ವಿಶ್ವೇಶ್ವರಯ್ಯ ನವರ ಪ್ರತಿಮೆಗೆ ಬೆಂಬಲ


ಅಭಿವೃದ್ಧಿಯ ಹರಿಕಾರ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಆಧುನಿಕ ಮೈಸೂರಿನ ಪಿತಾಮಹ ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯನವರ ಪ್ರತಿಮೆಯನ್ನು ನಿರ್ಮಿಸುತ್ತಿರುವ ರಾಜ್ಯ ಸರ್ಕಾರದ ಯೋಜನೆಯನ್ನು ಬೆಂಬಲಿಸಿ ಮೈಸೂರಿನ ವಿವಿಧ ಸಂಘ-ಸಂಸ್ಥೆಗಳು ನಗರದ ಜಲದರ್ಶಿನಿಯಲ್ಲಿ ಸಭೆ ನಡೆಯಿತು

ಮಾಜಿ ಮಹಾಪೌರರಾದ ಸಂದೇಶ್ ಸ್ವಾಮಿ, ಮೈಸೂರು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ.ಟಿ.ಪ್ರಕಾಶ್, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷರಾದ ಜಿ.ಮಂಜು, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರಾದ ನಾರಾಯಣ ಗೌಡ, ಪಾಲಿಕೆ ಸದಸ್ಯ ಸಾತ್ವಿಕ್ ಸಂದೇಶ್, ಮೈಸೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾದ ಡಾ| ಈ.ಸಿ.ನಿಂಗರಾಜ ಗೌಡ, ಸಮಾಜ ಸೇವಕ ಡಾ|ಕೆ.ರಘುರಾಮ್ ವಾಜಪೇಯಿ, ಮೈಸೂರು ಪಾಲಿಕೆ ಮಾಜಿ ಸದಸ್ಯ ಎಂ.ಜಿ.ಮಹೇಶ್, ಪತ್ರಕರ್ತ ರವೀಂದ್ರ ಜೋಶಿ, ಮೈಸೂರು ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಮೈ.ಕಾ.ಪ್ರೇಮ್ ಕುಮಾರ್, ಕೆ.ಅರ್.ಎಸ್. ಪಂಚಾಯಿತಿ ಸದಸ್ಯರಾದ ವಿಜಯ್ ಕುಮಾರ್, ಪತ್ರಕರ್ತ ಅನಿಲ್ ಕುಮಾರ್, ಸಾಹಿತಿ ಡಾ| ಭೇರ್ಯ ರಾಮಕುಮಾರ್, ರೈತ ಮುಖಂಡರಾದ ದೇವರಾಜ್, ಪ್ರಜ್ಞಾವಂತ ನಾಗರಿಕ ವೇದಿಕೆಯ ಕಡಕೊಳ ಜಗದೀಶ್, ಕೆ.ಎಂ.ಪಿ.ಕೆ. ಟ್ರಸ್ಟಿನ ವಿಕ್ರಂ ಅಯ್ಯಂಗಾರ್, ವೀರ ಸಾವರ್ಕರ್ ಯುವ ಬಳಗದ ರಾಕೇಶ್ ಭಟ್, ಸಾಮಾಜಿಕ ಕಾರ್ಯಕರ್ತರಾದ ಅಜಯ್ ಶಾಸ್ತ್ರಿ, ಬೆಳಕು ಸಂಸ್ಥೆಯ ಕೆ.ಎಂ.ನಿಶಾಂತ್, ಮುಖಂಡರಾದ ಗುರುರಾಜ್ ಶೆಟ್ಟಿ, ಟಿ.ಎಸ್.ಅರುಣ್, ಸಂದೇಶ್ ಪವಾರ್, ಸುಚೀನ್ದ್ರ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಮಾಜಿ ಮಹಾಪೌರರಾದ ಸಂದೇಶ್ ಸ್ವಾಮಿ ಮಾತನಾಡಿ ತಾವು ಮಹಾಪೌರರಾಗಿದ್ದ ಸಮಯದಲ್ಲಿ ನಗರದ ಆಯುರ್ವೇದ ಆಸ್ಪತ್ರೆ ವೃತ್ತದಲ್ಲಿ ಸರ್ ಎಂ.ವಿ.ಯವರ ಪ್ರತಿಮೆ ನಿರ್ಮಿಸಲು ಮುಂದಾದಾಗ, ಇಂದು ವಿರೋಧಿಸುತ್ತಿರುವವರು ಸಹ ಸಮಿತಿಯಲ್ಲಿದ್ದು ಸಹಮತ ವ್ಯಕ್ತಪಡಿಸಿದ್ದರು. ನಮ್ಮ ಪರವಾಗಿ ಕೆಲಸ ಮಾಡಿದವರನ್ನು ಸ್ಮರಿಸುವುದು ಮತ್ತು ಕೃತಜ್ಞತೆ ಸಲ್ಲಿಸುವುದು ಭಾರತೀಯ ಸಂಸ್ಕೃತಿ, ಹಾಗಾಗಿ ಪ್ರತಿಮೆ ನಿರ್ಮಾಣದ ಕೆಲಸ ಆಗುತ್ತಿರುವುದು ಸಂತೋಷದ ವಿಷಯ ಎಂದರಲ್ಲದೆ ಕೆಲವರು ಪ್ರಚಾರದ ತೆವಳಿಗಾಗಿ ಮಾತನಾಡುವವರಿಗೆ ಉತ್ತರ ನೀಡಲು ಹೋಗುವುದಿಲ್ಲ, ಆದರೆ ಸರ್ಕಾರದ ಯೋಜನೆಯನ್ನು ಸಂಪೂರ್ಣವಾಗಿ ಬೆಂಬಲಿಸುವುದಾಗಿ ತಿಳಿಸಿದರು.

ಮೈಸೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾದ ಡಾ| ಈ.ಸಿ.ನಿಂಗರಾಜ ಗೌಡ ಮಾತನಾಡಿ ವಿವಿ ಅವರಣದಲ್ಲಿಯೂ ಸರ್ ಎಂ.ವಿ.ಯವರ ಪ್ರತಿಮೆ ನಿರ್ಮಾಣವನ್ನು ಕೆಲವರ ವಿರೋಧದಿಂದ ಸ್ಥಗಿತಗೊಳಿಸಲಾಗಿತ್ತು. ವಿಶ್ವೇಶ್ವರಯ್ಯರನ್ನು ದಿವಾನರಾಗಿಯಷ್ಟೇ ಅಲ್ಲ ಅವರ ದೂರದೃಷ್ಟಿ ಯೋಜನೆಗಳು ಜಲಸಂಪನ್ಮೂಲ, ಶಿಕ್ಷಣ, ಕೈಗಾರಿಕೆ, ಸಹಕಾರ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿಯೂ ಕಾಣಬಹುದು ಎಂದು ತಿಳಿಸಿದರು.

ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷರಾದ ಜಿ.ಮಂಜುರವರು ಮೈಸೂರು-ಮಂಡ್ಯ ಭಾಗದ ಜನರಲ್ಲಿ ವಿಶೇಶ್ವರಯ್ಯನವರ ಮೇಲೆ ಬಹಳ ಪ್ರೀತಿ ಇದ್ದೂ ಮನೆ ಮನೆಗಳಲ್ಲಿ ಅವರ ಚಿತ್ರವನ್ನಿಟ್ಟುಕೊಂಡಿದ್ದಾರೆ, ಅಂಥವರನ್ನು ಜಾತಿ, ಪಂಥ ಮೀರಿ ನೋಡಬೇಕಾಗಿದೆ ಎಂದರು.

