ಸಚಿವರಿಂದ ಮಿಲ್ಕ್ ಡೈರಿ ಗೆ ದಿಢೀರ್ ಭೇಟಿ

ಮೈಸೂರು ನಗರ ಮಿಲ್ಕ್ ಡೈರಿಯಲ್ಲಿ ಶುಚಿತ್ವವೇ ಮೊದಲ ಆದ್ಯತೆ; ಸಚಿವ ಎಸ್ ಟಿ ಎಸ್

• ಮೈಸೂರು ನಗರ ಮಿಲ್ಕ್ ಡೈರಿಗೆ ಸಹಕಾರ ಸಚಿವರಾದ ಸೋಮಶೇಖರ್ ದಿಢೀರ್ ಭೇಟಿ
• ಹಾಲು ಉತ್ಪನ್ನ ಘಟಕಗಳ ಪರಿಶೀಲನೆ, ಗುಣಮಟ್ಟ-ಶುಚಿತ್ವದ ಪರೀಕ್ಷೆ
• ಸಿಬ್ಬಂದಿ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಲು ಎಂಡಿಗೆ ಸೂಚನೆ
• ಶುಚಿತ್ವ-ಗುಣಮಟ್ಟದ ಬಗ್ಗೆ ಸಹಕಾರ ಸಚಿವರಿಂದ ಮೆಚ್ಚುಗೆ

ಮೈಸೂರು: ಮೈಸೂರು ನಗರ ಮಿಲ್ಕ್ ಡೈರಿಗೆ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಹಾಲು ಸಂಗ್ರಹಣಾ ಕೇಂದ್ರ, ಶೈತ್ಯಾಗಾರ, ಹಾಲಿನ ಪುಡಿ, ಪೇಡಾ ಉತ್ಪಾದನೆ ಸೇರಿದಂತೆ ಹಾಲಿನ ಉತ್ಪನ್ನಗಳ ಘಟಕಗಳಿಗೆ ಭೇಟಿ ನೀಡಿ ಗುಣಮಟ್ಟ ಹಾಗೂ ಶುಚಿತ್ವದ ಪರಿಶೀಲನೆ ನಡೆಸಿದರು.

ಈ ವೇಳೆ ಮಾತನಾಡಿದ ಸಚಿವರಾದ ಸೋಮಶೇಖರ್ ಅವರು, ಈಗಾಗಲೇ ಉತ್ತಮ ರೀತಿಯಲ್ಲಿ ಶುಚಿತ್ವವನ್ನು ಕಾಪಾಡಿಕೊಳ್ಳುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಆದರೆ, ಕೋವಿಡ್-19 ಇರುವ ಈ ಸಂದರ್ಭದಲ್ಲಿ ಶುಚಿತ್ವದ ಬಗ್ಗೆ ಇನ್ನೂ ಹೆಚ್ಚಿನ ಕಾಳಜಿವಹಿಸುವ ಅಗತ್ಯವಿದೆ. ಕಾರಣ, ಇಲ್ಲಿರುವ ಸಿಬ್ಬಂದಿ ಹಾಗೂ ಈ ಉತ್ಪನ್ನಗಳನ್ನು ಸೇವಿಸುವ ಸಾರ್ವಜನಿಕರ ಆರೋಗ್ಯವೂ ನಮಗೆ ಅಷ್ಟೇ ಮುಖ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಸಿಬ್ಬಂದಿ ಘಟಕಕ್ಕೆ ಆಗಮಿಸುವ ಮುನ್ನ ಟೆಂಪ್ರೇಚರ್ ಪರೀಕ್ಷೆ, ಸ್ಯಾನಿಟೈಸೇಶನ್, ಮಾಸ್ಕ್ ಗಳಂತ ಮುಂಜಾಗ್ರತಾ ಕ್ರಮಗಳನ್ನು ವಹಿಸಬೇಕು. ಈ ಮೂಲಕ ಶುಚಿತ್ವವೇ ನಮ್ಮ ಮೊದಲ ಆದ್ಯತೆಯಾಗಬೇಕು ಎಂದು ಘಟಕದ ವ್ಯವಸ್ಥಾಪಕ ನಿರ್ದೇಶಕರಾದ ಅಶೋಕ್ ಅವರಿಗೆ ಸಲಹೆ, ಸೂಚನೆ ನೀಡಿದರು.

