ಹೆಚ್.ಐ.ವಿ ಕುರಿತು ಅರಿವಿರಬೇಕು, ಕೀಳರಿಮೆಯಲ್ಲ

15
Share

ಹೆಚ್.ಐ.ವಿ ಕುರಿತು ಅರಿವಿರಬೇಕು, ಕೀಳರಿಮೆಯಲ್ಲ – ಟಿ.ಎಸ್ ಶ್ರೀವತ್ಸ*
ಮೈಸೂರು,ಡಿ.02 ಹೆಚ್.ಐ.ವಿ ಸೋಂಕಿನ ಬಗ್ಗೆ ಅರಿವು, ಮುಂಜಾಗ್ರತೆಯಿರಬೇಕೇ ಹೊರತು ಕೀಳರಿಮೆಯಲ್ಲ ಎಂದು ಕೃಷ್ಣರಾಜ ಕ್ಷೇತ್ರದ ಶಾಸಕರಾದ ಟಿ ಎಸ್ ಶ್ರೀವತ್ಸ ಅವರು ತಿಳಿಸಿದರು.

ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮೈಸೂರು, ಕರ್ನಾಟಕ ರಾಜ್ಯ ಏಡ್ಸ್ ಪ್ರವೆನ್ಷನ್ ಸೊಸೈಟಿ ಬೆಂಗಳೂರು, ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕ ಮೈಸೂರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮೈಸೂರು, ಲಯನ್ಸ್ ಬ್ಲಡ್ ಸೆಂಟರ್ ಜೀವಧಾರ, ಆಶಾ ಕಿರಣ, ಆನಂದ ಜ್ಯೋತಿ ಪಾಸಿಟೀವ್ ನೆಟ್ವರ್ಕ್, ಆಶೋದಯ ಸಮಿತಿ, ಎಸ್‌ವಿವೈಎಂ ಮೈಸೂರು, ಎಲ್ ಡಬ್ಲ್ಯೂಎಸ್ ಗಾರ್ಡ್ ಸಂಸ್ಥೆ, ಮಹಾನ್ ಐ ಎಂ ಎ ಮೈಸೂರು ಹಾಗೂ ಇತರೆ ಸ್ವಯಂ ಸೇವಾ ಸಂಸ್ಥೆಗಳ ಸಹಕಾರದೊಂದಿಗೆ ಜೆಕೆ ಗ್ರೌಂಡ್ ನ ಅಮೃತ ಮಹೋತ್ಸವ ಭವನದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಏಡ್ಸ್ ದಿನ-2023 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಈ ಹಿಂದೆ ಸಮಾಜದೊಳಗೆ ಹೆಚ್.ಐ.ವಿ ಸೋಂಕಿತರನ್ನು ನೋಡುವ ರೀತಿ ಹಾಗೂ ಅವರ ಜೊತೆ ವರ್ತಿಸುವ ರೀತಿ ಬೇರೆಯೇ ಆಗಿತ್ತು. ಕಾಲ ಕಳೆದಂತೆ ಸಮಾಜದಲ್ಲಿ ಅರಿವು ಹೆಚ್ಚಾಗಿ, ಹೆಚ್.ಐ.ವಿ ಸೋಂಕಿತರನ್ನು ಸಾಮಾನ್ಯರಂತೆ ಪರಿಗಣಿಸಲಾಗುತ್ತಿರುವುದು ಸಮಾಜದ ಉತ್ತಮ ಬೆಳವಣಿಗೆಯಾಗಿದೆ. ಹಿಂದಿನ ದಿನಗಳಲ್ಲಿ ಹೆಚ್ಚಾಗಿ ಸೋಂಕಿಗೆ ಒಳಗಾದರೆ ಕೀಳರಿಮೆ ಹಾಗೂ ಭಯದಿಂದ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಇತ್ತು. ಆದರೆ ಸರ್ಕಾರ ಹಾಗೂ ಇತರೆ ಸ್ವಯಂಸೇವಾ ಸಂಸ್ಥೆಗಳ ಅರಿವಿನ ಕಾರ್ಯಕ್ರಮಗಳು, ಆತ್ಮಸ್ಥೈರ್ಯ ತುಂಬುವ ಚಟುವಟಿಕೆಗಳು ಹೆಚ್.ಐ.ವಿ ಸೋಂಕಿಗೆ ಒಳಗಾದ ರೋಗಿಗಳ ಮನಸ್ಥಿತಿಯನ್ನು ಬದಲಿಸಿವೆ ಎಂದರು.

ಎಷ್ಟೋ ಬಾರಿ ಅವರದಲ್ಲದ ತಪ್ಪಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಹೆಚ್.ಐ.ವಿ ಸೋಂಕಿಗೆ ಒಳಗಾಗಿರುತ್ತಾರೆ. ಅಂತಹ ಮಕ್ಕಳಿಗೆ ಆತ್ಮಸ್ಥೈರ್ಯ ತುಂಬುವಲ್ಲಿ ಕೆಲಸ ನಿರ್ವಹಿಸುತ್ತಿರುವ ಎಲ್ಲಾ ಖಾಸಗಿ ಹಾಗೂ ಸ್ವಯಂಸೇವಾ ಸಂಸ್ಥೆಗಳನ್ನು ನಾವು ಸ್ಮರಿಸಲೇಬೇಕು. ಕೋವಿಡ್ ಸಂದರ್ಭದಲ್ಲಿ ತಮ್ಮ ಪ್ರಾಣವನ್ನು ಲೆಕ್ಕಿಸದೆ ಆರೋಗ್ಯ ಇಲಾಖೆ ಕೆಲಸ ಮಾಡಿದೆ. ಹೆಚ್.ಐ.ವಿ ಸೋಂಕಿತರು, ಅವರ ಪರವಾಗಿ ಕೆಲಸ ಮಾಡುವ ಸ್ವಯಂಸೇವಕರು ಸ್ವಯಂ ಸೇವಾ ಸಂಸ್ಥೆಗಳ ಮನವಿಗಳೇನಾದರೂ ಇದ್ದಲ್ಲಿ ಅವುಗಳನ್ನು ಸಲ್ಲಿಸಿ, ಅದನ್ನು ಸರ್ಕಾರದ ಗಮನಕ್ಕೆ ತರುವ ಕೆಲಸ ನಾನು ಮಾಡುತ್ತೇನೆ ಎಂದು ತಿಳಿಸಿದರು.

Share