K.R.S. ಕಬಿನಿ, ಯಿ೦ದ ನಾಲೆಗಳಿಗೆ 28ಕ್ಕೆ ನೀರು ಸಚಿವ ಎಸ್ಟಿಎಸ್.

ಕೆ ಆರ್ ಎಸ್, ಹಾಗೂ ಕಬಿನಿಯಿಂದ ಜುಲೇ 28 ಕ್ಕೆ ನಾಲೆಗಳಿಗೆ ನೀರು; ಸಚಿವ ಎಸ್ ಟಿ ಎಸ್

  • ಕಬಿನಿ ಹಾಗೂ ಕೃಷ್ಣರಾಜಸಾಗರ ಜಲಾಶಯದ ಅಚ್ಚುಕಟ್ಟು ಪ್ರದೇಶಗಳಿಗೆ 2020 ರ ಮುಂಗಾರು ಹಂಗಾಮಿಗೆ ನೀರು ಒದಗಿಸುವ ಬಗ್ಗೆ ಸಭೆ
  • ಸವಡೆಗಳ ಬಾಕಿ ವೇತನ ಪಾವತಿ ಹಾಗೂ ಸೌಲಭ್ಯ ನೀಡಲು ಅಧಿಕಾರಿಗಳಿಗೆ ಸೂಚನೆ

ಕೆ ಆರ್ ಎಸ್, ಮಂಡ್ಯ: ಕಬಿನಿ ಹಾಗೂ ಕೆಆರ್ ಎಸ್ ಜಲಾಶಯದಿಂದ ನಾಲೆಗಳಿಗೆ ಜುಲೈ 28ರಿಂದ ಕಟ್ಟುಪದ್ಧತಿಯಲ್ಲಿ ನೀರು ಹರಿಸಬೇಕು. ಹಾರಂಗಿ ಜಲಾಶಯಗಳಿಂದಲೂ ಅದೇ ದಿನ ಇಲ್ಲವೇ ಆದಷ್ಟು ಶೀಘ್ರವಾಗಿ ನೀರು ಬಿಡಲು ಹಾರಂಗಿ ಐ.ಸಿ.ಸಿ. ಸಭೆ ಮಾಡಿ ಕ್ರಮ ಕೈಗೊಳ್ಳಿ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಹಾಗೂ ಪೌರಾಡಳಿತ ಮತ್ತು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಸಿ.ನಾರಾಯಣ ಗೌಡ ಅಧ್ಯಕ್ಷತೆಯಲ್ಲಿ ಕೆ ಆರ್ ಎಸ್ ಬೃಂದಾವನ ಗಾರ್ಡನ್ ಕಾವೇರಿ ಸಭಾಂಗಣದಲ್ಲಿ ನಡೆದ ಕೃಷ್ಣರಾಜಸಾಗರ ಜಲಾಶಯದ ಅಚ್ಚುಕಟ್ಟು ಪ್ರದೇಶಗಳಿಗೆ 2020 ರ ಮುಂಗಾರು ಹಂಗಾಮಿಗೆ ನೀರು ಒದಗಿಸುವ ಬಗ್ಗೆ ಸಭೆಯಲ್ಲಿ ಮಾತನಾಡಿ, ಜುಲೈ 28 ರಿಂದ ನೀರು ಬಿಡಲು ಎಲ್ಲ ಶಾಸಕರು ಒಪ್ಪಿಗೆ ಸೂಚಿದ್ದಾರೆ.
ಕೆಲವು ನಾಲೆಗಳ ದುರಸ್ತಿ ಇದ್ದು, ಇದನ್ನು ಶೀಘ್ರ ಮುಗಿಸಿ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ಸಚಿವರಾದ ಎಸ್.ಟಿ. ಸೋಮಶೇಖರ್ ತಿಳಿಸಿದರು.

ಇನ್ನು ಸವಡೆಗಳಿಗೆ 6 ತಿಂಗಳಿನಿಂದ ವೇತನ ನೀಡದಿರುವ ಬಗ್ಗೆ ಸಭೆಯಲ್ಲಿ ಶಾಸಕರು ಗಮನಕ್ಕೆ ತಂದಿದ್ದಾರೆ. ಇವರಿಗೆ ಶೀಘ್ರದಲ್ಲೇ ವೇತನ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

1492 ಸವಡೆಗಳ ನೇಮಕಕ್ಕೆ ಸಂಬಂಧಪಟ್ಟಂತೆ ವೇತನ ಸೇರಿದಂತೆ ಸೇರಬೇಕಾದ ಇತರ ಸೌಲಭ್ಯಗಳ ಬಗ್ಗೆ ಶೀಘ್ರ ಕ್ರಮವಹಿಸಲಾಗುವುದು. ಅವರ ಕೆಲಸ ಬಹಳ ಮುಖ್ಯವಾಗಿದ್ದು, ಈ ಹಿನ್ನೆಲೆಯಲ್ಲಿ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗುವುದು. ಜೊತೆಗೆ ಅಧಿಕಾರಿಗಳಿಗೂ ಸೂಚನೆ ನೀಡಲಾಗಿದೆ. ಈ ಬಗ್ಗೆ ಅಧಿಕಾರಿಗಳು ಹಣಕಾಸು ವಿಭಾಗಕ್ಕೆ ನೀವು ಬರೆದ ಪತ್ರದ ಪ್ರತಿಯನ್ನು ನನಗೆ ಹಾಗೂ ಮಂಡ್ಯ ಉಸ್ತುವಾರಿ ಸಚಿವರಾದ ನಾರಾಯಣಗೌಡ ಅವರಿಗೆ ಕೊಟ್ಟರೆ ನಾವೂ ಫಾಲೋಅಪ್ ಮಾಡಿ ಸಮಸ್ಯೆ ಇತ್ಯರ್ಥಕ್ಕೆ ಪ್ರಯತ್ನಿಸುತ್ತೇವೆ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಸೋಮಶೇಖರ್ ತಿಳಿಸಿದರು.

