ವಿಶ್ವ ಪರಿಸರ ದಿನಾಚರಣೆ ಪೂರ್ವಭಾವಿ ಸಭೆ ಸಚಿವರಿಂದ

433
Share

ಖಾಸಗಿಯವರಿಗೂ ಪರಿಸರ ನಿರ್ವಹಣೆ ಜವಾಬ್ದಾರಿ ಕೊಡಿ; ಸಚಿವ ಎಸ್ ಟಿ ಎಸ್

  • ಜೂನ್ 5 ರ ವಿಶ್ವ ಪರಿಸರ ದಿನಾಚರಣೆ ಹಿನ್ನೆಲೆ ಪೂರ್ವಭಾವಿ ಸಭೆಯಲ್ಲಿ ನಿರ್ದೇಶನ
  • ಮನ್ರೇಗಾ ಯೋಜನೆಯಲ್ಲಿ ಗಿಡ ನೆಡುವ ಕಾರ್ಯಕ್ರಮ ಸದುಪಯೋಗವಾಗಲಿ

ಮೈಸೂರು: ಕೆಲವು ಬಡಾವಣೆ, ಪಾರ್ಕ್ ಗಳು ಸೇರಿದಂತೆ ಒಂದೊಂದು ಕಡೆ ಎಷ್ಟೆಷ್ಟು ಗಿಡಗಳನ್ನು ನೆಡಬಹುದು? ಅವುಗಳ ನಿರ್ವಹಣೆ ಹೊಣೆಯನ್ನು ಬಡಾವಣೆಗಳ ಅಸೋಸಿಯೇಷನ್ ಇಲ್ಲವೇ ಸಮೀಪ ಇರುವ ಕಾರ್ಖಾನೆಗಳಂತಹ ಖಾಸಗಿಯವರ ಸುಪರ್ದಿಗೂ ವಹಿಸಿ ನಿರ್ವಹಣೆ ಜವಾಬ್ದಾರಿ ನೀಡಬೇಕು ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಸೂಚನೆ ನೀಡಿದರು.

ಜೂನ್ 5ರಂದು ವಿಶ್ವ ಪರಿಸರ ದಿನಾಚರಣೆ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ವಿಶ್ವವಿದ್ಯಾಲಯದಲ್ಲಿ ಎಷ್ಟು ಗಿಡಗಳನ್ನು ನೆಡಬಹುದು? ಈ ಬಾರಿ ನೀವು ಎಷ್ಟು ಗಿಡಗಳನ್ನು ನೆಡುತ್ತೀರಿ ಎಂಬ ನಿಗದಿತ ಗುರಿಹಾಕಿಕೊಂಡು ಕಾರ್ಯನಿರ್ವಹಿಸಿ. ಹೇಳುವ ಲೆಕ್ಕವೊಂದು, ನೆಡುವ ಲೆಕ್ಕ ಇನ್ನೊಂದು ಎಂಬುದಾಗಬಾರದು ಎಂದು ವಿವಿ ಕುಲಸಚಿವರಿಗೆ ಸಚಿವರು ಸೂಚಿಸಿದರು.

ಇನ್ನೊಂದು ಪ್ರಮುಖ ಸಂಗತಿಯೆಂದರೆ ಕಾರ್ಪೋರೇಶನ್ ಆಡಳಿತಕ್ಕೆ ಎಷ್ಟು ಗಿಡ ಹಾಗೂ ಯಾವ ಯಾವ ಜಾತಿ, ತಳಿಯ ಗಿಡಗಳನ್ನು ನೆಡಬೇಕು ಎಂಬ ಬಗ್ಗೆ ಸರಿಯಾಗಿ ಪ್ಲಾನ್ ಮಾಡಿ ಕೇಳಿದರೆ ವ್ಯವಸ್ಥೆ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.

