ಸರಳವಾಗಿ ಶ್ರೀಶ್ರೀಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ ವರ್ಧಂತಿ ಆಚರಣೆ

902
Share

ಮೈಸೂರು .ನಾಳೆ ಮೈಸೂರು ನಗರದ ಅವಧೂತ ದತ್ತಪೀಠದ ಪರಮ ಪೂಜ್ಯ ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಯವರ 78ನೇ ಹುಟ್ಟು ಹಬ್ಬವನ್ನು ಅತ್ಯಂತ ಸರಳ ರೀತಿಯಲ್ಲಿ ಆಶ್ರಮದಲ್ಲಿ ಆಚರಿಸಲಾಗುತ್ತಿದೆ. ಎಂದು ಅವಧೂತ ದತ್ತಪೀಠದ ಗಣಪತಿ ಆಶ್ರಮದ ಪ್ರಕಟಣೆ ಯಲ್ಲಿ ತಿಳಿಸಲಾಗಿದೆ ಈ ಸಂದರ್ಭದಲ್ಲಿ ಶ್ರೀ ಶ್ರೀ ಗಳು ಜನತೆಯನ್ನುದ್ದೇಶಿಸಿ ಈ ರೀತಿ ಸಂದೇಶವನ್ನು ನೀಡಿದ್ದಾರೆ.
ಇಂದು ಮಾನವ ಜಗತ್ತು ಕಠೋರ ಸಂಕಷ್ಟವನ್ನು ಎದುರಿಸುತ್ತಿದ್ದು ಕೊರೋನಾ ಎಂಬ ಕಣ್ಣಿಗೆ ಕಾಣದ ಸೂಕ್ಷ್ಮಾಣು ಮನುಷ್ಯನ ನಿರ್ನಾಮಕ್ಕೆ ಪಣ ತೊಟ್ಟಂತೆ ದಾಳಿ ಇಡುತ್ತಿದೆ . ಜೀವರಾಶಿಗಳಲ್ಲಿ ತಾನೇ ಸರ್ವ ಶ್ರೇಷ್ಠ ಎಂದು ಮೆರೆಯುತ್ತಿದ್ದ ಮಾನವರಿಗೆ ಕರೋನಾ ಸಣ್ಣ ಕ್ರಿಮಿ ಆಘಾತಕಾರಿಯಾಗಿ ಪರಿಣಮಿಸಿದೆ . ಮಾನವ ಮಾಡಿದ ತಪ್ಪುಗಳಿಗೆ ಸೃಷ್ಟಿ ನೀಡುವ ಪಾಠ ಇದಾಗಿರಬಹುದೆಂದು ಹೇಳಬಹುದು. ಇನ್ನಾದರೂ ಮನುಷ್ಯ ತನ್ನ ಬುದ್ದಿಗೆ ಮೆತ್ತಿರುವ ಅಹಂನ್ನು ಒಗೆದು , ಮಾನವಜನ್ಮ ಸಾರ್ಥಕಪಡಿಸಿಕೊಳ್ಳಬೇಕಿದೆ . ಧರ್ಮ , ಕರ್ಮ ಹಾಗೂ ಆಧ್ಯಾತ್ಮಗಳನ್ನು ಸರಿಯಾಗಿ ಅನುಸರಿಸಿದಾಗಷ್ಟೇ ಪರಿಪೂರ್ಣ ಮನುಷ್ಯರೆನಿಸಿಕೊಳ್ಳಲು ಸಾಧ್ಯ .