ಸವಡೆಗಳ ಹೊಸ ನೇಮಕದಲ್ಲಿಯೂ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಸಭೆಯಲ್ಲಿ ಚರ್ಚೆಯಾದಂತೆ ಅವರಿಗೆ ಎಲ್ಲ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಅಧಿಕಾರಿಗಳಿಗೆ ಸಚಿವ ಸೋಮಶೇಖರ್ ಸೂಚನೆ ನೀಡಿದರು.

ಕಳೆದ 10 ದಿನಗಳ ಹಿಂದೆ ಕೃಷಿ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿದಾಗ ನೀರಿನ ಅವಶ್ಯಕತೆ ಬಗ್ಗೆ ಚರ್ಚೆಯಾಗಿತ್ತು. ಈ ಹಿನ್ನೆಲೆಯಲ್ಲಿ ಸಚಿವರಾದ ನಾರಾಯಣ ಗೌಡ ಅವರಲ್ಲಿ ಚರ್ಚಿಸಿ ಸಭೆಯನ್ನು ನಿಗದಿ ಮಾಡಲಾಯಿತು. ಈ ಹಿನ್ನೆಲೆಯಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಚರ್ಚಿತ ವಿಷಯಗಳು

ಕಬಿನಿಯಲ್ಲಿ 15 ಟಿಎಂಸಿ ನೀರನ್ನು ಬಳಕೆ ಮಾಡಬಹುದಾಗಿದ್ದು, ಕೆರೆಗಳಿಗೆ ತುಂಬಿಸಲು 2 ರಿಂದ 2.5 ನೀರನ್ನು ಕೊಡಬಹುದಾಗಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಸವಡೆಗಳಿಗೆ ಪಿಎಫ್ ಸೌಲಭ್ಯ

ಸವಡೆಗಳಿಗೆ ಈ ಹಿಂದೆ ಇರುವ ಬಾಕಿ ವೇತನವು ಇನ್ನು 2-3 ವಾರಗಳಲ್ಲಿ ಪಾವತಿಯಾಗಬೇಕು. ಜೊತೆಗೆ ಮುಂದೆ ಬರುವ ಹೊಸ ಏಜೆನ್ಸಿಯಿಂದ ಅವರನ್ನು ಪುನರ್ ನೇಮಕ ಮಾಡಿಕೊಂಡು ಸರಿಯಾದ ಸಮಯಕ್ಕೆ ವೇತನ ಹಾಗೂ ಪಿಎಫ್, ಇಎಸ್ಐ ಸೌಲಭ್ಯಗಳನ್ನು ಸರಿಯಾಗಿ ಪಾವತಿಯಾಗುವಂತೆ ನೋಡಿಕೊಳ್ಳಬೇಕು ಎಂಬ ಸಲಹೆಗಳು ವ್ಯಕ್ತವಾದವು.

ಒಟ್ಟಲು ಹಾಕುವ ಸಮಯ ಇದಾಗಿದ್ದು, ಈ ವಾರದ ಕೊನೆಯಲ್ಲಿ ನೀರು ಬಿಟ್ಟರೆ ಉತ್ತಮ ಎಂದು ಮಂಡ್ಯ ಹಾಗೂ ಮೈಸೂರು ಜಿಲ್ಲಾಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದರು.

ಸಂಸದರಾದ ಪ್ರತಾಪ್ ಸಿಂಹ,
ಶಾಸಕರಾದ ಜಿ.ಟಿ.ದೇವೇಗೌಡ, ಸಿ.ಎಸ್.ಪುಟ್ಟರಾಜು, ನಾಗೇಂದ್ರ, ಅಶ್ವಿನ್ ಕುಮಾರ್, ಡಾ.ಎಸ್.ಯತೀಂದ್ರ, ಧರ್ಮಸೇನ ಸೇರಿದಂತೆ ಮಂಡ್ಯ, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯ ಶಾಸಕರು, ವಿಧಾನಪರಿಷತ್ ಸದಸ್ಯರು, ಜಿಲ್ಲಾಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ಜಿಪಂ ಸಿಇಒಗಳು ಇತರರು ಇದ್ದರು.

+++++
ಕೆ ಆರ್ ಎಸ್ ಕಾವೇರಿ ವಿಗ್ರಹಕ್ಕೆ ಸಚಿವರಾದ ಎಸ್ ಟಿ. ಸೋಮಶೇಖರ್, ನಾರಾಯಣಗೌಡ ಪೂಜೆ

ಮಂಡ್ಯ ಜಿಲ್ಲೆಯ ಕೃಷ್ಣರಾಜ ಸಾಗರ ಅಣೆಕಟ್ಟಿಗೆ ಭೇಟಿ ನೀಡಿದ ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಹಾಗೂ ಪೌರಾಡಳಿತ ಮತ್ತು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಸಿ.ನಾರಾಯಣ ಗೌಡ ಅವರು ಕಾವೇರಿ ಮಾತೆ ವಿಗ್ರಹಕ್ಕೆ ಪೂಜೆ ಸಲ್ಲಿಸಿದರು. ಈ ವೇಳೆ ಸಂಸದರಾದ ಪ್ರತಾಪ್ ಸಿಂಹ, ಮುಖಂಡರಾದ ಪಿ.ರಾಜೀವ್ ಇದ್ದರು.