ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳ ಸಹಕಾರ ಅಗತ್ಯ – ಜಿಲ್ಲಾಧಿಕಾರಿ

Share

 

*ಮತದಾನದ ಸಂದರ್ಭದಲ್ಲಿ ಎನ್ ಸಿ ಸಿ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳ ಸಹಕಾರ ಅಗತ್ಯ*

– *ಡಾ.ಕೆ ವಿ ರಾಜೇಂದ್ರ*

ಮೈಸೂರು – 2023 ರ ಸಾರ್ವರ್ತಿಕ ಚುನಾವಣೆಯು ಮೇ 10 ರಂದು ನಡೆಯಲಿದ್ದು ಮತದಾನದಲ್ಲಿ ಮೂಲ ಸೌಕರ್ಯಗಳ ಅಗತ್ಯತೆಗಾಗಿ ಎನ್ ಸಿ ಸಿ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳ ಸಹಕಾರ ಅಗತ್ಯವಾಗಿದ್ದು ಅವರ ಸಹಕಾರ ಪಡೆದುಕೊಳ್ಳಿ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಮುಖ್ಯ ಚುನಾವಣಾ ಅಧಿಕಾರಿಯಾದ ಡಾ. ಕೆ ವಿ ರಾಜೇಂದ್ರ ಅವರು ತಿಳಿಸಿದರು.

ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಮತದಾನಿಗಳಿಗೆ ವ್ಯವಸ್ಥೆ ಕಲ್ಪಿಸುವ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ವಯಸ್ಸಾದ ಮತದಾರರನ್ನು ಜೋಪಾನವಾಗಿ ಮತಗಟ್ಟೆಗೆ ಕರೆದು ತಂದು ಮತ ಹಾಕಿಸಲು ಸಹಾಯ ಮಾಡುವ ಹಾಗೂ ಕೆಲ ಮತದಾರರು ಮತಗಟ್ಟೆಯವರೆಗೂ ಬರಲು ತೊಂದರೆ ಇದ್ದಲ್ಲಿ ಅಂತವರನ್ನು ವ್ಹೀಲ್ ಚೇರ್ ಮುಖಾಂತರ ಮತಗಟ್ಟೆಗೆ ಕರೆದು ತಂದು ಮತ ಹಾಕಿಸುವ ಕಾರ್ಯಕ್ಕೆ ಈ ಎನ್.ಸಿ.ಸಿ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಧಿಗಳು ಸಹಕರಿಸುವಂತೆ ಅಧಿಕಾರಿಗಳು ಅಗತ್ಯ ಕ್ರಮ ವಹಿಸಬೇಕು ಎಂದು ಅವಕು ತಿಳಿಸಿದರು.

ಮತಗಟ್ಟೆಗಳಲ್ಲಿ ಪುರುಷ ಹಾಗೂ ಮಹಿಳೆಯ ಸರದಿ ಸಾಲುಗಳ ನಿರ್ವಹಣೆಗೂ ಕೂಡ ಎನ್ ಸಿಸಿ ವಿದ್ಯಾರ್ಧಿಗಳಿಗೆ ಶಿಕ್ಷಕರು ತರಬೇತಿಯನ್ನು ನೀಡಬೇಕು. ಮಕ್ಕಳನ್ನು ಈ ರೀತಿಯ ಕಾರ್ಯಗಳಿಗೆ ಬಳಸಿಕೊಳ್ಳುವುದರಿಂದ ಅವರಿಗೆ ಪ್ರಜಾಪ್ರಭುತ್ವದ ಬಗ್ಗೆ ಜ್ಞಾನ ಹೆಚ್ಚಾಗುತ್ತದೆ ಎಂದು ಅವರು ತಿಳಿಸಿದರು.

ಮತದಾನಕ್ಕೆ ಮೂರು ದಿನ ಬಾಕಿ ಇರುವ ಸಂದರ್ಭದಲ್ಲಿ ಸೀರೆ ಹಂಚುವುದು ಹಣ ಹಂಚುವುದು ಮತದಾರರಿಗೆ ಆಮಿಷ ಒಡ್ಡುವುದು ಹಾಗೂ ಇನ್ನಿತರ ಅನೈತಿಕ ಚಟುವಟಿಕೆಗಳು ನಡೆಯುವುದು ಹೆಚ್ಚಾಗಿರುವುದರಿಂದ ಅಧಿಕಾರಿಗಳು ಹಾಗೂ ಸ್ಥಳೀಯವಾಗಿರುವ ಶಿಕ್ಷಕರು ದಕ್ಷತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಗಾಯತ್ರಿ , ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶರಾದ ರಾಮಚಂದ್ರರಾಜೇ ಅರಸ್ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.


Share