ಈ ಫೋಟೋ ದಲ್ಲಿ ಕಾಣುವ ಮಹನೀಯರು ಶ್ರೀ ಹಸ್ತಗಿರಿ ಅನಂತಾಚಾರ್ಯರು.ಇಂದು ನಾವೆಲ್ಲರೂ ಕೇಳುವ,ಹಾಡುವ ಕೌಸಲ್ಯಾ ಸುಪ್ರಜಾರಾಮ ಪೂರ್ವಾ ಸಂಧ್ಯಾ ಪ್ರವರ್ತತೇ ಎಂದು ಆರಂಭವಾಗುವ ಎಲ್ಲೆಡೆ ಪ್ರಖ್ಯಾತಿ ಪಡೆದಿರುವ ಶ್ರೀ ವೇಂಕಟೇಶ ಸುಪ್ರಭಾತ ರಚಿಸಿದ ಮಹನೀಯರು.
ವೆಂಕಟೇಶ ಸುಪ್ರಭಾತ
ಈಗಲೂ M S ಸುಬ್ಬಲಕ್ಷ್ಮಿಯವರ ಸುಪ್ರಭಾತ ಕೇಳಿಸಿಕೊಂಡರೆ ಅವರ ನೆನಪಿನಲ್ಲೇ ನನಗರಿವಿಲ್ಲದಂತೆಯೇ ಹಾಡಲು ಶುರು ಮಾಡುತ್ತೇನೆ.
“ಕೌಸಲ್ಯಾ ಸುಪ್ರಜಾರಾಮ ಪೂರ್ವ ಸಂಧ್ಯಾ ಪ್ರವರ್ತತೆ…ಎಂದು ಶ್ರೀರಾಮನ ಪ್ರಾರ್ಥನೆಯಿಂದ ಪ್ರಾರಂಭವಾಗುವ ಈ ಸುಪ್ರಭಾತವನ್ನು ಬರೆದವರಾರು ? ಯಾವಾಗ ? ಎನ್ನುವ ಪ್ರಶ್ನೆಗಳಿಗೆ ಸಿಕ್ಕಿರುವ ಸ್ವಾರಸ್ಯಕರ ಉತ್ತರವನ್ನು ನಿಮ್ಮೆಂದಿಗೆ ಹಂಚಿಕೊಳ್ಳುತ್ತಿದ್ದೇನೆ.
ವೆಂಕಟೇಶ ಸುಪ್ರಭಾತವನ್ನು ಶ್ರೀವೈಷ್ಣವ ಆಚಾರ್ಯರಾದ ಶ್ರೀ ಹಸ್ತಗಿರಿ ಅನಂತಾಚಾರ್ಯರು 1430 ರಲ್ಲಿ ರಚಿಸಿದರು ಅಂದರೆ ಇವತ್ತಿಗೆ ಬರೋಬ್ಬರಿ 590 ವರ್ಷಗಳ ಹಿಂದೆ !. ಆಚಾರ್ಯರು ವೆಂಕಟೇಶ್ವರನ ದೈವಭಕ್ತರು, ಹಲವಾರು ಕೃತಿಗಳ ರಚನಕಾರು. ಇವರನ್ನು ಕಾಂಚಿಪುರದ ರಾಮಾನುಜರು ಎಂದೂ ಕರೆಯುತ್ತಿದ್ದರಂತೆ. ಇವರು ವೆಂಕಟೇಶ್ವರನ ಪೂಜೆಗೆಂದು ತಿರುಪತಿಯಿಂದ ತಿರುಮಲಕ್ಕೆ ನೀರು ಕೊಂಡೊಯ್ಯುತ್ತಿದ್ದಾಗ ರಚಿಸಿದ ಶ್ಲೋಕಗಳಂತೆ, ಅಂತೆಯೇ ಈಗಲೂ ದೇವಸ್ಥಾನದಲ್ಲಿ ಬೆಳಗಿನ ಜಾವದ ಮೂರು ಗಂಟೆಗೆ ಸಮಸ್ತ ಅರ್ಚಕ ಗಣ ಈ ಸುಪ್ರಭಾತವನ್ನು ಸ್ತುತಿಸುವ ಸಂಪ್ರದಾಯವಿದೆ.
