ಸಂಪಾದಕೀಯ : ಅಭ್ಯರ್ತಿಗಳೇ ಚಿಂತಿಸಿ ನಾಮಪತ್ರ ಸಲ್ಲಿಸಿ

Share

2023 ಕರ್ನಾಟಕ ರಾಜ್ಯ ವಿಧಾನಸಭೆಯ ಚುನಾವಣೆಯ ವೇಳಾಪಟ್ಟಿಯಂತೆ ಮೇ 10 ನಿಗದಿ ಮಾಡಲಾಗಿದೆ. ಕಳೆದ ಏಪ್ರಿಲ್ 13ರಂದು ಅಧಿ ಸೂಚನೆ ಹೊರಡಿಸಲಾಗಿದ್ದು ಇಂದಿನಿಂದ ಏಪ್ರಿಲ್ 20ರವರೆಗೆ ನಾಮಪತ್ರ ಸಲ್ಲಿಕೆ ಕಾರ್ಯ ನಡೆಯಲಿದೆ.
ಇದೀಗ ರಾಷ್ಟ್ರೀಯ ಪಕ್ಷಗಳ, ಪ್ರಾದೇಶಿಕ ಪಕ್ಷಗಳ ಅಭ್ಯರ್ಥಿಗಳು, ಸ್ವತಂತ್ರ ಅಭ್ಯರ್ಥಿಗಳು ನಾಮಪತ್ರಗಳನ್ನು ಸಲ್ಲಿಸಲು ಪ್ರಾರಂಭಿಸಿದ್ದಾರೆ.
ಇದು ಸಾರ್ವತ್ರಿಕ ಚುನಾವಣೆ ಆದ್ದರಿಂದ ಚುನಾವಣಾ ಅಭ್ಯರ್ಥಿ ಆಗಬೇಕೆಂಬುದು ಎಲ್ಲರ ಹಂಬಲವಾಗಿರುತ್ತದೆ, ಎಲ್ಲರಿಗೂ ಇದು ಸಿಗುವುದು ಸಾಧ್ಯವಿಲ್ಲ, ಅವಕಾಶ ಸಿಕ್ಕಿದವರು ಹಿಗ್ಗಿದರೆ ಸಿಕ್ಕದವರು ಬಂಡಾಯ ಬಾವುಟ ಹಾರಿಸುವವರೇ ಹೆಚ್ಚು .ಇದು ಇಂದು ಎಲ್ಲಾ ಪಕ್ಷದಲ್ಲೂ ಕಂಡು ಬರುತ್ತಿರುವ ಸಾಮಾನ್ಯ ದೃಶ್ಯ. ಭಾರತೀಯ ಜನತಾ ಪಕ್ಷವೂ ಅಳೆದು ಸುರಿದು ಎರಡು ಹಂತಗಳಲ್ಲಿ ಅಭ್ಯರ್ಥಿಗಳ ಘೋಷಣೆ ಮಾಡಿದ್ದು ನಿಷ್ಠಾವಂತರೆಂದುಕೊಂಡ ಹಲವರಿಗೆ ನಿರಾಸೆ ಉಂಟುಮಾಡಿದೆ. ಪಕ್ಷದ ವರಿಷ್ಠರು ಅಭ್ಯರ್ಥಿಗಳನ್ನು ಘೋಷಿಸುವ ಸಮಯದಲ್ಲಿ
ಹಾಲಿ ಅಧಿಕಾರದಲ್ಲಿದ್ದ ಕೆಲವು ಶಾಸಕರಿಗೆ ಸೌಜನ್ಯಕ್ಕಾದರೂ ಸಹ ವಿಶ್ವಾಸಕ್ಕೆ ತೆಗೆದುಕೊಳ್ಳದೆ, ಕ್ಯಾರೆ ಅನ್ನದೆ ಹೊಸಬರಿಗೆ ಮನ್ನಣೆ ನೀಡಲು ಪ್ರಾರಂಭಿಸಿದ್ದಾರೆ. ಗೆದ್ದವರೇ ಗೆಲ್ಲುತ್ತಿರಬೇಕು ಗೆದ್ದ ನಂತರ ಮಂತ್ರಿ ಸ್ಥಾನ ಬೇಕು ಎಂಬ ಆಸೆ ಹೊತ್ತವರಿಗೆ ಈ ಬಾರಿ ಬಿಜೆಪಿಯ ವರಿಷ್ಠರು ಮನ್ನಣೆ ನೀಡಿಲ್ಲ.
