪ್ತಿಯ ಬೀದಿ ಬದಿ ವ್ಯಾಪಾರಿಗಳು ಪುರಸಭೆಯ ಡೇ-ನಲ್ಮ್ ಯೋಜನೆಯ ಶಾಖೆಯನ್ನು ಸಂಪರ್ಕಿಸುವಂತೆ ಬನ್ನೂರು ಪುರಸಭೆಯ ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

14ನೇ ಸಾಂಖ್ಯಿಕ ದಿನಾಚರಣೆ
ಮೈಸೂರು, ಮತ್ತು ಸಾಂಖ್ಯಿಕ ನಿರ್ದೇಶನಾಲಯ ಬೆಂಗಳೂರು ಹಾಗೂ ಮೈಸೂರು ಜಿಲ್ಲಾಡಳಿತ ವತಿಯಿಂದ ಭಾರತದ ಪ್ರಖ್ಯಾತ ಸಂಖ್ಯಾಶಾಸ್ತ್ರಜ್ಞರಾದ ಪ್ರೊ. ಪ್ರಶಾಂತ ಚಂದ್ರ ಮಹಾಲನೋಬಿಸ್ ಜನ್ಮ ದಿನಾಚರಣೆ ಪ್ರಯುಕ್ತ 14ನೇ ಸಾಂಖ್ಯಿಕ ದಿನಾಚರಣೆಯನ್ನು ಆಚರಿಸಲಾಯಿತು.
ಭಾರತದ ಪ್ರಖ್ಯಾತ ಸಂಖ್ಯಾಶಾಸ್ತ್ರಜ್ಞರಾದ ಪ್ರೊ. ಪ್ರಶಾಂತ ಚಂದ್ರ ಮಹಾಲನೋಬಿಸ್ ರವರ ಜನ್ಮ ದಿನಾಚರಣೆಯ ಪ್ರಯುಕ್ತ ಪ್ರತಿ ವರ್ಷ ಜೂ.29ರಂದು ಸಾಂಖ್ಯಿಕ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದ್ದು, ಅದರಂತೆ ಸೋಮವಾರ ಜಿಲ್ಲಾ ಮಟ್ಟದ ಕಛೇರಿಗಳ ಸಂಕೀರ್ಣದಲ್ಲಿ 14ನೇ ಸಾಂಖ್ಯಿಕ ದಿನಾಚರಣೆಯನ್ನು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪಂಚಾಯತ್‍ನ ಮುಖ್ಯ ಯೋಜನಾಧಿಕಾರಿಗಳಾದ ಶ್ರೀ. ಎಂ.ಬಿ ಪದ್ಮಶೇಖರ ಪಾಂಡೆ ಅವರು, ಉತ್ತಮ ಆರೋಗ್ಯ ಮತ್ತು ಯೋಗಕ್ಷೇಮ ಹಾಗೂ ಲಿಂಗ ಸಮಾನತೆಯ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚಿನ ಅರಿವು ಮೂಡಿಸಬೇಕೆಂದು ಸಲಹೆ ನೀಡಿದರು. ಜೊತೆಗೆ ಜಿಲ್ಲೆಯ ವಿವಿಧ ಇಲಾಖಾವತಿಯಿಂದ ನೀಡುವ ಅಂಕಿ ಅಂಶಗಳು ದೇಶದ ನೀತಿ ನಿರೂಪಣೆಯಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸುವುದರಿಂದ ಸಾಂಖ್ಯಿಕ ಇಲಾಖೆ ನಿಖರತೆಯಿಂದ ಕೂಡಿರುವ ಅಂಕಿ ಅಂಶಗಳನ್ನು ಸಂಗ್ರಹಿಸುವಂತೆ ಹಾಜರಿದ್ದ ಅಧಿಕಾರಿ/ಸಿಬ್ಬಂದಿಗಳಿಗೆ ತಿಳಿಸಿದರು.
ಎಂ ಪ್ರಕಾಶ್, ಪ್ರಭಾರ ಜಿಲ್ಲಾ ಸಂಖ್ಯಾಸಂಗ್ರಹಣಾಧಿಕಾರಿಗಳು, ಪ್ರಾಸ್ತವಿಕ ನುಡಿ ಮಾತನಾಡಿ, ಸುಸ್ಥಿರ ಅಭಿವೃದ್ಧಿ ಗುರಿ ಯೋಜನೆಯಡಿಯಲ್ಲಿ ಗುರುತಿಸಲಾಗಿರುವ 17 ಮುಖ್ಯ ಗುರಿಗಳಲ್ಲಿ ಎಲ್ಲರಿಗೂ ಆರೋಗ್ಯ ಮತ್ತು ಲಿಂಗ ಸಮಾನತೆ ಎಂಬ ಅಂಶಗಳು ಪ್ರಸ್ತುತವಾಗಿ ಪರಿಣಾಮಕಾರಿಯಾಗಿ ಜಾರಿಗೊಳಿಸುವಂತೆ ಸಲಹೆ ನೀಡಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿರೂಪಣಾಧಿಕಾರಿಯಾದ ಗೀತಾಲಕ್ಷ್ಮೀ ರವರು ಮಾತನಾಡಿ, ಲಿಂಗ ಸಮಾನತೆಯನ್ನು ಸಾಧಿಸಲು ಇಲಾಖಾವತಿಯಿಂದ ಜಾರಿಗೊಳಿಸಲಾಗುತ್ತಿರುವ ವಿವಿಧ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುತ್ತಿರುವ ಬಗ್ಗೆ ತಿಳಿಸಿದರು. ಜೊತೆಗೆ ಲಿಂಗ ಅಸಮಾನತೆಯು ಇದೇ ಕ್ರಮದಲ್ಲಿ ಮುಂದುವರೆದರೆ ಮಹಿಳೆಯರ ಸ್ಥಿತಿಗತಿಗಳು ಮತ್ತಷ್ಟು ಶೋಚನೀಯವಾಗುತ್ತದೆ ಎಂಬ ಕಿವಿ ಮಾತನ್ನು ಹೇಳಿದರು.
ವಿಕಲಚೇತನರ ಕಲ್ಯಾಣಾಧಿಕಾರಿಗಳಾದ ಮಮತರವರು ಮಾತನಾಡಿ “ಮಹಿಳೆಯರು ಸಕರಾತ್ಮಕ ಚಿಂತನೆಗಳ ಮೂಲಕ ತಮಗೆ ಇರುವ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಸಮಾಜದ ಮುಖ್ಯ ವಾಹಿನಿಯಲ್ಲಿ ಗುರುತಿಸಿಕೊಳ್ಳಬೇಕು” ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಛೇರಿಯಲ್ಲಿ ಸಹಾಯಕ ಸಾಂಖ್ಯಿಕ ಅಧಿಕಾರಿಯಾಗಿರುವ ಡಾ.ರೂಪ ಹೆಚ್.ಜೆ ರವರು ಸುಸ್ಥಿರ ಅಭಿವೃದ್ಧಿಯ ಯೋಜನೆಯ ಬಗ್ಗೆ ವಿಷಯ ಮಂಡನೆ ಮಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಸಹಾಯಕರಾದ ಮಹದೇವಪ್ಪರವರು, ಮೈಸೂರು ಜಿಲ್ಲಾ ಪಂಚಾಯಿತಿಯ ಉಪ ನಿರ್ದೇಶಕರು (ಸಾಂಖ್ಯಿಕ) ಹಾಗೂ ಜಿಲ್ಲೆಯ ವಿವಿಧ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಹಾಯಕ ನಿರ್ದೇಶಕರು, ಸಹಾಯಕ ಸಾಂಖ್ಯಿಕ ಅಧಿಕಾರಿ, ಸಿಬ್ಬಂದಿಯವರು ಹಾಗೂ ಇನ್ನಿತರರು ಹಾಜರಿದ್ದರು.

