ಕೃಪೆ ಆದ್ಯಾತ್ಮಿಕ ವಿಚಾರ ಬಳಗ
*ದೇವರ ಅನುಗ್ರಹ ಬೇಕು..!*
ಒಬ್ಬ ಮನುಷ್ಯನಿಗೆ ವಯಸ್ಸಾಯಿತು ಮೃತಪಟ್ಟನು. ಅವನು ಮಾಡಿದ ಪುಣ್ಯ ಕಾರ್ಯಗಳಿಂದ ನೇರವಾಗಿ ಸ್ವರ್ಗಕ್ಕೆ ಬಂದನು. ಸ್ವರ್ಗದಲ್ಲಿ ದೇವತೆಯು ಬಂದು ಅವನ ಕೈ ಹಿಡಿದು ಒಳಗೆ ಕರೆದುಕೊಂಡು ಹೋದಳು. ಹೀಗೆ ಸಾಗುತ್ತಿರುವಾಗ ಅಲ್ಲೊಂದು ಕೊಠಡಿ ಕಾಣುತ್ತದೆ. ಅಲ್ಲಿ ದೇವತೆಗಳು ಬಹಳ ಗಡಿಬಿಡಿಯಿಂದ ಕೆಲಸ ಮಾಡುತ್ತಾ, ಅಲ್ಲಿಂದಿಲ್ಲಿಗೆ ಅವಸರವಸರವಾಗಿ ಓಡಾಡುತ್ತಿದ್ದರು ಹಾಗೂ ಅಲ್ಲೊಂದಷ್ಟು ದೊಡ್ಡ ದೊಡ್ಡ ಪುಸ್ತಕಗಳಿದ್ದು ಅದರೊಳಗೆ ಏನೇನೋ ಬರೆಯುತ್ತಿದ್ದರು. ಇದನ್ನು ನೋಡಿದ ಮನುಷ್ಯ ದೇವತೆಯನ್ನು ಕೇಳಿದ ಅವರೆಲ್ಲ ಏನು ಮಾಡುತ್ತಿದ್ದಾರೆ ಎಂದು ಅವಳು ಹೇಳಿದಳು ಇದು ‘ಸ್ವೀಕೃತಿ’ ವಿಭಾಗ. ಅಂದರೆ ಏನು? ಎಂದು ಪ್ರಶ್ನೆ ಮಾಡಿದನು. ಅವಳು ಇದು ಭೂಮಿಯ ಮೇಲಿನ ಜನರು ದೇವರಲ್ಲಿ ಅನೇಕ ಬೇಡಿಕೆಗಳನ್ನು ಬೇಡಿರುತ್ತಾರೆ ಅದನ್ನೆಲ್ಲ ಇಲ್ಲಿ ದಾಖಲಿಸುತ್ತಾರೆ ಎಂದಳು.
ಮತ್ತೆ ಮುಂದೆ ಹೋಗುತ್ತಿದ್ದರು. ಅಲ್ಲಂತೂ ಬಹಳ ವಿಸ್ತಾರವಾದ ಕೊಠಡಿಯಿತ್ತು. ಕೆಲಸಗಳು ಸರಸರ ನಿಮಿಷವೂ ಬಿಡುವಿಲ್ಲದಂತೆ ನಡೆಯುತ್ತಲೇ ಇತ್ತು. ಇದನ್ನು ಕಂಡ ಮನುಷ್ಯ ಮತ್ತೆ ದೇವತೆಯನ್ನು ಕೇಳಿದ, ಅದಕ್ಕೆ ಅವಳು ಇದು ‘ಬಟವಾಡೆ’ ವಿಭಾಗ, ಪ್ರಾರ್ಥನೆ ಹಾಗೂ ಪೂಜೆಯ ಮೂಲಕ ಸಂದಾಯವಾದ ಜನರ ಬೇಡಿಕೆಗಳನ್ನೆಲ್ಲಾ ಪರಿಶೀಲಿಸಿ ಅಗತ್ಯಕ್ಕೆ ತಕ್ಕಂತೆ ಭಗವಂತನು ಅನುಗ್ರಹಿಸುತ್ತಾನೆ. ಅವುಗಳನ್ನೆಲ್ಲಾ ಸರಿ ಮಾಡಿ ಆ ಅನುಗ್ರಹಗಳನ್ನು ಪ್ಯಾಕ್ ಮಾಡಿ ಅದಕ್ಕೆ ಸಂಬಂಧಪಟ್ಟವರಿಗೆ ತಲುಪಿಸುವ ಕೆಲಸ ಈ ವಿಭಾಗದ್ದು.