ಮನ್ರೇಗಾ ಯೋಜನೆ ಸದುಪಯೋಗವಾಗಲಿ

ಇತ್ತ ಸಾರ್ವಜನಿಕರಿಗೆ ಉದ್ಯೋಗವೂ ಸಿಗಬೇಕು, ಅತ್ತ ಜಿಲ್ಲೆ ಹಸಿರೀಕರಣವೂ ಆಗಬೇಕು ಎಂಬ ನಿಟ್ಟಿನಲ್ಲಿ ಯೋಜನೆಯನ್ನು ಅನುಷ್ಠಾನಕ್ಕೆ ತರಬೇಕು. ಈಗ ನಿರ್ಧಾರ ಮಾಡಲಾಗಿರುವಂತೆ ಮನ್ರೇಗಾ ಯೋಜನೆಯಡಿಯಲ್ಲಿ ಗಿಡಗಳನ್ನು ನೆಡುವುದು ಉತ್ತಮ ಕಾರ್ಯಕ್ರಮವಾಗಿದೆ. ಆದರೆ, ಇದು ಕೇವಲ ಪೇಪರ್ ವರ್ಕ್ ರೀತಿ ಆಗಬಾರದು. ಕೆಲಸ ಮಾಡಿದವರಿಗೂ ಹಣ ಸಿಗುವ ಜೊತೆಗೆ ಗಿಡಗಳನ್ನೂ ಸಮರ್ಪಕವಾಗಿ ನೆಡಬೇಕು ಎಂದು ಸಚಿವರು ಸೂಚನೆ ನೀಡಿದರು.

ಚಾಮುಂಡಿ ಬೆಟ್ಟಕ್ಕೂ ವಿಶೇಷ ಆದ್ಯತೆ

ಕಂದಾಯ ಸಚಿವರು, ಆ ಇಲಾಖೆ ಕಾರ್ಯದರ್ಶಿಗಳು ಹಾಗೂ ಅರಣ್ಯ ಸಚಿವರು, ಆ ಇಲಾಖೆಯ ಕಾರ್ಯದರ್ಶಿಗಳ ಬಳಿ ಚಾಮುಂಡಿ ಬೆಟ್ಟ ಹಸಿರೀಕರಣ ಮಾಡುವ ನಿಟ್ಟಿನಲ್ಲಿ ಸಭೆ ನಡೆಸುವಂತೆ ಕೋರಿದ್ದೇನೆ. ಸಭೆಯಲ್ಲಿ ಚಾಮುಂಡಿ ಬೆಟ್ಟದಲ್ಲಿ ಗಿಡಗಳನ್ನು ನೆಡುವ ಬಗ್ಗೆ, ಎಷ್ಟು ಗಿಡಗಳನ್ನು ನೆಡುವುದು ಹಾಗೂ ಅವುಗಳ ನಿರ್ವಹಣೆ ಹೇಗೆ? ಮೂರು ವರ್ಷಗಳ ಕಾಲ ಯಾರು ನಿರ್ವಹಣೆ ಮಾಡುತ್ತಾರೆ ಎಂಬಿತ್ಯಾದಿ ವಿಷಯಗಳ ಬಗ್ಗೆ ಅವರ ನೇತೃತ್ವದಲ್ಲಿ ಇನ್ನು ಎರಡ್ಮೂರು ದಿನಗಳಲ್ಲಿ ಸಭೆ ನಡೆಸಿ ತೀರ್ಮಾನಿಸಲಾಗುವುದು ಎಂದು ಸಚಿವರು ತಿಳಿಸಿದರು.

ಶಾಸಕರಾದ ಎಸ್.ಎ.ರಾಮದಾಸ್ ಮಾತನಾಡಿ, ಗಿಡಗಳು ಎಷ್ಟು ಇವೆ? ಯಾವ ಗಿಡಗಳನ್ನು ಯಾವ ಪ್ರದೇಶದಲ್ಲಿ ನೆಡಬೇಕು? ಅವುಗಳನ್ನು ನೆಡಲು ಯಾವ ರೀತಿ ಯೋಜನೆ ಹಾಕಿಕೊಂಡು ಅಧಿಕಾರಿಗಳು ಬಂದಿದ್ದಾರೆ ಎಂಬುದು ಮುಖ್ಯ ಎಂದು ಹೇಳಿದರು.