ನನ್ನ ದೃಷ್ಟಿಯಲ್ಲಿ ಧರ್ಮವಿಲ್ಲದೆ ಮನುಷ್ಯನಿಲ್ಲ . ಧರ್ಮ ಎಂಬುದು ದೈವ ನಿಯಮ , ನೈತಿಕವಾಗಿ ಮನುಷ್ಯ ಬಾಳಿ – ಬದುಕಲು ಬೇಕಾದ ಚೌಕಟ್ಟನ್ನು ಹಾಕಿಕೊಡುವುದೇ ಧರ್ಮ. ಧರ್ಮ ಅನುಸರಿಸಿ ಉತ್ತಮ ಜೀವನ ನಡೆಸಿದವರು ಇದ್ದಾರೆ, ಧರ್ಮದ ಚೌಕಟ್ಟು ಮೀರಿ ಬಾಳಲೆತ್ನಿಸಿ ನಾನಾ ಯಾತನೆಗಳನ್ನು ಅನುಭವಿಸಿದವರು ಇದ್ದಾರೆ. ಧರ್ಮವು ಯಾವತ್ತೂ ಹಾದಿ ತಪ್ಪಿಲ್ಲ . ಧರ್ಮವನ್ನು ಮನುಷ್ಯ ಹಾದಿ ತಪ್ಪಿಸಲು ಯತ್ನಿಸಿದ್ದಾನೆ , ಆ ಪ್ರಯತ್ನ ಯಾವತ್ತೂ ಫಲಿಸಿಲ್ಲ . ಆ ರೀತಿ ಪ್ರಯತ್ನ ಪಟ್ಟವರು ಕಷ್ಟಕ್ಕೆ ಸಿಲುಕಿದಿದಾರೆ. ಹುಟ್ಟಿದ ಪ್ರತಿಯೊಂದು ಜೀವಿಯೂ ತನ್ನೊಂದಿಗೆ ಮೃತ್ಯುವನ್ನೂ ತಂದಿರುತ್ತದೆ . ಇಂದು ನಾವು ಹುಟ್ಟಿದ್ದು ಎಷ್ಟು ನಿಜವೋ- ನಾಳೆ ನಮ್ಮ ಆಯುಷ್ಯ ಕಳೆದು ಮೃತ್ಯುವಶವಾಗುವುದೂ ಅಷ್ಟೇ ನಿಜ. ಶ್ರೀಕೃಷ್ಣನು “ ಪರಿವರ್ತನೆ ಈ ಜಗದ ನಿಯಮ ” ಅನ್ನುತ್ತಾನೆ , ಇಹದಲ್ಲೇ ಮಾನವರು ಪರಿಪೂರ್ಣತೆ ಸಾಧಿಸಬಹುದೆಂಬುದನ್ನು ಹೇಳಿಕೊಟ್ಟ.ಜೀವನದ ಕೌಶಲ್ಯ ತಿಳಿಸಿಕೊಟ್ಟ, ಮನುಷ್ಯತನವನ್ನು ಸಾಕಾರಗೊಳಿಸಿಕೊಟ್ಟ ಭಗವಂತ ಶ್ರೀಕೃಷ್ಣನು ಧರ್ಮ – ಕರ್ಮ – ಆತ್ಮ ಸಾಕ್ಷಾತ್ಕಾರದ ಮೂಲಕ ಮನುಷ್ಯ ತನ್ನ ಒಂದು ಜೀವಿತಾವಧಿಯಲ್ಲೇ ಮೋಕ್ಷ ಸಾಧಿಸಬಹುದೆಂಬುದನ್ನು ಸರಳ ವಿಧಾನದಲ್ಲಿ ತಿಳಿಸಿಕೊಟ್ಟಿದ್ದಾನೆ. ಇಂದು ನಮ್ಮ ಭಾರತೀಯ ಸಮಾಜದಲ್ಲಿ ಸನಾತನ ಸಂಸ್ಕೃತಿ ಮತ್ತು ನೈತಿಕ ಮೌಲ್ಯಗಳು ಬಹುತೇಕ ಉಳಿದಿರುವುದು ಬಡ – ಮಧ್ಯಮ ವರ್ಗದ ಕುಟುಂಬಗಳಲ್ಲಿ. ಉತ್ತಮ ಬದುಕಿನ ಕಡೆಗೆ ಹೆಜ್ಜೆ ಇಡುತ್ತಿದ್ದು, ಇಂದು ದೇಶದ ಭವಿಷ್ಯವನ್ನು ಕಾಪಾಡಿ ಪ್ರಗತಿ ಪಥದತ್ತ ಕೊಂಡೊಯ್ಯುತ್ತಿರುವುದು ಹೆಚ್ಚಾಗಿ ಇದೇ ವರ್ಗದ ಮಕ್ಕಳು . ಎಷ್ಟೋ ಶ್ರೀಮಂತ ವರ್ಗದ ಅಪ್ಪ – ಅಮ್ಮಂದಿರು ಹಾದಿ ತಪ್ಪಿದ ತಮ್ಮ ಮಕ್ಕಳನ್ನು ಸರಿದಾರಿಗೆ ತರಲು ಸಾಧ್ಯವಾಗದೇ ಪರಿತಪಿಸುತ್ತಿದ್ದಾರೆ . ಹಿರಿಯರು ನೈತಿಕವಾಗಿ ಬದುಕಿದರೆ , ನಮ್ಮ ಮಕ್ಕಳೂ ನೈತಿಕವಾಗಿ ಬಾಳುವುದನ್ನು ರೂಢಿಸಿಕೊಳ್ಳುತ್ತಾರೆ. ನಮ್ಮ ಮಕ್ಕಳೂ ನಮ್ನನ್ನೆ ಅನುಸರಿಸಿ, ಕೆಟ್ಟದಾಗಿ ಬದುಕುವುದನ್ನು ಕಲಿಯುತ್ತಾರೆ. ಮಕ್ಕಳಿಗೆ ಪ್ರಾಮಾಣಿಕವಾಗಿ ದುಡಿದು
ತಿನ್ನುವುದನ್ನು ಕಲಿಸಬೇಕು . ಹಾಗೆ ನಮ್ಮ ಮಕ್ಕಳು ಪ್ರಾಮಾಣಿಕವಾಗಿ ಬದುಕಬೇಕಾದರೆ , ನಾವು ಪ್ರಾಮಾಣಿಕವಾಗಿ ದುಡಿದು ತಂದ ಹಣದಲ್ಲಿ ಮಕ್ಕಳನ್ನು ಸಾಕಿ ಬೆಳೆಸಬೇಕು. ಆದ್ದರಿಂದ ಪ್ರತಿಯೊಬ್ಬರೂ ಪ್ರಾಮಾಣಿಕವಾಗಿ ದುಡಿದ ಹಣದಲ್ಲೇ ಮಕ್ಕಳನ್ನು ಸಾಕಿದರೆ ಮಾತ್ರ ಅವರಿಗೆ ಶ್ರೇಯಸ್ಸು ಎಂದು ನನ್ನ ಭಾವನೆ . ಕೆಲವರು ತಾವು ಪ್ರಾಮಾಣಿಕವಾಗಿ ದುಡಿದು ತಿನ್ನುತ್ತಿದ್ದರೂ, ಮನಸ್ಸಿಗೆ ಶಾಂತಿ, ಮನೆಯಲ್ಲಿ ನೆಮ್ಮದಿ ಇಲ್ಲ ಎಂದುಪರಿತಪಿಸುತ್ತಾರೆ . ಆದರೆ ತಾವು ಮಾಡುವ ಕೆಲಸದ ಆತುರದಲ್ಲಿ ಪ್ರಮಾದಗಳೇನಾದರೂ ಆಗಿದೆಯೋ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು. ಪ್ರತಿಯೊಬ್ಬರೂ ಆತ್ಮ ಶೋಧನೆ ಮಾಡಿಕೊಳ್ಳಬೇಕು . ಪ್ರತಿದಿನ ಅಥವ ವಾರಕ್ಕೊಮ್ಮೆಯಾದರೂ ಧ್ಯಾನದಲ್ಲಿ ಕುಳಿತು , ತಾವು ಈವರೆಗೆ ಮಾಡಿದ ಮತ್ತು ಮುಂದೆ ಮಾಡಬೇಕಾದ ಕೆಲಸಗಳ ಬಗ್ಗೆ ಮೌಲ್ಯ ಮಾಪನ ಮಾಡಿಕೊಳ್ಳಬೇಕು . ಇದರಿಂದ ಮಾಡಿರುವ ಮತ್ತು ಮುಂದೆ ಆಗಬಹುದಾದ ತಪ್ಪುಗಳನ್ನು ಗ್ರಹಿಸಿ , ತಿದ್ದಿಕೊಂಡು , ಮುಂದೆ ಮಾಡಬಹುದಾದ ಕೆಲಸಗಳಲ್ಲಿ ಯಾರಿಗೂ ಕೆಡುಕಾಗದಂತೆ ಮುಂಜಾಗ್ರತೆವಹಿಸಲು