ಹಂತಹಂತವಾಗಿ ರಾಜ್ಯಕ್ಕೆ ಕನ್ನಡಿಗರು ಕರೆತರಲಾಗುತ್ತದೆ

421
Share

ಚಿಕ್ಕಮಗಳೂರು, ಮೇ.೨೩( ಕರ್ನಾಟಕ ವಾರ್ತೆ): ಭಾರತ ದೇಶವು ಕಿರುಕುಳ ಹಾಗೂ ಬೇರೆ ಬೇರೆ ಕಾರಣಕ್ಕಾಗಿ ದೇಶ ತೊರೆದು ಬಂದ ಎಲ್ಲಾ ಜನಾಂಗದವರಿಗೂ ಆಶ್ರಯ ನೀಡಿದ್ದು ಸದ್ಯ ವಿದೇಶದಲ್ಲಿ ಸಂಕಷ್ಟದಲ್ಲಿರುವ ಎಲ್ಲಾ ಕನ್ನಡಿಗರಿಗೂ ಸೂಕ್ತ ನೆರವು ಒದಗಿಸಿ ಹಂತ-ಹಂತವಾಗಿ ಸ್ವದೇಶಕ್ಕೆ ಕರೆತರಲಾಗುವುದು ಎಂದು ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯುವಸಬಲೀಕರಣ ಮತ್ತು ಕ್ರೀಡಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ. ರವಿ ಅವರು ಹೇಳಿದರು.
ಅವರು ಇಂದು ತಮ್ಮ ಗೃಹ ಕಛೇರಿಯಲ್ಲಿ ಅರಬ್ ರಾಷ್ಟದಲ್ಲಿ ನೆಲೆಸಿರುವ ದುಬೈ ಕನ್ನಡ ಸಂಘದ ೨೫ ಕನ್ನಡಿಗರೊಂದಿಗೆ ವಿಡಿಯೋ ಸಂವಾದದಲ್ಲಿ ಮಾತನಾಡಿದರು.
ವಿದೇಶದಲ್ಲಿ ನೆಲೆಸಿರುವ ಕನ್ನಡಿಗರೊಂದಿಗಿನ ವಿಡಿಯೋ ಸಂವಾದದ ಉದ್ದೇಶ ಅವರ ಸಮಸ್ಯೆಗಳನ್ನು ಆಲಿಸುವುದು ಹಾಗೂ ಆತ್ಮವಿಶ್ವಾಸ ತುಂಬುವ ಮೂಲಕ ಇಲ್ಲಿಗೆ ಕರೆತರಲು ಸರ್ಕಾರದಿಂದ ಸೂಕ್ತ ನೆರವು ಸಿಗುವಂತೆ ಮಾಡುವುದಾಗಿದೆ ಎಂದ ಅವರು ದುಬೈನಲ್ಲಿ ಸುಮಾರು ೪ ಸಾವಿರಕ್ಕೂ ಹೆಚ್ಚು ಕನ್ನಡಿಗರಿದ್ದು ಬೆಂಗಳೂರು ಹಾಗೂ ಮಂಗಳೂರಿಗೆ ಬರಲು ಅಪೇಕ್ಷೆ ತೋರಿದ್ದಾರೆ ಈ ಬಗ್ಗೆ ಕೇಂದ್ರ ಸಚಿವರಾದ ಸದಾನಂದ ಗೌಡ ಅವರೊಂದಿಗೆ ಮಾತುಕತೆ ನಡೆಸಿ ವಿಮಾನಗಳ ಮೂಲಕ ಸ್ವದೇಶಕ್ಕೆ ಕರೆತರಲು ಸೂಕ್ತ ವ್ಯವಸ್ಥೆ ಮಾಡಲಾಗುವುದು ಎಂದರು.
ಹೊರ ನಾಡು ಮತ್ತು ಗಡಿನಾಡು ಹಾಗೂ ರಾಜ್ಯೋತ್ಸವ ಪ್ರಶಸ್ತಿಗಳನ್ನು ಅರಬ್‌ರಾಷ್ಟ್ರಗಳಲ್ಲಿರುವ ಕನ್ನಡಿಗರಿಗೂ ನೀಡಬೇಕು ಎಂಬ ಮನವಿ ಮಾಡಿದ್ದು ಈ ಬಗ್ಗೆ ಸರ್ಕಾರದ ನಿಯಮಗಳಂತೆ ನಡೆದುಕೊಳ್ಳಬೇಕಾಗಿದೆ ಎಂದು ತಿಳಿಸಲಾಗಿದೆ ಎಂದ ಅವರು ವಿದೇಶಿ ನೆಲದಲ್ಲಿ ಕರ್ನಾಟಕ ದರ್ಶನಗಳ ರೋಡ್‌ಶೋ ನಡೆಸಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಅಲ್ಲದೇ ವಿದೇಶಗಳಿಂದ ಬರುವ ಕನ್ನಡಿಗ ಶಾಲಾ ಮಕ್ಕಳಿಗೆ ದಾಖಲಾಗಲು ನೆರವು ನೀಡಬೇಕು ಎಂದು ಕೇಳಿಕೊಂಡಿದ್ದು ಈ ಬಗ್ಗೆ ಶಿಕ್ಷಣ ಸಚಿವರೊಂದಿಗೆ ಚರ್ಚಿಸಲಾಗುವುದು ಎಂದರು.
