ಸಚಿವದ್ವಯರಿಂದ ಮೈಸೂರು ಪಾಲಿಕೆ ಪ್ರಗತಿ ಪರಿಶೀಲನೆ

Share

*ಪಾಲಿಕೆ ಪ್ರಗತಿ ಪರಿಶೀಲನೆ ನಡೆಸಿದ ಸಚಿವರಾದ ಎಸ್.ಟಿ.ಸೋಮಶೇಖರ್ ಮತ್ತು ಬೈರತಿ ಬಸವರಾಜ್*

*ಮೈಸೂರಿನ ಸ್ವಚ್ಛತೆ ಕಾಪಾಡಲು ಕಟ್ಟುನಿಟ್ಟಿನ ಸೂಚನೆ*

ಮೈಸೂರು, ಜುಲೈ. 16:- ಮೈಸೂರು ನಗರವು ಸ್ವಚ್ಚ ನಗರಿಯಾಗಬೇಕು. ಅತ್ಯುತ್ತಮ ನಗರವಾಗಿ ಹೊರಹೊಮ್ಮಬೇಕು. ಇದಕ್ಕಾಗಿ ಎಲ್ಲಾ ರೀತಿಯ ಸಹಕಾರವನ್ನು ಅಧಿಕಾರಿಗಳು ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಬಸವರಾಜು ಭೈರತಿ ಅವರು ಹೇಳಿದರು.

ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರ ಉಪಸ್ಥಿತಿಯಲ್ಲಿ ಶುಕ್ರವಾರ ನಗರ ಪಾಲಿಕೆಯ ಜಯಚಾಮರಾಜೇಂದ್ರ ಸಭಾಂಗಣದಲ್ಲಿ ನಡೆದ ಮೈಸೂರು ನಗರ ಪಾಲಿಕೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಅಧಿಕಾರಿಗಳು ರಸ್ತೆಗಿಳಿದು, ಅಲ್ಲಿನ ಸಮಸ್ಯೆಗಳನ್ನು ಹಾಗೂ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಬೇಕು. ಇಂತಹ ಕಾರ್ಯಕ್ಕೆ ಕೈ ಜೋಡಿಸದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ಪ್ರಮುಖ ನದಿಗಳಿಂದ 305 ಎಂ.ಎಲ್.ಡಿ. ನೀರನ್ನು ತೆಗೆದುಕೊಳ್ಳುತ್ತಿದ್ದರೂ ಕೂಡ ನೀರಿನ ಕೊರತೆಯಾಗುತ್ತಿದೆ ಎಂಬ ದೂರು ಬಂದಿದೆ. ಎಲ್ಲಿ ನೀರು ಸೋರಿಕೆಯಾಗುತ್ತಿದೆ ಎಂಬುದನ್ನು ಪರಿಶೀಲಿಸಿ ಅದರ ಬಗ್ಗೆ ಸಮಗ್ರ ಮಾಹಿತಿ ನೀಡುವಂತೆ ಈಗಾಗಲೇ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಮೈಸೂರು ನಗರದಲ್ಲಿ ಅನೇಕ ಕಾಮಗಾರಿಗಳು ಪ್ರಗತಿಯಲ್ಲಿವೆ. ನೆನೆಗುದಿಗೆ ಬಿದ್ದಿರುವ ಕಾಮಗಾರಿಗಳು ಶೀಘ್ರವಾಗಿ ಮುಗಿಸಿ ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಿಕೊಡುವಂತೆ ಸೂಚಿಸಲಾಗಿದೆ ಎಂದರು.

ಮೈಸೂರು ನಗರಕ್ಕೆ ಸುಮಾರು 60 ಸಾವಿರ ಎಲ್.ಇ.ಡಿ. ಲೈಟ್ ಹಾಕಲು ಸೂಚಿಸಲಾಗಿದೆ. ಈ ಸಂಬಂಧ ಆದೇಶದ ಪ್ರತಿಯನ್ನು ಶೀಘ್ರದಲ್ಲೆ ನೀಡಲಾಗುವುದು ಎಂದರು.

ಹಳೆ ಉಂಡವಾಡಿಯಲ್ಲಿ ನಡೆಯುತ್ತಿರುವ ಕುಡಿಯುವ ನೀರು ಸರಬರಾಜು ಯೋಜನೆಯು 30 ತಿಂಗಳಲ್ಲಿ ಮುಗಿಯಲಿದೆ. ಇದರ ಜೊತೆಗೆ ಕಬಿನಿಯಿಂದ ಸುಮಾರು 90 ಎಂ.ಎಲ್.ಡಿ ನೀರನ್ನು ಹೆಚ್ಚುವರಿಯಾಗಿ ತೆಗೆದುಕೊಳ್ಳುವುದರ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಮುಡಾ ಅಧ್ಯಕ್ಷರಿಗೆ ಹಾಗೂ ಆಯುಕ್ತರಿಗೆ ತಿಳಿಸಲಾಗಿದೆ ಎಂದರು.

ನದಿಗಳಿಗೆ ಕಲುಷಿತ ನೀರು ಸೇರುತ್ತಿದ್ದರೆ ಅದರ ಬಗ್ಗೆ ಗಮನ ಹರಿಸಿ ನದಿಗೆ ಕಲುಷಿತ ನೀರು ಬಿಡುವವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಪ್ರತಿ ಮನೆಗೆ ಮೀಟರ್ ಅಳವಡಿಸಲು ಅಧಿಕಾರಿಗಳಿಗೆ ಸಮಯವನ್ನು ನಿಗದಿ ಮಾಡಲಾಗಿದೆ ಎಂದರು.

ನಗರ ಪಾಲಿಕೆಯ ಮಹಾಪೌರ ಅನ್ವರ್ ಬೇಗ್, ಶಾಸಕರ ಜಿ.ಟಿ.ದೆವೇಗೌಡ, ತನ್ವೀರ್ ಸೇಠ್, ಎಲ್.ನಾಗೇಂದ್ರ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ವಿ.ರಾಜೀವ್, ಬಣ್ಣ ಮತ್ತು ಅರಗು ಕಾರ್ಖಾನೆ ಅಧ್ಯಕ್ಷ ಫಣೀಶ್, ಜೆ.ಎಲ್‌.ಆರ್. ಅಧ್ಯಕ್ಷ ಅಪ್ಪಣ್ಣ, ‌ಪೌರಾಡಳಿತದ ನಿರ್ದೇಶಕಿ ಬಿ.ಬಿ.ಕಾವೇರಿ, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಕೆ.ಯು.ಡಬ್ಲ್ಯು.ಎಸ್.ಎಸ್.ಬಿ. ನಿರ್ವಾಹಕ ನಿರ್ದೇಶಕ ಟಿ‌ಎಚ್ಎಂ ಕುಮಾರ್, ನಗರ ಪಾಲಿಕೆಯ ಆಯುಕ್ತ ಜಿ.ಲಕ್ಷ್ಮಿಕಾಂತ್ ರೆಡ್ಡಿ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ.ಡಿ.ಬಿ.ನಟೇಶ್, ಸೇರಿದಂತೆ ಇತರರು ಹಾಜರಿದ್ದರು.


Share