ಸಹಾಯಕವಾಗುತ್ತದೆ. ಅವರು ಮುಂದುವರೆಯುತ್ತ ಆಸ್ಪೃಶ್ಯತೆ ಅನ್ನುವುದು ಭರತದಲ್ಲಿ ಒಂದು ದೊಡ್ಡ ಕಪ್ಪು ಚುಕ್ಕೆ. ಮನುಷ್ಯ – ಮನುಷ್ಯರನ್ನು ಕಂಡು ಅಸಹಿಸಿಕೊಳ್ಳುವುದೆಂದರೆ ನಿಜವಾಗಿಯೂ ನಾಚಿಕೆಯ ವಿಷಯ. ತಾವು ಹಲವಾರು ಭಾರಿ ವಿದೇಶ ಪ್ರವಾಸಗಳು ಮಾಡಿದಾಗ ಬಹಳಷ್ಟು ಉಪನ್ಯಾಸಗಳು ನೀಡಿದ್ದಾಗಿಯೂ ಅಲ್ಲಿನ ಜನರ ಕ್ಲಿಷ್ಟಕರ ಪ್ರಶ್ನೆ ಗಳಗೆ ಸಮಾಧಾನಕರ ಉತ್ತರ ಕೊಟ್ಟಿದ್ದಾಗಿಯು, ಆದರೆ ಲಕ್ಷಾಂತರ ಜನರು ಒಂದು ಪ್ರಶ್ನೆ ಕೇಳಿದಾಗ ತಾವು ಉತ್ತರಕ್ಕಾಗಿ ಚಡಪಡಿಸುವಂತಾಗುತ್ತದೆ, “ಸಾವಿರಾರು ವರ್ಷಗಳ ಭವ್ಯ ಇತಿಹಾಸವಿರುವ ದೇಶ ನಿಮ್ಮದೆನ್ನುತ್ತೀರಿ , ಆದರೆ ಸಾವಿರಾರು ವರ್ಷಗಳಿಂದ ಜಾತಿ ಪದ್ಧತಿ ಇದೆ . ಅದರಲ್ಲೂ ದಲಿತರನ್ನು ಅಸ್ಪಶ್ಯರಂತೆ ನೋಡುತ್ತೀರಿ?” ಎಂದಾಗ ನನ್ನ ಹೃದಯ ಒತ್ತರಿಸಿ ಬರುತ್ತೆ ಎಂದರು. ಭಗವಂತನ ದೃಷ್ಟಿಯಲ್ಲಿ ಯಾವ ಜೀವಿಯೂ ಮೇಲೂ ಅಲ್ಲ , ಕೀಳೂ ಅಲ್ಲ . ಯಾವುದೋ ಒಂದು ಕೆಟ್ಟ ಕಾಲದಲ್ಲಿ ಹುಟ್ಟಿಕೊಂಡ ಅಸ್ಪಶ್ಯತೆ ಎಂಬ ಪಿಡುಗು ಹಾಗೇ ಮುಂದುವರೆದು ಭಾರತೀಯ ಸಮಾಜವನ್ನು ಕಾಡುತ್ತಿದೆ. ಅದು ಹೋಗಬೇಕು, ಒಬ್ಬ ಮನುಷ್ಯ ಮತ್ತೊಬ್ಬ ಮನುಷ್ಯನನ್ನು ಗೌರವಿಸುವುದನ್ನು ರೂಢಿಸಿಕೊಳ್ಳಬೇಕು. ಪ್ರತಿಯೊಬ್ಬರಿಗೂ ಆತ್ಮಗೌರವ ಎಂಬುದು ಇರುತ್ತದೆ . ಪ್ರತಿಯೊಬ್ಬರ ಆತ್ಮದಲ್ಲು ಪರಮಾತ್ಮನಿರುತ್ತಾನೆ ಎಂದು ಹೇಳಿದ ಮೇಲೆ ನಾವು ಎಲ್ಲರನ್ನೂ ಗೌರವಾದಾರಗಳಿಂದ ಕಾಣಬೇಕು . ಒಬ್ಬ ವ್ಯಕ್ತಿಗೆ ನಾವು ಗೌರವ ಸೂಚಿಸಿದಾಗ , ಅದು ಆ ವ್ಯಕ್ತಿಯಲ್ಲಿರುವ ಪರಮಾತ್ಮನನ್ನು ಗೌರವಿಸಿದಂತಾಗುತ್ತದೆ . ಒಬ್ಬ ವ್ಯಕ್ತಿಗೆ ನಾವು ಅಗೌರವ ಸೂಚಿಸಿದರೆ , ಅದು ಆ ವ್ಯಕ್ತಿಯಲ್ಲಿರುವ ಪರಮಾತ್ಮನನ್ನು ಅಗೌರವಿಸಿದಂತಾಗುತ್ತದೆ ಎಂಬುದನ್ನು ಮರೆಯಬಾರದು . ನಮ್ಮ ಮನಸನ್ನು ಪ್ರಸ್ತುತ ಕಂಗೆಡಿಸುತ್ತಿರುವ ಎರಡು ವಿಷಯಗಳೆಂದರೆ : ರೈತರ ಆತ್ಮಹತ್ಯೆ ಮತ್ತು ಹೆತ್ತವರು ತಾವೂ ಆತ್ಮಹತ್ಯೆ ಮಾಡಿಕೊಳ್ಳುವುದಲ್ಲದೇ, ತಮ್ಮ ಹೆತ್ತ ಮಕ್ಕಳನ್ನೂ ಕೊಂದು ಸಾವಿನ ಹಾದಿ ತುಳಿಯುತ್ತಿರುವುದು , ನಾಡಿಗೇ ಅನ್ನ ನೀಡುವ ಜನರೆಲ್ಲರ ಹಸಿವು ನೀಗಿಸುವ ರೈತ, ತಾನೇ ಬದುಕಲಾರದ ಸ್ಥಿತಿಗೆ ಬಂದುಬಿಟ್ಟಿದ್ದಾನೆ ಎಂಬುದು ನಿಜಕ್ಕೂ ಆತಂಕದ ಸಂಗತಿ . ಸಾಲವಿರಲಿ, ಬೆಳೆ ನಷ್ಟವಿರಲಿ, ಕೌಟುಂಬಿಕ ಸಮಸ್ಯೆಗಳೇ ಇರಲಿ, ಅದಕ್ಕೆಲ್ಲಾ ಅಂಜಿ ಅನ್ನದಾತ ಆತ್ಮಹತ್ಯೆ ಹಾದಿತುಳಿಯುವುದು ಸರಿಯಲ್ಲ. ಸರ್ಕಾರ, ಇಡೀ ಸಮಾಜ ನಿಮ್ಮೊಂದಿಗಿರುವಾಗ ಸಾಲ – ಸೋಲುಗಳಿಗೆ ಹೆದರಿ ಆತ್ಮಹತ್ಯೆಯ ಹಾದಿಯನ್ನು ತುಳಿಯಬಾರದು. ಇನ್ನು ಹೆತ್ತ ಮಕ್ಕಳನ್ನು ಕೊಂದು ತಾವೂ ಸಾವಿನ ಹಾದಿ ತುಳಿಯುವ ಪಿಡುಗು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಈ ಪಿಡುಗು ಸಂಪೂರ್ಣ ನಿವಾರಣೆಯಾಗಲೇ ಬೇಕು . ಶಿಶುಹತ್ಯೆ ಮಹಾ ಪಾಪ ಎಂದು ಎಲ್ಲಾ ಧರ್ಮಗಳೂ ಹೇಳುತ್ತವೆ. ಶಿಶುಹತ್ಯೆ ಮಾಡಿದ ಪಾಪ ಏಳೇಳು ಜನ್ಮದಲ್ಲೂ ಕಾಡುತ್ತದೆ. ಸಣ್ಣಸಣ್ಣ ಹುಳು – ಹುಪ್ಪಟ್ಟೆಯಂತಹ ಜೀವಿಗಳೂ ಸಹ ತಮ್ಮ ಪ್ರಾಣವನ್ನು ಪಣಕ್ಕಿಟ್ಟಾದರೂ ತಮ್ಮ ಮರಿಗಳನ್ನು ಕಾಪಾಡುತ್ತವೆ. ಇದಕ್ಕೆ ಉದಾಹರಣೆ ಪುಣ್ಯಕೋಟಿ ಹಸು. ಅಂಥದ್ದರಲ್ಲಿ ಬುದ್ಧಿ ಇರುವ ಮನುಷ್ಯರಲ್ಲಿ ಕರುಳ ಕುಡಿಗಳನ್ನು ಕೊಲ್ಲುವ ಪಿಡುಗು ಅಕ್ಷಮ್ಯ ಆ ಭಗವಂತ ಖಂಡಿತ ಕ್ಷಮಿಸಲಾರ . ತಾವು ಅದೆಷ್ಟೋ ಮಹಾಮಾತೆಯರನ್ನ ಕಂಡಿದ್ದಾಗಿಯು, ಕುಡುಕ – ಕೆಡುಕ ಗಂಡನಿದ್ದರೂ , ಕಡು