M.P. ಆಧ್ಯಾತ್ಮಿಕ ಅಂಗಳ:ಶ್ರೀವಿಷ್ಣು ಸಹಸ್ರನಾಮ ಜಪದ ಮಹತ್ವ,..!

ಕೃಪೆ ಆದ್ಯಾತ್ಮಿಕ ವಿಚಾರ ಬಳಗ

*ಶ್ರೀವಿಷ್ಣು ಸಹಸ್ರನಾಮ ಜಪದ ಮಹತ್ವ,..!*

ಶ್ರೀಕೃಷ್ಣನು “ಯಜ್ಞಾನಾಂ ಜಪಯಜ್ಯೋಽಸ್ಮಿ”. ಯಜ್ಞಗಳಲ್ಲಿ ನಾನು ಜಪಯಜ್ಞವಾಗಿದ್ದೇನೆ. ಎಂದರೆ ಜಪದ ಮಂತ್ರ ಮತ್ತು ದೇವತೆಯು ಬೇರೆಯಲ್ಲ. ಜಪವೆಂದರೆ ಮಹಾವಿಷ್ಣುವಿನ ಯಾವುದಾದರೊಂದು ಮಂತ್ರವನ್ನು ಮತ್ತೆ ಮತ್ತೆ ಉಚ್ಚರಿಸುತ್ತಿರುವದು. ಜಪವು ದೈವ ಸಾಕ್ಷಾತ್ಕಾರಕ್ಕೆ ಸುಲಭವಾದ ಸಾಧನವು. ವಾಲ್ಮೀಕಿ, ಪ್ರಹ್ಲಾದ, ಧ್ರುವ ಮುಂತಾದ ಮಹನೀಯರನೇಕರು ಜಪ ಒಂದರಿಂದಲೇ ಮೋಕ್ಷವನ್ನು ಹೊಂದಿದರು. “ತಜ್ಜಪಸ್ತದರ್ಥಭಾವನಂ” ಮಂತ್ರದ ಅರ್ಥವನ್ನು ಅರಿತುಕೊಂಡು, ಮಂತ್ರದ ದೇವತೆಯನ್ನು ಒಳಗಣ್ಣಿನಿಂದ ಕಾಣುತ್ತಾ ಭಗವಂತನ ಪ್ರೀತಿಗೆ ಪಾತ್ರರಾಗಬಹುದು.

ಜಪದಲ್ಲಿ ಮೂರು ವಿಧ

ವೈಖರೀ, ಉಪಾಂಶು ಮತ್ತು ಮಾನಸವೆಂದು ಶುಚಿರ್ಭೂತರಾಗಿ ಪ್ರೇಮಭಾವದಿಂದ ದೈವೀಶಕ್ತಿಯನ್ನು ಧ್ಯಾನಿಸುತ್ತಾ ಸಾತ್ವಿಕ ರೀತಿಯಲ್ಲಿ ಮಾನಸಿಕವಾಗಿ ಜಪಿಸಿದಾಗ ಭಗವಂತನು ಸುಪ್ರೀತನಾಗಿ ದರ್ಶನ ಭಾಗ್ಯವನ್ನು ಕರುಣಿಸುವನು.

ಯಜ್ಞ ಯಾಗಗಳನ್ನು ಮಾಡುವವರೂ ಸಹ ಎಷ್ಟು ಸ್ವಾಹಾಕಾರಗಳನ್ನು ಹೇಳುವರೋ ಅದರ ಹತ್ತರಷ್ಟು ಮಂತ್ರ ಜಪವನ್ನು ಮುಂಚಿತವಾಗಿ ಮುಗಿಸಿರಬೇಕು. ಒಂದು ಸಾವಿರ ಮಂತ್ರವನ್ನು ಜಪಿಸಿದವರು ನೂರು ಸಲ ಹೋಮ ಮಾಡಬೇಕು. ಓಂ ನಮೋ ನಾರಾಯಣಾಯ 1000 ಜಪ, ಹೋಮದಲ್ಲಿ ಓಂ ನಾರಾಯಣಾಯ ಸ್ವಾಹಾ ಎಂದು 100 ಸಲ ಹೇಳಬೇಕು.

ಯಾರು ಮಂತ್ರವನ್ನು ಶ್ರದ್ಧೆಯಿಂದ ಮನಸ್ಸಿನಲ್ಲಿ ಹೇಳಿಕೊಳ್ಳುವರೋ ಅವರಿಗೆ ಶೀಘ್ರದಲ್ಲಿ ಧ್ಯಾನಕ್ಕೇರಲು ಸಾಮರ್ಥ್ಯವುಂಟಾಗುವದು.
(1) ಜಪ ಸಹಿತ ಧ್ಯಾನ
(2) ಜಪರಹಿತಧ್ಯಾನ ಎಂದು ಎರಡು ವಿಧ.

ಧ್ಯಾನವು ಬಲಿತಂತೆಲ್ಲಾ ಜಪವು ಸೂಕ್ಷ್ಮವಾಗಿ ಕೊನೆಗೆ ನಿಲ್ಲುವದು.

ಮಂತ್ರವೆಂದರೆ ಭಗವಂತನ ನಾಮವನ್ನು ಹೇಳಿಕೊಳ್ಳುತ್ತಿದ್ದರೆ, ಮನಸ್ಸಿನಲ್ಲಿದ್ದ ಮಾಲಿನ್ಯಗಳು ದೂರವಾಗುತ್ತಾ ನಿರ್ಮಲವಾದ ಮನಸ್ಸು ಶುಭ್ರವಾಗಿ ಉದ್ದಾರವಾಗುವದು, ರಕ್ಷಿಸಲ್ಪಡುವದು, ಶಕ್ತಿಶಾಲಿಯಾಗುವದು, ತೇಜೋಮಯವಾಗುವದು, ಮನನಾತ್ರಾಯತೇ ಮಂತ್ರ ಎನ್ನುವದು ಮಂತ್ರಶಾಸ್ತ್ರವು.

ಹುಟ್ಟು ಸಾವುಗಳ ಸುಳಿಯಿಂದ ನಮ್ಮನ್ನು ಬಿಡಿಸಿ ಸುಖ ಸ್ವರೂಪನಾದ ಪರಮಾತ್ಮನನ್ನು ಪಡೆದುಕೊಳ್ಳುವಂತೆ ಮಾಡಬಲ್ಲುದು ಮಂತ್ರ ಜಪವು. ಜಪದಿಂದ ಮನಸ್ಸಿನ ಶಕ್ತಿಯೂ ಆಧ್ಯಾತ್ಮಿಕ ಶಕ್ತಿಯೂ, ಪ್ರಾಣಶಕ್ತಿಯೂ ಹೆಚ್ಚುವದು. ಜೀವನದಲ್ಲಿ ಬಯಸಿದುದೆಲ್ಲವನ್ನೂ ಪಡೆಯಲು ಜಯವನ್ನು ಗಳಿಸಲು ಜಪವೊಂದೇ ದಿವ್ಯ ಸಾಧನೆ. ಮಂತ್ರ ಜಪವು ಎಲ್ಲ ಬಗೆಯ ರೋಗಗಳಿಗೆ ದಿವ್ಯಷಧ. ಭಗವಂತನ ನಾಮಜಪದ ಬಲದಿಂದ ಜನರು ಬಯಸಿದಷ್ಟು ವರ್ಷ ಬದುಕಬಹುದು. ಭೀಷ್ಮನು ಇಚ್ಛಾಮರಣಿಯಾದರೆ ಹನುಮಂತ ವಿಭೀಷಣರು ಚಿರಂಜೀವಿಗಳಾದರು. ಮಾರ್ಕಂಡೇಯ ಮಹರ್ಷಿಯು ಮೃತ್ಯುವನ್ನೇ ಜಯಿಸಿದನು. “ ಮಹಾಪ್ರಲಯದ ನಂತರ ಆಲದೆಲೆಯ ಮೇಲೆ ಮಲಗಿದ್ದ ಮಹಾವಿಷ್ಣುವನ್ನು ಸಂದರ್ಶಿಸಿ ಸಂಭಾಷಿಸಿದವನು ಮಾರ್ಕಂಡೇಯನೊಬ್ಬನೇ.”

