ಶ್ರಮದಾನದ ಮೂಲಕ ಕಚೇರಿ ಆವರಣ ಸ್ವಚ್ಚಗೊಳಿಸಿದ ವಾರ್ತಾ ಇಲಾಖೆ ಸಿಬ್ಬಂದಿ
ಮೈಸೂರು.ಮೇ.9 (ಕರ್ನಾಟಕ ವಾರ್ತೆ):- ನಗರದ ದಾಸಪ್ಪ ವೃತ್ತದ ಬಳಿಯಿರುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಿಬ್ಬಂದಿಗಳು ಶ್ರಮದಾನ ಮಾಡುವ ಮೂಲಕ ಕಚೇರಿ ಆವರಣವನ್ನು ಸ್ವಚ್ಛಗೊಳಿಸಿದರು.
ಎರಡನೇ ಶನಿವಾರ ರಜೆ ಇದ್ದ ಕಾರಣ ಮುಂಜಾನೆಯೇ ಕಚೇರಿಗೆ ಬಂದು ಕ್ರಿಯಾಶೀಲರಾಗಿ ಸ್ವಚ್ಚತೆಗೆ ಮುಂದಾದ ಇಲಾಖೆಯ ಸಿಬ್ಬಂದಿಗಳು, ಆವರಣದಲ್ಲಿದ್ದ ಘನತಾಜ್ಯ, ಪ್ಲಾಸ್ಟಿಕ್ ಲೋಟ, ತಟ್ಟೆಗಳು, ತರಗು ಎಲೆಗಳನ್ನು ಹಾಗೂ ಕಚೇರಿಯ ಸುತ್ತ ಆಳೆತ್ತರಕ್ಕೆ ಬೆಳೆದಿದ್ದ ಪೊದೆ-ಗಿಡಗಳನ್ನು ಸ್ವಚ್ಛಗೊಳಿಸಿದರು.
ಕಚೇರಿಯ ಎಡಭಾಗದಲ್ಲಿ ಖಾಲಿ ಆವರಣದಲ್ಲಿ ಹಲವು ದಿನಗಳಿಂದ ಬೆಳೆದಿದ್ದ ಗಿಡಗಂಟೆಗಳನ್ನು ಕಡಿದು ತೆರವುಗೊಳಿಸಿದರು. ವಿಶಾಲವಾದ ಜಾಗವನ್ನು ಸ್ವಚ್ಚಗೊಳಿಸಿ ಕಸವನ್ನು ವಿಲೇವಾರಿ ಮಾಡಿದರು.
ಈ ಸ್ವಚ್ಛತ ಕಾರ್ಯಕ್ಕೆ ಅಗತ್ಯವಿದ್ದ ಸಲಕರಣೆಗಳನ್ನು ಕಾರಗೃಹ ತರಬೇತಿ ಸಂಸ್ಥೆಯವರು ಒದಗಿಸಿಕೊಟ್ಟರು. ಅದರಂತೆ ಇದಕ್ಕೆ ಪೂರಕವಾಗಿ ಮೈಸೂರು ಮಹಾನಗರ ಪಾಲಿಕೆಯ ಆರೋಗ್ಯಾಧಿಕಾರಿ ಡಾ.ನಾಗರಾಜು ಹಾಗೂ ನಿರೀಕ್ಷಕರಾದ ರಾಜೇಶ್ವರಿ ಅವರು ಪಾಲಿಕೆ ವಾಹನದ ಜೊತೆ ಪೌರಕಾರ್ಮಿಕರನ್ನು ಕಳುಹಿಸಿ ಕಸವನ್ನು ಭಾನುವಾರ ವಿಲೇವಾರಿ ಮಾಡಿಸುವಂತೆ ಹೇಳಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಆರ್.ರಾಜು, ಅಪ್ರೆಂಟಿಸ್ ತರಬೇತಿದಾರರಾದ ಕಾವ್ಯ, ಬಿ.ಎನ್.ಚಂದ್ರಶೇಖರ್, ಎಚ್.ಸಿ.ಯಶವಂತ್ ಕುಮಾರ್, ಬಿ.ಸಿ.ಸಂಜಯ್, ಹೊರಗುತ್ತಿಗೆ ನೌಕರರಾಗಿದ್ದ ಜನಾರ್ಧನ, ಸುರೇಶ್, ಶಿವರಾಜು, ಅನುಸೂಯ ಸ್ವಚ್ಚತಾ ಕಾರ್ಯವನ್ನು ನೆರವೇರಿಸಿದರು.