ರಾಜ್ಯದಲ್ಲಿ ಕೊರೋನಾ ತಡೆಯುವಲ್ಲಿ ಸರ್ಕಾರ ವಿಫಲ

Share

ಕೊರೋನಾ ಹರಡುವಿಕೆ ತಡೆಯುವಲ್ಲಿ ಸರ್ಕಾರ ಯಶಸ್ವಿಯಾಗಿಲ್ಲ. ಈ ನಡುವೆ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಮಾಡಿದೆ. ಇದು ರಾಜ್ಯಕ್ಕೆ ದೊಡ್ಡ ಆಘಾತ ಎಂದು ಮಾಜಿ ಸಚಿವ ಡಾ.ಹೆಚ್.ಸಿ. ಮಹದೇವಪ್ಪ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಕಛೇರಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ರೈತರ ಬಗ್ಗೆ ಯೋಚನೆ ಮಾಡದೆ ಬಿಜೆಪಿ ಸರ್ಕಾರ ಈ ನಿರ್ಧಾರ ಮಾಡಿದೆ. 79(A) ರದ್ದು ಪಡಿಸುವ ನಿರ್ಧಾರ ಮಾಡಿದೆ. ಯಾರು ಬೇಕಾದರೂ ಕೃಷಿ ಭೂಮಿ ಖರೀದಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಇದು ರೈತ ವಿರೋಧಿ ನಿಲುವು. ಈ ಬಗ್ಗೆ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸಭೆ ನಡೆಸಿದೆ. ಈ ಬಗ್ಗೆ ಹೋರಾಟ ಮಾಡಲಿದ್ದೇವೆ ಎಂದರು.

ಉಳುವವನೇ ಭೂಮಿಯ ಒಡೆಯ ಮಾಡುವ ಬದಲು ಉಳ್ಳವನನ್ನೇ ಭೂಮಿಯ ಒಡೆಯನನ್ನಾಗಿ ಮಾಡಲು ಹೊರಟಿದೆ. ಭೂ ಸುಧಾರಣಾ ಕಾಯ್ದೆಯ ಕಲಂ 79 (A) (B) ಮತ್ತು ಕಲಂ 80 ಕಾನೂನುಗಳು ಕೃಷಿ ಭೂಮಿಯನ್ನು ಕೃಷಿಯೇತರ ವ್ಯಕ್ತಿಗಳು ಕೊಂಡುಕೊಳ್ಳುವ ಹಾಗಿಲ್ಲ. ಈ ಕಾಯ್ದೆ ತಿದ್ದುಪಡಿಯಿಂದ ಕೃಷಿ ಭೂಮಿಯನ್ನು ಯಾರು ಬೇಕಾದರೂ ಖರೀದಸಲು ಅನುಕೂಲವಾಗಲಿದೆ. ರಾಜ್ಯದಲ್ಲಿ ಲಕ್ಷಾಂತರ ಜನರು ಕೃಷಿಯನ್ನೆ ಅವಲಂಬಿಸಿದ್ದಾರೆ. ರಾಜ್ಯದಲ್ಲಿ ಲಕ್ಷಾಂತರ ದಲಿತ ಹಾಗೂ ಪರಿಶಿಷ್ಟ ವರ್ಗದ ಕೋಟ್ಯಂತರ ಜನರು ಕೃಷಿಯನ್ನೆ ಅವಲಂಬಿಸಿದ್ದಾರೆ. ಈ ಕಾಯ್ದೆ ತಿದ್ದುಪಡಿ ರೈತರಿಗೆ ಮರಣ ಶಾಸನವಾಗಲಿದೆ. ಇದು ಆರ್ಥಿಕತೆಗೆ ಕೊಡಲಿ ಪೆಟ್ಟು ಬೀಳುವ ಕಾಯಿದೆಯಾಗಲಿದೆ ಎನ್ನುವ ಮೂಲಕ ಕಾಯ್ದೆ ತಿದ್ದುಪಡಿಯ ಸುಗ್ರೀವಾಜ್ಞೆ ಕುರಿತು ಆಕ್ಷೇಪ ವ್ಯಕ್ತಪಡಿಸಿದರು.

ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನಿಂದ ಊಳುವವನೇ ಭೂಮಿಯ ಒಡೆಯ ಅನ್ನೋ ಹೋರಾಟ ಆರಂಭವಾಯಿತು. ಆದರೆ ಅದೇ ಜಿಲ್ಲೆಯಿಂದ ಬಂದ ಸಿಎಂ ಇಂತ ನಿರ್ಧಾರ ಮಾಡಿರೋದು ದುರಂತ. ಭೂಮಿ ರೈತನಿಗೆ ಒಂದು ಸಾಮಾಜಿಕ ಸ್ಥಾನಮಾನ ತಂದುಕೊಡುತ್ತೆ. ಇದನ್ನು ಸ್ವತಃ ಅಂಬೇಡ್ಕರ್ ಹೇಳಿದ್ದಾರೆ. ಪ್ರಧಾನಿ ಮೋದಿ ಕೃಷಿಕರ ಆದಾಯ ದ್ವಿಗುಣ ಮಾಡಿ ಎಂದು ಹೇಳ್ತಿದ್ದಾರೆ. ದೇಶದ ಯಾವ ನ್ಯಾಯಾಲಯವು ಭೂ ಕಾಯ್ದೆಯ ಬಗ್ಗೆ ಯಾವುದೇ ಆದೇಶ ನೀಡಿಲ್ಲ. ಆದರೂ ಸರ್ಕಾರ ಈ ಬಗ್ಗೆ ಚರ್ಚೆ ನಡೆಸದೆಯೇ ನಿರ್ಧಾರ ಮಾಡಿದೆ. ವಸಾಹತು ಶಾಯಿಗಳ ವಿರುದ್ದ ಹೋರಾಟ ಮಾಡಿದ್ದ ನಾಡಿನಲ್ಲಿ ಮತ್ತೆ ಅವರಿಗೆ ಭೂಮಿ ಕೊಡ್ತಿದ್ದಾರೆ. ಇದು ರೈತರಿಗೆ ಮರಣ ಶಾಸನ ಎಂದರು.

ಸುದ್ದಿಗೋಷ್ಠಿಯಲ್ಲಿ ನಗರಾಧ್ಯಕ್ಷ ಆರ್,ಮೂರ್ತಿ, ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯ್ ಕುಮಾರ್, ಕಾಂಗ್ರೆಸ್ ವಕ್ತಾರ ಎಂ ಲಕ್ಷ್ಮಣ್, ಮುಖಂಡರಾದ ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು.


Share