ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪತ್ರಿಕಾಗೋಷ್ಠಿಯ ಮುಖ್ಯಾಂಶಗಳು…
ಕೋವಿಡ್ ಸೋಂಕು ನಿಯಂತ್ರಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಂಪೂರ್ಣವಾಗಿ ವಿಫಲವಾಗಿದ್ದು, ಸರ್ಕಾರವೇ ಜನರಿಗೆ ರೋಗ ಅಂಟಿಸುತ್ತಿದೆ.
ಇದು ಮಾನವಕುಲಕ್ಕೆ ಬಂದಿರುವ ಸವಾಲು. ಇದರಲ್ಲಿ ರಾಜಕೀಯ ಮಾಡಬಾರದು ಎಂದು ಪ್ರತಿಪಕ್ಷಗಳು, ಜನರು ಸರ್ಕಾರಕ್ಕೆ ಸಂಪೂರ್ಣ ಬೆಂಬಲ ನೀಡಿದವು. ಆದರೂ ವಿರೋಧ ಪಕ್ಷಗಳನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೇ, ಕೊರೋನಾ ಸೋಂಕನ್ನು ನಿಯಂತ್ರಿಸದೆ ಸರ್ಕಾರ ಜನರ ಜೀವದ ಜತೆ ಆಟವಾಡುತ್ತಿವೆ.
ಸರ್ಕಾರದ ಬೇಜವಾಬ್ದಾರಿಯಿಂದಾಗಿ ದೇಶ ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಸೇರಿ ಎಲ್ಲ ಕ್ಷೇತ್ರಗಳಲ್ಲೂ ವಿಫಲವಾಗಿದೆ. ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲು ಸರ್ಕಾರ ವಿಫಲವಾಗಿದೆ.
ಬೆಂಗಳೂರಿನಲ್ಲಿ ಮತ್ತೆ ಲಾಕ್ ಡೌನ್ ಮಾಡುತ್ತಿದ್ದು, ಇತರೆ ಜಿಲ್ಲೆಗಳಲ್ಲಿ ಅವರಿಗೆ ಜವಾಬ್ದಾರಿ ನೀಡಿದ್ದಾರೆ. ಸರ್ಕಾರ ಕೊರೋನಾ ನಿಯಂತ್ರಿಸಲು ವಿಫಲವಾಗಿದೆ ಎಂಬುದು ಇದರಿಂದಲೇ ತಿಳಿಯುತ್ತದೆ.
ಸೋಂಕು ಹೆಚ್ಜಳಕ್ಕೆ ಹೊಣೆ ಯಾರು? ಇದನ್ನು ನಿಯಂತ್ರಿಸಲು ನಿಮಗೆ ಯಾರಾದರೂ ಅಡ್ಡ ಬಂದಿದ್ದಾರಾ? ಇದಕ್ಕೆ ಮುಖ್ಯಮಂತ್ರಿಗಳೇ ತಿಳಿಸಬೇಕು.
ನಿಮ್ಮಲ್ಲಿರುವ ಗೊಂದಲಗಳು ಈ ಪರಿಸ್ಥಿತಿಗೆ ಕಾರಣ. ರಾಜ್ಯಕ್ಕೆ ನಾಲ್ಕು, ಬೆಂಗಳೂರಿಗೆ 7 ಉಸ್ತುವಾರಿಗಳು. ಮಂತ್ರಿ ಅಲ್ಲದವರೂ ಹೊಣೆ ಹೊತ್ತಿದ್ದಾರೆ.
ಸರ್ಕಾರದಲ್ಲಿ ಮಂತ್ರಿಗಳ ನಡುವೆ ಹೊಂದಾಣಿಕೆ ಇಲ್ಲ. ಗಳಿಗೆಗೊಂದು ಹೇಳಿಕೆ, ನಿಮಿಷಕ್ಕೊಂದು ತೀರ್ಮಾನ ಮಾಡಿ ತಾನೂ ಗೊಂದಲಕ್ಕೆ ಸಿಲುಕಿ ಜನಸಾಮಾನ್ಯರನ್ನು ಗೊಂದಲಕ್ಕೆ ಸಿಲುಕಿಸಿದೆ.
