ಲೋಪಗಳಿಗೆ, ಸಚಿವ ಸುಧಾಕರ್ ಕೆಂಡಾಮಂಡಲ

Share

ಎಂಎಂಸಿ ಆಡಳಿತದಲ್ಲಿನ ಲೋಪಗಳಿಗೆ ಸಚಿವ ಸುಧಾಕರ್ ಕೆಂಡಾಮಂಡಲ

ಕಾಲಮಿತಿಯಲ್ಲಿ ನಿವಾರಣೆಗೆ ತಾಕೀತು

ನೂರು ವರ್ಷ ಪೂರೈಸುತ್ತಿರುವ ದೊಡ್ಡಾಸ್ಪತ್ರೆ ಕಟ್ಟಡಗಳ ನವೀಕರಣಕ್ಕೆ ಹಸಿರು ನಿಶಾನೆ

ಮೈಸೂರು : ಮೈಸೂರು ಮೆಡಿಕಲ್ ಕಾಲೇಜು ಆಡಳಿತದಲ್ಲಿ ಕಂಡುಬಂದ ನ್ಯೂನತೆಗಳನ್ನು ಕಾಲಮಿತಿಯಲ್ಲಿ ಪರಿಹರಿಸುವಂತೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಸಂಸ್ಥೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಹೊರಗುತ್ತಿಗೆ ವಿಷಯದಲ್ಲಿ ಲೋಪಗಳನ್ನು ಸರಿಪಡಿಸಲು ಮೆಡಿಕಲ್ ಕಾಲೇಜು, ಕೆಆರ್ ಆಸ್ಪತ್ರೆ, ಚೆಲುವಾಂಬ ಮತ್ತು ಪಿಕೆ ಸ್ಯಾನಿಟೋರಿಯಂಗಳಿಗೆ ಒಂದೇ ಗುತ್ತಿಗೆ ನೀಡಬೇಕು, ಪ್ರತ್ಯೇಕವಾಗಿ ನೀಡಿರುವುದನ್ನು ತಕ್ಷಣ ರದ್ದುಮಾಡಬೇಕು ಎಂದು ಆದೇಶಿಸಿದರು.

ಗುಣಮಟ್ಟ ಹಾಗೂ ಪಾರದರ್ಶಕತೆಗೆ ಒತ್ತು ನೀಡಬೇಕು. ಒಂದು ವೇಳೆ ಕಾನೂನಿನ ತೊಡಕು ಎದುರಾದರೆ ಸರ್ಕಾರಕ್ಕೆ ವರದಿ ಸಲ್ಲಿಸಿ ಮಾರ್ಗದರ್ಶನ ಪಡೆದುಕೊಳ್ಳಬೇಕು ಎಂದು ಬುಧವಾರ ಕಾಲೇಜಿಗೆ ಭೇಟಿ ನೀಡಿ ಶೈಕ್ಷಣಿಕ ಹಾಗೂ ಆಡಳಿತದ ಪ್ರಗತಿ ಪರಿಶೀಲನೆ ನಡೆಸಿ ಸೂಚನೆ ನೀಡಿದರು.

ಸಂಶೋಧನೆ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಕಟವಾದ ಸಂಶೋಧನಾ ಲೇಖನಗಳ ಮಾಹಿತಿ ನೀಡಲು ಪರದಾಡಿದ ಡೀನ್ ನಾಗರಾಜು ಅವರನ್ನು ತರಾಟೆಗೆ ತೆಗೆದುಕೊಂಡರು. ಜವಾಬ್ದಾರಿ ಹುದ್ದೆಯಲ್ಲಿ ಇರುವವರು ಸಮರ್ಥವಾಗಿ ನಿಭಾಯಿಸಲು ಸಾಧ್ಯವಾಗದಿದ್ದರೆ ಆ ಹುದ್ದೆಯಲ್ಲಿ ಇರಬಾರದು. ಇನ್ನು ಮುಂದೆ ಲೋಪಗಳಿಗೆ ಅವಕಾಶ ನೀಡಿದರೆ ಸಹಿಸಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದರು.

ಕಟ್ಟಡ ನಿರ್ವಹಣೆಗೆ ಇರುವ ಹಣದ ಬಳಕೆ ಮಾಡದೇ ಮೂರು ವರ್ಷದಿಂದ ಕಾಲಾಹರಣ ಮಾಡುತ್ತಿರುವುದನ್ನು ಕಂಡು ಕೆಂಡಾಮಂಡಲರಾದ ಸಚಿವರು, ತಕ್ಷಣ ಆದ್ಯತೆ ಮೇರೆಗೆ ಆಗಬೇಕಿರುವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಸೂಚನೆ ನೀಡಿದರು.

ಹಾಸ್ಟೆಲ್ ಗಳ ದುರಸ್ತಿ ಮತ್ತು ಉಪಕರಣಗಳ ಖರೀದಿ ವಿಷಯದಲ್ಲಿ ಸರಕಾರದ ನಿಯಮಗಳ ಅಡಿಯಲ್ಲಿ ಟೆಂಡರ್ ಕರೆಯಬೇಕು. ನಿಗದಿತ ಅರ್ಹತೆ ಹೊಂದಿರುವ ಏಜೆನ್ಸಿಗಳ ಮೂಲಕವೇ ಖರೀದಿ ಪ್ರಕ್ರಿಯೆ ನಡೆಯುವಂತೆ ಎಚ್ಚರವಹಿಸಬೇಕು. ಸಂಬಂಧಿಸಿದ ಪ್ರಕ್ರಿಯೆಗಳ ಮಾಹಿತಿಯನ್ನು ಡಿಎಂಇ ಅವರಿಗೆ ನೀಡುವಂತೆ ತಾಕೀತು ಮಾಡಿದರು.

ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಯಲ್ಲಿ ಕ್ಯಾನ್ಸರ್ ಚಿಕಿತ್ಸೆ ಕೇಂದ್ರವನ್ನು ಪಿಪಿಪಿ ಮಾದರಿಯಲ್ಲಿ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ನಾಗೇಂದ್ರ ಅವರ ಮನವಿಗೆ ಭರವಸೆ ನೀಡಿದರು. ಮುಂದಿನ ವರ್ಷಕ್ಕೆ ನೂರು ವರ್ಷ ಪೂರೈಸುವ ಕೆಆರ್ ಆಸ್ಪತ್ರೆ ಕಟ್ಟಡಗಳ ನವೀಕರಣ ಮತ್ತು ದುರಸ್ತಿ ಕಾರ್ಯಕ್ಕೆ 52 ಕೋಟಿ ರೂ.ಗಳ ಪ್ರಸ್ತಾವನೆಗೆ ಅನುಮೋದನೆ ನೀಡುವುದಾಗಿ ತಕ್ಷಣ ಅದನ್ನು ಕಳುಹಿಸಿಕೊಡುವಂತೆ ಸೂಚನೆ ನೀಡಿದರು.

ಇಲಾಖೆ ಕಾರ್ಯದರ್ಶಿ ಮತ್ತು ಡಿಎಂಇ ಅವರು ನಿಯಮಿತವಾಗಿ ಭೇಟಿ ನೀಡಿ ಪ್ರಗತಿ ಪರಿಶೀಲನೆ ನಡೆಸಬೇಕು ಮತ್ತು ಅಗತ್ಯ ಇರುವ ಕಡೆ ಸ್ಥಳ ಪರಿಶೀಲನೆ ನಡೆಸಬೇಕು. ಕಾಟಾಚಾರಕ್ಕೆ ಸಭೆ ನಡೆಸಿದರೆ ಯಾವುದೇ ಪ್ರಯೋಜನ ಆಗುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಮೈಸೂರು, ಬೆಂಗಳೂರು, ಹುಬ್ಬಳ್ಳಿ ಮತ್ತು ಬಳ್ಳಾರಿ ಮೆಡಿಕಲ್ ಕಾಲೇಜುಗಳು ರಾಜ್ತದ ಹಳೆಯ ಮತ್ತು ಪ್ರತಿಷ್ಠಿತ ಸಂಸ್ಥೆಗಳಾಗಿದ್ದು ಇವುಗಳನ್ನು ಮಾದರಿ ಸಂಸ್ಥೆಗಳಾಗಿ ಅಭಿವೃದ್ಧಿ ಪಡಿಸಬೇಕು. ಆ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕಾರ್ಯ ನಿರ್ವಹಿಸಬೇಕು ಎಂದರು.

ಜನರಿಕ್ ಔಷಧಿ ಮಳಿಗೆ ತಕ್ಷಣ ಆರಂಭಿಸಬೇಕು, ಹೊರಗಿನಿಂದ ಖರೀದಿಗೆ ಚೀಟಿ ಕೊಡುವ ಪರಿಪಾಠ ನಿಲ್ಲಬೇಕು. ಕೆಲ ದಿನಗಳಲ್ಲಿ ಸರಕಾರಿ ಔಷಧ ಮಳಿಗೆಗಳಲ್ಲಿ ಖಾಸಗಿ ಕಂಪನಿಗಳ ಔಷಧಗಳನ್ನು ಮಾರಾಟ ಮಾಡುವಂತಿಲ್ಲ ಹಾಗೂ ಇಂತಿಷ್ಟು ವ್ಯಾಪ್ತಿಯಲ್ಲಿ ಖಾಸಗಿ ಮಳಿಗೆ ತೆರೆಯುವಂತಿಲ್ಲ ಎಂದೂ ಕಾನೂನು ಜಾರಿಗೊಳಿಸಲಾಗಯವುದು ಎಂದರು.

ಬೆಂಗಳೂರು ಮೆಡಿಕಲ್ ಕಾಲೇಜು ಮಾದರಿಯಲ್ಲೇ ಸ್ಕಿಲ್ ಲ್ಯಾಬ್ ಅನ್ನು ಎಂಎಂಸಿಯಲ್ಲಿ ಆರೋಗ್ಯ ವಿವಿ ಮೂಲಕ ಸ್ಥಾಪಿಸಲಾಗುವುದು. ಇಲ್ಲಿನ ನಾಲ್ಕು ಆಸ್ಪತ್ರೆಗಳ ಮೇಲುಸ್ತುವಾರಿಗೆ ವಿಶೇಷ ಸಮಿತಿಗಳನ್ನು ರಚಿಸಲಾಗುವುದು ಎಂದರು.

ಟ್ರಾಮಾ ಕೇರ್ ಸೆಂಟರ್ ಕಾಮಗಾರಿ ವಿಂಬಕ್ಕೆ ಕಾರಣಗಳನ್ನು ಕೇಳಿ ತ್ವರಿತವಾಗಿ ಪೂರ್ಣ ಗೊಳಿಸಲು ಸೂಚನೆ ನೀಡಿದರು. ಸಿಎಸ್ ಆರ್ ಮೂಲಕ ಹೆಚ್ಚಿನ ನೆರವು ಪಡೆಯಲು ಕ್ರಿಯಾಶೀಲರಾಗಿ ಕಾರ್ಯ ನಿರ್ವಹಿಸಬೇಕು ಎಂದರು. ಶಾಸಕರಾದ ನಾಗೇಂದ್ರ ಹಾಜರಿದ್ದರು.


Share