ಸಹಕಾರ ಸಂಘದ ಹಣ ದುರುಪಯೋಗ ಸರ್ಕಾರ ಸಹಿಸಲ್ಲ ಸಚಿವ ಎಸ್ ಟಿ ಸೋಮಶೇಖರ್

Share

  • ಬಡವರ ಬಂಧು ಯೋಜನೆಯಡಿ ಹೆಚ್ಚು ಸಾಲ ವಿತರಿಸಲು ಸಹಕಾರ ಸಚಿವರ ಸೂಚನೆ
  • 14 ಸಾವಿರ ಕೋಟಿ ಸಾಲ ವಿತರಣೆ ಆಗಲೇಬೇಕೆಂದ ಸಚಿವರು
  • ಸಹಕಾರ ಸಂಘದ ಹಣದುರುಪಯೋಗ ಸಹಿಸಲ್ಲ

ಮೈಸೂರು: ಈ ಬಾರಿ 14 ಸಾವಿರ ಕೋಟಿ ರೂಪಾಯಿ ಸಾಲವನ್ನು ರೈತರಿಗೆ ಕೊಡಲೇಬೇಕು. ಅಲ್ಲದೆ, ಹೊಸ ಸದಸ್ಯರಿಗೆ ಸಾಲ ವಿತರಣೆಯನ್ನು ಕಡ್ಡಾಯವಾಗಿ ಕೊಡಲೇಬೇಕು. ಜೊತೆಗೆ ಎಸ್ಸಿ ಎಸ್ಟಿ ಸಮುದಾಯದವರಿಗೆ ಹೆಚ್ಚಿನ ಪ್ರಮಾಣದಲ್ಲಿ ಸಾಲ ವಿತರಣೆಯಾಗಬೇಕು ಎಂದು ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅಧ್ಯಕ್ಷತೆಯಲ್ಲಿ ಮೈಸೂರು ಪ್ರಾಂತದ ಸಹಕಾರ ಇಲಾಖೆಯ ಅಧಿಕಾರಿಗಳ ಸಭೆ ನಡೆಸಲಾಯಿತು.

ಎಸ್ಸಿಎಸ್ಟಿ ಸಮುದಾಯದವರಿಗೆ ಅಲ್ಪ ಪ್ರಮಾಣದ ಕೃಷಿ ಸಾಲ ವಿತರಣೆಯಾಗಿದ್ದು, ಮುಂದೆ ಹೀಗಾಗಬಾರದು. ಹೆಚ್ಚಿನ ಫಲಾನುಭವಿಗಳಿಗೆ ಸಾಲ ವಿತರಣೆ ಮಾಡಬೇಕು ಎಂದು ಸಚಿವರು ಸೂಚಿಸಿದರು.

ಬಡವರಬಂಧು ಯೋಜನೆಯಡಿ ಹೆಚ್ಚಿನ ಆದ್ಯತೆ ನೀಡಿ. ಬೀದಿಬದಿ ವ್ಯಾಪಾರ ಮಾಡುವವರ ಬಗ್ಗೆ ಆಸಕ್ತಿ ವಹಿಸಿ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು. ಈ
ಯೋಜನೆಯಡಿ ಮೈಸೂರು ಜಿಲ್ಲೆಯಲ್ಲಿ ಸಾಲ ನೀಡಿಕೆಯ ಪ್ರಗತಿ ಕುಂಠಿತವಾಗಿದ್ದು, ಹೆಚ್ಚಿನ ಪ್ರಗತಿ ಸಾಧಿಸಬೇಕು. ವ್ಯಾಪಾರಿಗಳು ಸ್ವಾಭಿಮಾನಿಗಳಿದ್ದು, ಸಾಲ ಮರುಪಾವತಿಯಾಗೇ ಆಗುತ್ತದೆ. ಹೀಗಾಗಿ ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿ ಎಂದು ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.

ಸಿವಿಲ್ – ಕ್ರಿಮಿನಲ್ ಪ್ರಕರಣ ಬಗೆಹರಿಸಿ

ಸಹಕಾರ ಸಂಘಗಳ ಹಣ ದುರುಪಯೋಗಕ್ಕೆ ಸಂಬಂಧಪಟ್ಟಂತೆ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳು ಬಾಕಿ ಇದ್ದು, ಈ ಕುರಿತು ಕೂಡಲೇ ಕ್ರಮ ಕೈಗೊಳ್ಳಲು ಕ್ರಮವಹಿಸಿ ಎಂದು ಸಚಿವರು ಸೂಚಿಸಿದರು.

ಸಹಕಾರ ಸಂಘಗಳ ಹಣ ದುರುಪಯೋಗ ಸಹಿಸಲ್ಲ

ಸಹಕಾರ ಸಂಘಗಳ ಹಣ ದುರುಪಯೋಗ ಪ್ರಕರಣವನ್ನು ಸಹಿಸುವುದಿಲ್ಲ. ಅಂಥವರ ಮೇಲೆ ಸಿವಿಲ್ ಹಾಗೂ ಕ್ರಿಮಿನಲ್ ಪ್ರಕರಣ ಹೂಡಿ ಕ್ರಮ ಕೈಗೊಳ್ಳಬೇಕು. ಬಾಕಿ ಇರುವ ಪ್ರಕರಣಗಳ ಮೇಲೆ ಶೀಘ್ರವಾಗಿ ಕ್ರಮ ಕೈಗೊಳ್ಳಿ. ಆದಷ್ಟು ಜನರ ಪರವಾಗಿ ಕಾರ್ಯನಿರ್ವಹಿಸಿ. ಸಮಸ್ಯೆಗಳಿದ್ದರೆ ನನ್ನ ಗಮನಕ್ಕೆ ತಂದರೆ ಬಗಹರಿಸುವೆ. ಕೆಲಸ ಮಾಡಲು ಆಗುವುದಿಲ್ಲ ಎಂದಾದರೆ ತಿಳಿಸಿ, ನಿಮ್ಮನ್ನು ಬೇರೆಡೆಗೆ ವರ್ಗಾವಣೆ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.