ನಿಮಗೆ ಇಷ್ಟ ಬಂದ ತೀರ್ಮಾನ ತೆಗೆದುಕೊಳ್ಳಿ. ನಾವು ಪ್ರಶ್ನಿಸುವುದಿಲ್ಲ. ಆದರೆ ಜನರನ್ನು ಉಳಿಸಿ, ಬದುಕಿಸಿ.
ಈ ಸಮಯದಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಈ ಬಗ್ಗೆ ನಮ್ಮ ವಿರೋಧ ಪಕ್ಷದ ನಾಯಕರು ಹೇಳಿದ್ದಾರೆ.
ಮಾಧ್ಯಮಗಳ ವರಡಿಯಲ್ಲೇ ನೋಡಿ, ಕೇವಲ ದಿಂಬು ಹಾಸಿಗೆ ಬಾಡಿಗೆಯಲ್ಲೇ ಎಷ್ಟು ದುಡ್ಡು ಹೊಡೆಯುತ್ತಿದ್ದಾರೆ. ಇನ್ನು ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಎಷ್ಟು ಹೊಡೆದಿದ್ದಾರೆ ಊಹಿಸಿ. ಮುಖ್ಯಮಂತ್ರಿಗಳೇ ನಿಮ್ಮ ಸರ್ಕಾರದ ಸಚಿವರು, ಅಧಿಕಾರಿಗಳ ಅನುಮತಿ ಇಲ್ಲದೇ ಈ ಭ್ರಷ್ಟಾಚಾರ ನಡೆಯಲು ಸಾಧ್ಯವೇ?
ಸರ್ಕಾರ ಆಸ್ಪತ್ರೆ ಹಾಗೂ ವೈದ್ಯರಿಗೆ ಬೆದರಿಸಲು ಮುಂದಾಗಿದ್ದು, ಭಯದ ವಾತಾವರಣ ನಿರ್ಮಾಣವಾಗುತ್ತಿದೆ.
ಜನರು ಈ ರೋಗ ಅಂಟಿಸಿಕೊಂಡಿಲ್ಲ. ಸರ್ಕಾರವೇ ಜನರಿಗೆ ಅಂಟಿಸಿದ್ದು, ರಾಜ್ಯ ಸರ್ಕಾರ ಪ್ರತಿಯೊಬ್ಬರಿಗೂ ಉಚಿತ ಚಿಕಿತ್ಸೆ ನೀಡಬೇಕು. ಪ್ರತಿಯೊಬ್ಬರಿಗೂ ಸರ್ಕಾರವೇ ಕೊರೋನಾ ವಿಮೆ ಮಾಡಿಸಬೇಕು. ಇದು ರಾಜ್ಯ ಸರ್ಕಾರದ ಹೊಣೆ.
ಆಸ್ಪತ್ರೆಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗುತ್ತಿದೆ.
ನಮ್ಮ ರಾಜ್ಯ ವೈದ್ಯಕೀಯ ಕ್ಷೇತ್ರದಲ್ಲಿ ಹೆಸರು ಮಾಡಿದೆ. ದೇಶದಲ್ಲಿ ಅತಿ ಹೆಚ್ಚು ಮೆಡಿಕಲ್ ಕಾಲೇಜು ಇರುವುದು ನಮ್ಮ ರಾಜ್ಯದಲ್ಲೇ. ಆದರೆ ರಾಜ್ಯದಲ್ಲಿ ಇಂದು ವೈದ್ಯಕೀಯ ಮೂಲಸೌಕರ್ಯದ ಅಭಾವ ಎದುರಾಗಿದೆ. ಇದಕ್ಕೆ ಸರ್ಕಾರವೇ ಹೊಣೆ.
ಸರ್ಕಾರ ಖಾಸಗಿ ಆಸ್ಪತ್ರೆಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು.
ಸೋಂಕಿತರು ಸತ್ತರೆ ಅವರ ದೇಹವನ್ನು ಎಸೆಯುತ್ತಿದ್ದೀರಿ. ಇದು ಭಾರತೀಯ ಸಂಸ್ಕೃತಿನಾ? ಇದೇನಾ ನಿಮ್ಮ ಮಾನವೀಯತೆ? ಏನಾಗಿದೆ ನಿಮಗೆ?
