ವಾಚಕರ ಪತ್ರ: ಕುಮಾರಸ್ವಾಮಿ ಹೇಳಿಕೆಗಳಿಂದ ಯಾರಿಗೆ ಲಾಭ ?

ಪ್ರಕಟಣೆಯ ಕೃಪೆಗಾಗಿ :
ಈ ಬಾರಿ ವಿಧಾನಸಭೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗಿನಿಂದ ಕುಮಾರಸ್ವಾಮಿಯವರು ಒಂದಲ್ಲ ಒಂದು ರೀತಿಯಲ್ಲಿ ಎಲ್ಲರ ದೃಷ್ಟಿ ತಮ್ಮತ್ತ ಸೆಳೆಯುತ್ತಿದ್ದಾರೆ. ಸಾಕಷ್ಟು ಬಾರಿ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ, ಸುಮಾರು ಆರೋಪಗಳನ್ನು ಹೊರಿಸಿದ್ದಾರೆ. ಪೆನ್ ಡ್ರೈವ್, ೪೦% ಗಿಂತ ಹೆಚ್ಚು ಲಂಚ ಪಡೆಯುತ್ತಿದ್ದಾರೆ, ವರ್ಗಾವಣೆ ದಂಧೆ, ಹೀಗೆ ಸಾಕಷ್ಟು ಆರೋಪಗಳನ್ನು ಹೊರಿಸುತ್ತಲೇ ಇದ್ದಾರೆ. ಇದೇ ರೀತಿ ಕಾಂಗ್ರೆಸ್ ಪಕ್ಷವು ಬಿಜೆಪಿ ಮೇಲೆ ಆರೋಪ ಹೊರಿಸಿ ಅಧಿಕಾರಕ್ಕೆ ಬಂದಿತು. ಆದರೆ ಇಂದಿನವರೆಗೂ ಬಿಜೆಪಿಯ ಯಾವುದೇ ಭ್ರಷ್ಟಾಚಾರವನ್ನು ಬಯಲಿಗೆಳೆದಿಲ್ಲ, ಸಾಬೀತು ಮಾಡಿಲ್ಲ. ಈಗ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಅದೇ ಹಾದಿಯಲ್ಲಿ ನಡೆಯುತ್ತಿದ್ದಾರೆ. ಇದರಿಂದ ಎಲ್ಲರಿಗಿಂತ ಜಾಸ್ತಿ ಲಾಭ ಪಡೆಯುವುದು ಯಾರು ? ಮತ್ತಿನ್ಯಾರು ! ಸುದ್ದಿ ವಾಹಿನಿಗಳು. ನ್ಯೂಸ್ ಚಾನೆಲ್ ಗಳು ಬೆಳಿಗ್ಗೆಯಿಂದ ರಾತ್ರಿ ತನಕ ಇಂತಹ ಸುದ್ದಿಗಳ ಹಿಂದೆ ಬಿದ್ದು ಇಡೀ ದಿನ ಇದನ್ನೇ ಪ್ರಸಾರ ಮಾಡುತ್ತಿರುತ್ತಾರೆ. ಜಾಸ್ತಿ ಸಮಯ ಇರುವವರು ಮನೋರಂಜನೆಗಾಗಿ ಇದನ್ನೇ ನೋಡುತ್ತಲೂ ಇದ್ದಾರೆ. ಆದರೆ ಅವರಿಗೆ ಬಿಟ್ಟು ಇನ್ನು ಯಾರಿಗೂ ಇದರಿಂದ ಯಾವುದೇ ಲಾಭವಾಗುತ್ತಿಲ್ಲ. ಮತ್ತೊಬ್ಬರು ಇದರಿಂದ ಲಾಭ ಪಡೆಯುತ್ತಿರುವವರು ಎಂದರೆ ಬಿಜೆಪಿ ಪಕ್ಷದವರು. ವಿರೋಧ ಪಕ್ಷದಲ್ಲಿರುವ ಬಿಜೆಪಿಯವರಿಗೆ ಅವರ ಕೆಲಸವನ್ನು ತೀರಾ ಸಲೀಸು ಮಾಡಿಕೊಡುತ್ತಿದ್ದಾರೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು. ಅದಕ್ಕೇ ಬಹುಶಃ ಬಿಜೆಪಿಯವರು ಇನ್ನೂ ವಿರೋಧ ಪಕ್ಷದ ನಾಯಕನನ್ನೇ ಆರಿಸಿಲ್ಲ. ಇನ್ನು ಕಾಂಗ್ರೆಸ್‌ ಪಕ್ಷವಂತು ಗ್ಯಾರೆಂಟಿ ಜಾರಿಗೆ ತರುವುದರಲ್ಲೇ ಇದೆ. ಕರ್ನಾಟಕ ಜನತೆಯ ಪರಿಸ್ಥಿತಿ ತೀರ ಹೀನಾಯವಾಗಿದೆ. ಮಾಡಿದ್ದುಣ್ಣೋ ಮಾರಾಯ ಎನ್ನುವಂತಾಗಿದೆ ಸಾಮಾನ್ಯ ಜನರ ಪಾಡು.

ಬಾಲು, ಬೆಂಗಳೂರು