ವಿದ್ಯುತ್ ತಂತಿಗಳ ಕೆಳಗೆ ಯಾವ ಗಿಡಗಳನ್ನು ಬೆಳೆಯಬೇಕು? ಎಷ್ಟು ಎತ್ತರದ ಗಿಡಗಳನ್ನು ನೆಡಬಹುದು? ಒಮ್ಮೆ ಅವುಗಳು ಬೆಳೆದ ಮೇಲೆ ಮತ್ತೆ ಕಡಿಯುವಂತಾಗಬಾರದು. ಅಲ್ಲದೆ, ಗಿಡಗಳನ್ನು ಖಾಸಗಿಯವರು ಪ್ರೀತಿಯಿಂದ ನರ್ಸರಿಯಲ್ಲಿ ಬೆಳೆಸುತ್ತಿದ್ದಾರೆ. ಅವುಗಳನ್ನು ನಾವು ಪಡೆದು ಪರಿಸರ ದಿನದಂದು ನೆಟ್ಟು ಸುಮ್ಮನಾಗಿ ಕೊನೆಗೆ ಅತ್ತ ಮುಖ ಹಾಕದೇ ಇದ್ದರೆ ಮಾಡಿದ ಕೆಲಸ ಸಾರ್ಥಕವಾಗದು. ಇವುಗಳ ಬಗ್ಗೆ ನಿಗಾ ಬೇಕು ಎಂದು ತಿಳಿಸಿದರು.

ನೆಟ್ಟ ಗಿಡ ಉಳಿಯುವಂತೆ ಪ್ಲಾನ್ ಆಗಲಿ

ಈಗಿನ ಗಿಡ ನೆಡುವ ಮಾದರಿ ಬದಲಾಗಬೇಕು. ಸುಮ್ಮನೆ ಬಂದು ಸಿಕ್ಕ ಜಾಗದಲ್ಲಿ ನೆಟ್ಟು ಹೋಗುವಂತಾಗಬಾರದು. ಯಾವ ರಸ್ತೆಯಲ್ಲಿ? ಯಾವ ಪ್ರದೇಶದಲ್ಲಿ? ಗಿಡಗಳನ್ನು ನೆಡುವ ಪ್ಲಾನ್ ಮಾಡಿಕೊಳ್ಳಲಾಗಿದೆ. ಎಲ್ಲಿ ಎತ್ತರದ ಗಿಡಗಳನ್ನು ನೆಡಬೇಕು ಹಾಗೂ ಎಲ್ಲಿ ಚಿಕ್ಕ ಗಿಡಗಳನ್ನು ಬೆಳೆಯಬೇಕು ಎಂಬ ಬಗ್ಗೆಯೂ ಯೋಜನೆ ಸಿದ್ಧವಾಗಬೇಕು ಎಂದು ಶಾಸಕರಾದ ರಾಮದಾಸ್ ಅವರು ಹೇಳಿದಾಗ, ಸಚಿವರೂ ಸಹಮತ ವ್ಯಕ್ತಪಡಿಸಿದರು.

ಕೈಗಾರಿಕೆಗಳಿಗೂ ಜವಾಬ್ದಾರಿ ಕೊಡಿ

ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಮಾತನಾಡಿ, ಪರಿಸರ ಪೋಷಣೆ ಜವಾಬ್ದಾರಿಯನ್ನು ಕೈಗಾರಿಕೆಗಳಿಗೂ ಕೊಡುವಂತಾಗಬೇಕು. ಕೈಗಾರಿಕೋದ್ಯಮಿಗಳು ಖಾಸಗಿಯಾಗಿ ಪಾರ್ಕ್ ನಿರ್ವಹಣೆಗಳಂತಹ ಚಟುವಟಿಕೆಯಲ್ಲಿ ತೊಡಗಿಕೊಂಡು ನಿರ್ವಹಣೆ ಮಾಡುವ ನಿಟ್ಟಿನಲ್ಲಿ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಕಾರ್ಪೋರೇಶನ್ ಆಯುಕ್ತ ಗುರುದತ್ತ ಹೆಗಡೆ, ಮುಡಾ ಆಯುಕ್ತರು, ಅರಣ್ಯ ಇಲಾಖೆ, ತೋಟಗಾರಿಕಾ ಇಲಾಖೆ, ನೀರಾವರಿ ಇಲಾಖೆ ಸೇರಿದಂತೆ ಹಲವು ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.
++++


Share