ಭೂಸುಧಾರಣೆ ಕಾಯ್ದೆಯ ಕರಡು ಪ್ರತಿಯನ್ನು ಸುಟ್ಟು ಹಾಕುವುದರಮೂಲಕ ಮೈಸೂರು ನಗರದ ನ್ಯಾಯ ನ್ಯಾಯಾಲಯದ ಮುಂದೆ ಪ್ರತಿಭಟನೆ ನಡೆಸಲಾಯಿತು ಪ್ರತಿಭಟನೆಯ ನಂತರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ನಾಗೇಂದ್ರ ಅವರು ಮಾತನಾಡಿದರು
ರೈತಕುಲವನ್ನೇ ನಿರ್ನಾಮ ಮಾಡುವ ಭೂ ಸುಧಾರಣೆ ಕಾಯ್ದೆ ತಿದ್ದುಪಡಿಯನ್ನು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಉಗ್ರವಾಗಿ ಪ್ರತಿಭಟಿಸಿ ಬೀದಿಗೆ ಇಳಿಯಲಿದೆ. ಜೈಲು ಭರೋ ಕಾರ್ಯಕ್ರಮವನ್ನು ರೂಪಿಸಲಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಬಡಗಲಪುರ ನಾಗೇಂದ್ರ ಎಚ್ಚರಿಕೆ ನೀಡಿದರು.
ಮೈಸೂರು ಪತ್ರಕರ್ತರ ಭವನದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕರ್ನಾಟಕದ ಭೂ ಸುಧಾರಣೆ ಕಾಯ್ದೆ ಜನಪರವಾದದ್ದು. ಈ ಕಾಯ್ದೆಯ ಕಲಂ 79ಎ,ಬಿ,ಸಿ ಮತ್ತು 80ನ್ನು ತೆಗೆದು ಹಾಕಿದರೆ ಸಂಪೂರ್ಣ ಭೂ-ಸುಧಾರಣೆ ಕಾಯ್ದೆಯೇ ರದ್ದಾಗುತ್ತದೆ. ಇನ್ನು ಇದರ ಅಸ್ತಿತ್ವದ ಅವಶ್ಯಕತೆ ಇರುವುದಿಲ್ಲ. ಯಡಿಯೂರಪ್ಪನವರು ರೈತ ಹೋರಾಟದಿಂದ ಬಂದವರು. ಗೇಣಿದಾರರ ಪರ ಹೋರಾಟದಲ್ಲಿ ಪಾಲ್ಗೊಂಡಿದ್ದವರು. ರೈತರ ಹಿತಾಸಕ್ತಿ ಕಾಯುವುದಾಗಿ ಹೇಳುತ್ತಲೇ ಈ ಕಾಯ್ದೆಗೆ ತಿದ್ದುಪಡಿ ತಂದು ರೈತ ಕುಲಕ್ಕೆ ವಿಷ ಹಾಕಿ ಸಂಪೂರ್ಣ ಅವರನ್ನು ನಿರ್ವಂಶ ಮಾಡುತ್ತಿದ್ದಾರೆ. ರೈತರ ಶಾಪ ಯಡಿಯೂರಪ್ಪನವರನ್ನು ಕಾಡದೇ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಯಡಿಯೂರಪ್ಪನವರಿಗೆ ಬಹಿರಂಗ ಪತ್ರವನ್ನು ಬರೆಯಲಾಗಿದ್ದು ಅದನ್ನುಕೂಡ ಬಿಡುಗಡೆ ಮಾಡಲಾಗಿದೆ. ಕಾಯ್ದೆಯ ತಿದ್ದುಪಡಿ ತರಬೇಕಾದರೆ ಸಮರ್ಥನೀಯ ಜನ ಒಳಿತಿನ ಉದ್ದೇಶ ಇರಬೇಕು. ಆದರೆ ಕರಡಿನಲ್ಲಿ ನೀಡಿರುವ ಕಾರಣಗಳು ಅತ್ಯಂತ ಬಾಲಿಶವಾಗಿದ್ದು ಕಂಪೆನಿಗಳಿಗೆ , ಬಂಡವಾಳಶಾಹಿಗಳಿಗೆ ಭೂಮಿಯನ್ನು ಒಪ್ಪಿಸುವುದೇ ಇದರ ಒಳ ಉದ್ದೇಶವಾಗಿದೆ. ಈ ತಿದ್ದುಪಡಿ ಕಾಯ್ದೆ ಜಾರಿಗೆ ಬಂದರೆ ರಾಜ್ಯದಲ್ಲಿ ಸಣ್ಣ ಹಿಡುವಳಿ ರೈತರೇ ಜಾಸ್ತಿ ಇದ್ದು ಅವರ ಸಂಪೂರ್ಣ ಬದುಕು ಬೀದಿಗೆ ಬೀಳಲಿದೆ. ಅವರ ಅಸ್ತಿತ್ವವವೇ ಇರುವುದಿಲ್ಲ. ಉದ್ಯೋಗಕ್ಕಾಗಿ ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಲಿದೆ. ದಲಿತರು ಅತ್ಯಂತ ಸಂಕಷ್ಟಕ್ಕೀಡಾಗುತ್ತಾರೆ. ರೈತಾಪಿ ಕೃಷಿ ಸಂಸ್ಕೃತಿ ಮಾಯವಾಗಿ ಬಂಡವಾಳಿಗರ ಕೃಷಿ ಸಂಸ್ಕೃತಿ ಬೆಳೆಯುತ್ತದೆ. ಆಹಾರ ಸಾರ್ವಭೌಮತ್ವಕ್ಕೆ ಪೆಟ್ಟು ಬಿದ್ದು ಆಹಾರ ಭದ್ರತೆಯ ಹಕ್ಕು ನಾಶವಾಗುತ್ತದೆ. ಆಹಾರಕ್ಕಾಗಿ ಭಿಕ್ಷೆ ಬೇಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಗ್ರಾಹಕರ ಮೇಲೂ ಹೊಡೆತ ಬೀಳುತ್ತದೆ. ಸಂಪತ್ತು ಸೃಷ್ಟಿಸಿರುವ ಉದ್ಯೋಗ ನಾಶವಾಗುತ್ತದೆ. ಬಂಡವಾಳಶಾಹಿಗಳು ಕುಲಾಂತರಿ ಬೀಜಗಳ ಬಳಕೆ ರಾಸಾಯನಿಕ ಕೃಷಿ ಮಾನೋಕಲ್ಚರ್ ಗೆಒತ್ತು ನೀಡಿ ಇಡೀ ಪರಿಸರವೇ ನಾಶವಾಗುತ್ತದೆ. ಇದರಿಂದ ಆಹಾರ ಸಂಸ್ಕೃತಿಗೆ ಪೆಟ್ಟು ಬೀಳುತ್ತದೆ ಎಂದ ಎಚ್ಚರಿಸಿದರಲ್ಲದೇ ಇದರ ವಿರುದ್ಧ ಬೃಹತ್ ಚಳುವಳಿ ರೂಪಿಸಲಾಗುವುದು ಎಂದರು.
ಸೋಮವಾರದಿಂದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ
ಕಾಯ್ದೆ ತಿದ್ದುಪಡಿ ವಿರುದ್ಧ ಜೂ.15ರಂದು ಸೋಮವಾರ ಬೆಳಿಗ್ಗೆ 11ರಿಂದ 12ಗಂಟೆಯವರೆಗೆ ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾಧಿಕಾರಿಗಳ ಕಛೇರಿ ಎದುರು ಧರಣಿ ನಡೆಸಿ ಉದ್ದೇಶಿತ ತಿದ್ದುಪಡಿ ಕರಡನ್ನು ಸುಡಲಾಗುವುದು. ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ಪತ್ರವನ್ನು ಜಿಲ್ಲಾಧಿಕಾರಿಗಳ ಮುಖಾಂತರ ಕಳುಹಿಸಲಾಗುವುದು ಎಂದರು.
ಈ ತಿಂಗಳ 27ರಿಂದ 30ರವರೆಗೆ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿಯ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಸೇರಿ 1000ಪಂಚಾಯತ್ ಕೇಂದ್ರದಲ್ಲಿ ಈ ತಿದ್ದುಪಡಿ ಕಾಯ್ದೆ ಎಪಿಎಂಸಿ ತಿದ್ದುಪಡಿ ಕಾಯ್ದೆ. ವಿದ್ಯುತ್ ಖಾಸಗೀಕರಣ ಇತರೆ ವಿರೋಧ ನೀತಿಗಳ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.
ತಮಿಳುನಾಡಿಗೆ ಕಾವೇರಿ ನೀರಿ ಹರಿಸುವುದು ಬೇಡ
ಕಾವೇರಿ ಜಲಾನಯನದ ಪ್ರದೇಶದ ಅಣೆಕಟ್ಟೆಗಳಲ್ಲಿ ನೀರಿನ ಶೇಖರಣೆ ಕಡಿಮೆ ಇದ್ದು ಬೆಳೆದಿರುವ ಅಚ್ಚುಕಟ್ಟಿಗೆ ನೀರನ್ನು ಕಂತು ರೂಪದಲ್ಲಿ ನೀಡಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಕಾವೇರಿ ಪ್ರಾಧಿಕಾರದ ನಿರ್ದೇಶನದ ಮೇರೆಗೆ ನೀರು ಹರಿಸಿದರೆ ಈ ಭಾಗದಲ್ಲಿ ಕುಡಿಯುವ ನೀರಿಗೂ ಸಮಸ್ಯೆ ತಲೆದೋರುತ್ತದೆ. ಈ ಕಾರಣ ರಾಜ್ಯ ಸರ್ಕಾರ ನೀರು ಹರಿಸದೇ ನಮ್ಮ ಸಂಕಷ್ಟವನ್ನು ಪ್ರಾಧಿಕಾರದ ಮುಂದೆ ಹೇಳಬೇಕೆಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಹೆಚ್.ಸಿ.ಲೋಕೇಶ್ ರಾಜೇ ಅರಸ್, ಹೊಸೂರು ಕುಮಾರ್, ಸರಗೂರು ನಟರಾಜ್ ಮತ್ತಿತರರು ಉಪಸ್ಥಿತರಿದ್ದರು