ಬಡತನ ಕಿತ್ತು ತಿನ್ನುತ್ತಿದ್ದರೂ ತನ್ನ ಮಕ್ಕಳಿಗಾಗಿ ಬದುಕುತ್ತೇನೆ ಎಂಬ ಛಲದಿಂದ ದುಡಿದು ಮಕ್ಕಳನ್ನು ಸಾಕಿ ಸಲಹಿದ ಮಹಾತ್ಯಾಗಿ ಮಹಿಳೆಯರನ್ನು ನೋಡಿರುವುದಾಗಿಯು, ಅಂತಹ ಮಹಾಮಾತೆಯರ ತ್ಯಾಗ ಮನೋಬಲದಿಂದಲೇ ಈ ದೇಶ ಸಾವಿರಾರು ವರ್ಷಗಳಿಂದ ಉಳಿದು ನಿಂತಿರುವುದು ಎಂದು ತಿಳಿಸಿದರು. ಈ ಕಾರಣದಿಂದಲೇ ಹೆಣ್ಣನ್ನು ನಮ್ಮ ಭಾರತೀಯ ಧರ್ಮ – ಸಂಸ್ಕೃತಿಯಲ್ಲಿ ದೇವರೆಂದು ಪೂಜಿಸುತ್ತೇವೆ , ಆರಾಧಿಸುತ್ತೇವೆ . ಸ್ತ್ರೀ ದೇವತೆ ಶಕ್ತಿರೂಪಿಣಿ ಎಂದು ಗುರುತಿಸಿದ್ದೇವೆ . ತಾಯಿಯಾಗಿ – ಸೋದರಿಯಾಗಿ – ಮಡದಿಯಾಗಿ ಮನುಕುಲವನ್ನು ಪೊರೆಯುವ ಕುಲದಲ್ಲಿ ಆತ್ಮಸ್ಥೆರ್ಯಕುಂದಬಾರದು . ಆಕೆಯ ಧೀಶಕ್ತಿ ಸದಾಕಾಲ ಈ ಜಗತ್ತನ್ನು ಕಾಪಾಡಬೇಕು , ಈ ಸಂದರ್ಭದಲ್ಲಿ ತಮ್ಮ ತಾಯಿ ಜಯಲಕ್ಷ್ಮಿ ಅಮ್ಮನವರ ನೆನಪಿಸಿಕೊಂಡರು. ಆ ಮಾತೆಯ ಮಡಿಲಲ್ಲಿ ಬೆಳೆದ ನಾನು ನಿಜಕ್ಕೂ ಧನ್ಯ . ನಾನಿಂದು ಧರ್ಮಕಾರ್ಯದಲ್ಲಿ ನಡೆಯುತ್ತಿರುವುದಕ್ಕೆ ನನ್ನ ತಾಯಿಯ ಕೊಡುಗೆ ಅಪಾರವಾಗಿದೆ . ಆಕೆಯ ಆಶೀರ್ವಾದದಿಂದಲೇ ಆಧ್ಯಾತ್ಮಿಕ ಸಾಧನೆಯ ಆಯಾಮಗಳಲ್ಲಿ ಮುನ್ನಡೆದಿದ್ದೇನೆ . ನನ್ನ ತೊರೆದ ಆ ತಾಯಿಯ ವಂದಿಸುತ್ತಾ , ಮಾನವರೆಲ್ಲಾ ತಾವು ಮಾಡಿದ ತಪ್ಪುಗಳನ್ನು ತಿದ್ದಿಕೊಳ್ಳುವಂತಾಗಲಿ, ಎಂದು ಹಾರೈಸಿದರು. ಹಾಗೇ , ಈಗ ಎದುರಾಗಿರುವ ಕೊರೊನಾದಂಥ ಪಿಡುಗನ್ನು ಎದುರಿಸುವಂಥ ಶಕ್ತಿ ಮಾನವರಿಗೆಲ್ಲಾ ಅನುಗ್ರಹಿಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ತಮ್ಮ 78ನೇ ಹುಟ್ಟು ಹಬ್ಬದ ಸಂದರ್ಭದಲ್ಲಿ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಸಂದೇಶ ನೀಡಿದರು.


Share