ವಿಪ್ರ ಸಮಾಜದ ಯುವಪೀಳಿಗೆ ಮುಖ್ಯವಾಹಿನಿಗೆ ಬರಬೇಕು : ರಾಮದಾಸ್

Share

 

ವಿಪ್ರ ಸಮಾಜದ ಯುವಪೀಳಿಗೆ ಮುಖ್ಯವಾಹಿನಿಗೆ ಬರಬೇಕು : ರಾಮದಾಸ್

ಮೈಸೂರು:
ವಿಪ್ರ ಸಮಾಜದ ಯುವಕ-ಯುವತಿಯರು ಮುಖ್ಯ ವಾಹಿನಿಗೆ ಬರಬೇಕಿದೆ.‌ ಅದು ಅನಿವಾರ್ಯವೂ ಕೂಡ ಆಗಿದೆ ಎಂದು ಶಾಸಕ ಎಸ್.ಎ.ರಾಮದಾಸ್ ಸೂಚ್ಯವಾಗಿ ತಿಳಿಸಿದರು.
ನಗರದ ವಿದ್ಯಾಶಂಕರ ಕಲ್ಯಾಣಭವನದಲ್ಲಿ‌ ಮಂಗಳವಾರ ಆಯೋಜಿಸಲಾಗಿದ್ದ ಪುರೋಹಿತರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದಲ್ಲಿ ಉಳುವವನೇ ಭೂಮಿಯ ಒಡೆಯ ಎಂಬ ಕಾನೂನು ಜಾರಿಯಾದ ಬಳಿಕ ವಿಪ್ರ ಸಮುದಾಯ ನೆಲೆ‌ ಕಳೆದುಕೊಂಡಿತಾದರೂ ದೃತಿಗೆಡಲಿಲ್ಲ. ಗಾಯತ್ರಿ ಮಾತೆ ಹಾಗೂ ಸಪ್ತ ಋಷಿಗಳ ಆಶೀರ್ವಾದ ವಿಪ್ರರ ಮೇಲಿತ್ತು. ಪರಿಣಾಮ, ಇಂದಿಗೂ ಸ್ವಾಭಿಮಾನದ ಬದುಕು ಸಾಗಿಸುತ್ತಿದ್ದಾರೆ. ತದನಂತರ ತಫ್ತೀಕ್ ಹಿಂಪಡೆಯಲಾಯಿತು, ಆಗಲೂ ಕುಗ್ಗಲಿಲ್ಲ. ಇಂತಹ ಹೊತ್ತಿನಲ್ಲಿ ವಿಪ್ರ ಸಮುದಾಯ ಮುನ್ನೆಲೆಗೆ ಬರಬೇಕಿದೆ ಎಂದರು.
ದೇವರನ್ನು ಮುಟ್ಟಿ ಪೂಜಿಸುವುದು ವಿಪ್ರರ ಪಾಲಿಗೆ ಒಲಿದುಬಂದಿರುವುದು ನಿಜಕ್ಕೂ ಸೌಭಾಗ್ಯವೇ ಸರಿ. ಇಂತಹ ಸಮುದಾಯ ಕೆಲ‌ ಸಂದರ್ಭದಲ್ಲಿ ಮುಜುಗರಕ್ಕೆ ಹಾಗೂ ಶೋಷಣೆಗೆ ಒಳಗಾಗಿರುವುದು ನೋವಿನ ಸಂಗತಿ. ಎಲ್ಲಾ ಅಪಸವ್ಯಗಳ ನಡುವಯೂ ವಿಪ್ರ ಸಮಾಜ ಇಂದಿಗೂ ತನ್ನ ಜೀವಂತಿಕೆಯನ್ನು ಸಾಬೀತುಪಡಿಸಿದ್ದು, ಅದು ಇನ್ನೂ ಎತ್ತರಕ್ಕೆ ಹೋಗಬೇಕಿದೆ ಎಂದು ಆಶಿಸಿದರು.
ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಸರಿಸುಮಾರು ಒಂದೂಕಾಲು ಲಕ್ಷ ಮಂದಿ ಪ್ರಾಣ ತೆತ್ತಿದ್ದರೆ, ಆ ಪೈಕಿ ೬೦ ಸಾವಿರಕ್ಕೂ ಹೆಚ್ಚು ಮಂದಿ‌ ಪ್ರಾಣ ಬಿಟ್ಟವರು ವಿಪ್ರ ಸಮುದಾಯದವರಾಗಿದ್ದಾರೆ. ಅಂತಹ ಹೆಮ್ಮೆಯ ಸಮುದಾಯ ಇದಾಗಿದೆ ಎಂದ ಅವರು, ವಿಧಾನಸೌಧದ ಒಟ್ಟು ಅಧಿಕಾರಿಗಳ ಪೈಕಿ ಶೇ. ೭೦ ಮಂದಿ ವಿಪ್ರರಿದ್ದಾರೆ.‌ ಇದು ಸಮುದಾಯದ ಹೆಮ್ಮೆಯ ವಿಷಯ ಎಂದು ಹೇಳಿದರು.
ವಿಪ್ರ ಸಮುದಾಯಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಹಲವು ಹತ್ತು ಯೋಜನೆಗಳನ್ನು ತೆರೆದಿದೆ. ಅವುಗಳ ಸದುಪಯೋಗಪಡಿಸಿಕೊಳ್ಳಿ ಎಂದ ಅವರು, ವಿಪ್ರರ ಸಂಖ್ಯೆ ದಿನೇ ದಿನೇ ಕ್ಷೀಣಿಸುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದರು.
ಸಮುದಾಯದ ಪರವಾಗಿ ಎಂತಹ ಸಂದರ್ಭದಲ್ಲೂ ನೆರವಿಗೆ ನಿಂತಿದ್ದೇನೆ, ಅದು ಮುಂದೆಯೂ ಕೂಡ ಇರಲಿದೆ.‌ ಅದಕ್ಕಾಗಿ ನಿಮ್ಮೆಲ್ಲರ ಆಶೀರ್ವಾದ ಸದಾಕಾಲವೂ ನನ್ನ ಮೇಲಿರಲಿ ಎಂದು ಕೋರಿದರು.
ವೇದಿಕೆಯಲ್ಲಿ ಸಮುದಾಯದ ಪ್ರಮುಖರಾದ ನಾಗರಾಜ್, ಶ್ರೀಹರಿ, ಜಯಸಿಂಹ, ಓಂಶ್ರೀನಿವಾಸ್, ಬಾಲಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.


Share