N.R. ಕ್ಷೇತ್ರದ ಲಾಕ್ ಡೌನ್

ಎನ್.ಆರ್.ಕ್ಷೇತ್ರದಲ್ಲಿ ಲಾಕ್‍ಡೌನ್: ಜಿಲ್ಲಾಧಿಕಾರಿ
ಮೈಸೂರು,ಜುಲೈ.17.(ಕರ್ನಾಟಕ ವಾರ್ತೆ):- ನಗರದಲ್ಲಿ ಕೋವಿಡ್-19 ಸೋಂಕಿತರು ಹಾಗೂ ಸೋಂಕಿತರ ಸಾವಿನ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಜುಲೈ 17 ರಿಂದ ಜುಲೈ 24 ರವರೆಗೆ ನರಸಿಂಹರಾಜ, ಉದಯಗಿರಿ, ಲಷ್ಕರ್ ಹಾಗೂ ಮಂಡಿ ಮೊಹಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯನ್ನು ನಿರ್ಬಂಧಿತ ಪ್ರದೇಶವೆಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರು ಆದೇಶಿಸಿದ್ದಾರೆ.
ನಿರ್ಬಂಧಿತ ಪ್ರದೇಶದಲ್ಲಿ ಹೋಟೆಲ್ ಮತ್ತು ರೆಸ್ಟೊರೆಂಟ್‍ಗಳಿಂದ ಪಾರ್ಸಲ್‍ಗೆ ಮಾತ್ರ ಅವಕಾಶವಿರುತ್ತದೆ. ಆಹಾರ, ದಿನಸಿ ಅಂಗಡಿಗಳು, ಹಾಲು ತರಕಾರಿಗಳು, ದಿನಬಳಕೆ ವಸ್ತುಗಳು, ಹಣ್ಣಿನ ಅಂಗಡಿಗಳು, ಔಷಧೋಪಚಾರ, ಬ್ಯಾಂಕ್‍ಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಿ ಕಚೇರಿಗಳನ್ನು ಹೊರತುಪಡಿಸಿ ಉಳಿದೆಲ್ಲಾ ವಾಣಿಜ್ಯ ವಹಿವಾಟುಗಳಿಗೆ ನಿರ್ಬಂಧ ಹೇರಲಾಗಿದೆ.
ಮಾಂಸ ಮತ್ತು ಮೀನುಗಳ ಅಂಗಡಿಗಳನ್ನು ಮಂಗಳವಾರ ಮತ್ತು ಶುಕ್ರವಾರ ಮಾತ್ರ ತೆರೆಯಲು ಅವಕಾಶವಿದೆ. ಎಲ್ಲಾ ಧರ್ಮಗಳ ಪ್ರಾರ್ಥನಾ ಸ್ಥಳಗಳಿಗೆ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿದೆ.
ಈಗಾಗಲೇ ನಿಗದಿ ಪಡಿಸಲಾದ ಮದುವೆಗಳು ಮತ್ತು ಇತರೆ ಸಮಾರಂಭಗಳಿಗೆ 50 ಜನರು ಮೀರದಂತೆ ಸರ್ಕಾರದ ನಿಯಮಾವಳಿಯಂತೆ ನಡೆಸಬಹುದಾಗಿದೆ. ನಿರ್ಬಂಧಿತ ಪ್ರದೇಶಗಳ ಮೂಲಕ ಹಾದು ಹೋಗುವ ಸಾರ್ವಜನಿಕರಿಗೆ ಹಾಗೂ ಇತರೆ ಕಡೆಗಳಲ್ಲಿ ಕೆಲಸ ನಿರ್ವಹಿಸುವ ಸ್ಥಳೀಯರಿಗೆ ಪ್ರಯಾಣಿಸಲು ನಿರ್ಬಂಧವಿರುವುದಿಲ್ಲ. ಆದರೆ ಅನಾವಶ್ಯಕವಾಗಿ ಓಡಾಡುವುದನ್ನು ಕಡ್ಡಾಯವಾಗಿ ನಿರ್ಬಂಧಿಸಿದೆ.
ಮೊದಲನೇ ಹಂತದಲ್ಲಿ ಮುನೀಶ್ವರ ನಗರ, ಕೆ.ಹೆಚ್.ಬಿ ಕಾಲೋನಿ, ಉದಯಗಿರಿ, ರಾಜೀವ ನಗರ, ಬೀಡಿ ಕಾಲೋನಿ ಹಾಗೂ ಸಾತಗಳ್ಳಿ ಬಡಾವಣೆಗಳಲ್ಲಿ ಕೋವಿಡ್ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಮನೆಯ ಸುತ್ತ-ಮುತ್ತಲಿನ 400 ಮೀಟರ್ ಸುತ್ತಳತೆ ವ್ಯಾಪ್ತಿಯಲ್ಲಿ ಸಂಪೂರ್ಣ ಲಾಕ್‍ಡೌನ್ ಮಾಡಲಾಗಿದೆ.
ಲಾಕ್‍ಡೌನ್ ಪ್ರದೇಶಗಳಲ್ಲಿ ಆಹಾರ, ದಿನಸಿ, ಅಂಗಡಿಗಳು, ಹಾಲು, ತರಕಾರಿಗಳು, ದಿನಬಳಕೆ ವಸ್ತುಗಳು, ಹಣ್ಣಿನ ಅಂಗಡಿಗಳು ಪ್ರತಿ ದಿನ ಬೆಳಗ್ಗೆ 6 ರಿಂದ 10 ಗಂಟೆಯವರೆಗೆ ಮಾತ್ರ ತೆರೆಯಲು ಅವಕಾಶವಿರುತ್ತದೆ. ಈ ಪ್ರದೇಶದಲ್ಲಿ ಗುರುತಿನ ಚೀಟಿ ಹೊಂದಿರುವ ಖಾಯಂ, ಹೊರಗುತ್ತಿಗೆ, ಸರ್ಕಾರಿ ನೌಕರರನ್ನು ಹೊರತುಪಡಿಸಿ, ಇತರೆ ಯಾರಿಗೂ ಓಡಾಡಲು ಅವಕಾಶವಿರುವುದಿಲ್ಲ.
ಸಂಪೂರ್ಣ ಲಾಕ್‍ಡೌನ್ ಪ್ರದೇಶದಲ್ಲಿ ಪ್ರತಿದಿನ ಮನೆಯಲ್ಲಿರುವ ಎಲ್ಲಾ ವ್ಯಕ್ತಿಗಳನ್ನೂ ಸಹ ತಪಾಸಣೆಗೆ ಒಳಪಡಿಸಿ, ಅವಶ್ಯಕತೆ ಇದ್ದಲ್ಲಿ Rapid Antigen Kit ಮೂಲಕ ದ್ರವ ಪರೀಕ್ಷೆ ನಡೆಸಲು ಹಾಗೂ ಸೋಂಕು ಕಂಡುಬಂದಲ್ಲಿ ತಕ್ಷಣವೇ ಆ್ಯಂಬುಲೆನ್ಸ್ ಮೂಲಕ ಸೂಕ್ತ ಸ್ಥಳಕ್ಕೆ ವರ್ಗಾಯಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.