ನಗರ ಪಾಲಿಕೆ ಮಾಜಿ ಸದಸ್ಯರಾದ ಎಂ.ಜಿ.ಮಹೇಶ್ ಮಾತನಾಡಿ ಸರ್ಕಾರದ ಯೋಜನೆಗೆ ಸಂಪೂರ್ಣ ಬೆಂಬಲವಿರುವುದಾಗಿ ತಿಳಿಸಿದರು, ಜೊತೆಗೆ ಈಗಿರುವ ರಾಜ್ಯ ಸರ್ಕಾರವು ಯಾವುದೇ ಕಾರಣಕ್ಕೂ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಪ್ರತಿಮೆ ವಿರೋಧಿಸುತ್ತಿರುವವರಲ್ಲೊಬ್ಬರು ಹಿಂದೆ ಡಾ| ಹೆಡಗೇವಾರ್ ವೃತ್ತದಲ್ಲಿ ಅಳವಡಿಸಿದ್ದ ಫಲಕವನ್ನು ಸಹ ಒಡೆದಿದ್ದರು, ನಂತರ ತಮ್ಮ ತಪ್ಪಿನ ಅರಿವಾಗಿ ಮರುದಿನ ಅದನ್ನು ಸರಿಪಡಿಸಿದ್ದನ್ನು ಜ್ಞಾಪಿಸಿದರು.

ಪತ್ರಕರ್ತ ರವೀಂದ್ರ ಜೋಶಿ ಮಾತನಾಡಿ ಒಬ್ಬ ವ್ಯಕ್ತಿ ಇತಿಹಾಸ ತಜ್ಞನೇ ಅಲ್ಲ, ಆತ ಒಬ್ಬ ಇತಿಹಾಸೇತರ ವಿಷಯ ಭೋಧಿಸುತ್ತಿದ್ದ ಪ್ರಾಚಾರ್ಯರಾಗಿದ್ದವರು, ಆದರೆ ಪ್ರಚಾರಕ್ಕಾಗಿ ಇತಿಹಾಸ ತಜ್ಞ ಅಂಥ ಸ್ವಯಂ ಬಿಂಬಿಸಿಕೊಂಡವನ ಸುಳ್ಳುಗಳು, ಬಿತ್ತುವ ವಿಷ ಬೀಜಗಳು ಸಹ ಮಾಧ್ಯಮದಲ್ಲಿ ಸುದ್ದಿಯಾಗುತ್ತಿರುವುದು ವಿಪರ್ಯಾಸ ಎಂದು ಬೇಸರ ವ್ಯಕ್ತ ಪಡಿಸಿದ್ದರು. ನಾಲ್ವಡಿಯವರ ಹೆಸರಿನಲ್ಲಿ ಅನೇಕ ಯೋಜನೆ, ನಗರ, ಪಟ್ಟಣಗಳಿವೆ ಮತ್ತು ವಿಶ್ವೇಶ್ವರಯ್ಯನವರ ಹೆಸರಿನಲ್ಲಿ ಅನೇಕ ಸಂಸ್ಥೆಗಳಿವೆ. ಅವರ ಹೆಸರಿಗೆ ಅಂಥ ಮೌಲ್ಯವಿದೆ, ವಿರೋಧಿಗಳ ಮಾತಿಗೆ ಬೆಲೆಯಿಲ್ಲ ಎಂದು ತಿಳಿಸಿದರು. ಮುಂದುವರೆದು ರಾಜನ ಸಮಾನಾಗಿ ಪ್ರತಿಮೆ ಇರಬಾರದು ಎಂದರೆ ಎಷ್ಟು ಅಡಿ ಚಿಕ್ಕದಿರಬೇಕು? ಅದಕ್ಕೆ ಮಾನದಂಡವೇನು? ಎಂದು ಸಹ ಪ್ರಶ್ನಿಸಿದರು.

ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರಾದ ನಾರಾಯಣ ಗೌಡರವರು ಆಧುನಿಕ ಮೈಸೂರಿನ ಪಿತಾಮಹ ವಿಶ್ವೇಶ್ವರಯ್ಯನವರ ಪ್ರತಿಮೆಯ ಯೋಜನೆಗೆ ಸಂಪೂರ್ಣ ಬೆಂಬಲವಿರುವುದಾಗಿ ತಿಳಿಸಿದರು.

ಮೈಸೂರು ರಕ್ಷಣಾ ವೇದಿಕೆ ಅಧ್ಯಕ್ಷರಾದ ಮೈ.ಕಾ.ಪ್ರೇಮ್ ಕುಮಾರ್ ಮಾತನಾಡಿ ಬೇಕಾದರೆ ಪ್ರತಿಮೆ ಉದ್ದ ಎಷ್ಟಿರಬೇಕು ಎಂಬ ಸಲಹೆ ನೀಡಲಿ, ಆದರೆ ಪ್ರತಿಮೆಯೇ ಬೇಡ ಅನ್ನುವುದನ್ನು ಒಪ್ಪಲು ಸಾಧ್ಯವೇ ಇಲ್ಲ ಎಂದರು.

ಸಮಾಜ ಸೇವಕ ಡಾ| ಕೆ.ರಘುರಾಮ್ ವಾಜಪೇಯಿ ಮಾತನಾಡಿ ಹಿಂದೆ ಆಯುರ್ವೇದ ವೃತ್ತದಲ್ಲಿ ಹಾಗೂ ವಿಶ್ವವಿದ್ಯಾಲಯದ ಆವರಣದಲ್ಲಿ ಯಾರೋ ನಾಲ್ಕು ಜನ ವಿರೋಧಿಸಿದ ಕಾರಣ ಪ್ರತಿಮೆ ಕಾರ್ಯ ಸ್ಥಗಿತಗೊಂಡಿತು. ಈಗ ಹಾಗಾಗುವುದು ಬೇಡ ಸರ್ಕಾರ ಯಥಾ ಯೋಜನೆಯಂತೆ ಮುಂದುವರೆಯಲಿ ಎಂದು ತಿಳಿಸಿದರು. ಜೊತೆಗೆ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ ಸಂಸ್ಥೆಯ ಬೆಂಬಲ ಸಹ ಸರ್ಕಾರದ ಯೋಜನೆಗಿರುವುದಾಗಿ ಸಂಸ್ಥೆಯ ಪರವಾಗಿ ತಿಳಿಸಿದರು ಅಲ್ಲದೇ ಸಂಸ್ಥೆಯ ಅವರಣದಲ್ಲಿಯೂ ದೊಡ್ಡ ಪ್ರತಿಮೆ ಎದ್ದು ನಿಲ್ಲಲಿರುವ ವಿಷಯವನ್ನು ಹೊರಹಾಕಿದರು.

ಸಭೆಯ ನಿರ್ಣಯವನ್ನು ಘೋಷಿಸಿದ ಮೈಸೂರು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ.ಟಿ. ಪ್ರಕಾಶ್ ಮಾತನಾಡಿ ಸರ್ಕಾರದ ಈ ಯೋಜನೆಗೆ ಅತಿ ಹೆಚ್ಚು ಜನರ ಬೆಂಬಲ ಇರುವುದು ಈ ಚಿಕ್ಕ ಸಭೆ ಮೂಲಕ ತಿಳಿಯಬಹುದು, ಹಾಗಾಗಿ ಯೋಜನೆ ಯಥಾಸ್ಥಿತಿ ಮುಂದುವರೆಯಲಿ. ಅಗತ್ಯ ಬಿದ್ದರೆ ಮುಂದೆ ಮತ್ತೆ ಸಭೆ ಸೇರಿ ಮುಂದಿನ ತೀರ್ಮಾನವನ್ನು ಕೈಗೊಳ್ಳುವುದಾಗಿ ತಿಳಿಸಿದರು.