ಪ್ರತಿ ಮಂಗಳವಾರ ತೆರೆಯಲಿದೆ ಮೃಗಾಲಯ
ಮೈಸೂರು. ಕೋವಿಡ್-19 ವೈರಾಣು ತಡೆಗಟ್ಟುವ ಹಿನ್ನೆಲೆಯಲ್ಲಿ ಜುಲೈ 5 ರಿಂದ ಮುಂದಿನ ನಾಲ್ಕು ಭಾನುವಾರಗಳಂದು ಸಂಪೂರ್ಣ ಲಾಕ್‍ಡೌನ್ ಮಾಡಲು ಆದೇಶ ಹೊರಡಿಸಿರುವುದರಿಂದ ಶ್ರೀ ಚಾಮರಾಜೇಂದ್ರ ಮೃಗಾಲಯ ಹಾಗೂ ಕಾರಂಜಿಕೆರೆ ಪ್ರಕೃತಿ ಉದ್ಯಾನವನಕ್ಕೆ ಪ್ರತಿ ಭಾನುವಾರ ರಜೆ ಘೋಷಿಸಿ, ಮಂಗಳವಾರದಂದು ವೀಕ್ಷಣೆಗೆ ತೆರೆಯಲಾಗುವುದು ಎಂದು ಚಾಮರಾಜೇಂದ್ರ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರಾದ ಅಜಿತ್ ಕುಲಕರ್ಣಿ ತಿಳಿಸಿರುತ್ತಾರೆ.
ಮೃಗಾಲಯ ಹಾಗೂ ಕಾರಂಜಿಕೆರೆ ಪ್ರಕೃತಿ ಉದ್ಯಾನವನ್ನು ಜೂನ್ 30 ರಂದು ವೀಕ್ಷಣೆಗೆ ತೆರೆಯಲಾಗುವುದು ಹಾಗೂ ಜುಲೈ 5 ಭಾನುವಾರದÀಂದು ವೀಕ್ಷಣೆಗೆ ನಿರ್ಬಂಧಗೊಳಿಸಲಾಗುವುದು ಎಂದು ಚಾಮರಾಜೇಂದ್ರ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರ್ನಾಟಕ ವಾರ್ತೆ*


Share