ಪ್ರತಿ ದಿನ 7.20 ಲಕ್ಷ ಲೀಟರ್ ಹಾಲು ಸಂಗ್ರಹ

ಮೈಸೂರು ನಗರ ಮಿಲ್ಕ್ ಡೈರಿಗೆ ರೈತರಿಂದ ಪ್ರತಿದಿನ 7.20 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಇದರಲ್ಲಿ 3 ಲಕ್ಷ ಲೀಟರ್ ಹಾಲು, ಮೊಸರು ಉತ್ಪನ್ನಗಳು ಸ್ಥಳೀಯ ಮಾರುಕಟ್ಟೆಗೆ ವಿತರಣೆಯಾಗುತ್ತದೆ. ಉಳಿದ ಹಾಲುಗಳಲ್ಲಿ ಘಟಕದ ಬೇಡಿಕೆಗೆ ಅನುಗುಣವಾಗಿ ಸಿಹಿ ಹಾಗೂ ಹಾಲು ಉತ್ಪನ್ನಗಳನ್ನು ತಯಾರಿಸಲಾಗುತ್ತದೆ. ಜೊತೆಗೆ ಬೆಂಗಳೂರು, ಮದರ್ ಡೈರಿಗಳಲ್ಲಿನ ಬೇಡಿಕೆಗೆ ತಕ್ಕಂತೆ ಅಲ್ಲಿಗೂ ಹಾಲನ್ನು ಕಳುಹಿಸಿಕೊಡಲಾಗುವುದು ಎಂದು ವ್ಯವಸ್ಥಾಪಕ ನಿರ್ದೇಶಕರು ಸಚಿವರಿಗೆ ಮಾಹಿತಿ ನೀಡಿದರು.

ಸಾರ್ವಜನಿಕರು ನಂದಿನಿ ಉತ್ಪನ್ನಗಳ ಉಪಯೋಗಿಸಲಿ

ಗುಣಮಟ್ಟ ಹಾಗೂ ಶುಚಿತ್ವಕ್ಕೆ ಪ್ರಥಮ ಆದ್ಯತೆ ನೀಡಲಾಗುತ್ತಿರುವುದರಿಂದ ಇಲ್ಲಿನ ಸಿಹಿ ಪದಾರ್ಥ, ತುಪ್ಪ, ಬೆಣ್ಣೆ, ಹಾಲು, ಮೊಸರು ಸೇರಿದಂತೆ ನಂದಿನಿ ಉತ್ಪನ್ನಗಳನ್ನು ಸಾರ್ವಜನಿಕರು ಹೆಚ್ಚು ಹೆಚ್ಚು ಬಳಸಬೇಕು. ಈ ಮೂಲಕ ದೇಶೀಯ ಅದರಲ್ಲೂ ಸ್ಥಳೀಯ ಉತ್ಪನ್ನಗಳಿಗೆ ಬೆಂಬಲ ನೀಡಬೇಕು. ನಮ್ಮ ರೈತರಿಗೆ ಬೆಂಬಲಿಸಿ ಹೈನೋದ್ಯಮಕ್ಕೆ ಪ್ರೋತ್ಸಾಹ ಕೊಡಬೇಕು ಎಂದು ಸಚಿವರಾದ ಸೋಮಶೇಖರ್ ಅವರು ಕರೆ ನೀಡಿದರು.

ಈ ಸಂದರ್ಭದಲ್ಲಿ ನಗರ ಮಿಲ್ಕ್ ಡೈರಿ ನಿರ್ದೇಶಕರಾದ ಅಶೋಕ್ ಹಾಗೂ ಸಹಕಾರಿ ಮುಖಂಡರಾದ ರಾಜೀವ್ ಅವರು ಉಪಸ್ಥಿತರಿದ್ದರು.