ಅಲ್ಲಿಂದ ಮುಂದೆ ನಡೆಯುತ್ತಿದ್ದರು. ಬಹಳ ದೊಡ್ಡ ಚೌಕಿ. ಅದರಿಂದ ದಾಟಿ ಮುಂದೆ ಬಂದಾಗ ಅಲ್ಲೊಂದು ಸಣ್ಣ ಕೊಠಡಿ ಕಾಣುತ್ತದೆ. ಅಲ್ಲೊಬ್ಬ ದೇವತೆ ಟೇಬಲ್ ಮುಂದೆ ಕೆಲಸವಿಲ್ಲದೆ ಕೂತಿದ್ದಾಳೆ. ಅವಳಿಗೆ ಮಾಡಲು ಏನೂ ಕೆಲಸವಿಲ್ಲ. ಏನನ್ನೋ ಕಾಯುವಂತೆ ಕಾಯುತ್ತ ಕುಳಿತಿದ್ದಳು. ಮನುಷ್ಯನಿಗೆ ಆಶ್ಚರ್ಯವಾಯಿತು, ಮತ್ತೆ ದೇವತೆಯನ್ನು ಇದೇನು? ಇದು ಮೊದಲು ನೋಡಿದ ಎರಡು ಕೊಠಡಿಗಳಲಲ್ಲೂ ಒಬ್ಬರ ಮುಖ ಒಬ್ಬರು ನೋಡಿಕೊಳ್ಳಲು ಆಗದಷ್ಟು ಕೆಲಸ ಮಾಡುತ್ತಿದ್ದರು. ಆದರೆ ಇಲ್ಲಿ ಈ ದೇವತೆ ಏನು ಇಲ್ಲದೆ ಸುಮ್ಮನೆ ಕುಳಿತಿದ್ದಾಳೆ ಯಾಕೆ? ಈ ಕೊಠಡಿಯ ಅಗತ್ಯವಾದರೂ ಏನು ಎಂದು ಕೇಳಿದ. ಆಗ ದೇವತೆ, ಬಹಳ ಬೇಸರದಿಂದ ಹೇಳಿದಳು. ಇದು ‘ರಸೀದಿ’ ವಿಭಾಗ. ಭಗವಂತನನ್ನು ಅರ್ಚಿಸಿ ಜನರು ಬೇಡಿಕೆಗಳನ್ನು ಬೇಡುತ್ತಾರೆ, ಭಗವಂತ ಅವುಗಳನ್ನು ಅನುಗ್ರಹಿಸುತ್ತಾನೆ. ದೇವರ ‘ಅನುಗ್ರಹವನ್ನು’ ನಾವುಗಳು ಭಕ್ತರಿಗೆ ಬಟವಾಡೆ ಮಾಡುತ್ತೇವೆ. ನಮಗೆ ತಲುಪಿದೆ ಎಂದು ಜನರು ‘ರಸೀದಿ’ಯನ್ನು ಕಳಿಸಿದರೆ ಮಾತ್ರ ಇಲ್ಲಿ ದಾಖಲಾಗುತ್ತದೆ. ಆದರೆ ಅಂಥ ರಸೀದಿಯನ್ನು ಕಳುಹಿಸುವವರು ತುಂಬಾ ಅಂದರೆ ತುಂಬಾ ಕಡಿಮೆ. ಆದುದರಿಂದ ಇಲ್ಲಿ ಈ ದೇವತೆಗೆ ಕೆಲಸವಿಲ್ಲ ಎಂದಳು. ‘ರಸೀದಿ’ ಎಂದರೆ ಏನು ಎಂದು ಆ ಮನುಷ್ಯ ಆಕೆಯನ್ನು ಕೇಳಿದ.
ಮತ್ತೆ ದೇವತೆ ಹೇಳಿದಳು, ‘ರಸೀದಿ’ ಕಳಿಸುವುದು ತುಂಬಾ ಸುಲಭ. ಯಾರು ಶ್ರದ್ಧಾಭಕ್ತಿಯಿಂದ ಭಗವಂತನನ್ನು ಪೂಜಿಸಿ ಅವರಿಗೆ ಬೇಕಾದ್ದನ್ನು ಬೇಡಿಕೊಳ್ಳುತ್ತಾರೋ, ಅದನ್ನು ಭಗವಂತನು ಅನುಗ್ರಹಿಸುತ್ತಾನೆ. ಭಕ್ತರು, ಭಗವಂತ ನಿನ್ನಿಂದ ನನಗೆ ಮಹದುಪಕಾರ ವಾಯಿತು. ನನ್ನ ಕಷ್ಟಗಳನ್ನೆಲ್ಲ ಮಂಜಿನಂತೆ ಕರಗಿಸಿದೆ, ನನ್ನ ಮಕ್ಕಳ ವಿದ್ಯಾಭ್ಯಾಸಕ್ಕೆ ದಾರಿತೋರಿದೆ, ಕೆಲಸ ಸಿಕ್ಕಿತು, ಮದುವೆಯಾಯಿತು, ಮನೆ ಆಯಿತು, ಮಕ್ಕಳಾಯಿತು ಹೀಗೆ ಅವರಿಗೆ ಫಲ ದೊರೆತ ನಂತರ, ದೇವರಿಗೆ ಧನ್ಯತಾಭಾವದಿಂದ ಕೈಮುಗಿದು ಕೃತಜ್ಞತೆಯನ್ನು ಸೂಚಿಸುವುದೇ ‘ರಸೀದಿ’.