ಸುಪ್ರಭಾತದಲ್ಲಿ ಒಟ್ಟು ಎಪ್ಪತ್ತು ಶ್ಲೋಕಗಳನ್ನು ನಾಲ್ಕು ವಿಭಾಗಗೊಳಿಸಲಾಗಿದೆ
ಮೊದಲನೆಯದು ‘ಸುಪ್ರಭಾತಂ’
ಇದರಲ್ಲಿ 29 ಶ್ಲೋಕಗಳಿವೆ. ಮೊದಲನೆಯ ಶ್ಲೋಕ
‘ಕೌಸಲ್ಯಾ ಸುಪ್ರಜಾ ರಾಮ ಪೂರ್ವ ಸಂಧ್ಯಾ ಪ್ರವರ್ತತೆ..’
ಇದು ವಾಲ್ಮೀಕಿ ರಾಮಾಯಣದ ಬಾಲಕಾಂಡದಿಂದ ಆಯ್ದ ಶ್ಲೋಕ. ವಿಶ್ವಾಮಿತ್ರರು ತಮ್ಮ ಆಶ್ರಮದಲ್ಲಿ ಮಲಗಿದ್ದ ಶ್ರೀ ರಾಮರನ್ನು ಎಬ್ಬಿಸುವ ವರ್ಣನೆ. ನಂತರ ಬರುವುದು ‘ಉತ್ತಿಷ್ಟ ಗೋವಿಂದ’ ವಿಷ್ಣು..ಕೃಷ್ಣ..ಮತ್ತು ಶ್ರೀಲಕ್ಷ್ಮಿಯರ ವರ್ಣನೆ.
ಎರಡನೆಯದು ‘ಸ್ತೋತ್ರಂ’. ಇದರಲ್ಲಿ ಹನ್ನೊಂದು ಶ್ಲೋಕಗಳಿವೆ. ‘ಕಮಲಾಕುಚಚೂಚುಕಕುಂಕುಮತೋ’ ದಿಂದ ಪ್ರಾರಂಭವಾಗುತ್ತದೆ. ಶ್ರೀ ವೆಂಕಟೇಶ್ವರಲ್ಲಿ ರಕ್ಷಣೆ ಯಾಚಿಸಿ ಸ್ತುತಿಸುವ ಶ್ಲೋಕಗಳಿವು.
ಮೂರನೆಯದು ‘ ಪ್ರಪತ್ತಿ’ ಇದು ಶ್ರೀವೈಷ್ಣವ ಸಂಪ್ರದಾಯದ ವಿಶಿಷ್ಟವಾದ ಸೂತ್ರ.. ವೆಂಕಟೇಶ್ವರನಲ್ಲಿ ಸಂಪೂರ್ಣ ಶರಣಾಗತಿ. ಇದರಲ್ಲಿ ಹನ್ನೊಂದು ಶ್ಲೋಕಗಳಿವೆ. ‘ಈಶಾನಾಂ
ಜಗತೋಸ್ಯ ವೇಂಕಟಪತೇ ರ್ವಿಷ್ಣೋಃ ಪರಾಂ ಪ್ರೇಯಸೀಂ’ ಯಿಂದ ಪ್ರಾರಂಭವಾಗಿ ಪ್ರತಿ ಶ್ಲೋಕದಲ್ಲೂ ಪ್ರಪತ್ತಿಯ ಉಲ್ಲೇಖವಿದೆ.
ನಾಲ್ಕನೆಯದು ‘ಮಂಗಳಾ ಶಾಸನಂ’. ಇದರಲ್ಲಿ 11 ಶ್ಲೋಕಗಳಿವೆ.
‘ಶ್ರಿಯಃ ಕಾಂತಾಯ ಕಲ್ಯಾಣನಿಧಯೇ ನಿಧಯೇರ್ಥಿನಾಮ್
ಶ್ರೀವೇಂಕಟ ನಿವಾಸಾಯ ಶ್ರೀನಿವಾಸಾಯ ಮಂಗಳಮ್’
ತಿರುಪತಿಯಲ್ಲಿ ಮಂಗಳ ಶಾಸನಂ ಮುಗಿದನಂತರ, ಭೋಗ ಶ್ರೀನಿವಾಸರ ಬೆಳ್ಳಿಯ ವಿಗ್ರಹವನ್ನು ಶಯನ ಮಂಟಪದಿಂದ ಗರ್ಭಗುಡಿಗೆ ಸ್ಥಳಾಂತರಿಸಲಾಗುತ್ತದಂತೆ..ಭಕ್ತರಿಗೆ ದರ್ಶನ ನೀಡಲು.
✍️ವಿಂಗ್ ಕಮಾಂಡರ್ ಸುದರ್ಶನ