ಬಂಡಾಯ ಬಾವುಟ ಬಿಸಿದರೂ ಸರಿ, ಪಕ್ಷಕ್ಕೆ ಒಂದು ಹೊಸ ಆಯಾಮ ನೀಡಲೇಬೇಕು ಎಂದು ವರಿಷ್ಠರು ತೀರ್ಮಾನಿಸಿದ್ದಾರೆ.
ಮತ್ತೊಂದು ಕಡೆ ಕಾಂಗ್ರೆಸ್ ಪಕ್ಷವು ಈ ಬಾರಿ ತಾವು ಗೆದ್ದೇ ಗೆಲ್ಲುವೆವು ಎಂಬ ಉತ್ಸಾಹದಿಂದ ಇತರ ಪಕ್ಷಗಳಿಂದ ಬಂಡಾಯವಿದ್ದಿರುವ ಅವರನ್ನೆಲ್ಲ ಸೇರಿಸಿಕೊಳ್ಳಲು ಪ್ರಾರಂಭಿಸುತ್ತಿದ್ದಾರೆ. ಇದು ನೈಜ್ಯ ಕಾಂಗ್ರೆಸ್ಸಿಗರಿಗೆ ಬಿಸಿ ತುಪ್ಪವಾಗಿದೆ, ಜನತಾದಳವು ಇದಕ್ಕೆ ಹಿಂದೆ ಬಿದ್ದಿಲ್ಲ ಕುಟುಂಬದ ಒಳ ಜಗಳಗಳು ಕೂಡ ತಾರಕಕ್ಕೆ ಏರಿದೆ. ಹಿರಿಯ ಪಕ್ಷಗಳ ತೀರ್ಮಾನಕ್ಕೆ ಆಯಾ ಪಕ್ಷಕ್ಕೆ ನಿಷ್ಠಾವಂತರಾದವರು ಪ್ರತ್ಯೇಕವಾಗಿ ಅಥವಾ ಪಕ್ಷೇತರರಾಗಿ ನಿಲ್ಲಲು ಸಹ ಹವಣಿಸುತ್ತಿದ್ದಾರೆ. ನಾಮಪತ್ರ ಸಲ್ಲಿಕೆ ಪ್ರಾರಂಭವಾಗಿರುವುದರಿಂದ ಅಧಿಕಾರ ಬೇಕೆಂಬುವರೆಲ್ಲರೂ ನಿಜಕ್ಕೂ ತಾವು ನಿಂತರೆ ಪ್ರಯೋಜನವಿದೆಯೇ?, ಗೆಲ್ಲಲು ಸಾಧ್ಯವಿದೆಯೇ? ಎಂದು ಒಮ್ಮೆ ಯೋಚಿಸಿ ನಾಮಪತ್ರಕ್ಕೆ ಕೈ ಹಚ್ಚುವುದು ಒಳಿತು, ಇಲ್ಲದಿದ್ದರೆ ಸಾರ್ವಜನಿಕವಾಗಿ ನಿಷ್ಟೂರರಾಗುವುದಲ್ಲದೆ, ಹಣ, ಕೀರ್ತಿ ಹಾಗೂ ಸಮಯ ಎಲ್ಲವೂ ಹಾಳು, ಒಟ್ಟಿನಲ್ಲಿ ಒಂದು ಒಳ್ಳೆಯ ಆಡಳಿತ ನೀಡಬಲ್ಲ ಪಕ್ಷ ಬೇಕೆಂಬುದೇ ಸಾರ್ವಜನಿಕರ ಅಭಿಪ್ರಾಯ, ಅಭ್ಯರ್ಥಿಗಳೇ ನೀವು ಇದಕ್ಕೆ ಅನುವು ಮಾಡಿಕೊಡಬಲ್ಲಿರೆ?

Share