ಸಿಎಂ ಒಬ್ಬರು ಕಾರ್ಯಕರ್ತನಿಗೆ ಕಪಾಲಮೋಕ್ಷ ಮಾಡುವ ಪರಿಸ್ಥಿತಿ ನಮ್ಮಲ್ಲಿಲ್ಲ- ಮೋದಿ

Share

ಕರ್ನಾಟಕ ರಾಜ್ಯದ ವಿಧಾನಸಭಾ ಚುನಾವಣೆಯನ್ನು ಯಶಸ್ವಿಯಾಗಿ ಎದುರಿಸಲು ಪೂರ್ಣ ಸಿದ್ಧತೆ ಮಾಡಿಕೊಳ್ಳುತ್ತಿರುವ ಭಾರತೀಯ ಜನತಾ ಪಕ್ಷವು ಇಂದು ದಾವಣಗೆರೆಯಲ್ಲಿ ವಿಜಯ ಸಂಕಲ್ಪ ಮಹಾಸಂಗಮ ಯಾತ್ರೆಯನ್ನು ಪ್ರಾರಂಭಿಸಿತು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು ಮಧ್ಯಾಹ್ನ ಇದನ್ನು ಉದ್ಘಾಟಿಸಿದರು. ದಾವಣಗೆರೆಯ ನನ್ನ ಸಹೋದರ ಸಹೋದರಿಯರಿಗೆ ನಮಸ್ಕಾರಗಳು. ಕರ್ನಾಟಕದ ನನ್ನ ಬಿಜೆಪಿಯ ಕಾರ್ಯಕರ್ತ ಬಾಂಧವರಿಗೆ ನಮಸ್ಕಾರಗಳು ಎಂದು ಕನ್ನಡದಲ್ಲಿ ಅವರು ಮಾತನ್ನು ಆರಂಭಿಸಿದರು.
ನಿಮ್ಮ ಆಶೀರ್ವಾದಿಂದ ನಮಗೆ ಶಕ್ತಿ, ಹೊಸ ಹುಮ್ಮಸ್ಸು ದೊರೆಯುತ್ತದೆ. ಕರ್ನಾಟಕದ ವಿಕಾಸಕ್ಕಾಗಿ, ಬಹುಮತದ ಸ್ಥಿರ ಸರ್ಕಾರ ಬೇಕಿದೆ. ಕರ್ನಾಟಕದ ಉಜ್ವಲ ಭವಿಷ್ಯಕ್ಕಾಗಿ ಪೂರ್ಣ ಬಹುಮತದ ಸರ್ಕಾರವನ್ನು ಗೆಲ್ಲಿಸಬೇಕಿದೆ. ಮನೆ ಮನೆಗೆ ತಲುಪುವ ಮೂಲಕ ಬಿಜೆಪಿಯನ್ನು ಗೆಲ್ಲಿಸಿ ಎಂದು ನರೇಂದ್ರ ಮೋದಿ ಕಾರ್ಯಕರ್ತರಿಗೆ ಕರೆ ನೀಡಿದರು.
ದಾವಣೆಗೆರೆಗೆ ಬರುವ ಅವಕಾಶ ಮತ್ತೆ ಸಿಕ್ಕಿದೆ. ಪ್ರತಿ ಬಾರಿ ನಿಮ್ಮ ಆರ್ಶೀವಾದ ಹೆಚ್ಚುತ್ತಿದೆ. ದಾವಣೆಗೆರೆಯ ಜನತೆಯನ್ನು ಎಂದಿಗೂ ಮರೆಯಲೂ ಸಾಧ್ಯವಿಲ್ಲ. ಎಐಸಿಸಿ ಅಧ್ಯಕ್ಷರ ತವರಲ್ಲಿ ಕಮಲ ಅರಳಿದೆ, ಕಲಬುರಗಿಯ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಬಿಜೆಪಿಗೆ ಒಲಿದಿದೆ ಎಂದರು.ನಿನ್ನೆ ನಾನು ಒಂದು ವೀಡಿಯೋ ನೋಡಿದೆ, ಮಾಜಿ ಸಿಎಂ ಒಬ್ಬರು ಅವರದ್ದೇ ಪಕ್ಷದ ಕಾರ್ಯಕರ್ತನಿಗೆ ಕಪಾಳ ಮೋಕ್ಷ ಮಾಡಿದ್ದಾರೆ. ಆದರೆ, ಬಿಜೆಪಿಯಲ್ಲಿ ಯಾರೂ ದೊಡ್ಡವರಲ್ಲ ನಾವೆಲ್ಲರೂ ಒಂದೇ. ಕರ್ನಾಟಕದ ಬಿಜೆಪಿಯ ಪ್ರತಿಯೊಬ್ಬ ಕಾರ್ಯಕರ್ತ ನನ್ನ ಪರಮ ಮಿತ್ರ, ನನ್ನ ಶಕ್ತಿ, ನನ್ನ ಸಹೋದರು. ತಮ್ಮದೇ ಪಕ್ಷದ ಕಾರ್ಯಕರ್ತರನ್ನು ಗೌರವಿಸಲಾಗದವರು ಕರ್ನಾಟಕದ ಜನರನ್ನು ಹೇಗೆ ಗೌರವಿಸುತ್ತಾರೆ? ಎಂದು ನಿನ್ನೆ ಮೈಸೂರಿನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಡೆದುಕೊಂಡ ರೀತಿಯನ್ನು ಪರೋಕ್ಷವಾಗಿ ಉಲ್ಲೇಖಿಸಿದರು. ಕಾಂಗ್ರೆಸ್ ಪಕ್ಷ ಸುಳ್ಳು ಭರವಸೆಗಳನ್ನು ನೀಡಿ ಜನರ ದಾರಿ ತಪ್ಪಿಸುತ್ತಿದೆ ಹಿಂದಿನ ಹಲವಾರು ನಿದರ್ಶನಗಳೆ ಇದಕ್ಕೆ ಸಾಕ್ಷಿ ಎಂದು ಕೆಲವು ಉದಾಹರಣೆಗಳನ್ನು ನೀಡಿದರು.
ಇಂದಿನ ಈ ವಿಜಯ ಸಂಕಲ್ಪ ಯಾತ್ರೆಯ ಉತ್ಸಾಹ, ನವ ಶಕ್ತಿ, ಪ್ರತಿ ಬೂತಿಗೆ ತಲುಪಿಸಬೇಕಿದೆ. ಆ ಮೂಲಕ ಪ್ರತಿ ಬೂತನ್ನು ಗೆಲ್ಲುವ ಸಂಕಲ್ಪ ಮಾಡಬೇಕಿದೆ. ಯಾತ್ರೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಪಕ್ಷದ ಕಾರ್ಯಕರ್ತರನ್ನು ಅಭಿನಂದಿಸುತ್ತೇನೆ. ಇವೆಲ್ಲವನ್ನೂ ನಾನು ಸೂಕ್ಷ್ಮವಾಗಿ ಗಮನಿಸುತ್ತಿರುತ್ತೇನೆ. ಏಪ್ರಿಲ್ ಮೊದಲನೇ ವಾರದಲ್ಲಿ ಮತ್ತೊಮ್ಮೆ ಬರುವೆ ಎಂದು ಮೋದಿ ತಿಳಿಸಿದರು.


Share