ಸಾಮಾಜಿಕ ಜಾಗೃತಿ ಹಾಗೂ ಪರಿಸರ ಜಾಗೃತಿ ಮೂಡಿಸಿ, ಭವಿಷ್ಯದ ಸಮಾಜ ಉಳಿಸಿ “

Share

 

“ಸಾಮಾಜಿಕ ಜಾಗೃತಿ ಹಾಗೂ ಪರಿಸರ ಜಾಗೃತಿ ಮೂಡಿಸಿ, ಭವಿಷ್ಯದ ಸಮಾಜ ಉಳಿಸಿ ”

ಕವಿಗಳಿಗೆ ಸಾಹಿತಿಡಾ.ಭೇರ್ಯ ರಾಮಕುಮಾರ್ ಕರೆ

 

ಕವಿಗಳು ತಮ್ಮ ಕವನಗಳಲ್ಲಿ ಸಾಮಾಜಿಕ ಜಾಗೃತಿ ಹಾಗೂ ಪರಿಸರ ಜಾಗೃತಿ ಮೂಡಿಸಬೇಕೆಂದು ಹಿರಿಯ ಸಾಹಿತಿ, ಪತ್ರಕರ್ತ ಹಾಗೂ ಮೈಸೂರು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಡಾ.ಭೇರ್ಯ ರಾಮಕುಮಾರ್ ಕರೆ ನೀಡಿದರು.

‌ಮೈಸೂರಿನ ಅಭಿರುಚಿ ಬಳಗವು ಬಸವಜಯಂತಿ, ಡಾ.ರಾಜಕುಮಾರ್ ಜನ್ಮದಿನ , ಶ್ರೀ ಶಂಕರಾಚಾರ್ಯ ಹಾಗೂ ಶ್ರೀ ರಾಮಾನುಜಾ ಚಾರ್ಯರ ಜನ್ಮದಿನದ ಅಂಗವಾಗಿ ಏರ್ಪಡಿಸಿದ್ದ ಸಂಸ್ಥೆಯ ೧೧೧ ನೇ ಕವಿಗೋಷ್ಟಿಯ ಅಧ್ಯಕ್ಷತೆ ವಹಿಸಿ ಅವರು‌ ಮಾತನಾಡುತ್ತಿದ್ದರು.

“ಕಳೆದ ಇಪ್ಪತ್ತು ವರ್ಷಗಳ ಹಿಂದೆ ಹಾಸನದ ಮನೆಮನೆ ಕವಿಗೋಷ್ಟಿ ಬಳಗವು ಮಳಲಿ ಹರೀಶ್ ನೇತೃತ್ವದಲ್ಲಿ ಹಾಸನದ ಶ್ರೀ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನಲ್ಲಿ ಏರ್ಪಡಿಸಿದ್ದ ೧೧೧ ನೇ ಮನೆಮನೆ ಕವಿಗೋಷ್ಟಿಯನ್ನು ನಾನು ಉದ್ಘಾಟಿಸಿದ್ದೆನು.ಇದೀಗ ಮೈಸೂರಿನ ಅಭಿರುಚಿ ಬಳಗದ ೧೧೧ ನೇ ಕವಿಗೋಷ್ಟಿಯ ಅಧ್ಯಕ್ಷತೆಯನ್ನು ನಾನು ವಹಿಸಿದ್ದೇನೆ. ಇದು ನನ್ನ ಸಾಹಿತ್ಯ ಸೇವೆಗೆ ದೊರೆತ ಪ್ರತಿಫಲ”
ಎಂದು ಡಾ.ಭೇರ್ಯ ರಾಮಕುಮಾರ್ ನುಡಿದರು.

