ಸಚಿವರು ಪ್ರತಿ ಹಂತದಲ್ಲೂ ದುಡ್ಡು ಹೊಡೆಯುತ್ತಿದ್ದಾರೆ ಕೆಪಿಸಿಸಿ ಅಧ್ಯಕ್ಷರ ಆರೋಪ

347
Share

ಸಚಿವರು ಜನರನ್ನು ರಕ್ಷಿಸುವ ಬದಲು ದುಡ್ಡು ಮಾಡಲು ಮುಂದಾಗಿದ್ದಾರೆ: ಡಿ.ಕೆ ಶಿವಕುಮಾರ್ ವಾಗ್ದಾಳಿ

ಬೆಂಗಳೂರು:

ದೇಶದಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿದ್ದು, ಸಾವಿನ ಪ್ರಮಾಣ ಏರಿಕೆಯಾಗುತ್ತಿದೆ. ಈ ಸಂದರ್ಭದಲ್ಲಿ ಸಚಿವರುಗಳು ಜನರನ್ನು ರಕ್ಷಿಸುವ ಬದಲು ದುಡ್ಡು ಬಾಚಿಕೊಳ್ಳುವತ್ತ ಹೆಚ್ಚು ಗಮನ ಹರಿಸಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.

ಮಾಧ್ಯಗಳಲ್ಲಿ ಸರ್ಕಾರದ ಭ್ರಷ್ಟಾಚಾರ ಕುರಿತು ಬಂದಿರುವ ವರದಿಗೆ ಸಂಬಂಧಿಸಿದಂತೆ ಶನಿವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್, ಈ ಎಲ್ಲ ಆರೋಪಗಳಿಗೆ ಮುಖ್ಯಮಂತ್ರಿಗಳು ಉತ್ತರ ನೀಡಬೇಕು ಎಂದು ಆಗ್ರಹಿಸಿದರು. ಈ ವೇಳೆ ಅವರು ಹೇಳಿದ್ದಿಷ್ಟು…

‘ಕೊರೋನಾ ನಿಯಂತ್ರಣಕ್ಕೆ ಹಾಗೂ ಜನರ ಜೀವ ಉಳಿಸಲು ದೇಶದೆಲ್ಲೆಡೆ ಸರ್ಕಾರಗಳಿಗೆ ಸಂಪೂರ್ಣ ಸಹಕಾರ ನೀಡಲಾಗುತ್ತಿದೆ. ಆದರೆ ಕರ್ನಾಟಕದಲ್ಲಿ ಪ್ರತಿ ಹಂತದಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ.

ಹಾಸಿಗೆ, ದಿಂಬಿನಿಂದ ಹಿಡಿದು, ವೆಂಟಿಲೇಟರ್, ಪಿಪಿಇ ಕಿಟ್ ಖರೀದಿವರೆಗೂ ಅಕ್ರಮ ನಡೆದಿದೆ. ಇಲ್ಲಿ ಶೇ. 5, 10, 20, 30ರಷ್ಟು ಭ್ರಷ್ಟಾಚಾರ ನಡೆದಿಲ್ಲ. ಶೇ.200ರಿಂದ 500 ರಷ್ಟು ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆದಿರುವುದನ್ನು ನಾವು ನೋಡುತ್ತಿದ್ದೇವೆ.

ಹಾಸಿಗೆ ಹಗರಣ, ವೆಂಟಿಲೇಟರ್ ಹಗರಣಗಳ ಬಗ್ಗೆ ಮಾಧ್ಯಮಗಳು ಬೆಳಕು ಚೆಲ್ಲಿವೆ. ರಾಜ್ಯದಲ್ಲಿ ಮಾಧ್ಯಮಗಳು ಜನರ ಪರ ಧ್ವನಿಯಾಗಿ ಅಂಕಿಅಂಶಗಳನ್ನು ನಮ್ಮ ಮುಂದೆ ಇಡುತ್ತಿವೆ.

ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು, ಇದಕ್ಕೆ ಉತ್ತರ ಹಾಗೂ ಲೆಕ್ಕವನ್ನು ನೀಡಲಿ ಎಂದು ಆಗ್ರಹಿಸುತ್ತೇನೆ. ನಾನು ಅಥವಾ ನಮ್ಮ ವಿರೋಧ ಪಕ್ಷದ ನಾಯಕರು ಈ ವಿಚಾರದ ಬಗ್ಗೆ ಮಾತನಾಡಿದರೆ ಅದನ್ನು ರಾಜಕೀಯ ಆರೋಪ ಎಂದು ದೂರುತ್ತೀರಿ. ಆದರೆ ಮಾಧ್ಯಮಗಳು ಯಾವುದೇ ವೈಯಕ್ತಿಕ ಹಾಗೂ ರಾಜಕೀಯ ಅಜೆಂಡಾ ಇಟ್ಟುಕೊಂಡಿಲ್ಲ.

ಮುಖ್ಯಮಂತ್ರಿ ಸ್ಥಾನದಲ್ಲಿ ಕೂತಿರುವ ನೀವು ಈ ಪ್ರಶ್ನೆಗಳಿಗೆಲ್ಲಾ ಉತ್ತರ ನೀಡಬೇಕಾಗಿರುವುದು ನಿಮ್ಮ ಕರ್ತವ್ಯ. ಕಳೆದ 60 ವರ್ಷಗಳಲ್ಲಿ ಮಾನವೀಯ ವಿಚಾರಕ್ಕೆ ಸಂಬಂಧಿಸಿದಂತೆ ನಡೆದಿರುವ ಅತಿ ದೊಡ್ಡ ಹಗರಣ ಇದಾಗಿದೆ. ಕೊರೋನಾದಂತಹ ಕಠಿಣ ಸಮಯದಲ್ಲಿ ಇಂತಹ ದೊಡ್ಡ ಭ್ರಷ್ಟಾಚಾರವನ್ನು ಜನರು ನಿರೀಕ್ಷೆ ಮಾಡಿರಲಿಲ್ಲ.

ಹಾಸಿಗೆ ವಿಚಾರದಲ್ಲಿ ಅವ್ಯವಹಾರದ ಬಗ್ಗೆ ಗೊತ್ತಾಗಿ ಮುಖ್ಯಮಂತ್ರಿಗಳೇ ಆ ನಿರ್ಧಾರ ವಾಪಸ್ ಪಡೆದಿದ್ದಾರೆ. ಅದೇ ರೀತಿ ಸಚಿವರುಗಳು ಪ್ರತಿ ಹಂತದಲ್ಲೂ ದುಡ್ಡು ಹೊಡೆಯುತ್ತಿದ್ದಾರೆ. ಮುಖ್ಯಮಂತ್ರಿಗಳು ಸಾಲು ಸಾಲಾಗಿ ಮಂತ್ರಿಗಳಿಗೆ ಕೊರೋನಾ ಜವಾಬ್ದಾರಿ ವಹಿಸಿದರೂ, ಯಾರೊಬ್ಬರೂ ಆಸ್ಪತ್ರೆಗೆ ಹೋಗಿ ಅಲ್ಲಿನ ಸೋಂಕಿತರ ಜತೆ ಮಾತನಾಡಿ ಅವರಿಗೆ ಆತ್ಮ ವಿಶ್ವಾಸ ತುಂಬುವ ಕೆಲಸ ಮಾಡಿಲ್ಲ. ಸಚಿವರು ಜನರನ್ನು ರಕ್ಷಿಸುವ ಬದಲು ದುಡ್ಡು ಮಾಡುವ ಬಗ್ಗೆ ಆಸಕ್ತಿ ಹೊಂದಿದ್ದಾರೆ. ಹೀಗಾಗಿ ಮುಖ್ಯಮಂತ್ರಿಗಳು ಈ ವಿಚಾರವಾಗಿ ಉತ್ತರ ನೀಡಲೇಬೇಕು.’


Share