ವಿದೇಶಿ ಕನ್ನಡಿಗರ ಮಕ್ಕಳನ್ನು ಇಲ್ಲಿನ ಶಾಲೆಗಳಲ್ಲಿ ದಾಖಲಿಸುವ ಬಗ್ಗೆ ಸಹಾಯವಾಣಿಯನ್ನು ಸ್ಥಾಪಿಸಿ ಅಂಕಪಟ್ಟಿ ಅಥವಾ ಶಾಲಾ ದಾಖಲಾತಿ ಆಧಾರದಲ್ಲಿ ಇಲ್ಲಿನ ಶಾಲೆಗಳಲ್ಲಿ ದಾಖಲಿಸಲು ಕ್ರಮ ಕೈಗೊಳ್ಳಲಾಗುವುದು ಅಲ್ಲದೇ ರಜಾ ದಿನಗಳಲ್ಲಿ ಆನ್‌ಲೈನ್ ವರ್ಕ್ ಶಾಪ್ ಆಯೋಜಿಸುವಂತೆ ಕೇಳಿಕೊಂಡಿದ್ದು ಇಲ್ಲಿನ ಮಾನವ ಸಂಪನ್ಮೂಲಗಳ ಬಗ್ಗೆ ಪರಿಶೀಲಿಸಿ ಯೋಜನೆ ರೂಪಿಸಲಾಗುವುದು ಎಂದರು.
ಉದ್ಯೋಗ ಕಳೆದುಕೊಂಡು ಬಂದವರಿಗೆ ಉದ್ದಿಮೆ ಸ್ಥಾಪಿಸಿ ಉದ್ಯೋಗ ಕೈಗೊಳ್ಳಲು ಕೇಂದ್ರ ಸರ್ಕಾರವು ಆತ್ಮ ನಿರ್ಭರ್ ಹೆಸರಿನಲ್ಲಿ ಪ್ಯಾಕೇಜ್ ಘೋಷಣೆ ಮಾಡಿದೆ ಅಲ್ಲದೇ ಕೇಂದ್ರ ರಿಸರ್ವ್ ಬ್ಯಾಂಕ್ ರೆಪೋ ದರ ಕಡಿಮೆಗೊಳಿಸಿ ಸಾಲ ನೀಡುವ ಮೂಲಕ ಉದ್ದಿಮೆ ಸ್ಥಾಪನೆಗೆ ಕ್ರಮಕೈಗೊಂಡಿದೆ ಭಾರತ ದೇಶ ಸ್ವಾವಲಂಬಿ ರಾಷ್ಟ್ರವಾಗಿ ಬೆಳೆಯಬೇಕು ಸ್ವದೇಶಿ ಉತ್ಪನ್ನಗಳ ತಯಾರಿಕೆಗೆ ಹೆಚ್ಚು ಆದ್ಯತೆ ನೀಡಬೇಕು ಎನ್ನುವ ಉದ್ದೇಶದಿಂದ ಪ್ರಧಾನಮಂತ್ರಿಗಳು ಉತ್ತಮ ಯೋಜನೆ ರೂಪಿಸಿದ್ದಾರೆ ಎಂದರು.
ವಿದೇಶದಲ್ಲಿರುವ ಕನ್ನಡಿಗರನ್ನು ಕರೆತರುವ ಕುರಿತು ರಾಜ್ಯದಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಿಸಿದ್ದು ಅವರಿಂದ ಸರಿಯಾದ ಪ್ರತಿಕ್ರಿಯೆ ಬರುತ್ತಿಲ್ಲ ಎಂಬ ದೂರುಗಳು ಕೇಳಿಬಂದಿದ್ದು ಈ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದ ಅವರು ಭಾರತದ ನೆಲದಲ್ಲಿ ಕಿರುಕುಳ, ಸೇರಿದಂತೆ ಬೇರೆ ಕಾರಣಕ್ಕಾಗಿ ಇಲ್ಲಿಗೆ ಬಂದ ಎಲ್ಲಾ ಜನಾಂಗಕ್ಕೂ ಆಶ್ರಯ ನೀಡಿದೆ ವಿದೇಶದಲ್ಲಿ ಸಂಕಷ್ಟದಲ್ಲಿ ಸಿಲುಕಿರುವ ಕನ್ನಡಿಗರನ್ನು ಕಡೆಗಣಿಸುವ ಪ್ರಶ್ನೆಯಿಲ್ಲ ಈ ಬಗ್ಗೆ ಸರ್ಕಾರ ಸೂಕ್ತ ನೆರವು ನೀಡಲಿದೆ ಎಂದರು.
ಸಂವಾದದಲ್ಲಿ ವಿದೇಶಿ ಕನ್ನಡಿಗರ ಅಹವಾಲುಗಳನ್ನು ಆಲಿಸಿದ ಅವರು ಸಮಸ್ಯೆಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಗಮನಕ್ಕೆ ತಂದು ಕ್ರಮ ವಹಿಸಲಾಗುವುದು ಎಂದರು.


Share