MP ಕವನ ಸಂಗ್ರಹ : ನಂದಿನಿಯ ಉಳಿಸಿರಿ – ಕವಿಯಿತ್ರಿ . ಆಶಾಲತ

Share

“ನಂದಿನಿಯ ಉಳಿಸಿರಿ “

ಉಳಿಸಿರಿ, ಉಳಿಸಿರಿ ನಂದಿನಿಯ ಉಳಿಸಿರಿ
ಕರುನಾಡ ಹೆಮ್ಮೆಯ ಸುಪುತ್ರಿ
ನಂದಿನಿಯ ರಕ್ಷಿಸಿರಿ
ಗ್ರಾಮೀಣ ಭಾಗದ ಹೆಂಗಳೆಯರ ಕಾಮಧೇನುವ ರಕ್ಷಿಸಿರಿ
ರೈತರ ಪಾಲಿನ ಜೀವ ಸಂಜೀವಿನಿಯ ಉಳಿಸಿರಿ
ಕನ್ನಡಿಗರ ಜೀವನಾಡಿಯ ಉಳಿಸಿರಿ ||1||

ಕರುನಾಡಿನ ಮನೆಮನೆಯ ಅಮೃತ ದೇವತೆಯ ರಕ್ಷಿಸಿರಿ
ಗ್ರಾಮೀಣ ಜನತೆಯ ಬಾಳ ಹಣತೆಯ ನಂದಿಸದಿರಿ
ಮುದ್ದುಕಂದಮ್ಮರ ಜೀವದೊಡನೆ
ಚೆಲ್ಲಾಟವಾಡದಿರಿ
ಸ್ವಾರ್ಥ ರಾಜಕಾರಿಣಿಗಳ
ರಾಜಕೀಯದಾಟಕ್ಕೆ ಬಲಿ ಪಶುವ
ಮಾಡದಿರಿ
ಉಳಿಸಿರಿ, ಉಳಿಸಿರಿ ನಂದಿನಿಯ ಉಳಿಸಿರಿ ||2||

ಕಾಮಧೇನುವಿನ ವರ ಪುತ್ರಿಯ ರಕ್ಷಿಸಿರಿ
ಪಟ್ಟಭದ್ರ ಹಿತಾಸಕ್ತರ ಕಾಂಚಾಣದ
ಸುಳಿಗೆ ನಂದಿನಿಯ ಸಿಲುಕಿಸದಿರಿ
ಹೆತ್ತಮ್ಮನಿರುವಾಗ ಮಲತಾಯಿ ತರುವ ಹುನ್ನಾರವೇಕೆ?
ತಾಯ್ನಾಡಿಗೆ, ಕನ್ನಡಮ್ಮನಿಗೆ ದ್ರೋಹವೆಸಗದಿರಿ
ಉಳಿಸಿರಿ, ಉಳಿಸಿರಿ ನಂದಿನಿಯ ಉಳಿಸಿರಿ ||3||

ನಮ್ಮೆಲ್ಲರ ಪಾಲಿನ ಜೀವನಾಡಿಯ
ನಮ್ಮೆಲ್ಲರ ಬದುಕಿನ ಅಮೃತ ದೇವತೆಯ ರಕ್ಷಿಸಿರಿ
ನಂದಿನಿಯ ರಕ್ಷಿಸದಿದ್ದರೆ ನಮಗೆ
ಉಳಿಗಾಲವಿಲ್ಲ
ಕಿತ್ತೊಗೆಯಿರಿ ಕಲಬೆರೆಕೆಯ ಹಾಲನ್ನು
ಬಳಸಿರಿ ಪರಿಶುದ್ಧ ನಂದಿನಿ ಹಾಲನ್ನು
ಬನ್ನಿರಣ್ಣ, ಬನ್ನಿರಕ್ಕ ನಮ್ಮ ಕ್ಷೀರ
ದೇವತೆಯ ರಕ್ಷಿಸೋಣ
ನಮ್ಮೆಲ್ಲರ ಜೀವದಾತೆಗಾಗಿ
ಟೊoಕ ಕಟ್ಟಿ ನಿಲ್ಲೋಣ ||4||

ಎಂ. ಎಸ್. ಆಶಾಲತಾ, ಶಾಖಾ ವ್ಯವಸ್ಥಾಪಕರು, ಎಂ. ಡಿ. ಸಿ. ಸಿ. ಬ್ಯಾಂಕ್, ಕೆ ಹೊನ್ನಲಗೆರೆಶಾಖೆ

Share