ಸಂಪಾದಕೀಯ : ಮಾತೃ ಪಕ್ಷವನ್ನು ಅವಮಾನಿಸದಿರಿ

Share

ಭಾರತೀಯ ಜನತಾ ಪಕ್ಷದ ಮಾಜಿ ಮುಖ್ಯಮಂತ್ರಿಗಳು ಲಿಂಗಾಯಿತ ಕೋಮಿನ ಪ್ರಮುಖ ಮುಖಂಡರು ಆದ ಜಗದೀಶ್ ಶೆಟ್ಟರ್ ಇದೀಗ ಕಾಂಗ್ರೆಸ್ ಪಕ್ಷದತ್ತ ನಡೆದಿದ್ದಾರೆ. ಭಾರತ ದೇಶ ಪ್ರಜಾಪ್ರಭುತ್ವ ದೇಶ. ಯಾರು ಯಾವಾಗ ಯಾವ ನಿರ್ಧಾರ ಬೇಕಾದರೂ ತೆಗೆದುಕೊಳ್ಳುವ ಸ್ವಾತಂತ್ರ್ಯ ಇದೆ. ಆದರೆ ಜಗದೀಶ್ ಶೆಟ್ಟರ್ ಅವರು ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿ ಆಗಲೇಬೇಕೆಂಬ ಹಟದಿಂದ ಈ ರೀತಿ ವಲಸೆ ಹೋಗಿದ್ದಾರೆ, ಜಗದೀಶ್ ಶೆಟ್ಟರ್ ಅಂತಹ ವ್ಯಕ್ತಿತ್ವಕ್ಕೆ ಇದು ಶೋಭೆ ತರುವುದಲ್ಲ. ಜನಸಂಘದಿಂದ ಬಂದಂತಹ ಒಬ್ಬ ಧೀಮಂತ ವ್ಯಕ್ತಿ ಒಂದೇ ಪಕ್ಷದಿಂದ ವಿರೋಧಪಕ್ಷ ನಾಯಕ, ಮುಖ್ಯಮಂತ್ರಿ ಎಲ್ಲಾ ರೀತಿಯ ಅಧಿಕಾರ ಅನುಭವಿಸಿ ಇನ್ನೂ ಅಧಿಕಾರ ಬೇಕು ಎಂಬುದಾಗಿದ್ದರೆ ಬಾಕಿ ಕಾರ್ಯಕರ್ತರು ಏನು ಮಾಡಬೇಕು? ತಾವು ಅಧಿಕಾರದಲ್ಲಿ ಮುಂದುವರಿಯುತ್ತಲೇ ಇರಬೇಕು ಪ್ರತಿಬಾರಿಯ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆಗೆ ಇಳಿಯುತ್ತಲೇ ಇರಬೇಕೆಂಬ ಹಂಬಲ ಇವರೊಬ್ಬರದೇ ಆದರೆ ಬಾಕಿಯವರು ಏನು ಮಾಡಬೇಕಾಗಿತ್ತು ? ಇಂತಹ ಹಿರಿಯ ವ್ಯಕ್ತಿಗಳಿಗೆ ತಾವು ಒಮ್ಮೆ ತಮ್ಮ ಕೆಳಗಿನವರಿಗೂ ಅಧಿಕಾರ ಬಿಟ್ಟು ಕೊಡಬೇಕು, ತಮ್ಮ ಪ್ರಭಾವದಿಂದ ಪಕ್ಷವನ್ನು ಮತ್ತಷ್ಟು ಬಲಗೊಳಿಸಬೇಕು ಅನ್ನಿಸುವುದೇ ಇಲ್ಲವೇ? ಕೇವಲ ಅಧಿಕಾರದ ಆಸೆಗೆ, ತಮಗೆ ತಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾಗಿಯೆಂದು ಕಾಂಗ್ರೆಸ್ ಸೇರುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ನಿಜಕ್ಕೂ ತಾವು ಬೆಳೆಸಿದ ಪಕ್ಷಕ್ಕೆ ಅಭಿಮಾನ ಹೊಂದಿರದವರು ಅವಕಾಶವಾದಿ ರಾಜಕಾರಣಿಗಳು ಎಂದನ್ನದೆ ಇನ್ನೇನನ್ನ ಬೇಕು? ಜನರೇ ಇಂತಹವರಿಗೆ ಬುದ್ಧಿ ಕಲಿಸಬೇಕು.
ಹೇಗಾದರೂ ಆಗಲಿ ಅಧಿಕಾರ ಪಡೆಯಲೇಬೇಕು ಎಂದು ಹವಣಿಸುತ್ತಿರುವ ಕಾಂಗ್ರೆಸ್ ಪಕ್ಷ ಅಥವಾ ಜನತಾದಳ ಅಧಿಕಾರಕ್ಕಾಗಿ ವಲಸೆ ಬಂದವರಿಗಲ್ಲ ಮಣೆ ಹಾಕುತ್ತಿದೆ. ಆದರೆ ನಿಜಕ್ಕೂ ಅವರಿಗೆ ಮಾತೃ ಪಕ್ಷದಲ್ಲಿದ್ದಂತಹ ಪ್ರಾಬಲ್ಯ ದೊರೆಯುತ್ತದೆಯೇ ಎಂದು ಯೋಚಿಸುವುದು ಒಳಿತು.
ಇದು ಎಲ್ಲಾ ಪಕ್ಷಗಳ ಅಭ್ಯರ್ಥಿಗಳಿಗೂ ಅನ್ವಯಿಸುವುದು.

Share