ಜಪವು ಆರೋಗ್ಯ ಐಶ್ವರ್ಯ ಆಯುಸ್ಸನ್ನು ಕೊಡುವಂತೆ ದೈವಜ್ಞಾನವನ್ನುಂಟು ಮಾಡುವದು. ಹೃದಯವನ್ನು ಶುದ್ಧಗೊಳಿಸಲು, ಮನಸ್ಸು ನಿಶ್ಚಲವಾಗಲು, ಕಾಮಾದಿ ದೋಷಗಳನ್ನು ನಾಶ ಮಾಡಲು, ಪಾಪಗಳನ್ನು ದಹಿಸಲು ವೈರಾಗ್ಯವನ್ನು ಬೆಳೆಸಲು, ಭ್ರಮೆಯನ್ನು ಕಳಚಿ, ಭಯರಹಿತನಾಗಲು, ಸಕಲ ಪ್ರಾಣಿಗಳಲ್ಲಿ ಪ್ರೇಮ ಪರಮಾತ್ಮ ದೃಷ್ಟಿ, ಸಂರಕ್ಷಣೆಯ ಸಾಮರ್ಥ್ಯವೇ ಮುಂತಾದ ದೈವೀಗುಣಗಳು ಜಪಸಾಧನೆಯಿಂದ ಅನಾಯಾಸವಾಗಿ ಲಭಿಸುವವು.

ಜಪ ಸಾಧನೆಯಲ್ಲಿ ಜಯಶೀಲರಾದ ವಿದ್ಯಾರಣ್ಯರು, ಮಧುಸೂದನ ಸರಸ್ವತಿಗಳವರು ತಮ್ಮ ಇಷ್ಟ ದೇವತೆಯ ಮಂತ್ರಪುರಶ್ಚರಣೆಗಳನ್ನು ಲಕ್ಷಗಟ್ಟಳೆ, ಕೋಟಿಗಟ್ಟಲೆ ಮಾಡಿದ್ದರು. ಮಂತ್ರದಲ್ಲಿರುವ ಅಕ್ಷರ ಸಂಖ್ಯೆಗೆ ತಕ್ಕಂತೆ ಲಕ್ಷ ಅಥವಾ ಕೋಟಿ ಮಂತ್ರ ಜಪವನ್ನು ಅನೇಕ ಸಲ ಮಾಡಿದವರು. ಸಂತತ್ಯಾಗರಾಜರು 96 ಕೋಟಿ ರಾಮ ಮಂತ್ರವನ್ನೂ ಮತ್ತೆ ಕೆಲವರು 13 ಕೋಟಿ ಮಂತ್ರ ಜಪವನ್ನೂ, ಇನ್ನೂ ಕೆಲವರು ಸಂಖ್ಯೆಯನ್ನೇ ಇಟ್ಟುಕೊಳ್ಳದೆ ಕೊನೆಯುಸಿರು ಇರುವವರೆಗೆ ಜಪ ಮಾಡಿದ ಮಹನೀಯರು ಬಹಳಷ್ಟು ಮಂದಿ.

ಓಂಕಾರ,
ಓಂ ನಮಶಿವಾಯ,
ಓಂ ನಮೋ ನಾರಾಯಣಾಯ ಮುಂತಾದ ದೇವ ದೇವೀ ಮಂತ್ರಗಳ ಪುರಶ್ಚರಣ ವಿಧಾನಗಳು ಶ್ರೀ ನಾರದ ಮಹಾ ಪುರಾಣದಲ್ಲಿ ಹೇರಳವಾಗಿರುವುದನ್ನು ಗಮನಿಸಬಹುದು. ಸದ್ಗುರುವಿನಿಂದ ಮಂತ್ರದೀಕ್ಷೆ, ಕ್ರಮ ತಪ್ಪದೆ ಜಪಸಾಧನೆ, ಸರ್ವಾತ್ಮಭಾವ, ಭೂತದಯೆ ಮುಂತಾದವುಗಳಿಂದ ಮುಕ್ತಿ ಪ್ರಾಪ್ತಿಯು.

ಮುಂದುವರೆಯುವುದು…
ಜೈ ಶ್ರೀ ರಾಮ್

*!! ಶ್ರೀಕೃಷ್ಣಾರ್ಪಣಮಸ್ತು !!*
.