ಸತ್ಯ ಏನೆಂದು ತಿಳಿಯದೆ ಎಚ್.ಡಿ.ಕುಮಾರಸ್ವಾಮಿ ಆರೋಪ:

ಸತ್ಯ ಏನೆಂದು ತಿಳಿಯದೆ ಎಚ್.ಡಿ.ಕುಮಾರಸ್ವಾಮಿ ಆರೋಪ: ರೇಖಾ ಶ್ರೀನಿವಾಸ್ ಟೀಕೆ

ಮೈಸೂರು: ಒಂದಲ್ಲ, ಎರಡು ಬಾರಿ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ್ದ ಎಚ್.ಡಿ.ಕುಮಾರಸ್ವಾಮಿ ಅವರು ಸತ್ಯ ಯಾವುದು ಎಂದು ತಿಳಿದುಕೊಳ್ಳದೆ ವೈಯಕ್ತಿಕ ದ್ವೇಷದಿಂದ ಸಿದ್ದರಾಮಯ್ಯ ಹಾಗೂ ಡಾ.ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಆರೋಪ ಮಾಡುತ್ತಿರುವುದು ಅವರ ಘನತೆಗೆ ತಕ್ಕದ್ದಲ್ಲ ಎಂದು ಕಾಂಗ್ರೆಸ್ ಮಹಿಳಾ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ರೇಖಾ ಶ್ರೀನಿವಾಸ್ ಟೀಕಿಸಿದ್ದಾರೆ.
ಅಧಿಕಾರ ಇಲ್ಲದಿದ್ದರೂ ಸಲ್ಲದೆ ಆರೋಪ ಮಾಡಿಕೊಂಡೇ ಬರುತ್ತಿರುವ ಕುಮಾರಸ್ವಾಮಿ ಅವರು, ಚಾಮುಂಡೇಶ್ವರಿ ಉಪ ಚುನಾವಣೆಯಿಂದಲೂ ಸಿದ್ದರಾಮಯ್ಯ ವಿರುದ್ಧ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಹಿಂದೆ ಮುಖ್ಯಮಂತ್ರಿ ಅಗಿದ್ದವರು ಯಾವ ರೀತಿ ನಡೆದುಕೊಳ್ಳಬೇಕು ಎನ್ನುವುದನ್ನೇ ಮರೆತಿದ್ದಾರೆ. ಆರೋಪ ಮಾಡುತ್ತಲೇ ಕಾಲ ಕಳೆಯುತ್ತಿದ್ದಾರೆ ಎಂದು ಹೇಳಿಕೆಯಲ್ಲಿ ದೂರಿದ್ದಾರೆ.
ಶಾಲಾ ಕಟ್ಟಡ ನಿರ್ಮಾಣ ಕುರಿತು ಯತೀಂದ್ರ ಮಾಡಿರುವ ಮಾತುಕತೆಯನ್ನೇ ಕತೆ ಕಟ್ಟುವ ಕುಮಾರಸ್ವಾಮಿ, ವಾಸ್ತವದಲ್ಲಿ ಏನಾಗಿದೆ, ಶಾಲಾ ಕಟ್ಟಡಗಳು ಯಾವುದು ಎಂದು ವರದಿ ತರಿಸಿಕೊಂಡು ನೋಡಬಹುದಾಗಿತ್ತು. ಆದರೆ ಮಾಧ್ಯಮದಲ್ಲಿ ಪ್ರಚಾರಕ್ಕೋಸ್ಕರ ಆರೋಪ, ಟೀಕೆ ಮಾಡುವುದು ಸರಿಯಲ್ಲ ಎಂದಿದ್ದಾರೆ.