ಪರಿಸರ ವಿನಾಶದಿಂದಾಗಿ ಸಮಾಜ ಸಮಸ್ಯೆಗಳಿಗೆ ಸಿಲುಕಿದೆ. ಒಂದೆಡೆ‌ ಅತಿವೃಷ್ಟಿಯಿಂದಾಗಿ ಸಾವು-ನೋವುಗಳು ಉಂಟಾದರೆ, ಮತ್ತೊಂದು ಕಡೆ ಭೀಕರ ಬರಗಾಲ-ಕ್ಷಾಮಗಳಿಂದಾಗಿ ಜನರು ಸಮಸ್ಯೆಗಳಿಗೆ ಸಿಲುಕಿದ್ದಾರೆ. ಅರಣ್ಯ ನಾಶದಿಂದಾಗಿ ವನ್ಯ ಪ್ರಾಣಿಗಳು ಗ್ರಾಮಗಳಿಗೆ ನುಗ್ಗುತ್ತಿವೆ.ಇದರಿಂದಾಗಿ ಸಾವು ನೋವುಗಳು ಉಂಟಾಗುತ್ತಿವೆ. ಕವಿಗಳು ಜನಸಾಮಾನ್ಯರಲ್ಲಿ ಪರಿಸರ ಜಾಗೃತಿ ಮೂಡಿಸುವಂತಹ ಕವನಗಳನ್ನು ರಚಿಸಬೇಕು. ಪ್ರತಿಯೊಬ್ಬರೂ ತಮ್ಮ ಜನ್ಮದಿನದಂದು , ವಿವಾಹ ವಾರ್ಷಿಕೋತ್ಸವ ದಿನದಂದು ,ಮಕ್ಕಳ ಜನ್ಮದಿನದಂದು, ಹಿರಿಯರ ನೆನಪಿನಲ್ಲಿ ಪ್ರತಿ ವರ್ಷವೂ ಒಂದೊಂದು ಸಸಿ ನಟ್ಟು, ಸಲಹಬೇಕು.ಆ ಮೂಲಕ ಪರಿಸರದ ಉಳಿವಿಗೆ ತಮ್ಮದೇ ಆದ ಕೊಡುಗೆ ನೀಡಬೇಕು.ಈ ಬಗ್ಗೆ ಕವಿಗಳು ಜಾಗೃತಿ ಮೂಡಿಸಬೇಕು ಎಂದವರು ಕರೆ ನೀಡಿದರು.

ಪ್ರಾನ್ಸ್ ಕ್ರಾಂತಿ, ರಷ್ಯಾ ಕ್ರಾಂತಿ, ಭಾರತದಲ್ಲಿನ ಸ್ವಾತಂತ್ರ್ಯಚಳುವಳಿಗೆ, ಕರ್ನಾಟಕ ಏಕೀಕರಣ ಚಳುವಳಿಗೆ ಕವಿಗಳ, ಲಾವಣಿಕಾರರ, ಬರಹಗಾರರ ಪಾತ್ರ ಅಪಾರವಾಗಿದೆ. ಸಮಾಜವನ್ನು ಕಾಡುತ್ತಿರುವ ಜಾತೀಯತೆ, ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ,
ಅನೈರ್ಮಲ್ಯ ವಾತಾವರಣಗಳ ವಿರುದ್ದ ಕವಿಗಳು ತಮ್ಮ ಕೃತಿಗಳ ಮೂಲಕ ಜಾಗೃತಿ ಮೂಡಿಸಬೇಕೆಂದವರು ಕಿವಿಮಾತು ನುಡಿದರು.

ಕವಿಗಳಾದ ಪ್ರೊ.ಹೆಚ್.ಪಾರ್ಶ್ವನಾಥ್,ಮಹಾದೇವ ನಾಯಕ,ಚನ್ನಪ್ಪ,ರಾಘವೇಂದ್ರ.ಸಿ.ಎಸ್.ಎಂ.ಆರ್.ಆನಂದ್,ಕೆಂಪರಾಜ್, ಕೆ.ವಿ.ರಮೇಶ್,ನಾರಾಯಣರಾವ್, ಕವಯತ್ರಿಯರಾದ
ನೇತ್ರಾವತಿ, ಹೇಮಾಕುಮಾರಿ,ಆರ್.ಮೀನಾಕ್ಷಿ,ಸುಬ್ಬಲಕ್ಷ್ಮಿ,ಅಲುಮೇಲಮ್ಮ,ಲತಾ ಮೋಹನ್ ಮೊದಲಾದವರು ತಮ್ಮ ಕವನಗಳನ್ನು ವಾಚಿಸಿದರು.

‌ಅಭಿರುಚಿ ಬಳಗದ ಅಧ್ಯಕ್ಷರಾದ ಎನ್.ವಿ.ರಮೇಶ್, ಹೇಮಾ ರಮೇಶ್, ಲೇಖಕಿ ಪದ್ಮಾ ಆನಂದ್, ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಶ್ರೀಮತಿ ಲತಾ ಮೋಹನ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.


Share