ಆಶಾ ಕಾರ್ಯಕರ್ತೆಯರಿಗೆ 12,000ರೂ.ಮಾಸಿಕ ಗೌರವಧನ ಖಾತರಿಪಡಿಸಿ ಮತ್ತು ಅಗತ್ಯವಿರುವಷ್ಟು ಆರೋಗ್ಯ ರಕ್ಷಣಾ ಸಾಮಗ್ರಿಗಳನ್ನು ನೀಡಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ವತಿಯಿಂದ ಇಂದು ಜಿಲ್ಲಾಧಿಕಾರಿಗಳ ಕಛೇರಿ ಎದುರು ಎಐಯುಟಿಯುಸಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಪ್ರತಿಭಟನಾಕಾರರು ಮಾತನಾಡಿ ಇಂದು ರಾಜ್ಯಾದ್ಯಂತ ಆಶಾ ಕಾರ್ಯಕರ್ತೆಯರು ಪ್ರತಿಭಟನೆ ಹೋರಾಟ ನಡೆಸುತ್ತಿದ್ದೇವೆ. ಕ್ರಮ ಕೈಗೊಳ್ಳದಿದ್ದಲ್ಲಿ ಜುಲೈ 10ರಿಂದ ಆಶಾ ಕಾರ್ಯಕರ್ತೆಯರು ಆರೋಗ್ಯ ಸೇವೆ ಸ್ಥಗಿತಗೊಳಿಸಿ ತೀವ್ರ ಹೋರಾ ನಡೆಸಲಿದ್ದೇವೆಂದು ಎಚ್ಚರಿಕೆ ನೀಡಿದರು.
ಆಶಾ ಕಾರ್ಯಕರ್ತೆಯರ ಆರೋಗ್ಯವನ್ನು ರಕ್ಷಿಸುವ ಎಲ್ಲಾ ರಕ್ಷಣಾ ಸಾಮಗ್ರಿಗಳನ್ನು ಸಾಕಷ್ಟು ಪ್ರಮಾಣದಲ್ಲಿ ನೀಡಬೇಕೆಂದು ಒತ್ತಾಯಿಸಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರ ಆಶಾ ಕಾರ್ಯಕರ್ತೆಯರಿಗಾಗಿ ಘೋಷಣೆ ಮಾಡಿರುವ ಕ್ರಮವಾಗಿ 2000ರೂ, 3000ರೂ ಪ್ಯಾಕೇಜ್ ಸಂಪೂರ್ಣ ಹಣವನ್ನು ಈ ಕೂಡಲೇ ಎಲ್ಲಾ ಕಾರ್ಯಕರ್ತೆಯರಿಗೆ ತಲುಪಿಸಲು ಕ್ರಮ ಕೈಗೊಳ್ಳಬೇಕು ಇಂದು ಈ ಪತ್ರವನ್ನು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರ ಮತ್ತು ಇಲಾಖೆಗೆ ಸಲ್ಲಿಸಿ ಸಮಸ್ಯೆ ಪರಿಹರಿಸಲು ಒತ್ತಾಯಿಸುತ್ತೇವೆ. ಇಂದಿನಿಂದ 7ದಿನಗಳ ಕಾಲ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ವಿವಿಧ ರೀತಿಯ ಪ್ರತಿಭಟನೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು.
ಕೊರೋನಾದಂತಹ ಸಂದರ್ಭದಲ್ಲಿ ಪ್ರಾಣವನ್ನು ಲೆಕ್ಕಿಸದೇ ಆಶಾ ಕಾರ್ಯಕರ್ತೆಯರು ಕೆಲಸ ನಿರ್ವಹಿಸಿದ್ದಾರೆ. ಆದರೆ ಆಶಾ ಕಾರ್ಯಕರ್ತೆಯರಿಗೆ ಆರೋಗ್ಯ ರಕ್ಷಣೆ ಇಲ್ಲವಾಗಿದೆ. ಸರ್ಕಾರ ತಿಂಗಳಿಗೆ ಕೇವಲ ಒಂದೇ ಮಾಸ್ಕ್, ಒಂದೇ ಗ್ಲೌಸ್ ನೀಡಿದೆ.
ರಕ್ಷಣಾ ಪರಿಕರಗಳನ್ನು ನೀಡಲು ಸರ್ಕಾರ ವಿಫಲವಾಗಿದೆ. ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ 4ಸಾವಿರ ಹಣ ನೀಡಲಾಗುತ್ತಿದೆ. ಪ್ರೋತ್ಸಾಹ ಧನವೂ ಸಿಗದೇ ಕೆಲಸ ನಿರ್ವಹಿಸುವಂತಾಗಿದೆ. ಈ ಬಗ್ಗೆ ಹಲವು ಬಾರಿ ಇಲಾಖೆ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಿಲ್ಲ. ಈ ಕೂಡಲೇ ಸರ್ಕಾರ ಆಶಾ ಕಾರ್ಯಕರ್ತೆಯರ ಬೇಡಿಕೆಗಳನ್ನು ಈಡೇರಿಸಬೇಕು. ಮಾಸಿಕ ಗೌರವಧನವನ್ನು 12 ಸಾವಿರ ನಿಗದಿಪಡಿಸಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಜುಲೈ 10ರಿಂದ ಆರೋಗ್ಯ ಸೇವೆ ಸ್ಥಗಿತಗೊಳಿಸಿ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈಗ ಇರುವ ಪ್ರೋತ್ಸಾಹಧನ ಮತ್ತು ಗೌರವ ಧನ ಎರಡನ್ನೂ ಒಟ್ಟಿಗೆ ಸೇರಿಸಿ ಮಾಸಿಕ 12,000ರೂ.ಗೌರವಧನ ನಿಗದಿಪಡಿಸಿ, ಮೇಲಿಂದಮೇಲೆ ಎಲ್ಲಾ ಕಾರ್ಯಕರ್ತೆಯರ ಆರೋಗ್ಯ ತಪಾಸಣೆ ಮಾಡಬೇಕು. ಪಾಸಿಟಿವ್ ಬಂದಿರುವ ಎಲ್ಲರಿಗೂ ಸಂಪೂರ್ಣ ಉಚಿತ ಚಿಕಿತ್ಸೆ ನೀಡಬೇಕು. ಚಿಕಿತ್ಸೆಯ ಅವಧಿಯಲ್ಲಿ ಸಂಪೂರ್ಣ ಗೌರವಧನ ನೀಡಬೇಕು. ಮಾಸ್ಕ್, ಹ್ಯಾಂಡ್ ಗ್ಲೌಸ್, ಫೇಸ್ ಶೀಲ್ಡ್ ಮತ್ತು ಸ್ಯಾನಿಟೈಸರ್ ಇತ್ಯಾದಿಗಳನ್ನು ಸಮಪರ್ಕವಾಗಿ ನೀಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಎಐಟಿಯುಸಿ ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರ ಮೇಟಿ, ಜಿಲ್ಲಾ ಸಮಿತಿ ಅಧ್ಯಕ್ಷರಾದ ಶುಭಮಂಗಳ ,ಆಶಾ ಕಾರ್ಯಕರ್ತೆಯರ ಸಂಘದ ಭಾಗ್ಯ, ಸುನೀತಾ, ಕೋಮಲ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.