ಆದರೆ ಮನುಷ್ಯರು ತಮ್ಮ ಕೆಲಸ ಆಗುವವರೆಗೂ ಅವರಿವರನ್ನು ಕೇಳಿ, ಜೋತಿಷ್ಯ ರನ್ನು ಕೇಳಿ, ಬೇಕಾದಷ್ಟು ಒದ್ದಾಡಿ, ಮಡಿ -ಹುಡಿಯಿಂದ ಸೇವೆಮಾಡಿ ಬೇಡಿಕೆ ಸಲ್ಲಿಸುತ್ತಾರೆ, ಭಗವಂತ ಈಡೇರಿಸುತ್ತಾನೆ. ಅವರು ಕೇಳಿದ್ದನ್ನು ಅನುಗ್ರಹಿಸಿದ ಮೇಲೆ ಹಿಂದಿನದೆಲ್ಲ ಮರೆತು ಬಿಡುತ್ತಾರೆ. ‘ರಸೀದಿ’ ತಲುಪಿಸುವ ವಿಚಾರವು ಅವರ ತಲೆಯಲ್ಲಿ ಬರುವುದೇ ಇಲ್ಲ ಎಂದಳು.
ಕಷ್ಟ ಬಂದಾಗ ಈಶ್ವರ, ರಾಮ,ಕೃಷ್ಣ, ಆಂಜನೇಯ, ಲಕ್ಷ್ಮಿ, ಪಾರ್ವತಿ, ಗಣಪತಿ, ಸುಬ್ರಹ್ಮಣ್ಯ, ಇರೋ ಬರೋ ದೇವರುಗಳೆಲ್ಲರೂ ನೆನಪಾಗುತ್ತಾರೆ. ಅದೆಷ್ಟೇ ಒತ್ತಡಗಳಿದ್ದರೂ ಸೇವೆ ಸಲ್ಲಿಸುತ್ತಾರೆ. ಕೆಲಸ ಆದ ಮೇಲೆ ಈ ತಿಂಗಳು, ಮುಂದಿನ ವರ್ಷ, ಮದುವೆ ಒಂದು ಆಗಲಿ, ಮನೆ ಮುಗಿದುಬಿಡಲಿ, ಹೀಗೆ ಅಡ್ಡಗೋಡೆ ಕಟ್ಟಿ ಮರೆತುಬಿಡುತ್ತಾರೆ. ಇದು ದೇವರ ವಿಚಾರದಲ್ಲಿ ಮಾತ್ರ ಅಲ್ಲ ಮನುಷ್ಯ ಮನುಷ್ಯನಿಗೂ, ಮನುಷ್ಯ ಪ್ರಾಣಿಗಳಿಗೂ, ಕೃತಜ್ಞತೆ ಸಲ್ಲಿಸುವುದಿಲ್ಲ. ಪ್ರಕೃತಿಗೆ ಕೃತಜ್ಞತೆಯನ್ನು ಸಲ್ಲಿಸಬೇಕು. ಆದರೆ ಹಾಗೆ ಮಾಡುವುದಿಲ್ಲ. ಹೀಗಾಗಿ ರಸೀದಿ ವಿಭಾಗ ಯಾವಾಗಲೂ ಖಾಲಿ ಇರುತ್ತದೆ.
“ಮೇ ಯಥಾ ಮಾಮ್ ಪ್ರಪದ್ಯಂತೆ, ತಾಂಸ್ತಥೈವ ಭಜಾಮ್ಯಹಮ್!
ಮಮ ವರ್ತ್ಮಾನುವರ್ತಂತೆ , ಮನುಷ್ಯಾಹ ಪಾರ್ಥ ಸರ್ವಶಃ”
ಅರ್ಥ:- ಯಾರು ನನ್ನನ್ನು ಹೇಗೆ ಶರಣು ಹೋಗುವರೋ ನಾನು ಅವರಿಗೆ ಹಾಗೆಯೇ ಒಲಿಯುವನು. ಎಲೈ ಪಾರ್ಥನೆ, ಎಲ್ಲ ಮನುಷ್ಯರೂ ಎಲ್ಲಾ ರೀತಿಯಲ್ಲೂ ನನ್ನನ್ನೇ ಪಡೆಯಲು ಪ್ರಯತ್ನಿಸುತ್ತಿರುವರು.
ವಂದನೆಗಳೊಂದಿಗೆ,
ಬರಹ:- ಆಶಾ ನಾಗಭೂಷಣ.
*!! ಶ್ರೀಕೃಷ್ಣಾರ್ಪಣಮಸ್ತು !!