ವರ್ಗಾವಣೆ ಬಗ್ಗೆ ಸಾರಾ ಮಹೇಶ್ ಗಂಭೀರ ಆರೋಪ

ಮೈಸೂರಿನಲ್ಲಿ ವರ್ಗಾವಣೆ ದಂಧೆ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೂ ಬಾರದೆ ನಡೆಯುತ್ತಿದೆ ಎಂದು ಶಾಸಕ ಸಾ.ರಾ.ಮಹೇಶ್ ಗಂಭೀರ ಆರೋಪಿಸಿದರು.

ಮೈಸೂರಿನ ತಮ್ಮ ಕಛೇರಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಮೈಸೂರು ಜಿಲ್ಲೆಗೆ ಇಬ್ಬರು ಉಸ್ತುವಾರಿ ಸಚಿವರಿದ್ದಾರೆ. ಒಬ್ಬರು ಆ್ಯಕ್ಟಿಂಗ್, ಮತ್ತೊಬ್ಬರು ಅಧಿಕೃತ. ಅಬಕಾರಿ ಡಿಸಿ ಮೈಸೂರಿಗೆ ಬಂದು ಕೇವಲ 9 ತಿಂಗಳಾಗಿತ್ತು. ಏಕಾಏಕಿ ಯಾಕೆ ವರ್ಗಾವಣೆ ಮಾಡಲಾಯ್ತು ? ಯಾರು ಪತ್ರ ವ್ಯವಹಾರ ಮಾಡಿದ್ರು ? ಆ ಪ್ರಕರಣದಲ್ಲಿ ಸುಮಾರು 2 ಕೋಟಿ ರೂ. ವ್ಯವಹಾರ ನಡೆದಿರುವ ಮಾಹಿತಿ ಇದೆ. ಲೋಕೋಪಯೋಗಿ ಇಲಾಖೆ ಎಇ ಹುದ್ದೆಗೆ ಇತ್ತೀಚೆಗೆ ನೇಮಕವಾಗಿದೆ. 50 ಲಕ್ಷ ರೂ. ಹಣ ಯಾರಿಗೆ ಹೋಗಿದೆ ಎಂದು ಪ್ರಶ್ನಿಸಿದರು. ಒಂದುಕಡೆ ಕೊರೋನಾ ವಾರಿಯರ್‌ಗೆ ಸನ್ಮಾನ ಮಾಡ್ತೀರಿ. ಮತ್ತೊಂದು ಕಡೆ ಅವರನ್ನು ವರ್ಗಾವಣೆ ಮಾಡಿದ್ದೀರಿ. ಅವರು ವರ್ಗಾವಣೆ ಪ್ರಶ್ನಿಸಿ ಕೆಎಟಿಗೆ ಹೋಗಿದ್ದಾರೆ.ಇದರಲ್ಲಿ ಎಷ್ಟು ದುಡ್ಡಿನ ವ್ಯವಹಾರ ನಡೆದಿದೆ? ವರ್ಗಾವಣೆ ಮಾಡಿಸಿದ ಮಹಾಶಯ ಜನರ ಮುಂದೆ ಬಂದು ಹೇಳಲಿ. ಅಬಕಾರಿ ಇಲಾಖೆ ವರ್ಗಾವಣೆಯಲ್ಲಿ 2 ಕೋಟಿ ವ್ಯವಹಾರ ನಡೆದಿದೆ.ಲೋಕೋಪಯೋಗಿ ಇಲಾಖೆ ವರ್ಗಾವಣೆಯಲ್ಲಿ 50 ಲಕ್ಷ ವ್ಯವಹಾರ ನಡೆದಿದೆ. ಪಾಪ ಇದ್ಯಾವುದು ಉಸ್ತುವಾರಿ ಸಚಿವರೆ ಗೊತ್ತೇ ಇಲ್ಲ ಎಂದು ವ್ಯಂಗ್ಯವಾಡಿದರು.

ಹುಣಸೂರಿನ ಜನ ಅವರನ್ನು 90 ಸಾವಿರ ಮತಗಳ ಅಂತರದಲ್ಲಿ ಗೆಲ್ಲಿಸಿದ್ದರು. ಈಗ ಅದರ ಅರ್ಧದಷ್ಟು ಮತಗಳಿಂದ ಸೋಲಿಸಿದ್ದಾರೆ. ಆ ಮಹಾಶಯನ ಹೆಸರು ನಾನು ಹೇಳುವುದಿಲ್ಲ. ರೈಸ್ ಮಿಲ್‌ಗಳಿಂದ ಲಾರಿಗಟ್ಟಲೇ ಅಕ್ಕಿ ಕಲೆಕ್ಟ್ ಮಾಡಿದ್ದಾರೆ. ಅದು ಎಲ್ಲಿಗೆ ಹೋಯಿತು ಅಂತ ಬಹಿರಂಗ ಪಡಿಸಿ. ಈ ಬಗ್ಗೆ ಜಿಲ್ಲಾಧಿಕಾರಿಗೂ ಪತ್ರ ಬರೆದಿದ್ದೇನೆ. ಮಾಹಿತಿ ಬಹಿರಂಗಪಡಿಸದೇ ಇದ್ದರೆ ದಾಖಲೆ ಬಿಡುಗಡೆ ಮಾಡುತ್ತೇನೆ ಎಂದು ಬಾಂಬ್ ಸಿಡಿಸಿದರು.

ಸಮ್ಮಿಶ್ರ ಸರ್ಕಾರದ ಇದ್ದಿದ್ರೆ 50 ಸಾವಿರ ಜನ ಸಾಯಬೇಕಿತ್ತು ಎಂಬ ವಿಶ್ವನಾಥ್ ಹೇಳಿಕೆ ವಿಚಾರಕ್ಕೆ ಹೆಚ್.ವಿಶ್ವನಾಥ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು ವಿಶ್ವನಾಥ್ ಹೆಸರು ಹೇಳದೆ ವಾಗ್ದಾಳಿ ನಡೆಸಿದರು. ಮಾಜಿ ಸಿಎಂಗಳ ಬಗ್ಗೆ ಮಾತನಾಡುವಾಗ ಪದಬಳಕೆ ಸರಿಯಾಗಿರಬೇಕು. ಕುಮಾರಣ್ಣನ ಬಗ್ಗೆ ಹಗುರ ಮಾತು ಬೇಡ. ನಿನ್ನೆ ಕೊಡಗಿನಲ್ಲಿ ಕೊಟ್ಟ ಮನೆಗಳ ಹಿಂದೆ ಯಾರ ಶ್ರಮ ಇದೆ ಅನ್ನೋದು ಗೊತ್ತಿದೆ. ಮನೆ ಕೊಡುವಾಗ ಒಂದು ಮಾತೂ ಸಹ ಅವರ ಹೆಸರೇಳದೆ ಮನೆ ಕೊಟ್ಟಿದ್ದೀರಿ. ನೀವು ಪ್ರವಾಹ ಬಂದಾಗ ಹೇಗೆ ಕೆಲಸ ಮಾಡಿದ್ದೀರಿ ಅನ್ನೋದು ಸಹ ಗೊತ್ತಾಗಿದೆ. ನೀವು ಮಾತನಾಡುವಾಗ ಎಚ್ಚರದಿಂದ ಮಾತನಾಡಿ ಎಂದು ಕಿಡಿ ಕಾರಿದರು.