ಮೈಸೂರು: ಹಳಿ ತಪ್ಪಿದ ಕೋವಿಡ್ ನಿಯಂತ್ರಣ.

Share

ಅರ್ಥಪೂರ್ಣವಾದ ಸರಳ ದಸರಾ ಆಚರಣೆ: ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್

ಓಣಂ ತಪ್ಪು ಮರುಕಳಿಸಬಾರದು, ಸಿಎಂ ಜತೆ ಚರ್ಚಿಸಿ ಅಂತಿಮ ನಿರ್ಧಾರ

ಮೈಸೂರು ಜಿಲ್ಲೆಯಲ್ಲಿ ಹಳಿ ತಪ್ಪಿದ ಕೋವಿಡ್ ನಿಯಂತ್ರಣ ಕಾರ್ಯವನ್ನು ಮತ್ತೆ ಹಳಿಗೆ ತರಲು ಸೂಚನೆ

ಮೈಸೂರು, ಅಕ್ಟೋಬರ್ 5, ಸೋಮವಾರ

ಕೊರೋನಾ ಸೋಂಕು ಜಿಲ್ಲೆಯಲ್ಲಿ ತೀವ್ರಗತಿಯಲ್ಲಿ ಹರಡುತ್ತಿರುವ ಹಿನ್ನೆಲೆಯಲ್ಲಿ ಅರ್ಥಪೂರ್ಣವಾದ ಸರಳ ದಸರಾ ಆಚರಣೆಗೆ ಸರ್ಕಾರ ನಿರ್ಧರಿಸಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ಮೈಸೂರು ಜಿಲ್ಲೆಯಲ್ಲಿ ಕೋವಿಡ್ ನಿರ್ವಹಣೆ ಸಂಬಂಧ ನಡೆದ ಜಿಲ್ಲಾ ಮಟ್ಟದ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನೆರೆಯ ಕೇರಳದಲ್ಲಿ ನಿಯಂತ್ರಣದಲ್ಲಿದ್ದ ಕೋವಿಡ್, ಓಣಂ ಆಚರಣೆಗೆ ಮುಕ್ತ ಅವಕಾಶ ಕೊಟ್ಟ ಬಳಿಕ ಹೆಚ್ಚಿದೆ. ಪ್ರತಿದಿನ ಏಳೆಂಟು ಸಾವಿರ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಅದೇ ತಪ್ಪು ಮೈಸೂರಿನಲ್ಲಿ ಮರುಕಳಿಸಬಾರದು ಎಂಬ ಕಾರಣಕ್ಕೆ ಸರಳ ದಸರಾ ಆಚರಣೆಗೆ ತಜ್ಞರು ಮತ್ತು ಅಧಿಕಾರಿಗಳು ಸಲಹೆ ನೀಡಿದ್ದಾರೆ. ಮುಖ್ಯಮಂತ್ರಿಗಳು, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಆರೋಗ್ಯ ಸಚಿವರ ಜೊತೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು,” ಎಂದು ತಿಳಿಸಿದರು.

“ಮೈಸೂರಿನಲ್ಲಿ ಮೊದಲು ಸೋಂಕಿತರು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಸಾವು ಸಂಭವಿಸಿರಲಿಲ್ಲ. ಈ ಜಿಲ್ಲೆ ಇಡೀ ರಾಜ್ಯಕ್ಕೆ ಮಾದರಿಯಾಗಿದ್ದು, ಈಗ ನಿಯಂತ್ರಣ ತಪ್ಪಿದೆ. ಅದಕ್ಕಾಗಿ ತುರ್ತಾಗಿ ನಗರಕ್ಕೆ ಬಂದು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸೂಚನೆ ನೀಡಲಾಗಿದೆ. ಹೊಸದಾಗಿ ಬಂದಿರುವ ಜಿಲ್ಲಾಧಿಕಾರಿ, ಸೋಂಕು ನಿಯಂತ್ರಣಕ್ಕೆ ತರಲು ಎರಡು ವಾರಗಳ ಕಾಲಾವಕಾಶ ಕೇಳಿದ್ದಾರೆ,” ಎಂದು ವಿವರಿಸಿದರು.

“ಸದ್ಯಕ್ಕೆ ರಾಜ್ಯದಲ್ಲಿ ವೆಂಟಿಲೇಟರ್ ಕೊರತೆ ಇಲ್ಲ. ರಾಜ್ಯಾದ್ಯಂತ 33 ಸಾವಿರ ಆಕ್ಸಿಜನ್ ಸಹಿತ ಹಾಸಿಗೆಗಳನ್ನು ಸಜ್ಜುಗೊಳಿಸಲಾಗುತ್ತಿದೆ. ಮೈಸೂರು ಜಿಲ್ಲೆಯ ಎಲ್ಲ ಹಿರಿಯ ನಾಗರಿಕರನ್ನು ಪರೀಕ್ಷೆಗೊಳಪಡಿಸುವಂತೆ ಸೂಚಿಸಲಾಗಿದೆ,” ಎಂದು ತಿಳಿಸಿದರು.

ಮಾಸ್ಕ್ ಧರಿಸದವರಿಗೆ ದಂಡ ವಿಧಿಸುವ ಕುರಿತು ಮಾತನಾಡಿದ ಸಚಿವರು, “ಕಳೆದ 6 ತಿಂಗಳ ಕಾಲ ಅರಿವು ಮೂಡಿಸುವ ಕೆಲಸ ಮಾಡಿದ್ದರೂ ಜನರು ನಿರ್ಲಕ್ಷ್ಯ ತೋರಿದರೆ ಏನು ಮಾಡಬೇಕು?” ಎಂದು ಪ್ರಶ್ನಿಸಿದರು.

ಸಭೆಯಲ್ಲಿ ಮಾಜಿ ಸಚಿವ ಎಚ್.ವಿಶ್ವನಾಥ್, ಶಾಸಕರಾದ ನಾಗೇಂದ್ರ, ಮರಿತಿಬ್ಬೇಗೌಡ, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಉಪಸ್ಥಿತರಿದ್ದರು.


Share