ನಿಮ್ಮ ಈ ದುರಾಡಳಿತವನ್ನು ನಾವು ಎಷ್ಟು ದಿನ ನೋಡಿಕೊಂಡು ಕೂರಬೇಕು? ಇನ್ನು ಮುಂದೆ ಇದು ಸಾಧ್ಯವಿಲ್ಲ.
ಸರ್ಕಾರ ಕೇವಲ ಅಧಿಕಾರ ಅನುಭವಿಸುತ್ತಾ ಆಡಳಿತ ಮಾಡಲು ಅಷ್ಟೇ ಅಲ್ಲ. ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸಬೇಕು. ಸಿಎಂ ಸೇರಿದಂತೆ ಯಾವ ಮಂತ್ರಿಗಳು ಕೊರೋನಾ ಆಸ್ಪತ್ರೆಗೆ ಹೋಗಿ ಅಲ್ಲಿನ ಸೋಂಕಿತರು, ವೈದ್ಯರು, ಆಸ್ಪತ್ರೆ ಸಿಬ್ಬಂದಿಗಳಿಗೆ ಆತ್ಮಸ್ಥೈರ್ಯ ತುಂಬಿದ್ದಾರೆ.
ಮುಖ್ಯಮಂತ್ರಿಗಳೇ, ಸಚಿವರೇ, ಪಿಪಿಇ ಕಿಟ್ ಹಾಕಿಕೊಂಡು ಹೋಗಿ ಅವರ ಕಷ್ಟಗಳನ್ನು ಆಲಿಸಿ. ಅವರು ನಮ್ಮ ಅಣ್ಣ ತಮ್ಮಂದಿರು. ಕಷ್ಟದ ಸಮಯದಲ್ಲಿ ಅವರಿಗೆ ಬೆಂಬಲವಾಗಿ ನಿಲ್ಲುವುದು ನಮ್ಮ ಕರ್ತವ್ಯ.
ಆಸ್ಪತ್ರೆಯಲ್ಲಿ ಸೋಂಕಿತರಿಗೆ ಸರಿಯಾದ ವ್ಯವಸ್ಥೆ ಇಲ್ಲ. ನಾಯಿಗೆ ಅನ್ನ ಹಾಕುವಂತೆ ಅವರಿಗೆ ಊಟ ನೀಡಲಾಗುತ್ತಿದೆ.
ಈ ಪರಿಸ್ಥಿತನ್ನು ಪರಿಶೀಲಿಸಲು ನಾಳೆ ಬೆಳಗ್ಗೆ 8 ಗಂಟೆಗೆ ನಾನು ವಿಕ್ಟೊರಿಯಾ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದೇನೆ.
ಇನ್ನು ಹಗಲು ರಾತ್ರಿ ಮನೆ ಮನೆ ಸುತ್ತಿ ಪ್ರಾಣವನ್ನು ಲೆಕ್ಕಿಸದೆ ದುಡಿದಿರುವ ಆಶಾ ಕಾರ್ಯಕರ್ತರು ಪ್ರತಿಭಟನೆ ಆರಂಭಿಸಿ ಮೂರು ದಿನ ಆಯ್ತು. ಅವರನ್ನು ಕರೆದು ಮಾತನಾಡಿ ಅವರ ಸಮಸ್ಯೆ ಆಲಿಸಲು ಏನು ಸಮಸ್ಯೆ ಮುಖ್ಯಮಂತ್ರಿಗಳೇ?
ನೀವು ಘೋಷಿಸಿದ 1600 ಕೋಟಿ ಪ್ಯಾಕೇಜ್ ನಲ್ಲಿ ಶೇ.25ರಷ್ಟು ಜನರಿಗೆ ತಲುಪಿಲ್ಲ. ಜನ ಸತ್ತ ಮೇಲೆ ಅವರಿಗೆ ದುಡ್ಡು ಕೊಡುತ್ತೀರಾ?
ಕೇಂದ್ರ ಸರ್ಕಾರದ 20 ಲಕ್ಷ ಕೋಟಿಯಲ್ಲಿ ನಮ್ಮ ರಾಜ್ಯಕ್ಕೆ ಎಷ್ಟು ಬಂದಿದೆ ಎಂಬ ಬಗ್ಗೆ ಮಾಹಿತಿ ಕೊಡಿ.