ಒಂದೊಂದೇ ಸಮಸ್ಯೆ ಬಗೆಹರಿಸುವೆ

ಹೌಸಿಂಗ್ ಸೊಸೈಟಿಯಲ್ಲಿ ಸಮಸ್ಯೆ ಇದ್ದರೆ ಗಮನಹರಿಸುತ್ತೇನೆ. ನಾನೂ ಈ ಮೊದಲು ಸುಮಾರು 20 ವರ್ಷ ಅಧ್ಯಕ್ಷನಾಗಿದ್ದೆ. ಹಾಗಾಗಿ ಎಲ್ಲ ಕೆಲಸಗಳ ಬಗ್ಗೆ ನಿಗಾವಹಿಸುತ್ತೇನೆ. ಜೊತೆಗೆ ಮುಡಾ ಸೇರಿದಂತೆ ಹಲವು ಕಡೆ ಇರುವ ಸಮಸ್ಯೆಗಳನ್ನು ಒಂದೊಂದಾಗಿ ಗಮನಹರಿಸಿ ಬಗೆಹರಿಸುತ್ತೇನೆ ಎಂದು ಸಚಿವ ಸೋಮಶೇಖರ್ ತಿಳಿಸಿದರು.

ಸುಸ್ತಿ ಸಾಲ ವಸೂಲಾಗಲಿ

ಕಾಸ್ಕಾರ್ಡ್ ಬ್ಯಾಂಕ್ ಗಳಲ್ಲಿ ಸಾಲ ವಿತರಣೆ ಹಾಗೂ ವಸೂಲಾತಿಗಳ ಪ್ರಮಾಣ ಬಹಳ ಕಡಿಮೆ ಇದ್ದು, ಪ್ರಗತಿ ಸಾಧಿಸಬೇಕು. ಸುಸ್ತಿ ಸಾಲಗಳ ಪ್ರಮಾಣ ಹೆಚ್ಚಾಗಿದ್ದು, ಅವುಗಳ ವಸೂಲಾತಿಗಾಗಿ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಸೂಚಿಸಿದರು.

ಸಾಲ ವಿತರಣೆ ಗುರಿ ಹೆಚ್ಚಿಸಿ

ಅಲ್ಪಾವಧಿ ಸಾಲ ಸೇರಿದಂತೆ ಬಹುತೇಕ ಸಾಲ ವಿತರಣೆ ಇನ್ನೂ ಮೊದಲ ಹಂತದಲ್ಲೇ ಇದೆ. ಆದರೆ, ಸಭೆ ನಡೆಸಿದ ಮೇಲಷ್ಟೇ ಸಾಲ ವಿತರಣೆ ಎಂಬ ಕಟ್ಟುಪಾಡಿಗೆ ಬೀಳದೆ ಶೀಘ್ರ ಸಾಲ ವಿತರಣೆಗೆ ಕ್ರಮ ಕೈಗೊಳ್ಳುವಂತೆ ಸೂಚಿಸಲಾಯಿತು. ಜೊತೆಗೆ ಪ್ರತಿವರ್ಷ ಸಾಲ ವಿತರಣೆ ಪ್ರಮಾಣದ ಗುರಿಯನ್ನು ಹಾಕಿಕೊಳ್ಳುವಾಗ ಹೆಚ್ಚಿನ ವಿತರಣೆ ಮಾಡುವ ಬಗ್ಗೆ ಗುರಿ ನಿಗದಿಪಡಿಸಿಕೊಂಡರೆ ಸಾಲ ವಿತರಣೆ ಪ್ರಮಾಣದಲ್ಲೂ ಹೆಚ್ಚಳವಾಗಲಿದೆ ಎಂದು ಅಧಿಕಾರಿಗಳಿಗೆ ಸೂಚಿಸಲಾಯಿತು.

ಈ ಬಾರಿ ಮಳೆ ಉತ್ತಮವಾಗಲಿದೆ ಎಂಬ ವರದಿ ಬಂದಿದೆ. ಹೀಗಾಗಿ ಸರಿಯಾದ ಸಮಯಕ್ಕೆ ರೈತರಿಗೆ ಸಾಲ ವಿತರಣೆ ಮಾಡದಿದ್ದರೆ ಉಪಯೋಗವಾಗದು. ಹೀಗಾಗಿ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ತಿಳಿಸಲಾಯಿತು.

ಹಳಬರಿಗಷ್ಟೇ ಕೆಲವು ಕಡೆ ಸಾಲ ನೀಡಲಾಗುತ್ತಿದ್ದು, ಹೊಸ ಸದಸ್ಯರಿಗೆ ಸಾಲ ವಿತರಣೆಯಾಗಬೇಕು. ಈ ಬಗ್ಗೆ ಗಮನಹರಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.

ಸಚಿವರ ಆಪ್ತ ಕಾರ್ಯದರ್ಶಿ ಕೆ.ಎಸ್. ನವೀನ್, ಮೈಸೂರು ಪ್ರಾಂತದ ಸಹಕಾರ ಸಂಘಗಳ ಜಂಟಿ ನಿಬಂಧಕರಾದ ಆರ್.ಪ್ರಕಾಶ್ ರಾವ್ ಸೇರಿದಂತೆ ಅಧಿಕಾರಿಗಳು ಹಾಜರಿದ್ದರು.


Share