ಮೈಸೂರು: ವಾಹನ ಮಾಲೀಕರೇ ಎಚ್ಚರಿಕೆ !ಎಚ್ಚರಿಕೆ !!!

Share

ಮೈಸೂರು ನೀವು ಹೊರಗಡೆ ಏನಾದರೂ ನಿಮ್ಮ ವಾಹನವನ್ನು ನಿಲ್ಲಿಸುತ್ತಿದ್ದೀರಾ? ಹಾಗಿದ್ದಲ್ಲಿ ನೀವು ನಿದ್ದೆ ಮಾಡೋ ಹಾಗೇ ಇಲ್ಲ ಯಾಕೆಂದರೆ ಅದು ಸೇಫ್ ಅಲ್ಲ ಎನ್ನುವಂತಹ ಪರಿಸ್ಥಿತಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಿರ್ಮಾಣವಾಗಿದೆ.
ಮೈಸೂರಿನಲ್ಲಿ ಮನೆಗಳ್ಳರು, ಸರಗಳ್ಳರ ಜೊತೆ ವಾಹನದ ಚಕ್ರಗಳನ್ನು ಕದ್ದೊಯ್ಯುವ ಕಳ್ಳರು ಕೂಡ ತಮ್ಮ ಬಾಲ ಬಿಚ್ಚತೊಡಗಿದ್ದು ವಾಹನದ ಮಾಲಕರಿಗೆ ತಲೆನೋವಾಗಿ ಪರಿಣಮಿಸಿದೆ.
ಹೆಬ್ಬಾಳ ಪೊಲೀಸ್ ಠಾಣೆಯ ಕೂಗಳತೆಯ ದೂರದಲ್ಲಿ ನಿಲ್ಲಿಸಲಾದ ಸಾಮಾನು ಸರಂಜಾಮು ಸಾಗಿಸುವ ಗೂಡ್ಸ್ ಆಟೋದ ಮುಂಬದಿಯ ಎರಡು ಚಕ್ರಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ಮತ್ತೊಂದು ಗೂಡ್ಸ್ ಆಟೋದ ಸ್ಟೆಪ್ನಿ ಯನ್ನು ಕದ್ದೊಯ್ದಿದ್ದಾರೆ. ಬೆಳಿಗ್ಗೆ ವಾಹನದ ಚಾಲಕರು ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ.
ಈ ಕುರಿತು ವಾಹನ ಚಾಲಕರು ಮಾತನಾಡಿ ನಿನ್ನೆ ರಾತ್ರಿ ಕೆಲಸ ಮುಗಿಸಿ 9ಗಂಟೆಗೆ ಇಲ್ಲಿ ವಾಹನ ನಿಲ್ಲಿಸಿ ಹೋಗಿದ್ದೆ. ನಾನು ಯಾವಾಗಲೂ ಇಲ್ಲೇ ನಿಲ್ಲಿಸೋದು, ಇಷ್ಟು ದಿನ ಏನೂ ಆಗಿರಲಿಲ್ಲ, ಆದರೆ ನಿನ್ನೆ ನಿಲ್ಲಿಸಿಹೋಗಿ ಇಂದು ಬೆಳಿಗ್ಗೆ 6ಗಂಟೆಗೆ ಬಂದು ನೋಡಿದಾಗ ಮುಂಭಾಗದ ಎರಡು ಚಕ್ರಗಳನ್ನು ಕಳ್ಳರು ಕದ್ದಿದ್ದಾರೆ. ಪಕ್ಕದಲ್ಲಿ ನಿಲ್ಲಿಸಲಾದ ಮತ್ತೊಂದು ವಾಹನದ ಸ್ಟೆಪ್ನಿ ಸಹ ಕದ್ದಿದ್ದಾರೆ. ಮೊದಲೇ ಕೊರೋನಾ ಸಂಕಷ್ಟದಲ್ಲಿದ್ದೇವೆ. ಈ ರೀತಿ ಕಳ್ಳತನ ಮಾಡಿದರೆ ನಮ್ಮ ಜೀವನ ನಡೆಸುವುದು ಹೇಗೆ? ಪೊಲೀಸ್ ಠಾಣೆ ಇಲ್ಲೇ ಪಕ್ಕದಲ್ಲಿದ್ದರೂ ಕಳ್ಳತನ ನಡೆದಿದೆ. ನಾವು ಯಾರ ಬಳಿ ದೂರುವುದು ಎಂದರು.
ಮೈಸೂರಿನಲ್ಲಿ ದಿನೇ ದಿನೇ ಕಳ್ಳರು ಹೆಚ್ಚುತ್ತಲೇ ಇದ್ದು ಇದಕ್ಕೆ ಕಡಿವಾಣ ಹಾಕಲೇಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಹೆಬ್ಬಾಳು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಎಷ್ಟೋ ಮನೆಗಳವರು ತಮ್ಮ ವಾಹನವನ್ನು ಮನೆಯ ಹೊರಗಡೆ ಮಾಡುವುದು ಕಂಡು ಬರುತ್ತಿದೆ. ಇದೇ ರೀತಿ ಕಳ್ಳತನ ಮುಂದುವರಿದಲ್ಲಿ ನಾಳೆ ಮನೆಯ ಮುಂದೆ ನಿಲ್ಲಿಸಿದ ವಾಹನವೂ ನಾಪತ್ತೆಯಾಗಬಹುದು. ಮೊದಲೇ ಜನರು ಕೊರೋನಾ ಸಂಕಷ್ಟದಲ್ಲಿ ಆರ್ಥಿಕವಾಗಿ ಜರ್ಜರಿತರಾಗಿದ್ದಾರೆ. ಪೊಲೀಸರು ಇನ್ನಾದರೂ ಎಚ್ಚೆತ್ತು ಸಾರ್ವಜನಿಕರ, ಅವರ ಸ್ವತ್ತುಗಳ ರಕ್ಷಣೆಗೆ ಮುಂದಾಗುವುದು ಒಳ್ಳೆಯದು.


Share