ರಸ್ತೆ ಬದಿಯ ಹಸಿರು ಹುಲ್ಲು ಕೊಯ್ದು ಗೋಶಾಲೆಗೆ ನೀಡಿ ಶ್ರೀ ವಿಶ್ವ ಪ್ರಸನ್ನ ತೀರ್ಥ ಆಶಯ*

 

 

*ರಸ್ತೆ ಬದಿಯ ಹಸಿರು ಹುಲ್ಲು ಕೊಯ್ದು ಗೋಶಾಲೆಗೆ ನೀಡಿ ಶ್ರೀ ವಿಶ್ವ ಪ್ರಸನ್ನ ತೀರ್ಥ ಆಶಯ*

ಮೈಸೂರು:ಬಹುತೇಕ ನಾಡಿನೆಲ್ಲೆಡೆ ಒಳ್ಳೆಯ ಮಳೆಯಾಗಿ ಪ್ರಕೃತಿ ಹಸಿರಿನಿಂದ ಮೈದುಂಬಿಕೊಂಡಿದೆ. ಶಾಲೆ ಕಚೇರಿಗಳ ಆವರಣ ತೋಟಗಳು, ರಸ್ತೆ ಬದಿಗಳಲ್ಲೂ ಸಮೃದ್ಧ ಹಸಿರು ಹುಲ್ಲು ಬೆಳೆದಿದೆ . ಈ ಹುಲ್ಲನ್ನು ಊರಿನ ಸಂಘಟನೆಗಳು ಯುವಕ ಮಂಡಲಗಳು ಸ್ವಯಂಸೇವಾ ಸಂಸ್ಥೆ, ಭಜನಾ ಮಂಡಳಿಗಳ ಸದಸ್ಯರು ವಾರಕ್ಕೊಂದು ದಿನ ಕನಿಷ್ಠ ಒಂದು ಘಂಟೆ ಶ್ರಮದಾನದ ಮೂಲಕ ಕಟಾವ್ ಮಾಡಿ ಸಮೀಪದ ಗೋಶಾಲೆಗಳು, ಮಠ ದೇವಸ್ಥಾನಗಳಲ್ಲಿರುವ ಹಸುಗಳಿಗೆ ನೀಡುವಂತಾಗಲಿ ಎಂದು ನೀಲಾವರ ಗೋಶಾಲೆಯ ರೂವಾರಿಗಳಾದ ಉಡುಪಿಯ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಆಶಯ ವ್ಯಕ್ತಪಡಿಸಿದ್ದಾರೆ.
ಹುಲ್ಲನ್ನು ರವಾನಿಸಲು ಊರಿನ ಯಾರಾದರೂ ಸಹೃದಯ ದಾನಿಗಳ ನೆರವು ಪಡೆಯಬಹುದು, ಇದರಿಂದಾಗಿ ರಸ್ತೆಬದಿಯ ಅಥವಾ ತೋಟ ಇತ್ಯಾದಿಗಳ ಸ್ವಚ್ಛತೆಯೂ ಆಗುತ್ತದೆ ಜೊತೆಗೆ ಗೋಶಾಲೆಗಳ ಗೋವುಗಳಿಗೆ ಸಮೃದ್ಧ ಹಸಿರು ಹುಲ್ಲು ಒದಗಿಸಿದ ಪುಣ್ಯವೂ ನಮ್ಮದಾಗುತ್ತದೆ ಎಂದ ಶ್ರೀಗಳು, ಈಗಾಗಲೇ ಕೆಲವು ಕಡೆಗಳಲ್ಲಿ ಗೋವಿಗಾಗಿ ಮೇವು ಅಭಿಯಾನ ನಡೆಯುತ್ತಿವೆ. ಗೋರಕ್ಷಣೆಯ ಕಾರ್ಯದಲ್ಲಿ ಈ ಮೂಲಕವೂ ಎಲ್ಲರೂ ತೊಡಗಿಕೊಳ್ಳಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.