ಮೈಸೂರ್ ಪತ್ರಿಕೆಯ: ಸುದ್ದಿ ಗವಾಕ್ಷಿ

ಔಷಧಿ ಸಸಿಗಳನ್ನು ನೆಡುವ ಮೂಲಕ ಪರಿಸರ ದಿನಾಚರಣೆ
ಮೈಸೂರು, ಜೂನ್.2(ಕರ್ನಾಟಕ ವಾರ್ತೆ):- ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದ ಮೇರೆಗೆ ಜೂನ್ 5 ರಂದು ಬೆಳಿಗ್ಗೆ 9.30 ಗಂಟೆಗೆ ವಿಶ್ವ ಪರಿಸರ ದಿನಾಚರಣೆಯನ್ನು ಜಯನಗರದ ಮಳಲವಾಡಿಯಲ್ಲಿರುವ ನ್ಯಾಯಾಲಯದ ಆವರಣದಲ್ಲಿ, ವಿಶೇಷವಾಗಿ ಔಷಧಿ ಗುಣವುಳ್ಳ ಹಾಗೂ ಆಯುರ್ವೇದಕ್ಕೆ ಸಂಬಂಧಿಸಿದ ಸಸಿಗಳನ್ನು ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಸದರಿ ಕಾರ್ಯಕ್ರಮವನ್ನು ಮೈಸೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಗೌರವಾನ್ವಿತ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಗೌರವಾನ್ವಿತ ರಾಮಚಂದ್ರ ಡಿ. ಹುದ್ದಾರ ಅವರು ಉದ್ಘಾಟಿಸಲಿದ್ದಾರೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳಾದ ಬಿ.ಪಿ.ದೇವಮಾನೆ ಅವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಜೂನ್ 30ರ ವರೆಗೆ ನಿಷೇಧಾಜ್ಞೆ
     ಮೈಸೂರು, ಜೂನ್.02.(ಕರ್ನಾಟಕ ವಾರ್ತೆ):- ಕೊರೊನಾ ಹರಡುವಿಕೆ ನಿಯಂತ್ರಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಆದೇಶದನ್ವಯ ಮುಂಜಾಗ್ರತಾ ಕ್ರಮವಾಗಿ ನಗರದಲ್ಲಿ ಜೂನ್ 30 ವರೆಗೆ ಪ್ರತಿದಿನ ರಾತ್ರಿ 9 ರಿಂದ ಬೆಳಿಗ್ಗೆ 5 ಗಂಟೆಯ ವರೆಗೆ ಸೆಕ್ಸನ್ 144 ನಿಷೇಧಾಜ್ಞೆ  ಮಾಡಿದ್ದು, ಅಗತ್ಯ ಸೇವೆಗಳಿಗೆ ಹೊರತುಪಡಿಸಿ ಉಳಿದ ಎಲ್ಲಾ ರೀತಿಯ ಸಾರ್ವಜನಿಕ ಸಂಚಾರವನ್ನು ನಿರ್ಬಂಧಿಸಿ ನಗರ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ.
       ಲಾಕ್‍ಡೌನ್ ಅವಧಿಯ ವ್ಯಾಪಾರ ಮಳಿಗೆಗಳ ಮಳಿಗೆದಾರರು ಪ್ರತಿ ಗ್ರಾಹಕರ ಮಧ್ಯೆ 6 ಅಡಿ ಅಂತರ ಕಾಯ್ದುಕೊಳ್ಳುವಂತೆ ನಿಗಾ ವಹಿಸುವುದು ಹಾಗೂ 5 ಕ್ಕಿಂತ ಹೆಚ್ಚು ಗ್ರಾಹಕರು ಒಮ್ಮೆಲೇ ಸೇರದಂತೆ ಜವಾಬ್ದಾರಿ ವಹಿಸುವುದು. ಇದು ತಪ್ಪಿದಲ್ಲಿ ಮಳಿಗೆದಾರರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ಪ್ರತಿದಿನ ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 5 ಗಂಟೆಯ ಅವಧಿಯಲ್ಲಿ ಸಾರ್ವಜನಿಕರು ಅನಗತ್ಯವಾಗಿ ಓಡಾಡುವುದನ್ನು ನಿಷೇಧಿಸಲಾಗಿದೆ.  
      ಯಾವುದೇ ಸಾಮಗ್ರಿಗಳನ್ನು ಕೊಳ್ಳಲು ಬರುವ ಗ್ರಾಹಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸಾರ್ವಜನಿಕರು ಮತ್ತು ಮಳಿಗೆದಾರರು ತಮ್ಮ ದಿನನಿತ್ಯದ ಕೆಲಸ ಹಾಗೂ ವ್ಯಾವಹಾರವನ್ನು ರಾತ್ರಿ 9 ಗಂಟೆಯೊಳಗೆ ಪೂರ್ಣಗೊಳಿಸಿ, ನಿಷೇಧಾಜ್ಞೆ ಪ್ರಾರಂಭದ ಸಮಯಕ್ಕೆ ಮೊದಲೇ ಮನೆಗಳಲ್ಲಿರತಕ್ಕದ್ದು ಹಾಗೂ ಕೆಲಸ ಮಾಡುವ ಸ್ಥಳದಲ್ಲಿ ಕಡ್ಡಾಯವಾಗಿ ಶುಚಿತ್ವ, ಸಾರ್ವಜನಿಕ ಅಂತರ ಕಾಯ್ದುಕೊಳ್ಳಬೇಕು. ಈ ಸೂಚನೆಯನ್ನು ಪಾಲಿಸದೆ ಇರುವುದು ಕಂಡುಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್ ಆಯುಕ್ತರಾದ ಡಾ. ಚಂದ್ರಗುಪ್ತ ಅವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ವಿದ್ಯುತ್ ನಿಲುಗಡೆ
     ಮೈಸೂರು, ಜೂನ್.1(ಕರ್ನಾಟಕ ವಾರ್ತೆ):- ಚಾಮುಂಡೇಶ್ವÀರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ವತಿಯಿಂದ ಜೂನ್ 03 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯ ವರಗೆ 66/11 ಎಫ್.ಟಿ.ಎಸ್ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಹೊಮ್ಮುವ 11 ಕೆ.ವಿ. ಪೀಪಲ್ಸ್ ಪಾರ್ಕ್ ಫೀಡರ್‍ನಲ್ಲಿ ತುರ್ತು ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಳ್ಳಲಾಗಿದೆ.
     ಈ ಹಿನ್ನೆಲೆ ಸೆಂಟ್ ಮೇರಿಸ್ ರಸ್ತೆ 12 ಮತ್ತು 13ನೇ ಕ್ರಾಸ್, ಕರುಣಾಪುರ, ಆರ್.ಟಿ. ವಿಭಾಗ, ಬೃಹತ್ ಕಾಮಗಾರಿ ವಿಭಾಗ ಹಾಗೂ ಸುತ್ತ-ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಎನ್.ಆರ್.ಮೊಹಲ್ಲಾ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.